ಕಾಂಗ್ರೆಸ್ ಮೂಗಿನ ನೇರಕ್ಕೆ ಕಮ್ಯೂನಿಸ್ಟರು ಬರೆದ ಇತಿಹಾಸ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದೇ ಕಾಂಗ್ರೆಸ್ ಎಂಬ ಅಭಿಪ್ರಾಯ ಇತಿಹಾಸದಲ್ಲಿ ದಾಖಲಾಗುವಂತೆ ಮಾಡಿ, ಆ ಮೂಲಕ, ಸ್ವತಂತ್ರ ಭಾರತದಲ್ಲಿ ಅಧಿಕಾರಾರೂಢವಾಗಲು ಕಾಂಗ್ರೆಸ್ ಅವಿರೋಧ ಹಕ್ಕುದಾರ, ಪ್ರಧಾನಿಯಾಗಲು ಕಾಂಗ್ರೆಸ್ ನಾಯಕನಾಗಿ ತಾನು ಹಕ್ಕುದಾರ ಎಂದು ಮುಂದಿನ ತಲೆಮಾರುಗಳನ್ನು ನಂಬಿಸುವುದು ನೆಹರುಗೆ ಅಗತ್ಯವಾಗಿತ್ತು.

ಬ್ರಿಟಿಷ್ ವಸಾಹತುಶಾಹಿಗಳು ತಮ್ಮ ಅನುಕೂಲಕ್ಕಾಗಿ ತಿರುಚಿದ್ದ ಭಾರತದ ಇತಿಹಾಸವನ್ನು ವಸ್ತುನಿಷ್ಠವಾಗುವಂತೆ ಪರಿವರ್ತಿಸಲು ಜವಾಹರ್​ಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುವುದಿರಲಿ, ಅದನ್ನು ಮತ್ತಷ್ಟು ತಿರುಚಲು ಉದ್ಯುಕ್ತವಾದದ್ದನ್ನು ಸ್ವತಂತ್ರ ಭಾರತ ಕಂಡಿತು. ನೆಹರುರ ಈ ಕೃತ್ಯಕ್ಕೆ ಅವರು ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ಮೂಸೆಯಲ್ಲೇ ತಯಾರಾಗಿದ್ದಷ್ಟೇ ಕಾರಣವಲ್ಲ. ಅದಕ್ಕಿಂತಲೂ ದೊಡ್ಡ ಕಾರಣಗಳು ಬೇರೆಯೇ ಇದ್ದುವು ಮತ್ತು ಅವು ನೆಹರುರಿಗೆ ವೈಯಕ್ತಿಕವಾಗಿ ಮಹತ್ವದ್ದಾಗಿದ್ದವು. ಪರಸ್ಪರ ಪೂರಕವಾದ ಆ ಮೂರು ಕಾರಣಗಳು ಸಾರುವುದು ತಮ್ಮದೇ ಕೆಲ ಸ್ವಾರ್ಥಪರ ಕೃತ್ಯಗಳು ಮತ್ತು ಆಕಾಂಕ್ಷೆಗಳನ್ನು ಮುಂದಿನ ತಲೆಮಾರುಗಳಿಂದ ಬಚ್ಚಿಡಬೇಕೆಂದು ಬಯಸಿದ ನೆಹರುರ ಮನೋಭಾವವನ್ನು.

