ಬೇಕಾಗಿದ್ದಾರೆ ಚೀನಿ ಸತ್ಕಾರಕ್ಕೆ ಸೋಲದ ನಾಯಕರು

ತಮ್ಮ ದೇಶದ ಜನರ ಹಿತಾಸಕ್ತಿಗಳಿಗೆ ಗಮನ ನೀಡದ ಚೀನಿ ನಾಯಕರು, ಅನ್ಯದೇಶಗಳ ಸಾಮಾನ್ಯ ಜನರ ಹಿತಾಸಕ್ತಿಗಳತ್ತ ಯಾವ ಗಮನವನ್ನೂ ನೀಡುವುದಿಲ್ಲ. ಕೇವಲ ಆಯಾಯಾ ದೇಶಗಳ ನಾಯಕರನ್ನು ಲಂಚ ಹಾಗೂ ಇನ್ನಿತರ ಅಮಿಷಗಳಿಂದ ಸೆಳೆದುಕೊಂಡು ಚೀನಾಕ್ಕೆ ಬೇಕಾದ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುವುದು ಚೀನೀ ನಾಯಕತ್ವದ ಜಾಯಮಾನ.

ಶ್ರೀಲಂಕಾ ರಾಜಕೀಯ ಮುಂದಿನ ದಿನಗಳಲ್ಲಿ ಯಾವ ಹಾದಿ ಹಿಡಿಯಬಹುದೆಂದು ನಿಶ್ಚಿತವಾಗಿ ಹೇಳಲಾಗದು. ಆದರೆ ಅನಿಶ್ಚಿತತೆ ಸದ್ಯಕ್ಕೆ ಅಂತ್ಯವಾಗುವುದಿಲ್ಲ ಎನ್ನುವುದಂತೂ ನಿಶ್ಚಿತ. ಹೊಸ ಪ್ರಧಾನಿ ಮಹಿಂದ ರಾಜಪಕ್ಸರಿಗೆ ಸರ್ಕಾರ ನಡೆಸಲು ಯಾವುದೇ ಹಣಕಾಸು ಲಭ್ಯವಾಗದಂತೆ ತಡೆಯುವ ಮಸೂದೆಯೊಂದನ್ನು ಪದಚ್ಯುತ ಪ್ರಧಾನಿ ವಿಕ್ರಮಸಿಂಘ ಪರವಾದ ಸಂಸದರು ನ. 29ರಂದು ಮತ್ತೆ ಸೇರಲಿರುವ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ‘ಕೊಲಂಬೋ ಗೆಜೆಟ್’ ಪತ್ರಿಕೆ ವರದಿ ಮಾಡಿದೆ. ದ್ವೀಪರಾಷ್ಟ್ರದಲ್ಲಿನ ರಾಜಕೀಯ ಗೊಂದಲ ಮತ್ತಷ್ಟು ಗಾಢವಾಗುವ ಸೂಚನೆ ಇದು. ಇಂತಹ ಸನ್ನಿವೇಶದಲ್ಲಿ ಶ್ರೀಲಂಕಾದ ಪ್ರಸಕ್ತ ರಾಜಕೀಯ ಬಿಕ್ಕಟ್ಟನ್ನು ಬದಿಗಿಟ್ಟು, ದಕ್ಷಿಣ ಏಷ್ಯಾ ವಲಯದಲ್ಲಿ ಭಾರತಕ್ಕೆ ವಿರುದ್ಧವಾಗಿ ಷಿ ಜಿನ್​ಪಿಂಗ್ ನಾಯಕತ್ವದ ಚೀನಾ ತನ್ನ ಸೇನಾ-ಆರ್ಥಿಕ ಪ್ರಭಾವವನ್ನು ವೃದ್ಧಿಸಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ತಡೆಯಲು ನವದೆಹಲಿಗಿರುವ ತೊಡಕುಗಳ ಒಟ್ಟಾರೆ ವಿಶ್ಲೇಷಣೆಯತ್ತ ಗಮನಹರಿಸೋಣ.

