More

    ಕೈಯಾರೆ ಸಾವು ತಂದುಕೊಂಡ ಖಾಸಿಂ ಸುಲೇಮಾನಿ

    ಅಮೆರಿಕ ಮತ್ತು ಇರಾನ್ ನಡುವಿನ ಕಳೆದ ನಾಲ್ಕು ದಶಕಗಳ ವೈಷಮ್ಯ ಡಿಸೆಂಬರ್ 27ನಿಂದೀಚೆಗೆ ಅಪಾಯಕಾರಿ ಮಟ್ಟಕ್ಕೇರಿದೆ. ಅಂದು ಇರಾಕ್​ನ ಕಿರ್ಕಕ್​ನಲ್ಲಿರುವ ಸೇನಾನೆಲೆಯೊಂದರ ಮೇಲೆ ಇರಾನ್ ಪರವಾದ ಶಸ್ತ್ರಸಜ್ಜಿತ ಸಂಘಟನೆಗಳು, ಮುಖ್ಯವಾಗಿ ಪಾಪ್ಯುಲರ್ ಮೊಬಿಲೈಝೇಶನ್ ಫೋರ್ಸಸ್ ಎಸಗಿದ ದಾಳಿಯಲ್ಲಿ ಅಮೆರಿಕನ್ ನಾಗರಿಕನೊಬ್ಬ ಹತನಾದದ್ದೇ ಪ್ರಸಕ್ತ ವೈಮನಸ್ಯಕ್ಕೆ ಮೂಲವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಪಿಎಂಎಫ್ ನೆಲೆಗಳ ಮೇಲೆ ದಾಳಿಯೆಸಗಿ 34 ಭಯೋತ್ಪಾದಕರನ್ನು ಹತ್ಯೆಗೈದಿತು. ಈ ದಾಳಿ ಪ್ರತಿದಾಳಿಗಳ ಸರಣಿ ಮುಂದುವರಿಯುವಂತೆ ಡಿಸೆಂಬರ್ 31ರಂದು ಇರಾನ್-ಪರ ಉಗ್ರವಾದಿಗಳು ಇರಾಕಿ ರಾಜಧಾನಿ ಬಗ್ದಾದ್​ನಲ್ಲಿನ ಅಮೆರಿಕದ ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಲ್ಲದೇ ಕಚೇರಿಯನ್ನು ಆಕ್ರಮಿಸಿಕೊಂಡು ಕುಳಿತರು. ಇದೊಂದು ತೀರಾ ಪ್ರಚೋದನಕಾರಿ ವರ್ತನೆ. ನಿರೀಕ್ಷಿಸಿದಂತೇ ಅಮೆರಿಕ ಉಗ್ರವಾಗಿ ಪ್ರತಿಕ್ರಿಯಿಸಿತು. ಜನವರಿ 3ರಂದು ಇರಾನೀ ಕೈಯಾರೆ ಸಾವು ತಂದುಕೊಂಡ ಖಾಸಿಂ ಸುಲೇಮಾನಿಸೇನೆಯ ವಿಶೇಷ ಅಂಗ ರೆವಲೂಷನರಿ ಗಾರ್ಡ್್ಸ ಕೋರ್​ಗೆ ಸೇರಿದ ಖುದ್ಸ್ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿ, ಬಗ್ದಾದ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿಳಿದು ಹೊರಬರುತ್ತಿದ್ದಂತೇ ಅಮೆರಿಕನ್ ಪಡೆಗಳು ಡ್ರೋನ್ ಮೂಲಕ ಮಿಸೈಲ್ ದಾಳಿ ಎಸಗಿದವು. ಶಾಂತಿಯ ಒಂದು ಅವಕಾಶವನ್ನು ತನ್ನ ಜತೆಗೆ ತೆಗೆದುಕೊಂಡು ಸುಲೇಮಾನಿ ಹತನಾಗಿಹೋದ.

