ಖಾನ್ ಮತ್ತು ಅವರಂಥವರಿಗೆ ಇತಿಹಾಸದ ಕಿರುಪಾಠ

ಬಾಲಿವುಡ್ ನಟ ನಾಸಿರುದ್ದೀನ್ ಶಾ ಡಿಸೆಂಬರ್ 20ರಂದು, ಇಂದಿನ ಭಾರತದಲ್ಲಿ ತನ್ನ ಮಕ್ಕಳ ಭವಿಷ್ಯದ ಬಗ್ಗೆ ತನಗೆ ಆತಂಕವಾಗುತ್ತಿದೆಯೆಂದು ಹೇಳಿ ‘ಅಸಹಿಷ್ಣುತಾ ಬ್ರಿಗೇಡ್’ನ ಹೊಸ ಸದಸ್ಯರಾಗಿದ್ದಾರೆ. ನಂತರ ಇದಕ್ಕೆ ಬಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್​ರ ಪ್ರತಿಕ್ರಿಯೆಯಂತೂ ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ಮಾತಿಗೆ ಅತ್ಯಂತ ಸೂಕ್ತ ಉದಾಹರಣೆಯಾಗಿದೆ. ಪಂಜಾಬ್ ರಾಜ್ಯ ಸರ್ಕಾರ ಶತದಿನ ಪೂರೈಸಿದ ಸಂದರ್ಭದ ಸಮಾರಂಭದಲ್ಲಿ ಖಾನ್ ಮಾತನಾಡುತ್ತ, ‘ಪಾಕಿಸ್ತಾನದ ನಿರ್ವತೃ ಮಹಮದ್ ಆಲಿ ಜಿನ್ನಾ ಕೂಡ ಭಾರತದಲ್ಲಿ ಮುಸ್ಲಿಮರ ವಿರುದ್ಧ ‘ಅಸಹಿಷ್ಣುತೆ’ಯನ್ನು ಗುರುತಿಸಿದ್ದರು, ಮುಸ್ಲಿಮರಿಗೋಸ್ಕರ ಪ್ರತ್ಯೇಕ ರಾಷ್ಟ್ರವನ್ನು ನಿರ್ವಿುಸಲು ಅವರು ಬಯಸಿದ್ದು ಆ ಕಾರಣದಿಂದಾಗಿ’ ಎಂದು ಹೇಳಿದ್ದಲ್ಲದೆ, ‘ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕೆಂದು ಮೋದಿ ಸರ್ಕಾರಕ್ಕೆ ನಾವು ಕಲಿಸಿಕೊಡುತ್ತೇವೆ’ ಎಂದು ಘೊಷಿಸಿದ್ದು ಪಾಕಿಸ್ತಾನದ ಪ್ರಧಾನಿಗೆ ತನ್ನ ದೇಶದ ಹುಟ್ಟಿನ ಬಗ್ಗೆಯೇ ತಿಳಿದಿಲ್ಲ ಎನ್ನುವುದರ ಜತೆಗೆ, ತನ್ನ ದೇಶ ಈಗ ಹೇಗಿದೆ ಎಂಬ ಅರಿವೂ ಇಲ್ಲ ಎನ್ನುವ ದಾರುಣ ಸತ್ಯವನ್ನೂ ಜಗದಗಲಕ್ಕೂ ಸಾರಿದೆ. ಹೀಗಾಗಿ, ಇಮ್ರಾನ್ ಖಾನ್ ಅವರಿಗೂ, ಇಲ್ಲಿರುವ ಅವರಂಥವರಿಗೂ ಇತಿಹಾಸ ಹಾಗೂ ವರ್ತಮಾನದ ಅರಿವನ್ನು ಮಾಡಿಕೊಡುವ ಕಿರುಪ್ರಯತ್ನವನ್ನು ಎರಡು ಭಾಗಗಳ ಈ ಲೇಖನದಲ್ಲಿ ಮಾಡಹೊರಟಿದ್ದೇನೆ.