ಈ ವಲಯದ ಬಹುತೇಕ ಎಲ್ಲ ದೇಶಗಳಲ್ಲೂ ಪ್ರಜಾಪ್ರಭುತ್ವವಿದ್ದರೂ, ಚುನಾವಣೆಗಳ ಮೂಲಕ ಸರ್ಕಾರಗಳು ರಚನೆಗೊಳ್ಳುತ್ತಿದ್ದರೂ, ಜನತೆಯ ಅಪ್ರಬುದ್ಧತೆಯಿಂದಾಗಿ ಅನಿಶ್ಚಿತತೆ, ಅರೆ-ಸರ್ವಾಧಿಕಾರದ ಅಪಾಯ ತೂಗುಕತ್ತಿಯಂತೆ ಸದಾ ತಲೆಯ ಮೇಲಿರುತ್ತವೆ.

ಪಾಕಿಸ್ತಾನದಲ್ಲಂತೂ ಜನರು ಯಾವ ಸರ್ಕಾರವನ್ನೇ ಆರಿಸಲಿ, ಭಾರತದ ಶತ್ರುಗಳ ಜತೆ ಕೈಜೋಡಿಸುವುದು ಪಾಕ್ ಸರ್ಕಾರಗಳೆಲ್ಲವುಗಳ ವಿದೇಶಾಂಗ ನೀತಿಯ ತಳಹದಿ. ಈಗಿನ ಪಾಕ್-ಚೀನಾ ಸಹಕಾರವನ್ನು ಸುಲಭ ಮಾಡಿಕೊಟ್ಟದ್ದೇ ನಮ್ಮ ನೆಹರು ಸರ್ಕಾರ. ಮೊದಲಿಗೆ ಪಾಕಿಸ್ತಾನ ಮತ್ತು ಚೀನಾಗಳ ನಡುವೆ ಭೂಸಂಪರ್ಕವೇ ಇರಲಿಲ್ಲ. ಆದರೆ ನೆಹರು ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ಮಾಡಿಕೊಟ್ಟದ್ದು ಮತ್ತು ಆ ಪ್ರದೇಶವನ್ನು ಪಾಕಿಸ್ತಾನದ್ದೆಂದೇ ಅನಧಿಕೃತವಾಗಿ ಒಪ್ಪಿಕೊಂಡ ಪರಿಣಾಮವಾಗಿ ಆ ಎರಡು ಶತ್ರುರಾಷ್ಟ್ರಗಳ ನಡುವೆ ನೇರ ಭೂಸಂಪರ್ಕವೇರ್ಪಟ್ಟು ಅದು ಈಗ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮೂಲಕ ಚೀನಿಯರು ಪಾಕಿಸ್ತಾನದ ಜತೆ ರಸ್ತೆ ಸಂಪರ್ಕ ಸಾಧಿಸಿದ್ದಾರೆ, ಕೆಲವೇ ವರ್ಷಗಳಲ್ಲಿ ರೈಲು ಸಂಪರ್ಕವೂ ನಿರ್ವಣವಾಗಲಿದೆ. ಆಗ ಪಾಕಿಸ್ತಾನವನ್ನು ಚೀನಾದ ಹಿಡಿತದಿಂದ ಯಾರೂ ತಪ್ಪಿಸಲಾರರು. ಉತ್ತರದ ಜತೆ ಪಶ್ಚಿಮದಲ್ಲೂ ಚೀನಿಸೇನೆ ನಮಗೆದುರಾಗಿ ನಿಲ್ಲುತ್ತದೆ. ನೆಹರುರ ದೇಶಹಿತಘಾತಕ ಕೃತ್ಯದಿಂದಾಗಿರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡೇ ನಮ್ಮ ಸರ್ಕಾರವೀಗ ಚೀನಾ ವಿರುದ್ಧ ವ್ಯೂಹ ರಚಿಸಬೇಕಾಗಿದೆ ಮತ್ತು ಆ ವ್ಯೂಹವು, ಪಾಕಿಸ್ತಾನ-ಚೀನಾ ನಡುವೆ ನಮ್ಮ ನೆಲದ ಮೂಲಕ ಸಾಗುತ್ತಿರುವ ಭೂ ಸಂಪರ್ಕದಿಂದಾಗಿಯೇ ನಿರರ್ಥಕವಾಗುವ ಸಾಧ್ಯತೆ ಯಾವಾಗಲೂ ಇರುತ್ತದೆ.