ಒಂದು- ‘ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಕನ್ಸರ್ವೇಟಿವ್ ಪಕ್ಷಕ್ಕೆ ಮನಸ್ಸಿರಲಿಲ್ಲ. ಆದರೆ ಲೇಬರ್ ಪಕ್ಷಕ್ಕೆ ಮನಸ್ಸಿತ್ತು… 1946ರ ಚುನಾವಣೆಯಲ್ಲಿ ಲೇಬರ್ ಪಕ್ಷ ವಿಜಯಿಯಾಯಿತು. ಆಗ ಭಾರತದ ಸ್ವಾತಂತ್ರ್ಯದ ಹಾದಿ ಸುಗಮವಾಯಿತು’ ಎಂದು ನಾವು ಶಾಲೆಯಲ್ಲಿ ಓದಿದ ಇತಿಹಾಸ ನಮಗೆ ಹೇಳಿತ್ತು. ಆದರೆ ವಾಸ್ತವವಾಗಿ ನಡೆದದ್ದೇ ಬೇರೆ. ಬ್ರಿಟಿಷರು ನಮ್ಮನ್ನಾಳಿದ್ದೇ ನಮ್ಮವರ ಸಹಕಾರದಿಂದ. ಇಲ್ಲಿ ಬ್ರಿಟಿಷ್ ಅಧಿಕಾರಿಗಳ ಹಾಗೂ ಸೈನಿಕರ ಸಂಖ್ಯೆ ಎಂದೂ ಮೂವತ್ತು ಸಾವಿರವನ್ನು ದಾಟಿರಲಿಲ್ಲ ಎಂದು ಹಿಂದೆಯೇ ಹೇಳಿದ್ದೇನೆ. 1946ರಲ್ಲಿ ಮುಂಬೈ ಬಂದರಿನಲ್ಲಿ ಭಾರತೀಯ ನೌಕಾದಳ ಬ್ರಿಟಿಷರ ವಿರುದ್ಧ ದಂಗೆಯೆದ್ದಿತು ಮತ್ತು ಅದನ್ನು ಅಡಗಿಸಲು ಸೇನೆಯ ಇತರ ಅಂಗಗಳು ನಿರಾಕರಿಸಿದವು. ಅಂತಹ ಸನ್ನಿವೇಶದಲ್ಲಿ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಒಂದು ಲಕ್ಷ ಬ್ರಿಟಿಷ್ ಸೈನಿಕರ ಅಗತ್ಯವಿದೆಯೆಂದು ವೈಸ್​ರಾಯ್ ಲಾರ್ಡ್ ವೇವಲ್ ಬ್ರಿಟಿಷ್ ಸರ್ಕಾರಕ್ಕೆ ಮೊರೆಯಿಟ್ಟರು. ಆಗಷ್ಟೇ ಎರಡನೆಯ ಮಹಾಯುದ್ಧದಿಂದ ಬಸವಳಿದಿದ್ದ ಬ್ರಿಟನ್​ಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರನ್ನು ಕಳುಹಿಸುವುದು ಸಾಧ್ಯವೇ ಇರಲಿಲ್ಲ. 1951ರಲ್ಲಿ ಈ ಬಗ್ಗೆ ಕೊಲ್ಕತಾದಲ್ಲಿ ಮಾತನಾಡುತ್ತ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲೀ ಮೊದಲಿಗೆ ಸುಭಾಷ್​ಚಂದ್ರ ಬೋಸ್​ರ ಐಎನ್​ಎ ಮತ್ತು ನಂತರ ನೌಕಾದಳದ ದಂಗೆಯನ್ನು ಉಲ್ಲೇಖಿಸಿ ಹೇಳಿದ್ದು, ‘ಯಾವಾಗ ಭಾರತೀಯರು ನಮ್ಮ ವಿರುದ್ಧ ಸಶಸ್ತ್ರ ದಂಗೆಯೆದ್ದರೋ ಆಗ ಇನ್ನು ಭಾರತವನ್ನು ನಮ್ಮ ಕೈಯಲ್ಲಿಟ್ಟುಕೊಳ್ಳುವುದು ಸಾಧ್ಯವಿಲ್ಲ ಎಂದು ನಮಗೆ ಮನವರಿಕೆಯಾಯಿತು’ ಎಂದು. ಇದೆಲ್ಲವನ್ನು ಮರೆಮಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದೇ ಕಾಂಗ್ರೆಸ್ ಎಂಬ ಅಭಿಪ್ರಾಯ ಇತಿಹಾಸದಲ್ಲಿ ದಾಖಲಾಗುವಂತೆ ಮಾಡಿ, ಆ ಮೂಲಕ, ಸ್ವತಂತ್ರ ಭಾರತದಲ್ಲಿ ಅಧಿಕಾರಾರೂಢವಾಗಲು ಕಾಂಗ್ರೆಸ್ ಅವಿರೋಧ ಹಕ್ಕುದಾರ, ಪ್ರಧಾನಿಯಾಗಲು ಕಾಂಗ್ರೆಸ್ ನಾಯಕನಾಗಿ ತಾನು ಹಕ್ಕುದಾರ ಎಂದು ಮುಂದಿನ ತಲೆಮಾರುಗಳನ್ನು ನಂಬಿಸುವುದು ನೆಹರುಗೆ ಅಗತ್ಯವಾಗಿತ್ತು.