    ಮೇ.ಜ. ಸುಲೇಮಾನಿಯೇ ಅಮೆರಿಕಾದ ಗುರಿಯಾದದ್ದಕ್ಕೆ ದೀರ್ಘ ಇತಿಹಾಸವಿದೆ. ಆತ ಇರಾನ್​ನ ಒಳಗೆ ಹೊರಗೆ ಅತ್ಯಂತ ಪ್ರಭಾವಶಾಲಿಯಾಗಿದ್ದ ವ್ಯಕ್ತಿ. ಆಂತರಿಕವಾಗಿ, ಇರಾನ್​ನಸರ್ವೋಚ್ಚ ನಾಯಕ ಆಯತೊಲ್ಲಾ ಅಲೀ ಖಮೆನೀಯ ಅತ್ಯಂತ ಆಪ್ತರಲ್ಲೊಬ್ಬನಾಗಿದ್ದ 62 ವರ್ಷದ ಸುಲೇಮಾನಿಯ ಹೆಸರು ಮುಂದೆ ಸರ್ವೇಚ್ಚ ನಾಯಕನಾಗಬಹುದಾದವರ ಪಟ್ಟಿಯಲ್ಲಿತ್ತು. ಇನ್ನು ಇರಾನ್​ನ ಹೊರಗಿನ ವ್ಯವಹಾರಗಳನ್ನು ತೆಗೆದುಕೊಳ್ಳುವುದಾದರೆ ಹೊಸ ಶತಮಾನದ ಆರಂಭದಿಂಚೀಚೆಗೆ ಪಶ್ಚಿಮದಲ್ಲಿ ಮೆಡಿಟರೇನಿಯನ್ ತೀರದ ಲೆಬನಾನ್​ನಿಂದ ಹಿಡಿದು ಪೂರ್ವದಲ್ಲಿ ಅರಬ್ಬೀ ಸಮುದ್ರತೀರದ ಒಮಾನ್​ವರೆಗೆ ಇರಾನ್​ನ ಪ್ರಭಾವವನ್ನು ಗಣನೀಯ ಹಾಗೂ ಅತ್ಯಾಶ್ಚರ್ಯಕರ ಮಟ್ಟಕ್ಕೆ ವೃದ್ಧಿಸಿದ್ದು ಸುಲೇಮಾನಿ. ಇರಾಕ್​ನಲ್ಲಂತೂ ಅಮೆರಿಕನ್ ಸೇನೆಯ ಮೂಗಿನ ಕೆಳಗೇ ಇರಾನ್​ನ ಪ್ರಭಾವವನ್ನು ಉತ್ಕರ್ಷಕ್ಕೇರಿಸಿ, ಇರಾಕೀ ರಾಜಕೀಯದಲ್ಲಿ ಅಡಿಗಡಿಗೆ ಮೂಗು ತೂರಿಸಿ ಅದನ್ನು ಬಹುಪಾಲು ತನ್ನ ದೇಶದ ಪರವಾಗಿ ತಿರುಗಿಸಿಕೊಂಡು ಅಮೆರಿಕದ ತಲೆನೋವನ್ನು ಹೆಚ್ಚಿಸಿದ್ದ ಮನುಷ್ಯನೀತ. ಈತನ ಕಾರ್ಯಾಚರಣೆಗಳಿಂದಾಗಿ ಇರಾಕ್​ನಲ್ಲಿ ಅಮೆರಿಕ ಸ್ಥಿತಿ ‘ಕಾಸೂ ಕೇಡು, ತಲೆಯೂ ಬೋಳು’ ಎನ್ನುವಂತಾಗಿತ್ತು. ಇರಾಕ್​ನಲ್ಲಿ ತಾನು ಇದುವರೆಗೆ ಕಳೆದುಕೊಂಡ ಸೈನಿಕರು, ಸುರಿದ ಹಣ ಸಂಪೂರ್ಣ ವ್ಯರ್ಥವಾಗಿ, ಅಲ್ಲಿ ತನ್ನ ಬದ್ಧವಿರೋಧಿ ಇರಾನ್ ಪಟ್ಟಾಗಿ ಕೂತುಕೊಳ್ಳುವಂತಹ ಸ್ಥಿತಿಯನ್ನು ಅಮೆರಿಕ ಒಂದು ಮಿತಿಯಿಂದಾಚೆಗೆ ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಇದನ್ನು ಇರಾನೀ ನಾಯಕತ್ವ, ಸ್ವತಃ ಸುಲೇಮಾನಿ ಅರಿಯಬೇಕಿತ್ತು. ಅದಾಗದ ಕಾರಣದಿಂದಾಗಿ ಇಂದು ಅಮೆರಿಕ ಉಗ್ರವಾಗಿ ಪ್ರತಿಕ್ರಿಯಿಸಿದೆ, ಇನ್ನಷ್ಟು ಉಗ್ರ ಪ್ರತೀಕಾರದ ಮಾತುಗಳನ್ನಾಡುತ್ತಿದೆ. ಇರಾನೀಯರು ತಮ್ಮ ಪ್ರತಿಕ್ರಿಯೆಯಲ್ಲೂ ಅಷ್ಟೇ ಉಗ್ರತೆ ತೋರಿ ಬಹಿರಂಗವಾಗಿಯಾದರೂ ತಮ್ಮ ಮಾನ ಕಾಪಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ವಿಪರೀತವಾಗಿ ಅರ್ಥೈಸುವ ಕೆಲ ಮಾಧ್ಯಮಗಳು ಜಗತ್ತಿಗೆ ಕರಾಳ ಭವಿಷ್ಯ ಕಾದಿದೆಯೆಂದು ಬೊಬ್ಬೆ ಹೊಡೆಯುತ್ತಿವೆ, ಸಾಮಾಜಿಕ ತಾಣಗಳಲ್ಲಂತೂ ಮೂರನೆಯ ಮಹಾಯುದ್ಧ ಆರಂಭವಾಗಿಯೇಹೋಗಿದೆ. ಇಂತಹ ಗೊಂದಲಮಯ ಸನ್ನಿವೇಶದಲ್ಲಿ ಪರಿಸ್ಥಿತಿಯನ್ನು ತಣ್ಣಗೆ ವಿಮಶಿಸುವ ಪ್ರಯತ್ನವನ್ನಿಲ್ಲಿ ಮಾಡೋಣ.

    ಶೀತಲ ಸಮರ ಕಾಲದಲ್ಲಿ ಏಷಿಯಾದಲ್ಲಿ ಅಮೆರಿಕದ ಮುಖ್ಯ ಸಹಯೋಗಿಗಳಲ್ಲೊಂದಾಗಿದ್ದದ್ದು ಇರಾನ್. ಪಶ್ಚಿಮ ಏಷಿಯಾದಲ್ಲಿ ಸೋವಿಯೆತ್ ಯೂನಿಯನ್ ವಿರುದ್ಧವಾಗಿ ಅಮೆರಿಕ ಸ್ಥಾಪಿಸಿದ್ದ ಸೆಂಟ್ರಲ್ ಟ್ರೀಟೀ ಆರ್ಗನೈಝೇಷನ್ ಅಥವಾ ಸೆಂಟೋದಲ್ಲಿ ತುರ್ಕಿ, ಇರಾಕ್ ಮತ್ತು ಪಾಕಿಸ್ತಾನಗಳ ಜತೆಗೂಡಿದ್ದದ್ದು ಇರಾನ್. ಅರಸ ರೆಜಾ ಶಾ ಪಹ್ಲವಿ ಅಮೆರಿಕಾದ ಘನಿಷ್ಟ ಮಿತ್ರ. ಅಮೆರಿಕಾಗೆ ಸಹಕಾರಿಯಾಗಿದ್ದುಕೊಂಡು ತನ್ನ ದೇಶದ ಸೇನಾ ಸಾಮರ್ಥ್ಯನ್ನು ಗಣನೀಯವಾಗಿ ವೃದ್ಧಿಸಿಕೊಂಡು ಅದನ್ನು ಏಷಿಯಾದ ಅತಿ ಪ್ರಬಲ ಸೇನಾಶಕ್ತಿಯನ್ನಾಗಿಸುವ ಹವಣಿಕೆ ಶಾನದು. ಅದೆಲ್ಲಕ್ಕೂ ಕಲ್ಲುಹಾಕಿದ್ದು ಫೆಬ್ರವರಿ 1979ರಲ್ಲಿ ಘಟಿಸಿದ ಇಸ್ಲಾಮಿಕ್ ಕ್ರಾಂತಿ.

    ಇಸ್ಲಾಮಿಕ್ ಮೌಲ್ಯಗಳನ್ನು ಧೂಳಿಗೆಸೆದು, ಇರಾನೀಯರನ್ನು ತಮ್ಮ ಧರ್ಮದಿಂದ ದೂರ ಒಯ್ದ ಆಪಾದನೆಯನ್ನು ಶಾನ ಮೇಲೆ ಹೊರಿಸಿ ಅವನನ್ನು ಪದಚ್ಯುತಗೊಳಿಸಿದ ಧರ್ಮಗುರು ಆಯತೊಲ್ಲಾ ರುಹೊಲ್ಲಾ ಖೊಮೇನಿ ತೆಹರಾನ್​ನಲ್ಲಿ ಸ್ಥಾಪಿಸಿದ್ದು ಕಟ್ಟಾ ಶಿಯಾ ಇಸ್ಲಾಮಿಕ್ ಮೂಲಭೂತವಾದಿ ಸರ್ಕಾರ. ತನ್ನ ಹೊಸ ಸರ್ಕಾರದ ಬಾಹ್ಯ ವ್ಯವಹಾರಗಳಲ್ಲೂ ಆತ ಧರ್ಮಕ್ಕೆ ಪ್ರಾಧಾನ್ಯತೆ ನೀಡಿದ್ದು ಸಹಜವೇ ಆಗಿತ್ತು. ನೆರೆಯ ಸೋವಿಯೆತ್ ಯೂನಿಯನ್ ತನ್ನ ಮಧ್ಯ ಏಷಿಯನ್ ಗಣರಾಜ್ಯಗಳಲ್ಲಿ ಇಸ್ಲಾಮನ್ನು ಕೆಳಗೊತ್ತಿ ಹಿಡಿದ ಬಗ್ಗೆ ಅಸಮಾಧಾನ ಹೊಂದಿದ್ದ ಖೊಮೇನಿ ಉತ್ತರದ ಆ ದೈತ್ಯ ಮತ್ತು ಮತ್ತೊಂದು ಕಮ್ಯೂನಿಸ್ಟ್ ದೇಶ ಚೀನಾವನ್ನು ಬಣ್ಣಿಸುತ್ತಿದ್ದುದು ಹೀಗೆ- ‘ಮಾನವ ತಲೆಬುರುಡೆಗಳ ಗೋಪುರ ನಿರ್ವಿುಸುವ ದೇಶಗಳು!’ ಪಶ್ಚಿಮದ ಜನರ ಬಿಡುಬೀಸು ವರ್ತನೆ, ಮಹಿಳಾ ಸ್ವಾತಂತ್ರ್ಯ, ಉದಾರವಾದಿ ನಿಲುವುಗಳ ಬಗ್ಗೆ ತೀವ್ರ ಅಸಹನೆ ಹೊಂದಿದ್ದ ಖೊಮೇನಿ ತನಗೆ ಆಶ್ರಯ ನೀಡಿದ್ದ ಫ್ರಾನ್ಸ್ ಅನ್ನು ಬೈಯುತ್ತಿದ್ದುದು ‘ಗೃಹಬಳಕೆಯ ವಸ್ತುಗಳ ಖರೀದಿಗಾಗಿ ತಮ್ಮನ್ನೇ ಮಾರಿಕೊಳ್ಳುವ ಗೃಹಿಣಿಯರಿರುವ ದೇಶ’ ಅಂತ!

    ಇಷ್ಟಾಗಿಯೂ ಖೋಮೇನಿ ಅಮೆರಿಕವನ್ನು ಹೀಗಳೆಯುವ, ಎದುರು ಹಾಕಿಕೊಳ್ಳುವ ಚಿಂತನೆ ಮಾಡಲಿಲ್ಲ. ವಾಸ್ತವವಾಗಿ ಅಮೆರಿಕ ಮತ್ತು ಮೂಲಭೂತವಾದಿ ಇರಾನ್ ನಡುವಿನ ವೈಮನಸ್ಯ ಇಸ್ಲಾಮಿಕ್ ಕ್ರಾಂತಿಯಿಂದ ಆರಂಭವಾಗಲಿಲ್ಲ; ಕ್ರಾಂತಿಯ ನಂತರವೂ ಹಲವಾರು ತಿಂಗಳುಗಳ ಕಾಲ ಸ್ನೇಹಸಂಬಂಧ ಮುಂದುವರಿದಿತ್ತು. ಅಲ್ಜೀರಿಯಾದ ಸ್ವಾತಂತ್ರ್ಯ ದಿನಾಚರಣಾ ಉತ್ಸವದಲ್ಲಿ ಭಾಗಿಯಾಗಲು ಜುಲೈ 5, 1979ರಂದು ಅಮೆರಿಕದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಝ್ಬಿಗ್​ನ್ಯೂ ಬ್ರೆಝೆನ್ಸ್ಕಿ

    ಅಲ್ಜಿಯರ್ಸ್​ಗೆ ತೆರಳಿದಾಗ ಅಲ್ಲಿ ಇರಾನಿನ ಹೊಸ ಪ್ರಧಾನಮಂತ್ರಿ ಮೆಹ್ದಿ ಬಝಾರ್​ಗನ್ ಜತೆ ಸೌಹಾರ್ದಯುತ ಮಾತುಕತೆ ನಡೆಸಿದರು. ಪರಸ್ಪರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲವೆಂದೂ, ಸ್ನೇಹ ಸಂಬಂಧಗಳ ವೃದ್ಧಿಗೆ ಶ್ರಮಿಸುವುದಾಗಿಯೂ ಇಬ್ಬರು ನಾಯಕರೂ ಪರಸ್ಪರರಿಗೆ ವಾಗ್ದಾನವಿತ್ತರು. ಜತೆಗೆ, ಎರಡೂ ದೇಶಗಳು ಜಂಟಿಯಾಗಿ ಸೋವಿಯೆತ್ ಸಾಮ್ರಾಜ್ಯವಾದವನ್ನು ಎದುರಿಸಬೇಕೆಂದು ನಿರ್ಧರಿಸಿದ್ದಲ್ಲದೇ, ಹಿಂದಿನ ಶಾ ಸರ್ಕಾರ ಯಾವಯಾವ ಶಸ್ತ್ರಾಸ್ತ್ರಗಳಿಗಾಗಿ ಈಗಾಗಲೇ ಹಣ ಪಾವತಿಸಿದೆಯೋ ಅದೆಲ್ಲವನ್ನೂ ಇರಾನ್​ನ ಹೊಸ ಇಸ್ಲಾಮಿಕ್ ಸರ್ಕಾರಕ್ಕೆ ಪೂರೈಸುವುದಾಗಿ ಬ್ರೆಝೆನ್​ಸ್ಕಿ ಆಶ್ವಾಸನೆಯಿತ್ತರು.