ಭಾರತದ ಮುಂದಿರುವ ಈ ತೊಡಕುಗಳ ಜತೆ, ಇತರ ದೇಶಗಳನ್ನು ತನ್ನ ಪ್ರಭಾವದೊಳಗೆ ಕೆಡವಿಕೊಳ್ಳಲು ಚೀನಾ ಅನುಸರಿಸುವ ವಿಧಾನ. ಉತ್ತರದ ಆ ಕಮ್ಯೂನಿಸ್ಟ್ ದೈತ್ಯ ಒಳಗೂ ಹೊರಗೂ ಜನತೆಯ ಇಷ್ಟಾನಿಷ್ಟಗಳಿಗೆ ಮೂರು ಕಾಸಿನ ಬೆಲೆ ಕೊಡುವುದಿಲ್ಲ. ಅಲ್ಲಿ ರಾಷ್ಟ್ರೀಯ ನೀತಿಗಳನ್ನು ನಿರ್ಧರಿಸುವುದು ರಾಷ್ಟ್ರನಾಯಕರ ಇಷ್ಟಾನಿಷ್ಟಗಳೇ ವಿನಾ ಜನತೆಯ ಇಷ್ಟಾನಿಷ್ಟಗಳಲ್ಲ. ರಾಷ್ಟ್ರನಾಯಕರು ಜನತೆಯನ್ನು ಕೇಳದೆ ತಾವೇ ತೆಗೆದುಕೊಳ್ಳುವ ನಿರ್ಣಯಗಳನ್ನು ದೇಶದ ಒಳಗೆ ಹಾಗೂ ಹೊರಗೆ ಪ್ರಚಾರ ಮಾಡುವುದು ಇದು ಜನತೆಯ ನಿರ್ಣಯ ಎಂದು! ಇದನ್ನು ನಿರಾಕರಿಸುವ ಸ್ವಾತಂತ್ರ್ಯವೂ ಜನತೆಗಿಲ್ಲ. ಚೀನಾದಲ್ಲಿ ಕಾಣಬರುವ ಈ ವ್ಯವಸ್ಥೆಯಿಂದ ಒಟ್ಟಾರೆ ರಾಷ್ಟ್ರದ ಆರ್ಥಿಕ ಬೆಳವಣಿಗೆ ಮೇಲೆ ಸಕಾರಾತ್ಮಕ ಪರಿಣಾಮಗಳಾಗಿವೆ. ಯಾವುದೇ ಆರ್ಥಿಕ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಅಲ್ಲಿ ಯಾವುದೇ ಪ್ರದೇಶದಿಂದ ಎಷ್ಟು ಜನರನ್ನಾದರೂ, ಎಲ್ಲಿಗಾದರೂ ಎತ್ತಂಗಡಿ ಮಾಡಬಹುದು. ವಿರೋಧಿಸುವ ಸ್ವಾತಂತ್ರ್ಯ ಜನತೆಗಿಲ್ಲ. 1978ರ ನಂತರದ ವರ್ಷಗಳಲ್ಲಿ ಡೆಂಗ್ ಷಿಯಾವೋಪಿಂಗ್ ಸರ್ಕಾರ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಿ, ವಿದೇಶಿ ಕೈಗಾರಿಕಾ ಸಂಸ್ಥೆಗಳನ್ನು ಅಲ್ಲಿಗೆ ಆಹ್ವಾನಿಸಿ, ಅವುಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿದ್ದು ಹೀಗೆ. ಅಪರಿಮಿತ ಕಚ್ಚಾವಸ್ತುಗಳ ಪೂರೈಕೆ, ಕಡಿಮೆ ಕೂಲಿಗೆ ದುಡಿಯಬಲ್ಲ ಕಾರ್ವಿುಕರ ಬೃಹತ್ ಸೈನ್ಯ ಮುಂತಾದ ಸೌಲಭ್ಯಗಳ ಜತೆಗೆ, ಕಾರ್ವಿುಕರ ಮುಷ್ಕರದ ಭಯವೂ ಇಲ್ಲದ್ದರಿಂದ ವಿದೇಶಿ ಕೈಗಾರಿಕಾ ಸಂಸ್ಥೆಗಳು ಚೀನಾದ ವಿಶೇಷ ಆರ್ಥಿಕ ವಲಯಗಳಿಗೆ ‘ನಾ ಮುಂದು, ತಾ ಮುಂದು’ ಎಂದು ಓಡಿಬಂದವು. ಚೀನಾದ ನಿವ್ವಳ ರಾಷ್ಟ್ರೀಯ ಉತ್ಪಾದನೆ ಗಣನೀಯವಾಗಿ ಏರಿ ಮುಂದಿನ ಎರಡೇ ದಶಕಗಳಲ್ಲಿ ಚೀನಾ ವಿಶ್ವದ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದು ನಿಲ್ಲಲು, ಇನ್ನೊಂದು ದಶಕದಲ್ಲಿ ಎರಡನೆಯ ಸ್ಥಾನಕ್ಕೇರಲು ಇದು ಕಾರಣ. ಹೊರಜಗತ್ತಿಗೆ ಕಾಣುತ್ತಿರುವುದು ಈ ಸುಂದರಮುಖ ಮಾತ್ರ.

ಆದರೆ, ಈ ಬೆಳವಣಿಗೆಗೆ ಮತ್ತೊಂದು ಮುಖವೂ ಇದೆ ಮತ್ತು ಅದು ಕರಾಳವಾಗಿದೆ. ಕೇವಲ ಕೈಗಾರಿಕೋತ್ಪನ್ನಗಳ ವೃದ್ಧಿಗಾಗಷ್ಟೇ, ಅವು ತರುವ ಅಗಾಧ ಡಾಲರ್ ರಾಶಿಗಷ್ಟೇ ಮಹತ್ವ ನೀಡಿದ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆಗಾಗಿ ಕೋಟ್ಯಂತರ ಸಾಮಾನ್ಯ ಚೀನೀಯರು ತಂತಮ್ಮ ಮೂಲನೆಲೆಗಳಿಂದ ಎತ್ತಂಗಡಿಯಾಗಿದ್ದಾರೆ, ಸಂಪನ್ಮೂಲಗಳ ಅತಿಯಾದ ಬಳಕೆ ನಡೆಯುತ್ತಿದೆ, ದೇಶದ ಶೇ. 60ರಷ್ಟು ನದಿಗಳು ಮಲಿನಗೊಂಡಿವೆ, ದೇಶದ ಉತ್ತರ ಮತ್ತು ನೈಋತ್ಯ ಭಾಗಗಳಲ್ಲಿ ಅನಿಲಮಳೆ ಸಾಮಾನ್ಯವಾಗುತ್ತಿದೆ. ರಾಜಧಾನಿ ಬೀಜಿಂಗ್​ನಲ್ಲೇ ವಾಯುಮಾಲಿನ್ಯ ಆಘಾತಕಾರಿ ಮಟ್ಟದಲ್ಲಿದೆ. ಹೀಗೆ ದೇಶದಾದ್ಯಂತ ಭೂಮಿ, ನೀರು, ಗಾಳಿ ಮಲಿನಗೊಳ್ಳುತ್ತಿವೆ. ವಿಶ್ವದ ಎರಡನೆಯ ಅತಿದೊಡ್ಡ ಅರ್ಥವ್ಯವಸ್ಥೆಯಲ್ಲಿ ‘ಶುದ್ಧ, ಆರೋಗ್ಯಮಯ ಬದುಕು’ ಕನಸಾಗುತ್ತಿದೆ. ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯವಿಲ್ಲದ್ದರಿಂದ, ಫೇಸ್​ಬುಕ್, ಟ್ವಿಟರ್​ಗಳಂತಹ ಸಾಮಾಜಿಕ ಜಾಲತಾಣಗಳಿಗೆ ಅವಕಾಶವಿಲ್ಲದ್ದರಿಂದ ಅಲ್ಲಿನ ಬದುಕಿನ ಕಪ್ಪುಮುಖ ಹೊರಗಿನ ಜಗತ್ತಿಗೆ ತಿಳಿಯುತ್ತಿಲ್ಲ. ನಮಗೆ ಕಾಣುವುದೆಲ್ಲವೂ ಚೀನಿ ಸರ್ಕಾರ ಸೆನ್ಸಾರ್ ಮಾಡಿ ಹೊರಗೆ ಕಳುಹಿಸುವ ಚಂದದ ಮಾಹಿತಿಗಳು ಮತ್ತು ಸುಂದರ ಚಿತ್ರಗಳಷ್ಟೇ.