ಎರಡು- ಜವಾಹರ್​ಲಾಲ್ ನೆಹರು ಕಾಂಗ್ರೆಸ್ ಅಧ್ಯಕ್ಷಸ್ಥಾನವನ್ನೂ, ನಂತರ ಪ್ರಧಾನಮಂತ್ರಿ ಪದವಿಯನ್ನು ಆಕ್ರಮಿಸಿಕೊಂಡದ್ದು ಅಪ್ರಜಾಪ್ರಭುತ್ವವಾದಿ ನೀತಿಯಿಂದ. ಇದು ಸಾಧ್ಯವಾದದ್ದು ಗಾಂಧಿಯವರ ಸಕ್ರಿಯ ಸಹಕಾರ ಮತ್ತು ಸರ್ದಾರ್ ಪಟೇಲರ ನಿಸ್ವಾರ್ಥ ನಡವಳಿಕೆಯಿಂದ. ಬ್ರಿಟಿಷರು ಹೊರನಡೆಯುತ್ತಿದ್ದಂತೇ ಸ್ವತಂತ್ರ ಭಾರತದ ಆಡಳಿತ ಕಾಂಗ್ರೆಸ್ ಹೆಗಲಿಗೆ ಎಂದು ತೀರ್ವನವಾದಾಗ ಕಾಂಗ್ರೆಸ್ ಅಧ್ಯಕ್ಷರೇ ದೇಶದ ಪ್ರಧಾನಿಯಾಗುವಂತೆ ವ್ಯವಸ್ಥೆಯಾಯಿತು. ಕಾಂಗ್ರೆಸ್ ಅಧ್ಯಕ್ಷರು ಆಯ್ಕೆಯಾಗುತ್ತಿದ್ದುದು ಪಕ್ಷದ ಪ್ರಾಂತೀಯ ಸಮಿತಿಗಳಿಂದ. ಹದಿನೈದು ಕಾಂಗ್ರೆಸ್ ಪ್ರಾಂತೀಯ ಸಮಿತಿಗಳಲ್ಲಿ ಹನ್ನೆರಡು ಸಮಿತಿಗಳು ಪಕ್ಷದ ಅಧ್ಯಕ್ಷಸ್ಥಾನಕ್ಕೆ ಸರ್ದಾರ್ ಪಟೇಲ್​ರನ್ನು ನಾಮಕರಣ ಮಾಡಿದವು. ನೆಹರುಗೆ ಒಂದಾದರೂ ಪ್ರಾಂತೀಯ ಸಮಿತಿಯ ಬೆಂಬಲ ಸಿಕ್ಕಿರಲಿಲ್ಲ. ಆದರೆ ದೇಶದ ಮೊದಲ ಪ್ರಧಾನಮಂತ್ರಿ ತಾನೇ ಆಗಬೇಕೆಂದು ಅಧಿಕಾರಲಾಲಸಿ ನೆಹರು ಹಠ ಹಿಡಿದು ನಿಂತರು. ಅದಕ್ಕೆ ಸೋತ ಗಾಂಧಿ ಪ್ರಧಾನಿಯಾಗಲು ನೆಹರುರೇ ‘ಸೂಕ್ತ ವ್ಯಕ್ತಿ’ ಎಂದು ಉಳಿದೆಲ್ಲರನ್ನೂ ನಂಬಿಸುವುದರಲ್ಲಿ ಯಶಸ್ವಿಯಾದರು. ಅವರ ಅಭಿಪ್ರಾಯಕ್ಕೆ ಬೆಲೆ ಕೊಟ್ಟ ಸರ್ದಾರರು ಸ್ಪರ್ಧೆಯಿಂದ ಹಿಂದೆ ಸರಿದರು. ಈ ಸತ್ಯ ಇತಿಹಾಸದಲ್ಲಿ ದಾಖಲಾಗಬಾರದು, ಅದು ಮುಂದಿನ ತಲೆಮಾರುಗಳಿಗೆ ತಲುಪಬಾರದು, ತನ್ನ ಯೋಗ್ಯತೆಯಿಂದಲೇ ಪ್ರಧಾನಮಂತ್ರಿ ಸ್ಥಾನ ಸಹಜವಾಗಿ ತನ್ನನ್ನರಸಿ ಬಂತು ಎಂದು ಭಾರತೀಯರು ನಂಬುವಂತೆ ಮಾಡಬೇಕು ಎನ್ನುವುದು ನೆಹರುರ ಇಂಗಿತವಾಯಿತು.