    ಹೀಗೆ ಸರಿಯಾದ ಹಾದಿಯಲ್ಲೇ ಸಾಗಿದ್ದ ದ್ವಿಪಕ್ಷೀಯ ಸಂಬಂಧಗಳು ಹಾಳಾಗತೊಡಗಿದ್ದು ಪದಚ್ಯುತ ಅರಸ ಶಾ ಅಮೆರಿಕದಲ್ಲಿ ರಾಜಕೀಯ ಆಶ್ರಯ ಬೇಡಿದಾಗ ಮತ್ತು ಆ ಬೇಡಿಕೆಗೆ ಅಮೆರಿಕ ಸಮ್ಮತಿಸಿದಾಗ. ಅಧ್ಯಕ್ಷ ಜಿಮ್ಮಿ ಕಾರ್ಟರ್ ಪ್ರಕಾರ ಅಮೆರಿಕದ ಒಂದುಕಾಲದ ಘನಿಷ್ಟ ಮಿತ್ರ ಶಾನನ್ನು ಇರಾನ್​ನ ಹೊಸ ಸರ್ಕಾರಕ್ಕೆ ಒಪ್ಪಿಸುವುದು ಅಂದರೆ ಆತನನ್ನು ನಿಶ್ಚಿತ ಗಲ್ಲುಗಂಬದತ್ತ ನೂಕುವುದು ಅಮೆರಿಕದ ನೀತಿಗಳಿಗೆ ವಿರುದ್ಧ. ಇದನ್ನು ಒಪ್ಪಿಕೊಳ್ಳದ ಪ್ರಧಾನಿ ಬಝಾರ್​ಗನ್ ಆಗ ಶಾನನ್ನು ನಮಗೊಪ್ಪಿಸಿ ಎಂದು ಜಪಿಸತೊಡಗಿದ್ದನ್ನು ನಿಲ್ಲಿಸಲೇ ಇಲ್ಲ. ಇದರಿಂದ ಉತ್ತೇಜಿತರಾದ ಹೊಸ ರೆವಲೂಷನರಿ ಗಾರ್ಡ್್ಸ ಉತ್ಸಾಹಿ ಯುವಕರು ನವೆಂಬರ್ 5ರಂದು ತೆಹರಾನ್​ನಲ್ಲಿದ್ದ ಅಮೆರಿಕದ ರಾಯಭಾರ ಕಚೇರಿಗೆ ನುಗ್ಗಿ 52 ಅಮೆರಿಕನ್ನರನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡರು. ತನ್ನ ಶಾ ಜಪ ಈ ತಿರುವು ತೆಗೆದುಕೊಂಡಾಗಷ್ಟೇ ಬಝಾರ್​ಗನ್​ಗೆ ತನ್ನ ಅವಿವೇಕದ ಅರಿವಾದದ್ದು. ಅವರ ಅವಿವೇಕ ಅಲ್ಲಿಗೇ ನಿಲ್ಲಲಿಲ್ಲ. ರೆವಲೂಷನರಿ ಗಾರ್ಡ್್ಸ ಯುವಕರಿಗೆ ವಿವೇಕ ಹೇಳಿ ದೂತಾವಾಸ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ತೊರೆದು ಬಝಾರ್​ಗನ್ ಪದವಿಗೆ ರಾಜಿನಾಮೆ ನೀಡಿದರು. ಪರಿಣಾಮವಾಗಿ ಮೂಲಭೂತವಾದಿಗಳ ಕೈ ಮೇಲಾಯಿತು. ನಿರೀಕ್ಷಿಸಿದಂತೇ ಅಮೆರಿಕದಿಂದ ಖೊಮೇನಿ ಸರ್ಕಾರದ ನೀತಿನಿಲುವುಗಳ ವಿರುದ್ಧದ ಹೇಳಿಕೆಗಳು, ಪ್ರತಿಕ್ರಿಯಾತ್ಮಕ ಕಾರ್ಯಾಚರಣೆಗಳ ಧಮಕಿಗಳು ಹೊರಡತೊಡಗಿದವು. ಆಗ, ಅಲ್ಲಿಯವರೆಗೆ ಸೋವಿಯೆತ್ ಯೂನಿಯನ್ ಮತ್ತು ಫ್ರಾನ್ಸ್​ಗಳನ್ನಷ್ಟೇ ಹೀಗಳೆಯುತ್ತಿದ್ದ ಖೊಮೇನಿ ಈಗ ಅಮೆರಿಕವನ್ನು ‘ಮಹಾ ಸೈತಾನ’ ಎಂದು ಬೈಯತೊಡಗಿದ!