ಬಾಲಿವುಡ್ ನಟನಟಿಯರ ಬಗ್ಗೆ ಪ್ರಾಸಂಗಿಕವಾಗಿ ಒಂದು ಮಾತು- ಬಾಲಿವುಡ್​ನ ಬಹುಪಾಲು ನಟನಟಿಯರ ಥಳುಕುಬಳುಕು, ಶ್ರೀಮಂತಿಕೆ ಎಲ್ಲ ಪರದೆಯ ಮೇಲಷ್ಟೇ. ನಿಜಜೀವನದಲ್ಲಿ ಅವರ, ಮುಖ್ಯವಾಗಿ ‘ಮಾಜಿ’ ಹಾಗೂ ‘ಹಾಲಿ’ ಎರಡನೆಯ ಹಾಗೂ ಅದರಿಂದ ಕೆಳಗಿನ ದರ್ಜೆಗಳ ನಟನಟಿಯರ ಆರ್ಥಿಕ ಸ್ಥಿತಿಗತಿಗಳು ಅಷ್ಟೇನೂ ಚೆನ್ನಾಗಿಲ್ಲ. ಮುಸ್ಲಿಮರಾಗಲೀ ಹಿಂದೂಗಳಾಗಲೀ, ಹಣಗಳಿಕೆಗೆ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಆ ಮಾರ್ಗಗಳ ಪಟ್ಟಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಸೇರಿಕೊಂಡ ಹೊಸಮಾರ್ಗ ನರೇಂದ್ರ ಮೋದಿ ನೇತೃತ್ವದ ಭಾರತಕ್ಕೆ ಅಂದರೆ ‘ಕಾಂಗ್ರೆಸ್ಸೇತರ ಸರ್ಕಾರ’ ಹೊಂದಿರುವ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನವಾಗುವಂತೆ ಮಾಡುವುದಾಗಿದೆ. ‘ಭಾರತದಲ್ಲಿ ಮುಸ್ಲಿಮರ ವಿರುದ್ಧ ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂದು ಮೊಸಳೆ ಕಣ್ಣೀರು ಹಾಕುವುದರಿಂದಲೋ, ‘ಕೇಸರಿ ಭಯೋತ್ಪಾದನೆ’ ಎಂದು ಕೂಗುವುದರಿಂದಲೋ ಅಥವಾ ‘ಭಾರತ ವಿಶ್ವದ ರೇಪ್ ಕ್ಯಾಪಿಟಲ್’ ಎಂಬ ಹಸಿಹಸಿ ಸುಳ್ಳನ್ನು ಹೇಳುವುದರ ಮೂಲಕವೋ ಹಣ ಸಂಪಾದಿಸಬಹುದು ಎಂಬ ‘ಜ್ಞಾನೋದಯ’ 2014ರ ಮೇ ತಿಂಗಳಿಂದೀಚೆಗೆ ಅವರಿಗಾಗಿದೆ. ಇರಲಿ ಬಿಡಿ, ನಟನೆಯಿಂದಲೇ ಹೊಟ್ಟೆ ಹೊರೆದುಕೊಳ್ಳುವವರಿಗೆ ನಟಿಸಲು ‘ರೀಲ್ ಲೈಫ್’ ಆದರೇನು, ‘ರಿಯಲ್ ಲೈಫ್’ ಆದರೇನು! 1947ರಲ್ಲಿ ಅಖಂಡ ಭಾರತ ವಿಭಜನೆಗೊಂಡು ಉಪಖಂಡದಲ್ಲಿ ಎರಡು ಶತ್ರುರಾಷ್ಟ್ರಗಳು ಸೃಷ್ಟಿಯಾದವಷ್ಟೇ. ಈ ದುರಂತಕ್ಕೆ ಕಾರಣರಾದದ್ದು ಮೊದಲಿಗೆ ಭಾರತೀಯರೂ ಅಲ್ಲ, ಪಾಕಿಸ್ತಾನೀಯರೂ ಅಲ್ಲ. ನಂತರದ ದಿನಗಳಲ್ಲಿ ಈ ದೇಶದ ಮುಸ್ಲಿಮರು, ವಿಭಜನೆಯ ಕೂಗೆತ್ತಿದರೂ ಆ ಕೂಗಿನ ಹಿಂದಿದ್ದದ್ದು ಅವರ ಧರ್ಮ ಅಲ್ಲವೇ ಅಲ್ಲ!