ಇಷ್ಟೆಲ್ಲವನ್ನೂ ನಾನು ಯಾಕೆ ಹೇಳಿದೆ ಅಂದರೆ, ಚೀನೀ ರಾಜಕೀಯ ನೇತಾರರ ಈ ಸರ್ವಾಧಿಕಾರಿ ಮನೋಭಾವದ ಪುಟ್ಟ ಪರಿಚಯ ನಿಮಗಾದರೆ, ಅವರು ಪ್ರಭಾವಕ್ಕಾಗಿ ಹೊರದೇಶಗಳಲ್ಲಿ ಅನುಸರಿಸುವ ಕುಟಿಲ ಮಾರ್ಗಗಳನ್ನು ಗುರುತಿಸುವುದು ನಿಮಗೆ ಸುಲಭವಾಗುತ್ತದೆ ಎಂದು. ಮಾಲ್ದೀವ್ಸ್ ಇರಲಿ ಮಾಂಟೆನೀಗ್ರೋ ಇರಲಿ, ಶ್ರೀಲಂಕಾ ಇರಲಿ ಸಿಯೆರ್ರಾ ಲಿಯೋನ್ ಇರಲಿ ಚೀನಿ ನೇತಾರರು ತಮ್ಮ ಅಗತ್ಯಗಳಿಗಾಗಿ ಅವಲಂಬಿಸುವುದು ಆಯಾಯಾ ದೇಶಗಳ ನಾಯಕರನ್ನಷ್ಟೇ, ಗಮನಿಸುವುದು ಅವರ ವೈಯಕ್ತಿಕ ಹಿತಾಸಕ್ತಿಗಳನ್ನಷ್ಟೇ. ತಮ್ಮ ದೇಶದೊಳಗೆ ತಮ್ಮ ಜನರ ಹಿತಾಸಕ್ತಿಗಳಿಗೆ ಗಮನ ನೀಡದ ಚೀನಿ ನಾಯಕರು, ಹೊರದೇಶಗಳಲ್ಲೂ ಆ ದೇಶಗಳ ಸಾಮಾನ್ಯ ಜನರ ಹಿತಾಸಕ್ತಿಗಳತ್ತ ಯಾವ ಗಮನವನ್ನೂ ನೀಡುವುದಿಲ್ಲ. ಕೇವಲ ಆಯಾಯಾ ದೇಶಗಳ ನಾಯಕರನ್ನು ಲಂಚ ಹಾಗೂ ಇನ್ನಿತರ ಅಮಿಷಗಳಿಂದ ಸೆಳೆದುಕೊಂಡು ಚೀನಾಕ್ಕೆ ಬೇಕಾದ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುವುದು, ಚೀನೀ ನಾಯಕತ್ವದ ಜಾಯಮಾನ. ಇದು ಮಾವೋ ಝೆಡಾಂಗ್ ಅವರಿಂದಲೇ ಆರಂಭವಾಯಿತು. 1949ರ ಕಮ್ಯೂನಿಸ್ಟ್ ಕ್ರಾಂತಿಯ ನಂತರ ಅಮೆರಿಕ ಮತ್ತು ಪಶ್ಚಿಮ ಜಗತ್ತು ಚೀನಾವನ್ನು ಸತತ 22 ವರ್ಷಗಳ ಕಾಲ ದೂರ ಇಟ್ಟಿದ್ದವು. ಅನಿವಾರ್ಯ ಕಾರಣಗಳಿಗಾಗಿ 1971ರಲ್ಲಿ ಬೀಜಿಂಗ್ ಜತೆ ಅಮೆರಿಕ ವ್ಯವಹಾರ ಆರಂಭಿಸಿದ್ದೀಗ ಇತಿಹಾಸ. ಅದರ ಮುಂದುವರಿಕೆಯಾಗಿ 1972ರ ಫೆಬ್ರವರಿಯಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾಕ್ಕೆ ಐತಿಹಾಸಿಕ ಭೇಟಿ ನೀಡಿದರು. ಆ ಭೇಟಿಯನ್ನು ನಂತರ ನೆನಪಿಸಿಕೊಳ್ಳುತ್ತ ನಿಕ್ಸನ್, ‘ಚೀನಿಯರು ಅದ್ಭುತ ಆತಿಥೇಯರು, ಅವರು ನೀಡುವ ಸತ್ಕಾರ ಮರೆಯಲಾಗದ್ದು’ ಎಂದು ವರ್ಣಿಸುತ್ತಾರೆ. ಇದೇ ಮಾತನ್ನು ಹೆನ್ರಿ ಕಿಸಿಂಜರ್ ಪುಷ್ಟೀಕರಿಸುತ್ತಾರೆ. ಅತಿಥಿಗಳ ಮನ ಗೆಲ್ಲಲು ಚೀನಿಯರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ. ಸೋವಿಯತ್ ಒಕ್ಕೂಟದ ವಿರುದ್ಧ ತಮ್ಮ ಶಕ್ತಿಯನ್ನು ಬಲಪಡಿಸಿಕೊಳ್ಳಲು ಅಮೆರಿಕದ ಸಖ್ಯ ಅತ್ಯಗತ್ಯ ಎಂದರಿತಿದ್ದ ಮಾವೋ, ಸಹಜವಾಗಿಯೇ ಅಮೆರಿಕನ್ ಅತಿಥಿಗಳನ್ನು ಸಂತೃಪ್ತಗೊಳಿಸಲು ಪ್ರಯತ್ನಿಸಿದ್ದರು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಅಮೆರಿಕದ ಜನಸಂಖ್ಯೆ ಅಗತ್ಯ ಪ್ರಮಾಣಕ್ಕನುಗುಣವಾಗಿ ವೃದ್ಧಿಯಾಗದ ಬಗ್ಗೆ ಕನಿಕರ ವ್ಯಕ್ತಪಡಿಸಿದ ಮಾವೋ, ಅಮೆರಿಕದಲ್ಲಿ ಜನಸಂಖ್ಯೆ ಶೀಘ್ರವಾಗಿ ವೃದ್ಧಿಯಾಗಲು ತಾವು ಸಹಕರಿಸುವುದಾಗಿ, ಅದಕ್ಕಾಗಿ ಗರ್ಭಧಾರಣೆಯ ವಯಸ್ಸಿನ ಹತ್ತು ಮಿಲಿಯನ್ ಚೀನಿ ಯುವತಿಯರನ್ನು ಅಮೆರಿಕಕ್ಕೆ ‘ರಫ್ತು’ ಮಾಡಲು ತಯಾರಿರುವುದಾಗಿ 1973ರ ಫೆ.17ರಂದು ಬೀಜಿಂಗ್​ಗೆ ಭೇಟಿ ನೀಡಿದ್ದ ಅಮೆರಿಕದ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಹೆನ್ರಿ ಕಿಸಿಂಜರ್ ಮುಂದೆ ಪ್ರಸ್ತಾಪವಿಟ್ಟರು. ಬಡದೇಶವಾದ ಚೀನಾದಲ್ಲಿ ರಫ್ತುಮಾಡಲು ಇರುವುದು ಮಹಿಳೆಯರು ಮಾತ್ರ ಎಂದೂ ಮಾವೋ ಅಲವತ್ತುಕೊಂಡರು. ಆದರೆ, ಈ ‘ಉದಾರ’ ಪ್ರಸ್ತಾಪದ ಹಿಂದಿನ ಉದ್ದೇಶ ಅಮೆರಿಕವನ್ನು ಅರ್ಧ ಚೀನೀಯವಾಗಿಸುವುದು ಎಂದರಿತ ಕಿಸಿಂಜರ್ ಅದನ್ನು ನಿರಾಕರಿಸಿ ಮಾವೋ ‘ಮಾಮ’ನಿಗೆ ನಿರಾಸೆಯುಂಟುಮಾಡಿದರು.