    ಆಮೇಲೆ, ಸೆಪ್ಟೆಂಬರ್ 1980ನಲ್ಲಿ ಇರಾನ್ ವಿರುದ್ಧ ನೆರೆಯ ಇರಾಕ್ ಯುದ್ಧ ಆರಂಭಿಸಿದಾಗ ಅಮೆರಿಕ ಸಹಜವಾಗಿಯೇ ಇರಾಕ್ ಪರ ವಹಿಸಿತು. ಅದು ಸಾಲದು ಎಂಬಂತೆ ತನ್ನ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಕಾರ್ಟರ್ ಸರ್ಕಾರ ವಿಫಲ ಪ್ರಯತ್ನವನ್ನೂ ನಡೆಸಿತು ಮತ್ತು ಅದನ್ನು ಇರಾನ್​ನ ಸುರಕ್ಷೆಗೆ ಒಡ್ಡಿದ ಸವಾಲು ಎಂದು ಖೊಮೇನಿ ಸರ್ಕಾರ ಬಣ್ಣಿಸಿತು. ದ್ವಿಪಕ್ಷೀಯ ಸಂಬಂಧಗಳು ಸರಿಪಡಿಸಲಾಗದಷ್ಟು ವಿಷಮಸ್ಥಿತಿಗೆ ತಲುಪಿದ್ದು ಹೀಗೆ. ಕ್ಯಾನ್ಸರ್​ಪೀಡಿತ ಶಾ ಅನತಿಕಾಲದಲ್ಲೇ ಎಲ್ಲೋ ಒಂದುಕಡೆ ಸತ್ತುಹೋಗುತ್ತಿದ್ದ. ಅವನನ್ನು ಮರೆತು ಅಮೆರಿಕದ ಜತೆ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗುವ ವಿವೇಕವನ್ನು ಪ್ರಧಾನಿ ಬಝಾರ್​ಗನ್ ಅಥವಾ ಸರ್ವೇಚ್ಚ ನಾಯಕ ಖೊಮೇನಿ ಪ್ರದರ್ಶಿಸಿದ್ದರೆ…!

    ಮುಂದಿನ ಇಪ್ಪತ್ತು ವರ್ಷಗಳಲ್ಲಿ ಎರಡೂ ದೇಶಗಳ ಸಂಬಂಧಗಳು ಪರಸ್ಪರ ದೂಷಣೆಯ ಮಟ್ಟವನ್ನು ಮೀರಿ ಹೆಚ್ಚೇನೂ ಹೋಗಲಿಲ್ಲ. ಅದು ಬದಲಾದದ್ದು 1998ರಲ್ಲಿ ಖಾಸಿಂ ಸುಲೇಮಾನಿ ಖುದ್ಸ್ ಪಡೆಯ ನೇತಾರನಾದಾಗ. ಈ ಎರಡು ದಶಕಗಳಲ್ಲಿನ ಆತನ ಪ್ರತಿಯೊಂದು ಕಾರ್ಯಾಚರಣೆಯೂ ವಿರೋಧಾಭಾಸಗಳಿಂದಲೇ ಕೂಡಿತ್ತು. ಅಲ್-ಖಯೀದಾ ಮತ್ತು ತಾಲಿಬಾನ್​ಗಳು ಸುನ್ನಿ ಸಂಘಟನೆಗಳು ಎಂಬ ಕಾರಣದಿಂದ ಅವುಗಳ ವಿರುದ್ಧದ ಅಮೆರಿಕದ ಕಾರ್ಯಾಚರಣೆಗಳನ್ನು ಶಿಯಾ ಆಗಿದ್ದ ಸುಲೇಮಾನಿ ಬೆಂಬಲಿಸಿದ, ನಿಜ. ಆದರೆ ಅದೇ ಸುನ್ನಿ ಭಯೋತ್ಪಾದಕರು ಅಮೆರಿಕನ್ ದಾಳಿಯಿಂದ ಬಚಾವಾಗಲು ಅಫ್ಘಾನಿಸ್ತಾನದಿಂದ ಓಡಿ ಇರಾಕ್ ಸೇರಲು ತನ್ನ ದೇಶದ ಮೂಲಕ ಹಾದುಹೋಗುವಂತೆ ವ್ಯವಸ್ಥೆ ಮಾಡಿದ! ಅಂದರೆ ಉಗ್ರ ಅಮೆರಿಕ-ವಿರೋಧಿ ಸದ್ದಾಂ ಹುಸೇನ್ ಜತೆ ಮತ್ತಷ್ಟು ಉಗ್ರ ಅಮೆರಿಕ-ವಿರೋಧಿ ಅಲ್-ಖಯೀದಾ ಮತ್ತು ತಾಲಿಬಾನಿಗಳು ಜತೆಗೂಡಲು ಸುಲೇಮಾನಿ ಅವಕಾಶ ಮಾಡಿಕೊಟ್ಟ.