ಮೂರು- ಅಪ್ರಜಾಪ್ರಭುತ್ವವಾದಿ ನಡೆಯಿಂದ ನೆಹರು ಪ್ರಧಾನಿಯಾದದ್ದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಬಹಿರಂಗ ವಿರೋಧ ಮೊಳೆಯದಿದ್ದರೂ ಅದನ್ನು ಮತ್ತೊಂದು ದಿಕ್ಕಿನಲ್ಲಿ ಕಂಡು ನೆಹರು ಅಧೀರರಾದರು. ಬ್ರಿಟಿಷ್ ವಸಾಹತುಶಾಹಿ-ಸಾಮ್ರಾಜ್ಯಶಾಹಿ ಸತ್ತೆ ಮತ್ತು ಮುಸ್ಲಿಂ ಲೀಗ್​ಗಳ ಜಂಟಿ ಹುನ್ನಾರ ಮತ್ತದಕ್ಕೆ ಕಾಂಗ್ರೆಸ್​ನ ಸಮ್ಮತಿಯಿಂದಾದ ದೇಶವಿಭಜನೆಯನ್ನು ವಿರೋಧಿಸಿ ಅಖಂಡ ಭಾರತದ ಪರವಾಗಿ ನಿಂತ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಜವಾಗಿಯೇ ಪ್ರಜ್ಞಾವಂತ ಭಾರತೀಯರ ವಿಶ್ವಾಸವನ್ನು ಗಳಿಸಿಕೊಳ್ಳತೊಡಗಿತ್ತು. ಇದರಿಂದಾಗಿ, ಆರೆಸ್ಸೆಸ್ ಶೀಘ್ರದಲ್ಲೇ ತನ್ನ ಅಧಿಕಾರಕ್ಕೆ ತೊಡಕಾಗಿ ಬೆಳೆಯಬಹುದೆಂದು ಆತಂಕಗೊಂಡ ನೆಹರು ಸ್ವಾತಂತ್ರ್ಯದ ಬೆನ್ನಲ್ಲೇ ಘಟಿಸಿದ ಗಾಂಧಿ ಹತ್ಯೆಯನ್ನು ಆರೆಸ್ಸೆಸ್ ಅನ್ನು ಹಣಿಯಲು ಅಸ್ತ್ರವನ್ನಾಗಿ ದುರುಪಯೋಗಪಡಿಸಿಕೊಂಡು ಯಶಸ್ವಿಯೂ ಆಯಿತು. ಇಷ್ಟಾಗಿಯೂ ಆರೆಸ್ಸೆಸ್ ಮತ್ತು ಆಗಷ್ಟೇ ಒಂದು ರಾಜಕೀಯ ಪಕ್ಷವಾಗಿ ಪ್ರವರ್ಧಮಾನಕ್ಕೆ ಬರತೊಡಗಿದ ಭಾರತೀಯ ಜನಸಂಘದ ಬಗೆಗಿನ ಅವರ ಆತಂಕ ಸಂಪೂರ್ಣವಾಗಿ ದೂರವಾಗಲಿಲ್ಲ. ಆಗ ಅವರಿಗೆ ಕಂಡ ಮಾರ್ಗ ಆರೆಸ್ಸೆಸ್ ಪ್ರತಿಪಾದಿಸುತ್ತಿದ್ದ ಭಾರತೀಯ ಪರಂಪರೆ ಮತ್ತು ಮೌಲ್ಯಗಳಿಗೆ ಜನಬೆಂಬಲ ದೊರಕದಂತೆ ಮಾಡುವುದಾಯಿತು.

ಹೀಗೆ, ಕಾಂಗ್ರೆಸ್ ಪಕ್ಷವನ್ನು ವೈಭವೀಕರಿಸುವ, ಅದರ ಮೂಲಕ ತಾನು ಮೋಸದಿಂದ ಗಳಿಸಿಕೊಂಡ ಪ್ರಧಾನಿ ಸ್ಥಾನವನ್ನು ಅಧಿಕೃತಗೊಳಿಸಿಕೊಳ್ಳುವ, ಮತ್ತದರ ಮೂಲಕ ತನ್ನ ಕುಟುಂಬವನ್ನು ಭಾರತೀಯ ರಾಜಕೀಯದಲ್ಲಿ ಏಕಮೇವಾದ್ವಿತೀಯವಾಗಿ ಪ್ರತಿಷ್ಠಾಪಿಸಿಕೊಳ್ಳುವ ಉದ್ದೇಶದಿಂದ ನೆಹರು ಇತಿಹಾಸವನ್ನು ತಿರುಚಲು ವ್ಯವಸ್ಥಿತ ಪ್ರಯತ್ನ ಆರಂಭಿಸಿದರು. ತಮ್ಮೀ ಕೃತ್ಯದಲ್ಲಿ ಅವರು ನೆಚ್ಚಿಕೊಂಡದ್ದು ಎಡಪಂಥೀಯ ಚಿಂತಕರನ್ನು.

ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಜತೆಗೆ ಕಾರ್ಲ್ ಮಾರ್ಕ್್ಸ ಮತ್ತು ಮ್ಯಾಕ್ಸ್ ವೆಬರ್​ರಂಥವರು ಭಾರತದ ಬಗ್ಗೆ ನೀಡಿದ್ದ ಅರ್ತಾಕ ಹಾಗೂ ದೋಷಪೂರ್ಣ ವಿವರಣೆಗಳೂ ಸೇರಿಕೊಂಡು ಸ್ವಾತಂತ್ರ್ಯದ ಸಮಯದ ಹೊತ್ತಿಗೆ ಭಾರತೀಯ ಮೌಲ್ಯಗಳ ಬಗ್ಗೆ ಕೀಳರಿಮೆಯ ಜತೆಗೆ, ಇಲ್ಲಿನ ‘ಎಲ್ಲ’ ನ್ಯೂನತೆಗಳಿಗೂ ಎಡಪಂಥೀಯ ಚಿಂತನೆಯಲ್ಲಿ ಪರಿಹಾರವಿದೆಯೆಂದು ನಂಬುವಂತಹ ಒಂದಷ್ಟು ಸಾಹಿತ್ಯ-ಸಂಸ್ಕೃತಿ ಚಿಂತಕರು ಈ ದೇಶದಲ್ಲಿ ಉತ್ಪತ್ತಿಯಾಗಿಹೋಗಿದ್ದರು. ಇವರು ತಮ್ಮ ಮನಸ್ಸುಗಳನ್ನು ಎಡಪಂಥದ ವಸಾಹತನ್ನಾಗಿಸಿಕೊಂಡಿದ್ದವರು. ಭಾರತೀಯ ಮೌಲ್ಯಗಳ ನಿಂದಕರೂ, ವಿರೋಧಿಗಳೂ ಆದ ಎಡಪಂಥೀಯರೇ ಸಂಘದ ವಿರುದ್ಧ ಪ್ರಬಲ ಅಸ್ತ್ರವಾಗಬಲ್ಲರೆಂದು ಚಾಣಾಕ್ಷ ನೆಹರು ರ್ತಸಿದ್ದರಲ್ಲಿ ಅಚ್ಚರಿಯೇನಿಲ್ಲ. ಜತೆಗೆ, ಸೆಕ್ಯೂಲರಿಸಂ, ಸೋಷಿಯಲಿಸಂ ಎಂದೆಲ್ಲ ಘೊಷಣೆ ಕೂಗಿಕೊಂಡು, ಅವುಗಳ ಆಧಾರದ ಮೇಲೆ ತಾವು ನವಭಾರತದ ನಿರ್ವಣಕ್ಕಿಳಿದಿರುವುದಾಗಿ ಜನತೆಯನ್ನು ನಂಬಿಸುವ ತನ್ನ ಹುನ್ನಾರದ ವೈಚಾರಿಕ ಮುಖವಾಗಲು ನೆಹರುಗೆ ಈ ಎಡಪಂಥೀಯರಿಗಿಂತ ಅತ್ಯುತ್ತಮ ಕಾಲಾಳುಗಳಾಗಿ ಬೇರಾರೂ ಸಿಗುವಂತಿರಲಿಲ್ಲ. ಬಹುಜನರಿಗೆ ತಿಳಿಯದ ವಿಷಯವೆಂದರೆ ತಮ್ಮನ್ನು ತಾವು ಸಮಾಜವಾದಿಗಳು ಎಂದು ಕರೆದುಕೊಳ್ಳುತ್ತಿದ್ದ ಇವರು ಅಂತರಂಗದಲ್ಲಿ ಎಲ್ಲ ಐಹಿಕ ಸವಲತ್ತುಗಳನ್ನೂ ಬಯಸುವ, ಅದೆಲ್ಲವನ್ನೂ ಲಜ್ಜೆಯಿಲ್ಲದೇ ಬಡ ಭಾರತೀಯನ ತೆರಿಗೆ ಹಣದಿಂದ ಪಡೆದು ಸಮಾಜದಲ್ಲಿ ‘ಉಜಿಠಿಛಿ’ ವರ್ಗವೆಂದು ಕರೆಸಿಕೊಳ್ಳುವ ಬಯಕೆಯುಳ್ಳ ಸಾಮಾನ್ಯ ಮನುಷ್ಯರಾಗಿದ್ದರು. ಅತಿಶಿಕ್ಷಿತರಾಗಿದ್ದದ್ದೇ ಇವರಲ್ಲಿದ್ದ ಏಕೈಕ ಅಸ್ತ್ರ. ರಾಷ್ಟ್ರಮಟ್ಟದಲ್ಲಿ ಸ್ವಂತವಾಗಿ ರಾಜಕೀಯ ಅಧಿಕಾರ ಗಳಿಸುವ ಸಾಮರ್ಥ್ಯ ಕಮ್ಯುನಿಸ್ಟ್ ಪಕ್ಷಕ್ಕಿಲ್ಲವೆಂದರಿತ ಈ ‘ಬುದ್ಧಿವಂತ’ ಎಡ ಸಾಹಿತಿ-ವಿಚಾರವಾದಿಗಳಿಗೆ ಐಹಿಕ ಅನುಕೂಲತೆಗಳ ಗಳಿಕೆಯ ಉದ್ದೇಶದ ನೆರವೇರಿಕೆಗೆ ಬೇಕಾಗಿದ್ದದ್ದು