ಚೇರ್​ವುನ್ ಮಾವೋ ಪ್ರಕಾರ ಅಂದು ಚೀನಾದಲ್ಲಿ ರಫ್ತುಮಾಡಲು ಇದ್ದದ್ದು ಯುವತಿಯರಷ್ಟೇ. ಆದರೆ ಇಂದು ಮೂರು ಟ್ರಿಲಿಯನ್ ಡಾಲರ್​ನಷ್ಟು ಅಗಾಧ ವಿದೇಶಿ ವಿನಿಮಯವನ್ನು ಸಂಗ್ರಹಿಸಿಕೊಂಡಿಟ್ಟಿರುವ ಚೀನಾ ಇತರ ದೇಶಗಳ ನಾಯಕರನ್ನು ಬಲೆಗೆ ಕೆಡವಿಕೊಳ್ಳಲು ಅಗಾಧ ಹಣವನ್ನೂ ಚೆಲ್ಲಬಲ್ಲದು. ತಮ್ಮ ದೇಶಕ್ಕೆ, ಜನತೆಗೆ ಯಾವ ಬಗೆಯಲ್ಲೂ ಪ್ರಯೋಜನಕಾರಿಯಾಗದ, ಚೀನಾಗೆ ಮಾತ್ರ ಅನುಕೂಲವಾಗಬಲ್ಲ ಯೋಜನೆಗಳಿಗೆ ತಮ್ಮ ದೇಶದಲ್ಲಿ ಅವಕಾಶ ನೀಡಲು, ಆ ಮೂಲಕ ತಮ್ಮ ದೇಶವನ್ನು ಚೀನಾದ ಸಾಲಸಂಕೋಲೆಯಲ್ಲಿ ಸಿಲುಕಿಸಲು ಅದೆಷ್ಟೊ ಸಣ್ಣಪುಟ್ಟ ದೇಶಗಳ ನಾಯಕರು ಕೈಯಾರೆ ಸಹಕಾರ ನೀಡುತ್ತಿರುವುದರ ಹಿಂದಿನ ಮರ್ಮ ಇದು. ಏಷ್ಯಾದಲ್ಲಿ ತನ್ನೆಲ್ಲ ಯೋಜನೆಗಳಿಗೆ ತಡೆಯಾಗಿ ನಿಂತಿರುವ ಭಾರತವನ್ನೇ ತನ್ನ ಬಲೆಗೆ ಕೆಡವಿಕೊಳ್ಳುವುದು ತನಗೆ ಅನುಕೂಲಕರ ಎಂದು ಚೀನಾಕ್ಕೆ ಗೊತ್ತೇ ಇದೆ. ಹೀಗಾಗಿಯೇ ಅದು ಹಿಂದಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತವರ ಕುಟುಂಬವರ್ಗವನ್ನು 2008ರ ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿತ್ತು ಮತ್ತವರನ್ನು ಸೂಕ್ತ ಸ್ಥಾನಮಾನ ನೀಡಿ ಸತ್ಕರಿಸಿತ್ತು. ಆ ದಿನಗಳಲ್ಲಿ ಶ್ರೀಲಂಕಾ, ಮಾಲ್ದೀವ್ಸ್ ಮುಂತಾದ ನಮ್ಮ ನೆರೆದೇಶಗಳಲ್ಲಿ ಚೀನಿ ಪ್ರಭಾವ ಏಕಪ್ರಕಾರವಾಗಿ ವೃದ್ಧಿಸುತ್ತಿದ್ದುದನ್ನೂ, ಅದನ್ನು ತಡೆಯಲು ಮನಮೋಹನ್ ಸಿಂಗ್ ಸರ್ಕಾರ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ರೂಪಿಸದಿದ್ದುದನ್ನೂ ನಾವು ನೆನಪಿಸಿಕೊಳ್ಳಬೇಕು.

