Friday, 16th November 2018  

Vijayavani

Breaking News

ಮೋದಿ ಮೋಡಿಯೂ, ಕಳಚುತ್ತಿರುವ ಸಂಕೋಲೆಗಳೂ

Wednesday, 18.04.2018, 3:06 AM       No Comments

ಜಾಗತಿಕ ಆರ್ಥಿಕ ರಂಗದಲ್ಲಿ ಪ್ರಭಾವಹೀನವಾಗಿದ್ದಂತೇ ತನ್ನ ಸ್ವತಂತ್ರ ಅಸ್ತಿತ್ವದ ಆರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಜಾಗತಿಕ ರಾಜಕಾರಣದಲ್ಲಿಯೂ ನಾವು ಹೆಮ್ಮೆಪಡಬಹುದಾದಂತಹ ಸ್ಥಾನ ಹಾಗೂ ಗೌರವ ಭಾರತಕ್ಕಿರಲಿಲ್ಲ. ಈ ವಿಷಯದ ವಿಶ್ಲೇಷಣೆಯನ್ನು ಒಂದು ಉದಾಹರಣೆಯ ಮೂಲಕ ಆರಂಭಿಸೋಣ.

1990ಕ್ಕೆ ಮೊದಲು ದಕ್ಷಿಣ ಆಫ್ರಿಕಾದ ಅಲ್ಪಸಂಖ್ಯಾತ ಶ್ವೇತವರ್ಣೀಯರ ಸರ್ಕಾರ ಬಹುಸಂಖ್ಯಾತ ಕಪ್ಪುವರ್ಣೀಯರ ವಿರುದ್ಧ ವರ್ಣಭೇದ ನೀತಿ (ಅಪಾರ್ಥೀಡ್) ಅನುಸರಿಸುತ್ತಿದ್ದಾಗ ಅದನ್ನು ವಿರೋಧಿಸಿದ ದೇಶಗಳ ಮುಂಚೂಣಿಯಲ್ಲಿ ಭಾರತ ಇದ್ದದ್ದು ನಿಮಗೆ ನೆನಪಿರಬಹುದು. ಸಂಪೂರ್ಣವಾಗಿ ಕಪ್ಪು ಜನಾಂಗದ ಪರವಾಗಿ ನಿಂತ ಹಾಗೂ ಅವರ ನಾಯಕ ನೆಲ್ಸನ್ ಮಂಡೆಲಾರನ್ನು ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಉಗ್ರವಾಗಿ ಪ್ರತಿಪಾದಿಸಿದ ಭಾರತ, ವರ್ಣಭೇದ ನೀತಿ ಅಂತ್ಯವಾಗುವವರೆಗೂ ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರದ ಜತೆ ರಾಜಕೀಯ, ಆರ್ಥಿಕ ಹಾಗೂ ಕ್ರೀಡಾ ಸಹಯೋಗವನ್ನು ಇಟ್ಟುಕೊಳ್ಳುವುದಿಲ್ಲವೆಂದು ಘೊಷಿಸಿತು. ಹೀಗೆ, ಪ್ರಿಟೋರಿಯಾ ವಿರುದ್ಧ ಭಾರತ ನಿಂತಿದ್ದ ದಿನಗಳಲ್ಲಿ, 1974ರಲ್ಲಿ ಭಾರತದ ಟೆನಿಸ್ ತಂಡ ಡೇವಿಸ್ ಕಪ್ ಪಂದ್ಯಾವಳಿಯ ಫೈನಲ್ಸ್ ತಲುಪಿತು. ಫೈನಲ್​ನಲ್ಲಿ ಭಾರತಕ್ಕೆದುರಾಗಿದ್ದದ್ದು ದಕ್ಷಿಣ ಆಫ್ರಿಕಾ. ಫೈನಲ್ಸ್ ತಲುಪುವ ಹಾದಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಸೋವಿಯೆತ್ ಯೂನಿಯನ್ ತಂಡಗಳನ್ನು ಮಣಿಸಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾವನ್ನು ಮಣಿಸುವುದು ಬಹುಶಃ ಕಷ್ಟದ್ದೇನೂ ಆಗಿರಲಿಲ್ಲ. ಆದರೆ, ತನ್ನ ವರ್ಣಭೇದ-ವಿರೋಧಿ ನೀತಿಗೆ ಬದ್ಧವಾದ ಭಾರತ ಸೆಣಸಲು ನಿರಾಕರಿಸಿದ್ದರಿಂದಾಗಿ ದಕ್ಷಿಣ ಆಫ್ರಿಕಾವನ್ನು ಚಾಂಪಿಯನ್ ಎಂದು ಘೊಷಿಸಲಾಯಿತು. ಕಪ್ಪುಜನರ ಪರವಾಗಿ ಭಾರತ ತೋರಿದ್ದು ಈ ಬಗೆಯ ನಿಷ್ಠೆ. ಅದೇ ದಿನಗಳಲ್ಲಿ ಅಮೆರಿಕ, ಬ್ರಿಟನ್ ಮುಂತಾದ ಪಶ್ಚಿಮದ ದೇಶಗಳು ದಕ್ಷಿಣ ಆಫ್ರಿಕಾದ ಜತೆ ಸ್ನೇಹದಿಂದಿದ್ದವು.

ವರ್ಷಗಳುರುಳಿದವು. ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರ 23 ವರ್ಷಗಳ ಕಾರಾಗೃಹವಾಸದಿಂದ ನೆಲ್ಸನ್ ಮಂಡೆಲಾ ಅವರನ್ನು 1990ರಲ್ಲಿ ಬಿಡುಗಡೆಗೊಳಿಸಿತು. ಆಗ ಅವರನ್ನು ಸ್ವತಂತ್ರ ಬದುಕಿಗೆ ಸ್ವಾಗತಿಸಲು, ಕಪ್ಪುಜನರ ಹೋರಾಟದ ಯಶಸ್ಸನ್ನು ಆಚರಿಸಲು ಆ ವಲಯದ ಕಪ್ಪುಜನರ ದೇಶಗಳು ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಸಮಾರಂಭ ಆಯೋಜಿಸಿದವು. ಇದುವರೆಗೂ ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರದ ಜತೆ ಸ್ನೇಹ ಸಹಕಾರ ಹೊಂದಿದ್ದ ಅಮೆರಿಕ, ಬ್ರಿಟನ್ ಹಾಗೂ ಇನ್ನಿತರ ಪಶ್ಚಿಮದ ದೇಶಗಳಿಗೆ ಆ ಸಮಾರಂಭಕ್ಕೆ ಆಹ್ವಾನವಿತ್ತು. ಆದರೆ, ಭಾರತಕ್ಕೆ ಆಹ್ವಾನವಿರಲಿಲ್ಲ! ಇದು ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ಅದಕ್ಕಾಗಿ ತನ್ನ ಹಲವಾರು ಹಿತಾಸಕ್ತಿಗಳನ್ನೂ ಕಡೆಗಣಿಸಿದ ಭಾರತಕ್ಕೆ ಸಿಕ್ಕಿದ ಗೌರವ! ಹಾಗಿದ್ದರೆ ಈ ವಿಷಯದಲ್ಲಿ ಭಾರತ ಎಡವಿದ್ದೆಲ್ಲಿ? ವಿಶ್ವದ ಇತರ ಪ್ರಮುಖ ದೇಶಗಳು ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರದ ಜತೆ ಸ್ನೇಹ ಸಹಕಾರ ಹೊಂದಿದ್ದವು, ನಿಜ. ಆದರೆ, ಅದೇ ಸಮಯದಲ್ಲಿ ಅವು ವರ್ಣಭೇದ ನೀತಿಯನ್ನು ವಿರೋಧಿಸುತ್ತಲೂ ಇದ್ದವು. ಹೀಗಾಗಿ ಆ ದೇಶಗಳು ವಿವಾದದ ಎರಡೂ ಪಕ್ಷಗಳಿಗೆ ಹತ್ತಿರವಾಗಿದ್ದವು, ಅಗತ್ಯ ಸಮಯದಲ್ಲಿ ಆರ್ಥಿಕ ನೆರವನ್ನೂ ನೀಡುತ್ತಿದ್ದವು. ಈ ಕಾರಣದಿಂದಲೇ ಅವು ಎರಡೂ ಪಕ್ಷಗಳ ನಡುವೆ ಸಂಧಾನವೇರ್ಪಡಿಸುವ, ಮಧ್ಯವರ್ತಿಯಾಗುವ ಸಾಮರ್ಥ್ಯ ಹೊಂದಿದ್ದವು. ಆದರೆ, ಭಾರತ ಒಂದು ಪಕ್ಷವನ್ನು ಸಂಪೂರ್ಣವಾಗಿ ಅಪ್ಪಿಕೊಂಡು, ಇನ್ನೊಂದನ್ನು ಸಂಪೂರ್ಣವಾಗಿ ಕಡೆಗಣಿಸಿತು. ಹೀಗಾಗಿ, ದಕ್ಷಿಣ ಆಫ್ರಿಕಾದ ಕಪ್ಪುಜನಾಂಗಕ್ಕೆ, ಅದರ ಪರವಾಗಿ ನಿಂತಿದ್ದ ಕಪ್ಪು ಜನಾಂಗಗಳ ದೇಶಗಳಿಗೆ ಪ್ರಿಟೋರಿಯಾ ಸರ್ಕಾರದ ಜತೆ ಮಾತುಕತೆ ನಡೆಸಲು ಸಂಪರ್ಕಕ್ಕಾಗಿ ಬ್ರಿಟನ್ ಹಾಗೂ ಅಮೆರಿಕಗಳಂತಹ, ಎರಡೂ ಪಕ್ಷಗಳಿಗೆ ಹತ್ತಿರವಾಗಿದ್ದ ದೇಶಗಳು ಮುಖ್ಯವಾದವು. ಪ್ರಿಟೋರಿಯಾ ಸರ್ಕಾರದ ಜತೆ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲದ ಭಾರತದಿಂದ ಯಾವ ಉಪಯೋಗವೂ ಅವುಗಳಿಗೆ ಕಾಣಲಿಲ್ಲ. ಹೀಗಾಗಿ, ವರ್ಣಭೇದ ನೀತಿಯ ನಿಮೂಲನಾ ಪ್ರಕ್ರಿಯೆಯಲ್ಲಿ ಭಾರತಕ್ಕೆ ಯಾವುದೇ ಪರಿಣಾಮಕಾರಿ ಪಾತ್ರ ವಹಿಸುವ ಅವಕಾಶವೂ ಲಭ್ಯವಾಗಲಿಲ್ಲ.

ಅರಬ್-ಇಸ್ರೇಲ್ ಬಿಕ್ಕಟ್ಟಿನಲ್ಲಿ ಇಸ್ರೇಲನ್ನು ಕಡೆಗಣಿಸಿ ಅರಬ್ಬರ ಪರವಾಗಿ ನಿಂತದ್ದರಿಂದ ಅಲ್ಲಿಯೂ ಎರಡೂ ಪಕ್ಷಗಳಿಗೆ ಸಮ್ಮತಿಯಾಗುವಂತಹ ಮಧ್ಯವರ್ತಿಯಾಗುವ ಸಾಮರ್ಥ್ಯ, ಬಿಕ್ಕಟ್ಟಿನ ಪರಿಹಾರ ಪ್ರಕ್ರಿಯೆಯಲ್ಲಿ ಪಾತ್ರ ವಹಿಸುವ ಅವಕಾಶ ಭಾರತಕ್ಕೆ ದೊರೆಯಲಿಲ್ಲ. ಅವೆಲ್ಲವೂ ದಕ್ಕಿದ್ದು ಎರಡೂ ಪಕ್ಷಗಳ ಜತೆ ಸಂಬಂಧ ಹೊಂದಿದ್ದ ರುಮೇನಿಯಾ, ಅಮೆರಿಕ, ನಾರ್ವೆಗಳಿಗೆ. ಅರಬ್-ಇಸ್ರೇಲ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ನೀತಿಯ ಮತ್ತೊಂದು ಆಯಾಮ ತರ್ಕಕ್ಕೆ ನಿಲುಕುವುದಿಲ್ಲ. ತನ್ನ ನೆಲವನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನ ಹಾಗೂ ಚೀನಾಗಳ ಜತೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿಕೊಂಡಿದ್ದ ಭಾರತ ಅಂತಹದೇ ಸಂಬಂಧಗಳನ್ನು, ಇನ್ನಾರದೋ ನೆಲವನ್ನು ಆಕ್ರಮಿಸಿಕೊಂಡಿದ್ದ ಇಸ್ರೇಲ್ ಜತೆ ಸ್ಥಾಪಿಸಿಕೊಳ್ಳಲು ನಿರಾಕರಿಸಿತು!

ಒಂದು ಪಕ್ಷದ ಪರವಾಗಿ ನಿಂತುಬಿಡುವ ಭಾರತದ ನೀತಿ ಆಫ್ಘನ್ ಹಾಗೂ ಕಂಪೂಚಿಯಾ (ಕಾಂಬೋಡಿಯಾ) ಬಿಕ್ಕಟ್ಟುಗಳಲ್ಲೂ ಕಾಣಿಸಿಕೊಳ್ಳುತ್ತದೆ. ತನ್ನ ಕೈಗೊಂಬೆ ಬಬ್ರಾಕ್ ಕರ್ವಲ್ ಸರ್ಕಾರವನ್ನು ಉಳಿಸಲು 1979ರ ಡಿಸೆಂಬರ್ 27ರಂದು ಅಫ್ಘಾನಿಸ್ತಾನಕ್ಕೆ ತನ್ನ ಸೇನೆ ನುಗ್ಗಿಸಿದ ಸೋವಿಯೆತ್ ಯೂನಿಯನ್ ಪರವಾಗಿ ನಿಂತ ಕಾರಣ ಭಾರತ ಆಫ್ಘನ್ ಜನತೆಯ ಸದ್ಭಾವನೆಯನ್ನು ಕಳೆದುಕೊಂಡಿತು. ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಹಾಗೂ ಚೀನಾಗಳು ಅಪರಿಮಿತ ಪ್ರಭಾವ ಗಳಿಸಿಕೊಳ್ಳಲು ಅವಕಾಶವಾಯಿತು. ಕಂಪೂಚಿಯಾದ್ದೂ ಸರಿಸುಮಾರು ಅದೇ ಕತೆ. ಅಲ್ಲಿನ ನರಹಂತಕ ಪೋಲ್ ಪಾಟ್ ಸರ್ಕಾರವನ್ನು ಕಿತ್ತೊಗೆಯುವುದು ಅತ್ಯಗತ್ಯವಾಗಿದ್ದ ಕೆಲಸ. 1978ರ ಡಿಸೆಂಬರ್ 25, 1979ರ ಜನವರಿ 7ರ ನಡುವೆ ವಿಯೆಟ್ನಾಂ ಮಾಡಿದ್ದು ಅದನ್ನೇ. ಆದರೆ ಕಂಪೂಚಿಯನ್ನರಿಗೆ ಸಮ್ಮತವಾದ ಸರ್ಕಾರವನ್ನು ನಾಮ್ೆನ್​ನಲ್ಲಿ ಸ್ಥಾಪಿಸುವ ಬದಲು ವಿಯೆಟ್ನಾಂ ಅಲ್ಲಿ ತನ್ನ ಕೈಗೊಂಬೆ ಹೆಂಗ್ ಸ್ಯಾಮ್ರಿನ್ ಸರ್ಕಾರವನ್ನು ಸ್ಥಾಪಿಸಿತು. ಬಹುಪಾಲು ಕಂಪೂಚಿಯನ್ನರಲ್ಲದೇ, ಸುತ್ತಲಿನ ಆಸಿಯಾನ್ (ASEAN) ದೇಶಗಳೆಲ್ಲವೂ ಅದನ್ನು ವಿರೋಧಿಸಿದವು. ಎರಡೂ ಪಕ್ಷಗಳಿಗೆ ಹತ್ತಿರವಾಗಿದ್ದ ಭಾರತ ಪ್ರಾಮಾಣಿಕ ಮಧ್ಯವರ್ತಿಯ ಪಾತ್ರ ವಹಿಸಿ, ಬಿಕ್ಕಟ್ಟಿನ ಪರಿಹಾರಕ್ಕೆ ವೇದಿಕೆ ಕಲ್ಪಿಸುವ ಕೆಲಸ ಮಾಡಬಹುದಿತ್ತು. ಆದರೆ, ಸಂಪೂರ್ಣವಾಗಿ ವಿಯೆಟ್ನಾಂ ಪರ ನಿಂತ ಕಾರಣ ಭಾರತ ಆಸಿಯಾನ್ ರಾಷ್ಟ್ರಗಳ ವಿರೋಧ ಕಟ್ಟಿಕೊಂಡಿತು. ಅವುಗಳೊಡನೆ ನಮ್ಮ ಸಂಬಂಧ ಸುಧಾರಿಸಲು ದಶಕಗಳೇ ಬೇಕಾದವು. ಆದರೆ, ಅಷ್ಟರಲ್ಲಾಗಲೇ ಚೀನಾ ಆ ದೇಶಗಳಲ್ಲಿ ಪಟ್ಟಾಗಿ ಬೇರುಬಿಟ್ಟಾಗಿತ್ತು.

ಹೀಗೆ, ಯಾವುದೇ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಪಾಡಿಕೊಂಡು ಬಿಕ್ಕಟ್ಟಿನ ಪರಿಹಾರಕ್ಕೆ ಪರಿಹಾರ ಹುಡುಕುವ ಪ್ರಾಮಾಣಿಕ ಮಧ್ಯವರ್ತಿಯ ಪಾತ್ರವನ್ನೆಂದೂ ಭಾರತ ವಹಿಸಲಿಲ್ಲ. ಪರಿಣಾಮವಾಗಿ, ಇತರ ದೇಶಗಳ ಪ್ರಯತ್ನಗಳಿಂದ ಬಿಕ್ಕಟ್ಟುಗಳು ಪರಿಹಾರವಾದಾಗ ಭಾರತ ದೂರದಲ್ಲಿ ಸುಮ್ಮನೆ ನೋಡುತ್ತ ನಿಲ್ಲುವಂತಾಯಿತು. ಈ ಋಣಾತ್ಮಕ ನೀತಿಯ ಮೂಲವನ್ನು ನಾವು ನೆಹರು ರೂಪಿಸಿ ಆಚರಿಸಿದ ಅಲಿಪ್ತ ನೀತಿಯಲ್ಲೇ ಕಾಣಬಹುದು. ನೆಹರು ವಾಸ್ತವವಾಗಿ ಎಂದೂ ಅಲಿಪ್ತರಾಗಿರಲಿಲ್ಲ. ಅವರ ನೀತಿ ನಿಲುವುಗಳು ಸಂಪೂರ್ಣವಾಗಿ ಸೋವಿಯೆತ್ ಯೂನಿಯನ್ ಮತ್ತದರ ಮಿತ್ರರ ಪರವಾಗಿದ್ದವು. ಅಮೆರಿಕವನ್ನು ಎಲ್ಲೆಂದರಲ್ಲಿ ವಿರೋಧಿಸುವುದು, ಸೋವಿಯೆತ್ ಯೂನಿಯನ್ ಅನ್ನು ಬೆಂಬಲಿಸುವುದು ನೆಹರುರ ಸ್ಥಾಪಿತ ನೀತಿಯಾಗಿತ್ತು. ಇದಕ್ಕೊಂದು ಪ್ರಾತಿನಿಧಿಕ ಉದಾಹರಣೆಯೆಂದರೆ 1956ರಲ್ಲಿ ಹಂಗರಿಗೆ ಸೇನೆ ಕಳುಹಿಸಿ ಪ್ರಜಾಪ್ರಭುತ್ವವಾದಿ ಆಂದೋಲನದ ನೇತಾರ ಇಮ್ರೆ ನ್ಯಾಗಿ ಸೇರಿದಂತೆ ಸಾವಿರದಷ್ಟು ಹಂಗರಿಯನ್ನರನ್ನು ಸೋವಿಯೆತ್ ಯೂನಿಯನ್ ಕೊಂದಾಗ ನೆಹರು ಬಾಯಿ ತೆರೆಯಲೇ ಇಲ್ಲ. ಆದರೆ, 1961ರಲ್ಲಿ ಅಮೆರಿಕದ ಸಿಐಎ ಕ್ಯೂಬನ್ ನಿರಾಶ್ರಿತರನ್ನು ಮುಂದಿಟ್ಟುಕೊಂಡು ಫಿಡೆಲ್ ಕ್ಯಾಸ್ಟ್ರೋ ಸರ್ಕಾರವನ್ನು ಉರುಳಿಸಲು ವಿಫಲ ಪ್ರಯತ್ನ (ಬೇ ಆಫ್ ಪಿಗ್ಸ್ ಪ್ರಕರಣ) ನಡೆಸಿದಾಗ ಅದನ್ನು ಖಂಡಿಸಿದವರ ಮೊದಲ ಸಾಲಿನಲ್ಲಿ ನೆಹರು ನಿಂತಿದ್ದರು. ಇಂತಹ ನಕಲಿ ಅಲಿಪ್ತತೆ ಅದೆಷ್ಟರ ಮಟ್ಟಿಗೆ ಭಾರತದ ವಿದೇಶಾಂಗ ನೀತಿಯಲ್ಲಿ ಹಾಸುಹೊಕ್ಕಾಗಿಹೋಯಿತೆಂದರೆ ಅದನ್ನು ಬದಲಾಯಿಸಲು ಮುಂದಿನ ಸರ್ಕಾರಗಳಿಗೆ ಸಾಧ್ಯವಾಗಲೇ ಇಲ್ಲ. ಪರಿಣಾಮವಾಗಿ, ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಾರತಕ್ಕೆಂದೂ ಮಹತ್ವದ, ಗೌರವದ ಸ್ಥಾನ ಸಿಗಲೇ ಇಲ್ಲ. ಆದರೆ, ಇದೆಲ್ಲವನ್ನೂ ಮುಚ್ಚಿಟ್ಟು, ಕಲ್ಪಿತ ಹೆಗ್ಗಳಿಕೆಗಳನ್ನು ಜನರ ತಲೆಗೆ ತುಂಬುವ ಕೆಲಸವನ್ನು ಕಾಂಗ್ರೆಸ್ ಸರ್ಕಾರಗಳು ನಿರಂತರವಾಗಿ ಮಾಡುತ್ತ ಬಂದವು. ಸ್ವಾತಂತ್ರಾ್ಯನಂತರದ ಐದು ದಶಕಗಳನ್ನು ‘ವಿದೇಶಾಂಗ ನೀತಿಯಲ್ಲಿನ ವ್ಯರ್ಥವಾದ ಐದು ದಶಕಗಳು’ ಎಂದು ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಬಣ್ಣಿಸಿದ್ದು ಈ ಕಾರಣಕ್ಕಾಗಿ.