ದೇಶವಿಭಜನೆಯೆಂಬ ದುರಂತ ನಾಟಕದ ಮೊದಲ ಅಂಕದ ಪರದೆ ಮೇಲೆದ್ದದ್ದು 19ನೇ ಶತಮಾನದ ಅಂತ್ಯಭಾಗದಲ್ಲಿ, ಮಧ್ಯ ಏಷ್ಯಾದಲ್ಲಿನ ರಾಜಕೀಯ ಹಾಗೂ ಸೇನಾಪ್ರಭಾವಕ್ಕಾಗಿ ಬ್ರಿಟನ್ ಮತ್ತು ರಷ್ಯಾಗಳ ನಡುವೆ ‘ಮುಸುಕಿನೊಳಗಣ ಗುದ್ದಾಟ’ ಆರಂಭವಾದಾಗ. ಆ ದಿನಗಳ ಎರಡು ಮಹಾಶಕ್ತಿಗಳ ನಡುವಿನ ಈ ತೆರೆಮರೆಯ ಸಂಘರ್ಷವನ್ನು ‘ಜಂಗಲ್ ಬುಕ್’ ಖ್ಯಾತಿಯ ಆಂಗ್ಲ ಲೇಖಕ ರುಡ್​ಯಾರ್ಡ್ ಕಿಪ್ಲಿಂಗ್ ‘ದ ಗ್ರೇಟ್ ಗೇಮ್ ಎಂದು ವರ್ಣಿಸಿದ. ಇತಿಹಾಸಕಾರರು ಆ ಪದಗುಚ್ಛವನ್ನು ಅಧಿಕೃತಗೊಳಿಸಿಬಿಟ್ಟರು. ಪಶ್ಚಿಮ ಯುರೋಪ್​ನ ಬ್ರಿಟನ್, ಫ್ರಾನ್ಸ್ ಇರಲಿ ಹಾಲೆಂಡ್, ಬೆಲ್ಜಿಯಂನಂತಹ ಪುಟ್ಟ ದೇಶಗಳೂ ನೌಕಾಪಡೆಗಳನ್ನು ಕಟ್ಟಿ ಗೋಳದ ಉದ್ದಗಲಕ್ಕೂ ಹರಿದಾಡಿ ವಸಾಹತುಗಳನ್ನು ಸ್ಥಾಪಿಸಿದಂತೆ ತನ್ನದೇ ವಸಾಹತುಗಳನ್ನು ಸ್ಥಾಪಿಸುವುದು ಒಂದಾದರೂ ಸರ್ವಋತು ಬಂದರನ್ನು ಹೊಂದಿಲ್ಲದ ಬೃಹತ್ ರಷ್ಯಾಕ್ಕೆ ಸಾಧ್ಯವಾಗಲಿಲ್ಲ. ಅಂತಹ ಬಂದರೊಂದನ್ನು ಪಡೆದುಕೊಳ್ಳುವ ಉದ್ದೇಶದಿಂದ ರಷ್ಯನ್ನರು 19ನೇ ಶತಮಾನದ ಮಧ್ಯದಲ್ಲಿ ತುರ್ಕಿಗೆ ಸೇರಿದ ವಿಶಾಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಕಪ್ಪುಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರದತ್ತ ಮುಂದೊತ್ತಿ ಬಂದರು. ರಷ್ಯನ್ನರ ಈ ಮುಂದೊತ್ತುವಿಕೆ ಮುಂದೊಮ್ಮೆ ತಮ್ಮ ಏಷ್ಯ-ಆಫ್ರಿಕಾ ವಸಾಹತು ಸಾಮ್ರಾಜ್ಯಕ್ಕೆ ಧಕ್ಕೆ ತರಬಹುದೆಂದು ಆತಂಕಗೊಂಡ ಬ್ರಿಟನ್ ಮತ್ತು ಫ್ರಾನ್ಸ್ ಒಟ್ಟಿಗೆ ಸೇರಿ 1853-56ರಲ್ಲಿ ರಷ್ಯನ್ ಸೇನೆಯನ್ನು ಕ್ರಿಮಿಯಾದಲ್ಲಿ ನಿರ್ಣಾಯಕವಾಗಿ ಸೋಲಿಸಿ ಅವರ ದಕ್ಷಿಣಮುಖೀ ದಾಪುಗಾಲನ್ನು ಯಶಸ್ವಿಯಾಗಿ ತಡೆಗಟ್ಟಿದವು. ಮೆಡಿಟರೇನಿಯನ್ ಸಮುದ್ರದ ಹಾದಿ ಮುಚ್ಚಿಹೋದಾಗ ರಷ್ಯನ್ನರು ತಿರುಗಿದ್ದು ಪರ್ಷಿಯನ್ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ಕಡೆಗೆ. 1856ರ ನಂತರ ಕೇವಲ ಮೂರೇ ದಶಕಗಳಲ್ಲಿ ಕ್ಯಾಸ್ಪಿಯನ್ ಸಮುದ್ರದಿಂದ (ತುರ್ಕ್​ವೆುನಿಸ್ತಾನ) ಪಾಮೀರ್​ವರೆಗೆ (ತಾಜಿಕಿಸ್ತಾನ) ಇಡೀ ಮಧ್ಯ ಏಷ್ಯಾವನ್ನು ಆಕ್ರಮಿಸಿಕೊಂಡ ಅವರ ಸೇನೆ 1888ರಲ್ಲಿ ಕ್ಯಾಪ್ಟನ್ ಗ್ರೋಂಬಿಚೆವ್​ಸ್ಕಿ ನೇತೃತ್ವದಲ್ಲಿ ನಮ್ಮ ಕಾಶ್ಮೀರವನ್ನು ಪ್ರವೇಶಿಸಿತು. ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಹುಂಜಾದಲ್ಲಿ ಬೀಡುಬಿಟ್ಟ ರಷ್ಯನ್ ಸೇನೆ ಅವಕಾಶ ದೊರೆತರೆ ನೆರೆಯ ಬೃಹತ್ ಹಾಗೂ ಜನನಿಬಿಡ ಪಂಜಾಬ್ ಪ್ರಾಂತ್ಯಕ್ಕೆ ನುಗ್ಗುವ ಸಾಮರ್ಥ್ಯನ್ನೂ, ಇರಾದೆಯನ್ನೂ ಪ್ರದರ್ಶಿಸಿತು. ಅಷ್ಟೇ ಅಲ್ಲ, ತಮ್ಮ ಐತಿಹಾಸಿಕ ಬಯಕೆಯಂತೆ ಬಲೂಚಿಸ್ತಾನವನ್ನು ಆಕ್ರಮಿಸಿಕೊಂಡು ಅರಬ್ಬೀ ಸಮುದ್ರತೀರವನ್ನು ತಲುಪುವುದು ಅವರ ದೂರಗಾಮಿ ಯೋಜನೆಯಾಗಿತ್ತು.

ತನ್ನ ಭಾರತ ಸಾಮ್ರಾಜ್ಯಕ್ಕೆ ಉತ್ತರದಿಂದ ಯಾವ ಅಪಾಯವನ್ನೂ ನಿರೀಕ್ಷಿಸಿರದಿದ್ದ ಬ್ರಿಟನ್ ರಷ್ಯನ್ನರ ಈ ಕ್ರಮದಿಂದ ಎಚ್ಚೆತ್ತು, ತನ್ನ ಸೇನೆಗೆ ಅತ್ಯಧಿಕ ಸಂಖ್ಯೆಯಲ್ಲಿ ಸೈನಿಕರನ್ನು ಪೂರೈಸುತ್ತಿದ್ದ ಮತ್ತು ಗೋಧಿಯ ಕಣಜವಾಗಿದ್ದ ಪಂಜಾಬನ್ನು ರಷ್ಯನ್ ದಾಳಿಯಿಂದ ರಕ್ಷಿಸಲು ತರಾತುರಿಯಲ್ಲಿ ಪ್ರತಿತಂತ್ರ ರೂಪಿಸಿತು. ಮುಂದಿನ ಹತ್ತೇ ವರ್ಷಗಳಲ್ಲಿ ಹಲವಾರು ಸುತ್ತಿನ ಮಾತುಕತೆಗಳು, ಮೂರು ಒಪ್ಪಂದಗಳು ಮತ್ತು ತೆರೆಮರೆಯ ಮಿಲಿಟರಿ ಬೆದರಿಕೆಗಳ ಮೂಲಕ ರಷ್ಯನ್ನರು