ಈಗ ಚೀನಿಯರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ತಮ್ಮತ್ತ ಸೆಳೆಯಲು ಹವಣಿಸುತ್ತಿದ್ದಾರೆ. ದೊಕ್ಲಾಂ ಮುಖಾಮುಖಿಯ ಸಮಯದಲ್ಲಿ ‘ಗಡಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು’ ರಾಹುಲ್ ಗಾಂಧಿ ನವದೆಹಲಿಯಲ್ಲಿನ ಚೀನಿ ರಾಯಭಾರ ಕಚೇರಿಗೆ ಹೋದದ್ದು, ಎರಡು ತಿಂಗಳ ಹಿಂದೆ ಅವರು ಕೈಲಾಶ್ ಮಾನ್​ಸರೋವರ್ (ಕೈಲಾಸ ಮಾನಸಸರೋವರ) ಯಾತ್ರೆಯ ಮೊದಲ ಹಂತದ ಪ್ರಯಾಣಕ್ಕಾಗಿ ಕಾಠ್ಮಂಡುವಿಗೆ ವಿಮಾನ ಪ್ರಯಾಣ ಕೈಗೊಳ್ಳುವಾಗ ಅವರನ್ನು ‘ಬೀಳ್ಕೊಡಲು’ ನವದೆಹಲಿಯಲ್ಲಿನ ಚೀನಿ ರಾಜತಂತ್ರಜ್ಞ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಹೋಗಬಯಸಿದ್ದು- ಈ ಎರಡು ‘ಬಹಿರಂಗ’ ಉದಾಹರಣೆ

ಗಳು ನಮ್ಮ ಮುಂದಿವೆ. ಕಾಂಗ್ರೆಸ್ ಅಧ್ಯಕ್ಷರನ್ನು ಸೆಳೆಯಲು ಜಿನ್​ಪಿಂಗ್ ತಂತ್ರದ ಸುಳಿವನ್ನು ಇವು ನೀಡುವುದರ ಜತೆಗೆ, ಚೀನಿ ತಂತ್ರಗಳಿಗೆ ರಾಹುಲ್ ಗಾಂಧಿ ಸ್ಪಂದಿಸುತ್ತಿರಬಹುದೇನೋ ಎಂಬ ಅನುಮಾನವನ್ನೂ ಉಂಟುಮಾಡುತ್ತವೆ. ಹಾಗೆಯೇ, ದೆಹಲಿಯಲ್ಲಿ ಮೋದಿ ಸರ್ಕಾರದ ಪತನ ಮತ್ತು ರಾಹುಲ್ ಸರ್ಕಾರದ ಸ್ಥಾಪನೆ ಚೀನಾದ ಕನಸಾಗಿರಬಹುದೆಂದೂ ಲೆಕ್ಕ ಹಾಕಲು ಅವಕಾಶವಿದೆ.

ಜಿನ್​ಪಿಂಗ್ ಬೀಜಿಂಗ್​ನಲ್ಲಿ, ಹೊಸ ಅವಕಾಶಗಳಿಗಾಗಿ ರಣಹದ್ದಿನಂತೆ ಸುತ್ತಲೂ ನೋಡುತ್ತಿರುವ ಇಮ್ರಾನ್ ಖಾನ್ ಇಸ್ಲಾಮಾಬಾದ್​ನಲ್ಲಿ, ರಾಹುಲ್ ಗಾಂಧಿ ನವದೆಹಲಿಯಲ್ಲಿ! ಇಂದು ಭಾರತೀಯರಿಗೆ ಇದಕ್ಕಿಂತ ಕರಾಳ ದುಃಸ್ವಪ್ನ ಬೇರೊಂದಿಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)