ಈ ಋಣಾತ್ಮಕ ಚಿತ್ರ ಬದಲಾಯಿಸಲು, ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಾರತಕ್ಕೆ ನಿಜವಾಗಿಯೂ ಗೌರವದ ಸ್ಥಾನವನ್ನು ದೊರಕಿಸಿಕೊಡಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಅದು ರೂಪಿಸಿದ 3 ಮೂಲಭೂತ ಕಾರ್ಯಯೋಜನೆಗಳು- 1. ಪಾಕಿಸ್ತಾನವನ್ನು ಏಕಾಂಗಿಯಾಗಿಸಿ ಆ ಮೂಲಕ ಅದರ ಭಯೋತ್ಪಾದನಾ ಚಟುವಟಿಕೆ ಹದ್ದುಬಸ್ತಿಗೆ ತರುವುದು, 2. ಚೀನಾವನ್ನು ಸಮರ್ಥವಾಗಿ ಎದುರಿಸುವ ಮಟ್ಟಕ್ಕೆ ಭಾರತದ ಸೇನಾ-ರಾಜಕೀಯ ಶಕ್ತಿ ವೃದ್ಧಿಸು ವುದು, 3. ಭಾರತದ ಆರ್ಥಿಕ ಸಾಮರ್ಥ್ಯನ್ನು ಕ್ಷಿಪ್ರಗತಿಯಲ್ಲಿ ವೃದ್ಧಿಸುವುದು.

ಮೊದಲ ಗುರಿಯ ಸಾಧನೆಗಾಗಿ ಮಹತ್ವದ ರಾಜತಾಂತ್ರಿಕ ಭೇಟಿ, ಮಾತುಕತೆ ಹಮ್ಮಿಕೊಂಡ ಮೋದಿ ಪಾಕಿಸ್ತಾನವನ್ನು ಸರಿಸುಮಾರು ಏಕಾಂಗಿಯಾಗಿಸಿಬಿಟ್ಟಿದ್ದಾರೆ. ಮೊನ್ನೆಮೊನ್ನೆಯವರೆಗೆ ಪಾಕಿಸ್ತಾನದ ಕಟ್ಟಾ ಬೆಂಬಲಿಗರಾಗಿದ್ದ ಯುಎಇ ಮತ್ತು ಸೌದಿ ಅರೇಬಿಯಾಗಳು ಸಹ ಈಗ ಭಾರತದತ್ತ ತಿರುಗಿವೆ. ಚೀನಾ ಮತ್ತು, ಒಂದು ಹಂತದವರೆಗೆ, ರಷ್ಯಾ ಹೊರತಾಗಿ ಯಾವ ಬೃಹತ್ ರಾಷ್ಟ್ರವೂ ಈಗ ಪಾಕಿಸ್ತಾನದ ಪರ ಇಲ್ಲ, ಅವುಗಳಿಂದ ಹರಿದುಬರುತ್ತಿದ್ದ ಧನಸಹಾಯವೂ ಬಹುಪಾಲು ನಿಂತುಹೋಗಿದೆ. ಪರಿಣಾಮವಾಗಿ, ಮೈಪರಚಿಕೊಳ್ಳುತ್ತಿರುವ ಪಾಕಿಸ್ತಾನ ಗಡಿಯಲ್ಲಿ ತಂಟೆ ತೆಗೆದು ಹತಾಶೆ ಹೊರ ಹಾಕುತ್ತಿದೆಯೇ ವಿನಾ ಭಾರತದ ಎಲ್ಲೆಯೊಳಗೆ ಭಯೋತ್ಪಾದನಾ ಕೃತ್ಯಗಳನ್ನೆಸಗುವ ಧೈರ್ಯ ಮಾಡುತ್ತಿಲ್ಲ.

ಚೀನಾದ ವಿಷಯದಲ್ಲೂ ಅಷ್ಟೇ. ಗಡಿಯುದ್ದಕ್ಕೂ ರಕ್ಷಣಾ ವ್ಯವಸ್ಥೆಯನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿರಿಸಿರುವುದಲ್ಲದೇ ತಾನು ವೈರಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಬಲ್ಲೆ ಎಂದು ಭಾರತ ಕಳೆದ ವರ್ಷ ಚೀನಾಗೆ ದೊಕ್ಲಾಮ್ಲ್ಲಿ ಮನವರಿಕೆ ಮಾಡಿಕೊಟ್ಟಿದೆ. ಭಾರತದ ಸುತ್ತಲೂ ಚೀನಾ ಸ್ಥಾಪಿಸಿರುವ ‘ಮುತ್ತಿನ ಹಾರ’ ಎಂಬ ಹೆಸರಿನ ಸೇನಾನೆಲೆಗಳ ಸರಪಳಿಯನ್ನೇ ಸುತ್ತುವರಿಯುವಂತಹ ‘ಹೂಮಾಲೆ’ ಎಂಬ ಹೆಸರಿನ ತನ್ನದೇ ಸೇನಾನೆಲೆಗಳನ್ನು ಸರ್ಕಾರ ಸ್ಥಾಪಿಸಹೊರಟಿದೆ. ಹಿಂದಿನ ವಾಜಪೇಯಿ ಸರ್ಕಾರ ಆರಂಭಿಸಿದ್ದ, ನಂತರದ ಯುಪಿಎ ಸರ್ಕಾರ ಕಡೆಗಣಿಸಿದ್ದ ಈ ಯೋಜನೆಯ ಪ್ರಕಾರ ಉತ್ತರದಲ್ಲಿ ತಾಜಿಕಿಸ್ತಾನದ ಓಲ್ನಿ ವಾಯುನೆಲೆ, ದಕ್ಷಿಣದಲ್ಲಿ ಮಾರಿಷಷ್​ನ ಆಗಲೀಗ ದ್ವೀಪ ಮತ್ತು ಸೇಷಲ್ಸ್​ನ ಅಸಂಪ್ಷನ್ ದ್ವೀಪ ಹಾಗೂ ಪೂರ್ವದಲ್ಲಿ ಮ್ಯಾನ್ಮಾರ್​ನ ಸಿಟ್ವೇ ಬಂದರುಗಳಲ್ಲಿ ಭಾರತದ ನೆಲೆಗಳು ನಿರ್ವಣವಾಗುತ್ತಿವೆ. ಜತೆಗೆ, ವಿಯೆಟ್ನಾಂನ ದ ನಾಂಗ್ ವಾಯುನೆಲೆ ಹಾಗೂ ಕ್ಯಾಮ್ಾನ್ ಕೊಲ್ಲಿ ನೌಕಾನೆಲೆಗಳಿಗೂ ಭಾರತಕ್ಕೆ ಪ್ರವೇಶ ದೊರೆತಿದೆ.

ಅರ್ಥವ್ಯವಸ್ಥೆಯನ್ನು ಊರ್ಜಿತಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ತೆರಿಗೆವಂಚನೆ ತಡೆಗೆ ಜಿಎಸ್​ಟಿ ಅನುಷ್ಠಾನಗೊಳಿಸಿ ಬೊಕ್ಕಸಕ್ಕೆ ಅಗಾಧ ಹಣ ಸೇರುವಂತೆ ಮಾಡಿದೆ. ಇನ್ನು ಅಭಿವೃದ್ಧಿ ಯೋಜನೆಗಳಿಗೆ ಹಣದ ಪೂರೈಕೆ ಸಾಕಷ್ಟಿರುವಂತಹ ವ್ಯವಸ್ಥೆಯಾಗಲಿದೆ. ಹಿಂದೆಲ್ಲ ಆಮದು ಮಾಡಿಕೊಳ್ಳುತ್ತಿದ್ದ ಮೊಬೈಲ್ ಫೋನ್, ಗೃಹಬಳಕೆ ವಸ್ತುಗಳಿಂದ ಹಿಡಿದು ಭಾರಿ ಶಸ್ತ್ರಾಸ್ತ್ರಗಳವರೆಗೆ ಅನೇಕ ಉತ್ಪನ್ನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಭಾರತದಲ್ಲೇ ಉತ್ಪಾದಿಸುವಂತೆ ವಿದೇಶಿ ಉತ್ಪಾದಕರ ಮನವೊಲಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿರುವ ಪರಿಣಾಮವಾಗಿ, ಭಾರತದಲ್ಲಿ ಉದ್ಯೋಗ ಸೃಷ್ಟಿಯ ಜತೆಗೆ ವಸ್ತುಗಳ ಬೆಲೆಯೂ ಕಡಿಮೆಯಾಗುತ್ತಿದೆ.

ಎನ್​ಡಿಎ ಸರ್ಕಾರದ ಧನಾತ್ಮಕ ಕಾರ್ಯಯೋಜನೆಗಳಿಂದಾಗಿ ಈ ದೇಶಕ್ಕೆ ‘ಕಾಕ’ಗಳು ತೊಡಿಸಿದ್ದ ಸಂಕೋಲೆಗಳು ಕಳಚಿಬೀಳುತ್ತಿರುವಂತೇ, ತಮ್ಮ ಮುಂದಿನ ದಿನಗಳು ದುರ್ಭರವಾಗಲಿವೆ ಎಂದು ಕಂಗೆಟ್ಟ ವ್ಯಕ್ತಿಗಳು ಮತ್ತು ಶಕ್ತಿಗಳು ದೇಶದೊಳಗೂ ಇವೆ, ಹೊರಗೂ ಇವೆ. ಮೋದಿ ಸರ್ಕಾರವನ್ನು ಉರುಳಿಸಲು, ಆ ಮೂಲಕ ಸ್ವಹಿತ ಸಾಧಿಸಿಕೊಳ್ಳಲು ಅವು ನಡೆಸುತ್ತಿರುವ ಹುನ್ನಾರಗಳ ವಿಶ್ಲೇಷಣೆ ಮುಂದಿನವಾರ, ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ..

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top