ಕಾಂಗ್ರೆಸ್ ಪ್ರಭುತ್ವದ ಕೃಪಾಕಟಾಕ್ಷವೇ. ಸಮಾನ, ಶೋಷಣೆರಹಿತ ಸಮಾಜದ ಸ್ಥಾಪನೆಗಾಗಿ, ಆ ಮೂಲಕ ಜನರ ಬದುಕನ್ನು ಹಸನುಗೊಳಿಸುವುದಕ್ಕಾಗಿ ಸಾಮಾನ್ಯ, ಅರೆಶಿಕ್ಷಿತ, ಅಮಾಯಕ ಕಮ್ಯೂನಿಸ್ಟರು ಕಟಿಬದ್ಧರಾಗಿದ್ದರೂ ಅತಿಶಿಕ್ಷಿತ ಎಡಪಂಥೀಯ ವಿಚಾರವಾದಿ-ಸಾಹಿತಿಗಳಿಗೆ ಮುಖ್ಯವೆನಿಸಿದ್ದು ಹಣ, ಪ್ರಶಸ್ತಿ, ಸ್ಥಾನಮಾನಗಳಂತಹ ಐಹಿಕ ಸುಖಭೋಗಗಳು. ಅವುಗಳನ್ನು ಆಗಾಗ್ಗೆ ಎಸೆಯುವುದರ ಮೂಲಕ ಇವರನ್ನು ತನಗೆ ಬೇಕಾದಂತೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ನೆಹರು ಬಹಳ ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಎಡಪಂಥೀಯ ಚಿಂತಕರು ಕಾಂಗ್ರೆಸ್​ನ ಕಾಲಾಳು ಗಳಾಗಿ ಮಾರ್ಪಟ್ಟು ಆಷಾಢಭೂತಿತನದ ಅಪರಾವತಾರವಾಗಿಹೋದದ್ದು ಹೀಗೆ.

ಇವರ ಸಹಕಾರದಿಂದ ನೆಹರು ಸರ್ಕಾರ ರಚಿಸಿದ ಪಠ್ಯಪುಸ್ತಕಗಳಲ್ಲಿ ಕಾಂಗ್ರೆಸ್ ಮತ್ತು ನೆಹರು ಪರಿವಾರವನ್ನು ವೈಭವೀಕರಿಸುವ ಪ್ರಯತ್ನ ನಡೆಯಿತು. ಮೋತಿಲಾಲ್ ನೆಹರು ಜತೆಗೆ ಜವಾಹರ್​ಲಾಲ್ ನೆಹರುರ ಪತ್ನಿ ಕಮಲಾ ನೆಹರು ಅವರ ಜೀವನಚರಿತ್ರೆ (?) ಸಹ ಶಾಲೆಗಳಲ್ಲಿ ಎಳೆಯ ಮಕ್ಕಳಿಗೆ ಪಾಠಗಳಾದರೆ ಸ್ವಾತಂತ್ರ್ಯಹೋರಾಟದ ಅಧಿಕೃತ ಚರಿತ್ರೆಯಲ್ಲಿ ಕಾಂಗ್ರೆಸ್ ಅನ್ನು ವೈಭವೀಕರಿಸುವ ಪ್ರಯತ್ನವೂ ನಡೆಯಿತು. ಇದಕ್ಕಾಗಿ ನಿಯೋಜಿತಗೊಂಡ ಪ್ರಖ್ಯಾತ ಇತಿಹಾಸಕಾರ ಆರ್. ಸಿ. ಮಜುಂದಾರ್ ಕಾಂಗ್ರೆಸ್ ಪಾತ್ರದ ಜತೆಗೆ ಅಸಂಖ್ಯ ಕ್ರಾಂತಿಕಾರಿಗಳ, ಸುಭಾಷ್​ಚಂದ್ರ ಬೋಸ್​ರ ಇಂಡಿಯನ್ ನ್ಯಾಷನಲ್ ಆರ್ವಿುಯ ಪಾತ್ರವನ್ನೂ ಪರಿಗಣಿಸಿ ಬರೆಯತೊಡಗಿದ ಇತಿಹಾಸ ನೆಹರುಗೆ ಸಮ್ಮತವಾಗಲಿಲ್ಲ. ಅವರಿಗೆ ಬೇಕಾಗಿದ್ದದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಮತ್ತು ಅದರಲ್ಲಿ ನೆಹರು ಕುಟುಂಬ ಎಂದು ಇತಿಹಾಸದಲ್ಲಿ ದಾಖಲಾಗುವುದು ಮಾತ್ರ. ಪರಿಣಾಮ- ಆ ‘ಇತಿಹಾಸ’ ರಚನೆಯ ಜವಾಬ್ದಾರಿಯನ್ನು ಮಜುಂದಾರ್​ರಿಂದ ಕಿತ್ತು ಬೇರೊಬ್ಬರಿಗೆ ಕೊಡಲಾಯಿತು!