    ತನ್ನ ದೇಶದ ಐತಿಹಾಸಿಕ ವೈರಿ ಇರಾಕ್​ನಲ್ಲಿ ಸದ್ದಾಂ ಹುಸೇನ್ ಪತನಾನಂತರ ಉಂಟಾದ ಅರಾಜಕ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಆ ದೇಶದಲ್ಲಿ ಇರಾನೀ ಪ್ರಭಾವವನ್ನು ವೃದ್ಧಿಸಲು, ಅದೂ ಅಮೆರಿಕನ್ ಸೇನೆಯ ಮೂಗಿನ ಕೆಳಗೇ, ಸುಲೇಮಾನಿ ಹೂಡಿದ ಹೂಟ ಅತ್ಯಂತ ಚಾಣಾಕ್ಷತನದ್ದಾಗಿತ್ತು. ಜತೆಗೆ, ಲೆಬನಾನ್​ನ ಹೆಜ್ಬೊಲ್ಲಾ, ಪ್ಯಾಲೆಸ್ತೈನ್​ನ ಹಮಸ್ ಮುಂತಾದ ಉಗ್ರವಾದಿ ಸಂಘಟನೆಗಳನ್ನು ಸಾಕುವ ಕೈಂಕರ್ಯವನ್ನೂ ಕೈಗೊಂಡು ಭಯೋತ್ಪಾದನೆಯ ಮೂಲಕ ಇಡೀ ವಲಯದಲ್ಲಿ ಇರಾನ್​ನ ಪ್ರಭಾವವನ್ನು ವೃದ್ಧಿಸತೊಡಗಿದ. ಇದರಿಂದಾಗಿಯೇ ಅಧ್ಯಕ್ಷ ಜಾರ್ಜ್ ಬುಷ್ ಜ್ಯೂ. 2002ರಲ್ಲಿ ಇರಾನ್ ಅನ್ನು ‘ಭಯೋತ್ಪಾದನೆಯ ಅಕ್ಷರೇಖೆ’ ಎಂದು ಬಣ್ಣಿಸಿದ್ದು.

    2010-11ರಲ್ಲಿ ಅರಬ್ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಗಾಳಿ ‘ಅರಬ್ ವಸಂತ’ ಬೀಸತೊಡಗಿದಂತೆ ಅದನ್ನು ಕೊಲ್ಲಿಗೆ ಹರಡಲು ಸುಲೇಮಾನಿ ಯೋಜನೆ ರೂಪಿಸಿದ. ಪರಿಣಾಮವಾಗಿ ಬಹರೈನ್ ಒಂದಷ್ಟು ಕಾಲ ಅಶಾಂತಿ ಅನುಭವಿಸಿತು. ಸೌದಿ ಅರೇಬಿಯಾದ ಎಲ್ಲೆಯೊಳಗೇ ಅಶಾಂತಿ ಹುಟ್ಟುಕಾಕಲು ಸುಲೇಮಾನಿ ಪ್ರಯತ್ನಿಸಿದ್ದಂತೂ ಅತಿರೇಕದ ಪರಮಾವಧಿ. ಅವನ ಒಳಸಂಚಿನಿಂದ ಶಿಯಾ ಪ್ರಾಬಲ್ಯದ ಈಶಾನ್ಯ ಸೌದಿ ಅರೇಬಿಯಾ ಸಹ ಸ್ವಲ್ಪ ಕಾಲವಾದರೂ ಹಿಂಸಾಚಾರ, ಅಶಾಂತಿ ಅನುಭವಿಸಿತು. ಅದೇ ಸಮಯದಲ್ಲಿ ಭಯೋತ್ಪಾದನೆಯನ್ನು ಸರ್ಕಾರಿ ನೀತಿಯನ್ನಾಗಿಯೇ ಇರಾನ್ ಅನುಸರಿಸಹೊರಟ ದುರಂತವೂ ನಡೆದುಹೋಯಿತು. 2012ರ ಆರಂಭದ ತಿಂಗಳುಗಳಲ್ಲಿ ಏಷಿಯಾದ ಅರ್ಧ ಡಜನ್ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಅಥವಾ ಅವುಗಳ ವಿಫಲಯತ್ನಕ್ಕೆ ಇರಾನ್ ಕಾರಣವಾಯಿತು. ಫೆಬ್ರವರಿ 13ರಂದು ದೆಹಲಿಯಲ್ಲಿ ಇಸ್ರೇಲಿ ರಾಜತಂತ್ರಜ್ಞೆಯೊಬ್ಬರ ಕಾರ್ ಮೇಲೆ ನಡೆದ ದಾಳಿ, ಅದೇ ದಿನ ಜಾರ್ಜಿಯಾದ ರಾಜಧಾನಿ ತಿಬಿಲೀಸಿಯಲ್ಲಿ ಇಸ್ರೇಲೀ ದೂತಾವಾಸದ ವಾಹನವೊಂದರ ಕೆಳಗೆ ಅಡಗಿಸಿಟ್ಟಿದ್ದ ಗ್ರೆನೇಡ್, ಅದರ ಮರುದಿನ ಥಾಯ್ಲೆಂಡ್​ನ ಬ್ಯಾಂಕಾಕ್​ನಲ್ಲಿ ತನ್ನದೇ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಸಿಕ್ಕಿಬಿದ್ದ ಇರಾನೀ ಭಯೋತ್ಪಾದಕ ಮತ್ತು ಈ ಹಂಚಿಕೆಗೆ ಸಂಬಂಧಿಸಿದಂತೆ ಥಾಯ್ಲೆಂಡ್ ಮತ್ತು ಮಲೇಶಿಯಾದಲ್ಲಿ ಸೆರೆಸಿಕ್ಕ ಮತ್ತಿಬ್ಬರು ಇರಾನೀಯರು, ಮಾರ್ಚ್ 15ರಂದು ಅಜರ್​ಬೈಜಾನ್​ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಹಿತಾಸಕ್ತಿಗಳ ಮೇಲೆ ದಾಳಿಯೆಸಗಲು ಯೋಜನೆ ರೂಪಿಸುತ್ತಿದ್ದ ಆರೋಪದ ಮೇಲೆ ಬಂಧಿತರಾದ ಮೂವತ್ತೆರಡು ಇರಾನೀಯರು ಇರಾನ್​ನ ಈ ಹೊಸ ರೂಪಕ್ಕೆ ಸಾಕ್ಷಿಯಾದರು. ಈ ಕರಾಳ ಯೋಜನೆಯ ಹಿಂದಿದ್ದದ್ದು ಸುಲೇಮಾನಿ. ಆದರೆ ಅನತಿ ಕಾಲದಲ್ಲೇ ಇದನ್ನು ತೊರೆದ ಸುಲೇಮಾನಿ ಕೇವಲ ಮಧ್ಯಪ್ರಾಚ್ಯದಲ್ಲಿ, ಮುಖ್ಯವಾಗಿ ಇರಾಕ್​ನಲ್ಲಿ ಇರಾನೀ ಪ್ರಭಾವವನ್ನು ವೃದ್ಧಿಸುವುದಕ್ಕಷ್ಟೇ ಸೀಮಿತಗೊಳಿಸಿದ, ತನ್ಮೂಲಕ ಅಮೆರಿಕದ ಇದುವರೆಗಿನ ಎಲ್ಲ ಹೆಣಗಾಟವನ್ನೂ ಮಣ್ಣುಗೂಡಿಸಿ ಇರಾಕ್ ಅನ್ನು ತನ್ನ ದೇಶದ ವಿಸ್ತರಣದಂತೆ ಬದಲಾಯಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ. ಡಿಸೆಂಬರ್ 31ರಂದು ಬಗ್ದಾದ್​ನ ಅಮೆರಿಕನ್ ದೂತಾವಾಸವನ್ನು ಆಕ್ರಮಿಸಿಕೊಂಡ ಇರಾನಿಪರ ಭಯೋತ್ಪಾದಕರ ಮುಂದೆ, ‘ದಯವಿಟ್ಟು ಹೊರಹೋಗಿ, ಇಲ್ಲದಿದ್ದರೆ ನಾನು ರಾಜಿನಾಮೆ ನೀಡಬೇಕಾಗುತ್ತದೆ’ ಎಂದು ಇರಾಕಿ ಪ್ರಧಾನಿ ಅಬೆದ್ ಮಹ್ದಿ ಗೋಗರೆದ ಪ್ರಕರಣ ಇರಾಕ್ ಅದೆಷ್ಟು ಮಟ್ಟಿಗೆ ಇರಾನ್​ನ ಹಿಡಿತಕ್ಕೆ ಸಿಲುಕಿಹೋಗಿದೆ ಎನ್ನುವುದರ ಜ್ವಲಂತ ನಿದರ್ಶನವಾಯಿತು. ಸಹಜವಾಗಿಯೇ, ಸುಲೇಮಾನಿ ಅಮೆರಿಕದ ಗುರಿಯಾದ, ಮೂರು ದಿನದಲ್ಲಿ ಹತನಾದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts