More

    ಪ್ರವಾದಿಯ ಶೂನ್ಯ ಸಂವತ್ಸರ ಶಾಪದ ಇತಿವೃತ್ತ: ಪ್ರೇಮಶೇಖರರ ಅಂಕಣ

    ಪ್ರವಾದಿಯ ಶೂನ್ಯ ಸಂವತ್ಸರ ಶಾಪದ ಇತಿವೃತ್ತ: ಪ್ರೇಮಶೇಖರರ ಅಂಕಣ

    ಎಲ್ಲ ಆರಂಭವಾದದ್ದು ಸುಮಾರು 210 ವರ್ಷಗಳ ಹಿಂದೆ, 1811ರಲ್ಲಿ. ದೀರ್ಘ ಹೋರಾಟದ ಮೂಲಕ ಎರಡು ದಶಕಗಳ ಹಿಂದೆ ಸ್ವಾತಂತ್ರ್ಯ ಗಳಿಸಿಕೊಂಡಿದ್ದ, ಉತ್ತರದ ಮೇನ್​ನಿಂದ ದಕ್ಷಿಣದ ಜಾರ್ಜಿಯಾವರೆಗೆ ಅಟ್ಲಾಂಟಿಕ್ ಸಾಗರ ತೀರಕ್ಕೆ ಅಂಟಿದ ಪಟ್ಟಿಯಂತಿದ್ದ ಹದಿಮೂರು ರಾಜ್ಯಗಳು ‘ಅಮೆರಿಕ ಸಂಯುಕ್ತ ರಾಜ್ಯಗಳು’ ಎಂಬ ಆಧುನಿಕ ಜಗತ್ತಿನ ಮೊತ್ತಮೊದಲ ಗಣರಾಜ್ಯವನ್ನು ಸ್ಥಾಪಿಸಿಕೊಂಡು ವೇಗವಾಗಿ ಪಶ್ಚಿಮಕ್ಕೆ ವಿಸ್ತರಿಸುತ್ತಿದ್ದ ದಿನಗಳವು. ಒಂಬತ್ತು ವರ್ಷಗಳ ಹಿಂದೆ ಫ್ರಾನ್ಸ್​ನಿಂದ ವಿಶಾಲ ಲೂಸಿಯಾನಾ ಪ್ರದೇಶವನ್ನು ಖರೀದಿಸಿದ ಮೇಲೆ ಹಳೆಯ ಮತ್ತು ಹೊಸ ಪ್ರದೇಶಗಳ ನಡುವೆ ಸಿಕ್ಕಿಕೊಂಡ, ಪಂಚ ಮಹಾಸರೋವರಗಳ ದಕ್ಷಿಣಕ್ಕಿದ್ದ, ಆಗ ಇಂಡಿಯನ್ನರು ಎಂದು ತಪ್ಪಾಗಿ ಕರೆಯಲ್ಪಡುತ್ತಿದ್ದ ಮೂಲ ಅಮೆರಿಕನ್ನರ ವಿಶಾಲ ಪ್ರದೇಶಗಳನ್ನು ವಿವಿಧ ವಿಧಾನಗಳ ಮೂಲಕ ಅಮೆರಿಕ ತನ್ನಲ್ಲಿ ಅಂತರ್ಗತಗೊಳಿಸಿಕೊಳ್ಳತೊಡಗಿತ್ತು. ಆ ವಿಧಾನಗಳಲ್ಲಿ ಮುಖ್ಯವಾದುದು ವಿವಿಧ ಮೂಲ ಅಮೆರಿಕನ್ನರ ಬುಡಕಟ್ಟುಗಳ ನಾಯಕರಿಂದ ಅವರ ನೆಲವನ್ನು ಖರೀದಿಸುವುದು; ಮಾರಲು ಒಪ್ಪದಿದ್ದವರ ವಿರುದ್ಧ ದಂಡ ಪ್ರಯೋಗ. ಹಾಗೆ ಹತೋಟಿಗೆ ತೆಗೆದುಕೊಂಡ ‘ಇಂಡಿಯಾನಾ ಪ್ರದೇಶ’ದ (ಮುಂದೆ ಅದು ಡಿಸೆಂಬರ್ 1816ರಲ್ಲಿ ಅಮೆರಿಕದ ಹತ್ತೊಂಬತ್ತನೇ ರಾಜ್ಯವಾಯಿತು) ಗವರ್ನರ್ ವಿಲಿಯಮ್ ಹನ್ರಿ ಹ್ಯಾರಿಸನ್ ಸ್ಥಳೀಯ ಮೂಲ ಅಮೆರಿಕನ್ನರ ಬುಡಕಟ್ಟುಗಳಿಂದ ನೆಲವನ್ನು ಖರೀದಿಸುವ ಕೆಲಸದಲ್ಲಿ ತೊಡಗಿದ್ದರು. ಅವರ ವ್ಯವಹಾರಕ್ಕೆ ಅಡ್ಡಿಬಂದದ್ದು ಶಾನೀ ಬುಡಕಟ್ಟಿನ ನಾಯಕ ಟೆಕಂಸೆಹ್ ಮತ್ತು ಅವರ ಸಹೋದರ ಟೆನ್ಸ್​ಕ್ವಾತಾವಾರಿಂದ.

    ಟೆಕಂಸೆಹ್​ರ ವಾದದ ಪ್ರಕಾರ ಹೀಗೆ ನೆಲವನ್ನು ‘ಮಾರುವ’, ‘ಖರೀದಿಸುವ’ ವ್ಯವಹಾರವೇ ಪ್ರಕೃತಿ ನಿಯಮಕ್ಕೆ ವಿರುದ್ಧ ಮತ್ತು ಸಕಲ ಮೂಲ ನಿವಾಸಿಗಳೆಲ್ಲರನ್ನು ಕಾಪಾಡುವ ‘ಮಹಾಚೇತನ’ಕ್ಕೆ ಸಂಪೂರ್ಣ ಅಸಮ್ಮತ. ಟೆಕಂಸೆಹ್ ಅಪ್ರತಿಮ ಯೋಧನಾದರೆ

    ಟೆನ್ಸ್​ಕ್ವಾತಾವಾ ಒಬ್ಬ ‘ಪ್ರವಾದಿ’ ಎಂದು ತಮ್ಮ ಜನರಲ್ಲಿ ಪ್ರಸಿದ್ಧರಾಗಿದ್ದವರು. ಈ ಇಬ್ಬರು ಶಾನೀ ಸಹೋದರರು ಮೂಲನಿವಾಸಿಗಳ ಪ್ರತಿರೋಧದ ನಾಯಕರಾಗಿದ್ದರು ಮತ್ತು ಅವರು ನಿರ್ವಿುಸಿದ್ದ ಪ್ರಾಫೆಟ್ಸ್ ಟೌನ್ ಹಳ್ಳಿ ಅಮೆರಿಕದ ಅತಿಕ್ರಮಣ ವಿರೋಧಿಸುವ ಸ್ಥಳೀಯರ ಕೇಂದ್ರಸ್ಥಾನವಾಗಿತ್ತು. ಮೂಲ ನಿವಾಸಿಗಳ ಪ್ರತಿರೋಧ ಮುರಿಯುವ ಉದ್ದೇಶದಿಂದ ಗವರ್ನರ್ ಹ್ಯಾರಿಸನ್ ನವೆಂಬರ್ 1811ರಲ್ಲಿ ಪ್ರಾಫೆಟ್ಸ್ ಟೌನ್​ನತ್ತ ಸೇನೆ ಜಮಾಯಿಸಿಕೊಂಡು ಹೊರಟು ವಬಾಶ್ ಮತ್ತು ಟಿಪೆಕನೂ ನದಿಗಳ ಸಂಗಮಸ್ಥಳದಲ್ಲಿ ಬೀಡುಬಿಟ್ಟರು. ಪ್ರವಾದಿ ಟೆನ್ಸ್​ಕ್ವಾತಾವಾ ಮೂಲನಿವಾಸಿ ಯೋಧರ ಮೈಗೆ ವಿಶಿಷ್ಟ ಜೇಡಿಮಣ್ಣೊಂದನ್ನು ಸವರಿ, ಅದು ಅಮೆರಿಕನ್ನರ ಗುಂಡುಗಳನ್ನು ಮಣ್ಣಾಗಿ ಪರಿವರ್ತಿಸಿಬಿಡುತ್ತದೆಂದು ಆಶ್ವಾಸನೆ ಕೊಟ್ಟು, ಹ್ಯಾರಿಸನ್​ರ ಸೇನೆಯ ಮೇಲೆ ಎರಗಲು ಹುರಿದುಂಬಿಸಿದರು. ಆದರೆ, ಆ ‘ಟಿಪೆಕನೂ ಕಾಳಗ’ದಲ್ಲಿ ಅತ್ಯಲ್ಪ ಸಮಯದಲ್ಲಿ ಬಹುತೇಕ ಮೂಲನಿವಾಸಿ ಯೋಧರು ಹತರಾಗಿ, ಅಳಿದುಳಿದವರು ರಣರಂಗವನ್ನಷ್ಟೇ ಅಲ್ಲ, ತಮ್ಮ ಕೇಂದ್ರಸ್ಥಾನವನ್ನೂ ತೊರೆದು ಓಡಿಹೋದರು. ವಿಜಯಿ ಅಮೆರಿಕನ್ ಸೇನೆ ಪ್ರಾಫೆಟ್ ಟೌನ್​ಗೆ ನುಗ್ಗಿ ಅದನ್ನು ಸಂಪೂರ್ಣವಾಗಿ ಸುಟ್ಟು ಬೂದಿ ಮಾಡಿತು. ಗವರ್ನರ್ ಹ್ಯಾರಿಸನ್ ‘ಟಿಪೆಕನೂ ವೀರ’ ಎಂದು ಹೆಸರಾದರು.

    ಮರುವರ್ಷ ಅಮೆರಿಕ ಮತ್ತು ಬ್ರಿಟನ್ ನಡುವೆ ಯುದ್ಧ ಆರಂಭವಾದಾಗ ಟೆಕಂಸೆಹ್ ಮತ್ತು ಟೆನ್ಸ್​ಕ್ವಾತಾವಾ ನೇತೃತ್ವದ ಮೂಲನಿವಾಸಿಗಳ ಸಂಯುಕ್ತರಂಗ ಬ್ರಿಟಿಷರ ಜತೆಗೂಡಿ ಅಮೆರಿಕ-ಕೆನಡಾ ಗಡಿಯಲ್ಲಿ ಅಮೆರಿಕನ್ ಸೇನೆಗೆ ಅಪಾರ ಹಾನಿ ಉಂಟುಮಾಡಿತು. ಅಂತಿಮವಾಗಿ ಅಕ್ಟೋಬರ್ 1813ರಲ್ಲಿ ಗಡಿ ದಾಟಿ ಕೆನಡಾದ ಆಂಟೇರಿಯೋಗೆ ನುಗ್ಗಿದ ಗವರ್ನರ್ ಹ್ಯಾರಿಸನ್​ರ ಸೇನೆ ‘ಥೇಮ್್ಸ ಕಾಳಗ’ದಲ್ಲಿ ಟೆಕುಂಸೆಹ್​ರನ್ನು ಹತ್ಯೆಗೈದು ಮೂಲನಿವಾಸಿಗಳನ್ನು ನಿರ್ಣಾಯಕವಾಗಿ ಸೋಲಿಸಿತು. ಟೆಕುಂಸೆಹ್ ಸಾವಿನೊಂದಿಗೆ ಮಿಸಿಸಿಪಿ ನದಿಯ ಪೂರ್ವದ ಪ್ರದೇಶಗಳಲ್ಲಿ ಮೂಲನಿವಾಸಿಗಳ ಪ್ರತಿರೋಧ ಸಂಪೂರ್ಣವಾಗಿ ಅಂತ್ಯಗೊಂಡಿತಲ್ಲದೇ, ಮಹಾ ಸರೋವರಗಳ ದಕ್ಷಿಣದ ಎಲ್ಲ ಪ್ರದೇಶಗಳೂ ಅಮೆರಿಕದ ಪೂರ್ಣ ವಶಕ್ಕೆ ಬಂದವು. ಆದರೆ ‘ನಿಜವಾದ ಕಥೆ’ ಆರಂಭವಾಗುವುದು ಆಗ. ನಂತರ ಪ್ರಚಾರವಾಗತೊಡಗಿದ ದಂತಕತೆಗಳ ಪ್ರಕಾರ, ಸಹೋದರನ ಮರಣದಿಂದ ಅತೀವವಾಗಿ ನೊಂದ ‘ಪ್ರವಾದಿ’

    ಟೆನ್ಸ್​ಕ್ವಾತಾವಾ ತನ್ನ ಬದ್ಧವೈರಿ ಗವರ್ನರ್ ಹ್ಯಾರಿಸನ್​ರಿಗೆ ಶಾಪ ನೀಡಿದರು. ಆ ಶಾಪ ಹ್ಯಾರಿಸನ್ ಒಬ್ಬರಿಗಷ್ಟೇ ಅಲ್ಲ, ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ನಾಯಕತ್ವ ವಹಿಸುವ ಎಲ್ಲರಿಗೂ ತಗುಲುವಂತಿತ್ತು. ಪ್ರಚಾರದಲ್ಲಿರುವ ದಂತಕತೆಗಳ ಪ್ರಕಾರ ಪ್ರವಾದಿ ಟೆನ್ಸ್ ಕ್ವಾತಾವಾ ಉಚ್ಚರಿಸಿದ್ದು ಹೀಗೆ- ‘ನಾನು ಹೇಳುತ್ತಿದ್ದೇನೆ, ಹ್ಯಾರಿಸನ್ ಸಾಯುತ್ತಾನೆ! ಅವನ ನಂತರ ಪ್ರತೀ ಇಪ್ಪತ್ತು ವರ್ಷಗಳಿಗೊಮ್ಮೆ ಆಯ್ಕೆಯಾಗುವ ಪ್ರತಿಯೊಬ್ಬ ಮಹಾ ನಾಯಕನೂ ಸಾಯುತ್ತಾನೆ. ಹಾಗೆ ಒಬ್ಬೊಬ್ಬ ಸತ್ತಾಗಲೂ ನನ್ನ ಜನರ ಸಾವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಲಿ.’

    ಇಪ್ಪತ್ತೇಳು ವರ್ಷಗಳು ಗತಿಸಿಹೋದವು. 1840ರಲ್ಲಿ 67 ವರ್ಷಗಳ ವಿಲಿಯಂ ಹೆನ್ರಿ ಹ್ಯಾರಿಸನ್ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿದು, ಆಗ ಇದ್ದ 294 ಚುನಾವಣಾ ಮತಗಳಲ್ಲಿ 234 ಮತಗಳನ್ನು ಗಳಿಸಿ ಪ್ರಚಂಡ ವಿಜಯ ಸಾಧಿಸಿದರು. ಅಮೆರಿಕದ ಒಂಬತ್ತನೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ರಾಜಧಾನಿ ವಾಷಿಂಗ್​ಟನ್​ಗೆ ಬಂದ ಅವರಿಗೆ ತಾವಿನ್ನೂ ‘ಟಿಪೆಕನೂ ವೀರ’ನೇ ಎಂದು ಪ್ರದರ್ಶಿಸಿಕೊಳ್ಳಬೇಕೆನಿಸಿತ್ತು. ಅಥವಾ, ‘ಪ್ರವಾದಿ’

    ಟೆನ್ಸ್​ಕ್ವಾತಾವಾರ ‘ಶಾಪ’ ಕೆಲಸ ಮಾಡಲು ಆರಂಭಿಸಿತ್ತೇ?

    ಅದು 1841ರ ಮಾರ್ಚ್ 4, ಭಯಂಕರ ಚಳಿಯ ಸಂಜೆ. ಪ್ರಮಾಣವಚನ ಸಮಾರಂಭಕ್ಕೆ ಹೊರಟ ಹ್ಯಾರಿಸನ್ ಚಳಿ ತಡೆಯುವ ಓವರ್​ಕೋಟ್ ಆಗಲೀ, ಟೊಪ್ಪಿಗೆಯನ್ನಾಗಲೀ ಧರಿಸಲಿಲ್ಲ. ಅಷ್ಟೇ ಅಲ್ಲ, ಆ ಹಿಮಪಾತದ ಸಂಜೆಯಲ್ಲಿ ಸುರಕ್ಷತೆೆಗೆಂದು ತಯಾರಾಗಿದ್ದ ಮುಚ್ಚಿದ ಕುದುರೆಗಾಡಿ ಬಿಟ್ಟು ಕುದುರೆಯ ಮೇಲೆ ಕೂತು ಹೊರಟರು. ವಿಧಿ ಅಷ್ಟಕ್ಕೇ ಸುಮ್ಮನಾಗುವಂತಿರಲಿಲ್ಲ. ಹ್ಯಾರಿಸನ್ ಆ ಸಂಜೆ ನೀಡಿದ ಅಧ್ಯಕ್ಷೀಯ ಉದ್ಘಾಟನಾ ಭಾಷಣ ಅಮೆರಿಕನ್ ಇತಿಹಾಸದಲ್ಲೇ ಅತ್ಯಂತ ದೀರ್ಘವಾದುದು. ಸಹಯೋಗಿ ಡ್ಯಾನಿಯೆಲ್ ವೆಬ್​ಸ್ಟರ್ ಕತ್ತರಿಯಾಡಿಸಿ ಚಂದಗೊಳಿಸಿದ್ದರೂ 8445 ಪದಗಳಿದ್ದ ಆ ಭಾಷಣವನ್ನು ಪೂರ್ತಿ ಓದಿ ಮುಗಿಸಲು ಹ್ಯಾರಿಸನ್ ತೆಗೆದುಕೊಂಡದ್ದು ಎರಡು ತಾಸುಗಳು, ಅದೂ ಸುರಿಯತೊಡಗಿದ ಹಿಮಕ್ಕೆ ಮೈಯೊಡ್ಡಿ, ಮೈಮೇಲೆ ಓವರ್​ಕೋಟಾಗಲೀ, ತಲೆಯ ಮೇಲೆ ಟೊಪ್ಪಿಗೆಯಾಗಲೀ ಇಲ್ಲದೇ!

    ಅಧ್ಯಕ್ಷ ಹ್ಯಾರಿಸನ್ ತಮ್ಮ ಕೆಲಸಕಾರ್ಯಗಳನ್ನೇನೋ ಆರಂಭಿಸಿದರು. ಆದರೆ ಇಪ್ಪತ್ತೆರಡು ದಿನಗಳ ನಂತರ ಅವರಿಗೆ ಶೀತ ಶುರುವಾಗಿ, ವೈದ್ಯರುಗಳ ಎಡವಟ್ಟುಗಳಿಂದಾಗಿ ಅದು ಉಲ್ಬಣಿಸಿ ಮತ್ತಾವುದಕ್ಕೋ ತಿರುಗಿ ಏಪ್ರಿಲ್ 4ರಂದು ಅಂದರೆ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಿಗೆ ಸರಿಯಾಗಿ ಮರಣಹೊಂದಿದರು. ಇದು ‘ಪ್ರವಾದಿ’ ಟೆನ್ಸ್​ಕ್ವಾತಾವಾರ ಶಾಪದ ಪರಿಣಾಮವಿರಬಹುದು ಅಥವಾ ಕಾಕತಾಳೀಯವಿರಬಹುದು. ಆದರೆ ಈ ‘ಕಾಕತಾಳೀಯತೆ’ ಮುಂದಿನ 120 ವರ್ಷಗಳವರೆಗೆ ಅವ್ಯಾಹತವಾಗಿ ಮುಂದುವರಿಯುತ್ತದೆ! ಇಪ್ಪತ್ತು ವರ್ಷಗಳ ನಂತರ 1860ರಲ್ಲಿ ಆಯ್ಕೆಯಾದ ಅಬ್ರಹಾಂ ಲಿಂಕನ್ ಮೊದಲ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ದಕ್ಷಿಣದ ವಿರುದ್ಧದ ಅಂತರ್ಯುದ್ಧದಲ್ಲಿ ಉತ್ತರಕ್ಕೆ ಜಯ ದೊರಕಿಸಿ, ಎರಡನೆಯ ಅವಧಿಗೂ ಆಯ್ಕೆಯಾಗಿ, 1865ರಲ್ಲಿ ಅದನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಹತ್ಯೆಗೊಳಗಾದರು. ಮತ್ತೆರಡು ದಶಕಗಳ ನಂತರ 1880ರಲ್ಲಿ ಆಯ್ಕೆಯಾದ ಜೇಮ್್ಸ ಗ್ಯಾರ್​ಫೀಲ್ಡ್ ಅಧಿಕಾರ ವಹಿಸಿಕೊಂಡ ವರ್ಷವೇ ಹತ್ಯೆಗೀಡಾದರು. 1900ರಲ್ಲಿ ಎರಡನೆಯ ಅವಧಿಗೆ ಆಯ್ಕೆಯಾದ ವಿಲಿಯಂ ಮೆಕಿನ್ಲೇ 1901ರಲ್ಲಿ ಕೊಲ್ಲಲ್ಪಟ್ಟರು. 1920ರಲ್ಲಿ ಆಯ್ಕೆಯಾದ ವಾರೆನ್ ಜಿ. ಹಾರ್ಡಿಂಗ್ ಮೂರು ವರ್ಷಗಳ ನಂತರ ಹೃದಯಾಘಾತದಿಂದ ಅಸುನೀಗಿದರು. ಫ್ರಾಂಕ್ಲಿನ್ ಡಿ. ರೂಸ್​ವೆಲ್ಟ್ 1940ರಲ್ಲಿ ಮೂರನೆಯ ಬಾರಿಗೆ ಆಯ್ಕೆಯಾಗಿ, ಆ ಅವಧಿ ಪೂರ್ಣಗೊಳಿಸಿ ನಾಲ್ಕನೆಯ ಬಾರಿಗೆ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಿದುಳಿನಲ್ಲಾದ ರಕ್ತಸ್ರಾವದಿಂದ ನಿಧನ ಹೊಂದಿದರು. 1960ರಲ್ಲಿ ಜಾನ್ ಎಫ್. ಕೆನಡಿ ಆಯ್ಕೆಯಾದರು. ಅವರ ಹತ್ಯೆಯಾಗಿ ಇದೇ ನವೆಂಬರ್ 22ಕ್ಕೆ ಐವತ್ತೇಳು ವರ್ಷಗಳಾದವು. ಹೀಗೆ, ‘ಪ್ರತಿ ಇಪ್ಪತ್ತು ವರ್ಷಗಳಲ್ಲಿ’ ಆಯ್ಕೆಯಾದ ಏಳು ‘ಮಹಾ ನಾಯಕರು’ ಅಧಿಕಾರದಲ್ಲಿರುವಾಗಲೇ ಅಕಾಲ ಮೃತ್ಯುವಿಗೆ ಬಲಿಯಾದರು. ಇದು ಕಾಕತಾಳೀಯವೇ ಆದರೂ, ಸೊನ್ನೆಯಿಂದ ಅಂತ್ಯವಾಗುವ ವರ್ಷಗಳಲ್ಲಿ ಆಯ್ಕೆಯಾದವರು ಹೀಗೆ ಅಪಮೃತ್ಯುವಿಗೆ ಗುರಿಯಾಗತೊಡಗಿದ್ದರಿಂದ ‘ಪ್ರವಾದಿ’ ಟೆನ್ಸ್​ಕ್ವಾತಾವಾರ ಶಾಪವನ್ನು ‘ಶೂನ್ಯ ಸಂವತ್ಸರದ ಶಾಪ’ ಎಂದು ಕರೆಯುವ ಪರಿಪಾಠ ರೂಢಿಗೆ ಬಂತು.

    ಆದಾಗ್ಯೂ, ಈ ‘ಶಾಪ’ದ ಪ್ರವರ ಲಿಖಿತ ರೂಪದಲ್ಲಿ ಮೊಟ್ಟಮೊದಲಿಗೆ ಕಾಣಿಸಿಕೊಳ್ಳುವುದು ಇಪ್ಪತ್ತನೇ ಶತಮಾನದ ಮೂರನೇ ದಶಕದಲ್ಲಷ್ಟೇ. ಖ್ಯಾತ ವ್ಯಂಗ್ಯಚಿತ್ರಕಾರ ರಾಬರ್ಟ್ ಲೆರಾಯ್ ರಿಪ್ಲೇ ತಮ್ಮ ಚಿತ್ರಸರಣಿ ಅಂಕಣ ‘ಜಿಟ್ಝಛಿಢ’ಠ ಆಛ್ಝಿಜಿಛಿಡಛಿ ಐಠಿ ಟ್ಟ ಘಟಠಿ!’ನಲ್ಲಿ ಪ್ರವಾದಿಯ ಶಾಪದ ಬಗ್ಗೆ ಉಲ್ಲೇಖಿಸಿ, 1840ರಿಂದ 1920ರವರೆಗೆ ಸೊನ್ನೆಯಿಂದ ಅಂತ್ಯವಾಗುವ ಪ್ರತೀ ವರ್ಷದಲ್ಲೂ ಆಯ್ಕೆಯಾದ ಅಧ್ಯಕ್ಷರೆಲ್ಲರೂ ಅಧಿಕಾರದಲ್ಲಿದ್ದಾಗಲೇ ಅಪಮೃತ್ಯುವಿಗೆ ತುತ್ತಾದುದನ್ನು ಪಟ್ಟಿ ಮಾಡಿ 1940ರ ಚುನಾವಣೆಯ ಬಗ್ಗೆ ಪ್ರಶ್ನೆಯನ್ನೆತ್ತಿದರು. ಮತ್ತೊಬ್ಬ ವ್ಯಂಗ್ಯಚಿತ್ರಕಾರ ಜಾನ್ ಹಿಕ್ಸ್ ಅಂತೂ 1940ರ ಚುನಾವಣಾ ಸಮಯದಲ್ಲೇ, ‘ಈ ವರ್ಷ ಅಧ್ಯಕ್ಷರಾಗಿ ಆಯ್ಕೆಯಾಗುವವರು ನೂರು ವರ್ಷದಷ್ಟು ಹಳೆಯ ಭಯಾನಕ ಶಾಪವನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿಯೇಬಿಟ್ಟರು. ಹಾಗೆಯೇ, ಆ ವರ್ಷ ಆಯ್ಕೆಯಾದ ರೂಸ್​ವೆಲ್ಟ್ ಅಧಿಕಾರಾವಧಿಯಲ್ಲೇ ತೀರಿಕೊಂಡದ್ದು ಮತ್ತು ಕೆನಡಿ ಅಪಮೃತ್ಯುವಿಗೀಡಾಗಿ ಪ್ರವಾದಿಯ ಶಾಪ ಜನಜನಿತವಾಗಿಹೋಯಿತು. ಹೀಗಾಗಿ 1980ರ ಚುನಾವಣೆಯ ಸಮಯದಲ್ಲಿ ಈ ಶಾಪ ದೊಡ್ಡದಾಗಿ ಚರ್ಚೆಗೆ ಬಂತು. ‘ಪರೇಡ್’ ನಿಯತಕಾಲಿಕದ ಖ್ಯಾತ ಅಂಕಣಕಾರ ಲಾಯ್್ಡ ಶೀರರ್ ಪ್ರವಾದಿಯ ಶಾಪದ ಬಗ್ಗೆ ವಿವರವಾಗಿ ಬರೆದದ್ದುಂಟು. ಮರುಆಯ್ಕೆಗಾಗಿ ಸ್ಪರ್ಧಿಸುತ್ತಿದ್ದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರನ್ನು ಡೇಟನ್ ನಗರದ ಚುನಾವಣಾ ರ್ಯಾಲಿಯೊಂದರಲ್ಲೇ ಶಾಲಾವಿದ್ಯಾರ್ಥಿಯೊಬ್ಬ ‘ನಿಮಗೆ ಹೆದರಿಕೆಯಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿಯೇಬಿಟ್ಟ. ‘ಆ ಭವಿಷ್ಯವಾಣಿಯ ಬಗ್ಗೆ ಕೇಳಿದ್ದೇನೆ. ಆದರೆ ನನಗೆ ಹೆದರಿಕೆ ಇಲ್ಲ. ಅದು ನಿಜವಾಗುತ್ತದೆ ಎಂದು ನನಗನಿಸಿದರೂ ನಾನು ಅಧ್ಯಕ್ಷನಾಗುತ್ತೇನೆ ಮತ್ತು ನನ್ನ ಕೊನೆಯ ದಿನದವರೆಗೂ ಕೈಲಾದಷ್ಟು ಮಟ್ಟಿಗೆ ಕೆಲಸಕಾರ್ಯಗಳನ್ನು ನಿರ್ವಹಿಸುತ್ತೇನೆ’ ಎಂದು ತಾವು ಉತ್ತರಿಸಿದ್ದಾಗಿ ಜಿಮ್ಮಿ ಕಾರ್ಟರ್ ತಮ್ಮ ಆತ್ಮಚರಿತ್ರೆ ‘ಓಛಿಛಿಟಜ್ಞಿಜ ಊಚಜಿಠಿಜ’ನಲ್ಲಿ ದಾಖಲಿಸಿದ್ದಾರೆ. ಆ ವರ್ಷ ಆಯ್ಕೆಯಾದ ರೊನಾಲ್ಡ್ ರೀಗನ್ ಮೇಲೆ ಹತ್ಯೆಯ ಪ್ರಯತ್ನವೇನೋ ನಡೆಯಿತು, ಆದರೆ ಅವರು ಉಳಿದುಕೊಂಡರು. ಎರಡು ಅವಧಿಗಳನ್ನು ಪೂರ್ಣಗೊಳಿಸಿ ನಿವೃತ್ತಿಯೂ ಆದರು. ಪ್ರವಾದಿಯ ಶಾಪದ ಶಕ್ತಿಗೂ ಒಂದು ಕಾಲಮಿತಿ ಇದ್ದೀತೇನೋ.

    ಈ ಶಾಪ ಹುರಳಿಲ್ಲದ್ದು ಎಂಬ ವಾದವೂ ಬರತೊಡಗಿತು. ಇದಕ್ಕೆ ದೊಡ್ಡ ಪುರಾವೆಯಾಗಿ ಬಳಕೆಯಾದದ್ದು ಮಾನವಶಾಸ್ತ್ರಜ್ಞ ಸಿ.ಸಿ. ಟ್ರೋಬ್ರಿಜ್ ಅವರ ಬರಹಗಳು. ಟ್ರೋಬ್ರಿಜ್ 1824ರಲ್ಲಿ ‘ಪ್ರವಾದಿ’ ಟೆನ್ಸ್​ಕ್ವಾತಾವಾರನ್ನು ಸಂದರ್ಶಿಸಿದ್ದರು. ಎಪ್ಪತ್ತು ಪುಟಗಳಲ್ಲಿ ದಾಖಲಾಗಿರುವ, ವೈವಿಧ್ಯಮಯ ಚರ್ಚೆಗಳನ್ನೊಳಗೊಂಡ ಆ ಸಂದರ್ಶನದಲ್ಲಿ ‘ಶಾಪ’ದ ಬಗ್ಗೆ ಒಂದು ಪದವೂ ಇಲ್ಲ! ಮತ್ತೆ, ಹಲವಾರು ವಿದ್ವಾಂಸರು ಬಗೆಬಗೆಯ ತರ್ಕ, ಮನಶಾಸ್ತ್ರ, ವೈದ್ಯಕೀಯ ವಿಜ್ಞಾನ ಮುಂತಾದುವುಗಳನ್ನೆಲ್ಲ ಉಪಯೋಗಿಸಿ ಶಾಪ ಮತ್ತದರ ಪರಿಣಾಮ ಕಟ್ಟುಕತೆಗಳ ಸರಣಿ ಎಂದು ಸಾಧಿಸಲು ಶ್ರಮಿಸಿದ್ದಾರೆ.