ಅಫ್ಘಾನಿಸ್ತಾನವನ್ನು ದಾಟಿ ಇತ್ತ ಬಾರದಂತೆ ತಡೆಯುವುದರಲ್ಲಿ ಬ್ರಿಟನ್ ಕೊನೆಗೂ ಯಶಸ್ವಿಯಾಯಿತು. ಹೀಗಿದ್ದೂ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಗೆ ರಷ್ಯನ್ ಕರಡಿಯ ಭೀತಿ ದೂರಾಗಲಿಲ್ಲ. ಪಾಮೀರ್​ನಾಚೆ ರಷ್ಯನ್ನರ ಸೇನಾ ಚಟುವಟಿಕೆಗಳ ಮೇಲೆ ಕಣ್ಣಿಡಲು ವಾಯವ್ಯ ಕಾಶ್ಮೀರದ ಗಿಲ್ಗಿಟ್​ನಲ್ಲಿ ಸೇನೆಯನ್ನಿರಿಸಿದ್ದಲ್ಲದೆ ರಷ್ಯನ್ನರು ಮುಂದೆಂದಾದರೂ ಅರಬ್ಬಿ ಸಮುದ್ರ ತೀರದಲ್ಲಿ ಸರ್ವಋತು ಬಂದರೊಂದನ್ನು ಪಡೆದುಕೊಳ್ಳುವುದನ್ನು ಶತಾಯಗತಾಯ ತಡೆಯುವುದಕ್ಕಾಗಿ, ತನ್ಮೂಲಕ ರಷ್ಯನ್ನರು ಹಿಂದೂಮಹಾಸಾಗರ ವಲಯದಲ್ಲಿ ಪ್ರಭಾವ ವೃದ್ಧಿಸಿಕೊಳ್ಳುವ ಸಾಧ್ಯತೆಯನ್ನು ವಿಫಲಗೊಳಿಸುವುದಕ್ಕಾಗಿ ಬ್ರಿಟಿಷರು ದೂರಗಾಮಿ ಯೋಜನೆಯೊಂದನ್ನು ರೂಪಿಸಿದರು. ಆ ಯೋಜನೆಗಾಗಿ ಅವರಿಗೆ ಅತ್ಯಗತ್ಯವಾಗಿ ಬೇಕಾಗಿದ್ದದ್ದು ಅಂದೂ, ಮುಂದೆಯೂ ತಮ್ಮ ಮಾತುಗಳನ್ನು ವೇದವಾಕ್ಯದಂತೆ ಕೇಳುವ ಒಂದು ಸರ್ಕಾರ. ಭವಿಷ್ಯದ ಕಾಂಗ್ರೆಸ್, ಮುಖ್ಯವಾಗಿ ಸ್ವತಂತ್ರ ಮನೋಭಾವದ, ಉಗ್ರಗಾಮಿ ಬಣದ ನೇತೃತ್ವದ ಸ್ವತಂತ್ರ ಭಾರತದಿಂದ ಅಂತಹ ಸಹಕಾರ ಸಿಗುವ ಬಗ್ಗೆ ಬ್ರಿಟಿಷರಿಗೆ ಸಹಜವಾಗಿಯೇ ಶಂಕೆಯಿತ್ತು. ಹೀಗಾಗಿ ಭಾರತದ ವಾಯವ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಅರಬ್ಬಿ ಸಮುದ್ರಗಳ ನಡುವೆ ಪುಟ್ಟ ಸ್ವತಂತ್ರ ದೇಶವೊಂದರ ನಿರ್ವಣಕ್ಕೆ ಬ್ರಿಟಿಷ್ ಸಾಮರಿಕ ತಜ್ಞರು 20ನೇ ಶತಮಾನದ ಮೊದಲ ದಶಕದಲ್ಲೇ ಯೋಜನೆ ರೂಪಿಸಿದರು. ತಮ್ಮೀ ಯೋಜನೆಯ ಅನುಷ್ಠಾನಕ್ಕಾಗಿ ಬ್ರಿಟಿಷ್ ಆಳರಸರು ಆರಿಸಿಕೊಂಡದ್ದು ಮುಸ್ಲಿಂ ಲೀಗನ್ನು. ಪಾಕಿಸ್ತಾನದ ಜನ್ಮರಹಸ್ಯ ಇದು!

ವಾಸ್ತವವಾಗಿ ಮುಸ್ಲಿಂ ಲೀಗ್​ನ ಸ್ಥಾಪನೆಯ ಉದ್ದೇಶ ದೇಶವಿಭಜನೆಯಾಗಿರಲಿಲ್ಲ. ಆದರೆ ತಮ್ಮ ಉದ್ದೇಶಸಾಧನೆಗಾಗಿ ಬ್ರಿಟಿಷರು ಲೀಗ್​ನ ಪ್ರಮುಖರನ್ನು ಓಲೈಸತೊಡಗಿದಾಗ ಪರಿಸ್ಥಿತಿ ಬದಲಾಯಿತು. ಆಗಿನ ಮುಸ್ಲಿಂ ಲೀಗ್ ದೆಹಲಿ, ಲಖನೌ, ಬಾಂಬೆಗಳ ಮೇಲುವರ್ಗದ ಮುಸ್ಲಿಮರಿಂದಲೇ ತುಂಬಿತ್ತು. ಇವರು ಮೊದಲಿಗೆ ‘ಶಿಮ್ಲಾ ಡೆಪ್ಯುಟೇಷನ್’ ಎಂಬ ಗುಂಪು ಕಟ್ಟಿಕೊಂಡು 1906ರ ಅಕ್ಟೋಬರ್​ನಲ್ಲಿ ವೈಸ್​ರಾಯ್ ಲಾರ್ಡ್ ಮಿಂಟೋನನ್ನು ಭೇಟಿಯಾಗಿ ಮುಸ್ಲಿಮರಿಗೆ ಶಾಸನಸಭೆ ಹಾಗೂ ಆಡಳಿತಶಾಹಿಯಲ್ಲಿ ಮೀಸಲಾತಿಯೂ ಸೇರಿದಂತೆ ಹಲವು ಬೇಡಿಕೆಗಳನ್ನಿತ್ತಿದ್ದರು. ನಂತರ ಎರಡೇ ತಿಂಗಳಲ್ಲಿ ಶಿಮ್ಲಾ ಡೆಪ್ಯುಟೇಷನ್​ನ ಸದಸ್ಯರು ಮುಸ್ಲಿಂ ಲೀಗ್ ಸ್ಥಾಪಿಸಿದರು. ಅಖಂಡ ಭಾರತದಲ್ಲೇ ಮೀಸಲಾತಿ ಕೇಳಿಕೊಂಡು ಹೋದ ಮುಸ್ಲಿಂ ನಾಯಕರಿಗೆ ಪ್ರತ್ಯೇಕ ರಾಷ್ಟ್ರದ ಅಮಿಷವೊಡ್ಡಿ ಅವರನ್ನು ಸೆಳೆದುಕೊಳ್ಳುವುದರಲ್ಲಿ ಬ್ರಿಟಿಷರು ಯಶಸ್ವಿಯಾದರು. ಪಾರಂಪರಿಕವಾಗಿ ಶ್ರೀಮಂತರಾಗಿದ್ದ, ಜತೆಗೇ ಆಗಷ್ಟೇ ಪಾಶ್ಚಿಮಾತ್ಯ ವಿದ್ಯಾಭ್ಯಾಸಕ್ಕೆ ತೆರೆದುಕೊಂಡಿದ್ದ ಉತ್ತರ ಭಾರತದ ಮುಸ್ಲಿಂ ನಾಯಕರಿಗೆ ಪ್ರತ್ಯೇಕ ರಾಷ್ಟ್ರದ ಕಲ್ಪನೆ, ಅದರ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಬ್ರಿಟನ್​ನ ಪೂರ್ಣ ಸಹಕಾರದ ಆಶ್ವಾಸನೆ, ಮುಸ್ಲಿಂ ರಾಷ್ಟ್ರದಲ್ಲಿನ ಸ್ಥಾನಮಾನಗಳು ಎಲ್ಲವೂ ರಸಭರಿತವಾಗಿ ಕಂಡವು. ಹೀಗೆ ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹಿ ಹಂಚಿಕೆಯೊಂದಿಗೆ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಚವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಮೇಳೈಸಿದಾಗ ದೇಶವಿಭಜನೆಗೆ ರಂಗ ಸಜ್ಜಾಯಿತು. ದೇಶವಿಭಜನೆಯೆಂಬ ದುರಂತ ನಾಟಕದ ಪ್ರಮುಖ ಪಾತ್ರಧಾರಿಗಳಾದ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ತಮ್ಮ ಸ್ವಾರ್ಥಪರ ಉದ್ದೇಶಗಳನ್ನು ಮರೆಮಾಚಿ ಇಡೀ ಬೆಳವಣಿಗೆಗೆ ಧಾರ್ವಿುಕ ಆಯಾಮ ಕೊಟ್ಟು ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ ಸಹಬಾಳ್ವೆ ನಡೆಸಲಾಗದು ಎಂದು ಘೊಷಿಸಿದ ದ್ವಿರಾಷ್ಟ್ರ ಸಿದ್ಧಾಂತವನ್ನು ಮುಂದೊಡ್ಡಿ ಭಾರತೀಯರನ್ನಷ್ಟೇ ಅಲ್ಲ ಇಡೀ ವಿಶ್ವವನ್ನು ಅಡ್ಡದಾರಿಗೆಳೆದವು. ಈಗ ಮಹಾಮಹಾ ವಿಚಾರವಾದಿಗಳಿಂದ ಹಿಡಿದು ಸಾಮಾನ್ಯನವರೆಗೂ ಎಗ್ಗಿಲ್ಲದೆ ಉದುರಿಸುವ ‘ಕೋಮುವಾದ’ ಎಂಬ ನುಡಿಮುತ್ತು ಸಂಕೇತಿಸುವ ಬಹುತೇಕ ಅನಾಚಾರಗಳು ಈ ದೇಶದಲ್ಲಿ ಅವತರಿಸಿದ್ದು ಹೀಗೆ.

ಮುಸ್ಲಿಂ ಲೀಗ್​ನ ನಿಜವಾದ ಬಣ್ಣ, ಅದಕ್ಕೆ ಇಸ್ಲಾಮಿನ ಬಗೆಗಾಗಲಿ ಸಾಮಾನ್ಯ ಮುಸ್ಲಿಮರ ಬಗೆಗಾಗಲಿ ಯಾವ ಕಾಳಜಿಯೂ ಇರಲಿಲ್ಲ ಎಂಬ ದಾರುಣ ಸತ್ಯ, ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಜತೆ ಶಾಮೀಲಾಗಿ ಧರ್ಮವನ್ನದು ರಾಜಕೀಯ-ಆರ್ಥಿಕ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಂಡಿತು ಎಂಬ ಆಘಾತಕಾರಿ ‘ರಹಸ್ಯ’, ಪಾಕಿಸ್ತಾನ ಸ್ಥಾಪನೆಯಾಗುತ್ತಿದ್ದಂತೆಯೇ ಬಯಲಾಯಿತು. ‘ದ್ವಿರಾಷ್ಟ್ರ ಸಿದ್ಧಾಂತ’ದ ಕೂಗು ಹಾಕಿ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ವಣಕ್ಕಾಗಿ ತಕರಾರು ತೆಗೆದು ಅದು ಯಶಸ್ವಿಯಾಗಿ ಪಾಕಿಸ್ತಾನ ನಿರ್ವಣವಾದ ಮರುಘಳಿಗೆಯಲ್ಲೇ ಲೀಗ್​ನ ನಾಯಕರು ರಾಗ ಬದಲಾಯಿಸಿದರು. ಅವರ ಪಾಕಿಸ್ತಾನದಲ್ಲಿ ಸಾಮಾನ್ಯ ಮುಸ್ಲಿಮರಿಗೆ ಸ್ಥಾನವಿರಲಿಲ್ಲ. ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿಯಾದವರು ಯುನೈಟೆಡ್ ಪ್ರಾವಿನ್ಸ್ (ಉತ್ತರ ಪ್ರದೇಶ)ನ ಶ್ರೀಮಂತ ಮನೆತನದ ಲಿಯಾಖತ್ ಅಲಿ ಖಾನ್. ಭಾರತದಿಂದ ಪ್ರವಾಹದಂತೆ ಹರಿದುಬರುತ್ತಿದ್ದ ಮುಸ್ಲಿಮರ ಬಗ್ಗೆ ತಿರಸ್ಕಾರ ತೋರುತ್ತ ಅವರು ‘ಪೂರ್ವ ಪಂಜಾಬ್​ನ ಮುಸ್ಲಿಮರ ಹೊರತಾಗಿ ಯುನೈಟೆಡ್ ಪ್ರಾವಿನ್ಸ್ ಸೇರಿದಂತೆ ಬೇರಾವ ಪ್ರದೇಶಗಳ ಮುಸ್ಲಿಮರಿಗೂ ಪಾಕಿಸ್ತಾನದಲ್ಲಿ ಸ್ಥಳವಿಲ್ಲ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು! ಅಷ್ಟೇ ಅಲ್ಲ, ಪಾಕಿಸ್ತಾನ ಮುಸ್ಲಿಮರಿಗಾಗಿಯೇ ಇರುವ ಒಂದು ಧರ್ವಧಾರಿತ ರಾಷ್ಟ್ರವಾಗುವುದು ತಮ್ಮ ಆಶಯವಲ್ಲ ಎಂದು ಜಿನ್ನಾ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