ಕೇಂದ್ರೀಯ ಪಠ್ಯಕ್ರಮಗಳ ನಿರ್ಣಯ ಮತ್ತು ಪಠ್ಯಪುಸ್ತಕಗಳ ರಚನೆ ಜವಾಬ್ದಾರಿ ಹೊತ್ತ ‘ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಗಾಗಿ ಇರುವ ರಾಷ್ಟ್ರೀಯ ಸಮಿತಿ’ (ಎನ್​ಸಿಇಆರ್​ಟಿ)ಗಳಲ್ಲಿ ಕಾಂಗ್ರೆಸ್-ಪರ ಎಡಪಂಥೀಯ ಇತಿಹಾಸಕಾರರನ್ನು ತುಂಬುವ ಮೂಲಕ 1960ರ ದಶಕದ ಆರಂಭದಲ್ಲೇ ನೆಹರು ಸರ್ಕಾರ ಇತಿಹಾಸವನ್ನು ತಿರುಚುವ ಕೆಲಸವನ್ನು ಆರಂಭಿಸಿತ್ತು. ಅದನ್ನು ವ್ಯಾಪಕವಾಗಿ ಮುಂದುವರಿಸಿದ್ದು ಇಂದಿರಾ ಗಾಂಧಿ, ಅವರ ಸಂಪುಟದಲ್ಲಿದ್ದ ಕೇಂದ್ರ ಶಿಕ್ಷಣ ಮಂತ್ರಿ ನೂರುಲ್ ಹಸನ್ ಮತ್ತು ಜವಾಹರ್​ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿ ಜಿ. ಪಾರ್ಥಸಾರಥಿ. ಹೀಗೆ, ತಮ್ಮ ಉದ್ದೇಶಕ್ಕನುಗುಣವಾಗಿ ಇತಿಹಾಸ ಪಠ್ಯಕ್ರಮವನ್ನು ಪುನರ್ರಚಿಸಲು ಪಾರ್ಥಸಾರಥಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದರ ನೇಮಕವಾಯಿತು. ಆಗ ಎನ್​ಸಿಇಆರ್​ಟಿಯಲ್ಲಿ ರೀಡರ್ ಆಗಿದ್ದ ಕನ್ನಡದ ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರು ಸಮಿತಿಯ ಸದಸ್ಯರಲ್ಲೊಬ್ಬರು. ಮೊದಲ ಸಭೆಯಲ್ಲಿ ಸಮಿತಿಯ ಉದ್ದೇಶ ಮತ್ತು ಕಾರ್ಯವ್ಯಾಪ್ತಿಯನ್ನು ವಿವರಿಸಿ ಮಾತನಾಡುತ್ತ ಅಧ್ಯಕ್ಷರು, ‘ಮಧ್ಯಯುಗದ ಮುಸ್ಲಿಂ ಅರಸರ ಮಂದಿರಧ್ವಂಸದಂತಹ ಹಿಂದೂ-ವಿರೋಧಿ ಕೃತ್ಯಗಳನ್ನು ಪಠ್ಯದಿಂದ ತೆಗೆಯಬೇಕೆಂದೂ, ಮುಸ್ಲಿಂ ಅರಸರು ಧರ್ಮಸಹಿಷ್ಣುಗಳಾಗಿದ್ದರೆಂದೂ, ಅವರ ಆಳ್ವಿಕೆಯಲ್ಲಿ ಹಿಂದೂಗಳ ಬದುಕು ಸಹಜವಾಗಿಯೇ ಸಾಗುತ್ತಿತ್ತೆಂದೂ ದಾಖಲಿಸಬೇಕು’ ಎಂದು ಹೇಳಿದಾಗ ಭೈರಪ್ಪನವರು ಅದನ್ನು ಒಪ್ಪಲು ನಿರಾಕರಿಸಿದರು. ತಮ್ಮ ಅಕ್ಷೇಪಣೆಗೆ ಪೂರಕವಾಗಿ ಭೈರಪ್ಪನವರು ನೀಡಿದ ಉದಾಹರಣೆ ಆಸಕ್ತಿಕರವೂ, ಅರ್ಥಪೂರ್ಣವೂ ಆಗಿದೆ. ವಾರಾಣಸಿಯ ವಿಶ್ವನಾಥ ಮಂದಿರದಲ್ಲಿ ಶಿವಲಿಂಗ ಮೂಲೆಯಲ್ಲಿದೆ. ಆಲಯದ ನಡುಮಧ್ಯದಲ್ಲಿರುವುದು ಮಸೀದಿ ಮತ್ತು ನಂದಿ ಮಸೀದಿಯತ್ತ ಮುಖ ಮಾಡಿದೆ! ಶಿವಲಿಂಗಕ್ಕೆ ಮುಖಮಾಡಿ ಕುಳಿತ ನಂದಿಯನ್ನು ನೋಡಿ ಅಭ್ಯಾಸವಿರುವ ಮಕ್ಕಳ ಮಸಸ್ಸಿನಲ್ಲಿ, ಇಲ್ಲಿ ಅದೇ ನಂದಿ ಮಸೀದಿಗೆ ಮುಖ ಮಾಡಿರುವುದನ್ನು ನೋಡಿದಾಗ ಪ್ರಶ್ನೆಗಳೇಳುವುದಿಲ್ಲವೇ? ಅದರ ಪರಿಹಾರ ಹೇಗೆ? ಹೀಗೆ ಹೇಳಿದ ಭೈರಪ್ಪನವರು, ಇತಿಹಾಸವನ್ನು ವಸ್ತುನಿಷ್ಠವಾಗಿ ಕಲಿಸುವುದು ಮತ್ತು ಇತಿಹಾಸದಿಂದ ಕಲಿಯಬಹುದಾದ ಪಾಠಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಶಿಕ್ಷಣದ ಗುರಿಯಾಗಬೇಕು ಎಂದು ವಾದಿಸಿದರು. ಪರಿಣಾಮ- ಹಿಂದೆ ಆರ್. ಸಿ. ಮಜುಂದಾರ್ ಅವರಿಗೆ ಆದಂಥದ್ದೇ. ಭೈರಪ್ಪನವರನ್ನು ಸಮಿತಿಯ ಸದಸ್ಯತ್ವದಿಂದ ತೆಗೆದುಹಾಕಲಾಯಿತು ಮತ್ತು ಅವರ ಸ್ಥಾನದಲ್ಲಿ ‘ಹೇಳಿದಂತೆ ಕೇಳುವ’ ಮತ್ತೊಬ್ಬರನ್ನು ನೇಮಿಸಿಕೊಳ್ಳಲಾಯಿತು!

ಹೀಗೆ ಇಂದಿರಾ ಯುಗದಲ್ಲಿ ಕಾಂಗ್ರೆಸ್ಸಿಗರು ಮತ್ತು ಎಡಪಂಥೀಯರು ತಮಗನುಕೂಲವಾಗುವಂತೆ ಇತಿಹಾಸವನ್ನು ತಿರುಚಿದ ಪರಿ ಮತ್ತು ತಿರುಚುವಿಕೆ 2004-14ರ ಯುಪಿಎ ಅವಧಿಯಲ್ಲಿ ಮತ್ತಷ್ಟು ಹೀನಾಯವಾಗಿ ಮುಂದುವರಿದ ವಿವರ ಹಾಗೂ ವಿಶ್ಲೇಷಣೆ ಮುಂದಿನವಾರ, ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

One Reply to “ಕಾಂಗ್ರೆಸ್ ಮೂಗಿನ ನೇರಕ್ಕೆ ಕಮ್ಯೂನಿಸ್ಟರು ಬರೆದ ಇತಿಹಾಸ”

  1. The the author is very clear that about Nehru family please send a copy of this to siddaramaiah and Kumaraswamy bootlicker of Nehru family. people should come out and write a valid truth about who got freedom . Gandhi is a very funny guy and you should be removed as father of nation as he cheated to favour a family and minority . giving him title of Mathma should also be taken away. Now I will be branded as the Sangh parivar agent thank you sir for educating us

Comments are closed.