1947ರ ಆಗಸ್ಟ್ 12ರಂದು ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿನ ತಮ್ಮ ಮೊಟ್ಟಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಜಿನ್ನಾ ನವರಾಷ್ಟ್ರದ ರಾಜನೀತಿಯ ಬಗ್ಗೆ ಹೇಳುತ್ತ, ‘ಪಾಕಿಸ್ತಾನ ಧರ್ಮನಿರಪೇಕ್ಷ ಹಾಗೂ ಆಧುನಿಕ ರಾಷ್ಟ್ರವಾಗಿ ಉಗಮಿಸಬೇಕು’ ಎಂದು ಘೊಷಿಸಿದರು. ಮುಂದುವರಿದು ಅವರು ‘ನೀವು ಯಾವುದೇ ಕೋಮಿಗೆ ಸೇರಿರಲಿ ನೀವೆಲ್ಲರೂ ಈ ರಾಷ್ಟ್ರದಲ್ಲಿ ಸಮಾನ ಹಕ್ಕು, ಸವಲತ್ತು ಮತ್ತು ಜವಾಬ್ದಾರಿಗಳನ್ನು ಹೊಂದಿದ ಪ್ರಜೆಗಳು. ನೀವು ಮಂದಿರಗಳಿಗೆ, ಮಸೀದಿಗಳಿಗೆ ಅಥವಾ ಇನ್ನಾವುದೇ ಪವಿತ್ರಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ. ಇದು ಸರ್ಕಾರದ ಕಾರ್ಯಕಲಾಪಗಳಿಗೆ ಸಂಬಂಧಿಸಿರುವುದಿಲ್ಲ. ನಾವೆಲ್ಲರೂ ಒಂದೇ ರಾಷ್ಟ್ರದ ಪ್ರಜೆಗಳು, ಸಮಾನ ಪ್ರಜೆಗಳು ಎಂಬ ಮೂಲಭೂತ ತತ್ತ್ವದ ಆಧಾರದ ಮೇಲೆ ನಾವು ಮುಂದಡಿ ಇಡುತ್ತಿದ್ದೇವೆ’ ಎಂದರು. ಅಲ್ಲಿಯವರೆಗೆ ಹಿಂದೂಗಳನ್ನೂ ಮುಸ್ಲಿಮರನ್ನೂ ಪ್ರತ್ಯೇಕ ‘ರಾಷ್ಟ್ರ’ಗಳು ಎಂದು ವರ್ಣಿಸುತ್ತಿದ್ದ ಜಿನ್ನಾ ಸಾಹೇಬರು ಈಗ ಅವೆರಡನ್ನೂ ಕೇವಲ ಬೇರೆಬೇರೆ ‘ಕೋಮು’ಗಳು ಎಂದಷ್ಟೇ ಕರೆದರು! ಅಷ್ಟೇ ಅಲ್ಲ, ಮುಸ್ಲಿಮರಿಗಾಗಿನ ರಾಷ್ಟ್ರಕ್ಕಾಗಿ ಲೀಗ್ ಮೊದಲು ಕೇಳಿದ್ದ ಪ್ರದೇಶಗಳನ್ನೆಲ್ಲ ಅದಕ್ಕೆ ಕೊಟ್ಟಿದ್ದರೆ ಪಾಕಿಸ್ತಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗುತ್ತಿದ್ದರು! ಹಾಗಿದ್ದರೆ, ಜಿನ್ನಾ ಮತ್ತು ಮುಸ್ಲಿಂ ಲೀಗ್ ಬ್ರಿಟಿಷರ ಜತೆ ಸೇರಿಕೊಂಡು ದೇಶವನ್ನು ತುಂಡರಿಸಿದ ಉದ್ದೇಶವಾದರೂ ಏನು? ಹಿಂದೂಗಳೂ ಮುಸ್ಲಿಮರೂ ‘ಸಮಾನ ಪ್ರಜೆ’ಗಳಾಗಿಯೇ ಬದುಕುವುದಾದರೆ ಅದು ಅವಿಭಜಿತ ಭಾರತದಲ್ಲೇ ಆಗಬಹುದಿತ್ತಲ್ಲ? ನಂತರ ಪಾಕಿಸ್ತಾನದಲ್ಲೇನಾಯಿತು ಎನ್ನುವುದನ್ನು ಮುಂದಿನವಾರ ನೋಡೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)