    ರೊನಾಲ್ಡ್ ರೀಗನ್​ರಂತೆಯೇ, 2000ದಲ್ಲಿ ಆಯ್ಕೆಯಾದ ಕಿರಿಯ ಜಾರ್ಜ್ ಬುಷ್ ಸಹ ಎರಡು ಅವಧಿ ಪೂರ್ಣಗೊಳಿಸಿದ್ದು ಪ್ರವಾದಿಯ ಶಾಪ ಇನ್ನು ಕೆಲಸ ಮಾಡುವುದಿಲ್ಲ ಎಂಬ ನಂಬಿಕೆ ಮೂಡಿಸಿ ನಗೆಚಟಾಕಿಗಳಿಗೂ ಕಾರಣವಾಯಿತು. ಇಷ್ಟಾಗಿಯೂ, ರೀಗನ್ ಮತ್ತು ಬುಷ್ ಕೂದಲೆಳೆಯಲ್ಲಿ ಸಾವಿನಿಂದ ಪಾರಾದದ್ದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ರೀಗನ್ 1981 ಮಾರ್ಚ್ 31ರಂದು ಗುಂಡೇಟು ತಿಂದೂ ಬದುಕಿಕೊಂಡರು. ಬುಷ್ 2001 ಸೆಪ್ಟೆಂಬರ್ 11ರಂದು ಉಳಿದದ್ದು ಪವಾಡದಂತೇ ಕಾಣುತ್ತದೆ. ಅಂದು ಅಲ್-ಖಯೀದಾ ಭಯೋತ್ಪಾದಕರು ಅಪಹರಿಸಿದ ನಾಲ್ಕು ವಿಮಾನಗಳಲ್ಲಿ ಎರಡು ನ್ಯೂಯಾರ್ಕ್​ನ ವಿಶ್ವ ವ್ಯಾಪಾರ ಕೇಂದ್ರದ ಗೋಪುರಗಳನ್ನು ನೆಲಸಮಗೊಳಿಸಿದರೆ ಮೂರನೆಯದು ವಾಷಿಂಗ್​ಟನ್​ನಲ್ಲಿನ ರಕ್ಷಣಾ ಸಚಿವಾಲಯದ ಕಚೇರಿ ಪೆಂಟಗನ್​ನ ಒಂದು ಪಾರ್ಶ್ವವನ್ನು ಧ್ವಂಸಗೊಳಿಸಿತು. ನಾಲ್ಕನೆಯದರ ಗುರಿ ಯಾವುದಾಗಿತ್ತು ಎಂದು ತಿಳಿದಿಲ್ಲ. ಆದರೆ ಅದು ಗುರಿ ಮುಟ್ಟುವ ಮೊದಲೇ ಪ್ರಯಾಣಿಕರು ಮತ್ತು ಅಪಹರಣಕಾರರ ನಡುವೆ ಆಕಾಶದಲ್ಲೇ ಘರ್ಷಣೆ ಆರಂಭವಾದ್ದರಿಂದ ಆ ವಿಮಾನ ಪೆನ್ಸಿಲ್ವೇನಿಯಾದಲ್ಲಿ ಅಪಘಾತಕ್ಕೀಡಾಯಿತು. ಒಂದುವೇಳೆ ಅದರ ಗುರಿ ಶ್ವೇತಭವನವಾಗಿದ್ದರೆ?! ಐದನೆಯ ವಿಮಾನವೇನಾದರೂ ತಮ್ಮ ಬಲಿ ತೆಗೆದುಕೊಳ್ಳಲು ಬರಬಹುದು ಎಂದು ಆತಂಕಗೊಂಡ ಅಧ್ಯಕ್ಷ ಬುಷ್ ಅಣ್ವಸ್ತ್ರ ದಾಳಿಯಿಂದಲೂ ರಕ್ಷಣೆ ಒದಗಿಸಬಲ್ಲ ಬಂಕರ್​ನಲ್ಲಿ ಆರು ತಾಸು ಅಡಗಿಕೊಂಡರು. ಇದರರ್ಥ, ಪ್ರವಾದಿಯ ಶಾಪ ಈಗ ಬಲಹೀನಗೊಂಡಿರಬಹುದು, ಆದರೆ ಅದು ಆತಂಕ ಸೃಷ್ಟಿಸದೇ ಇರಲಾರದು ಎಂದು ರೀಗನ್ ಮತ್ತು ಬುಷ್​ರ ಬದುಕಿನ ಘಟನೆಗಳು ಹೇಳುತ್ತಿವೆಯೇ?

    ಪ್ರಸಕ್ತ ಚುನಾವಣೆಯ ಸಂದರ್ಭದಲ್ಲೂ ಪ್ರವಾದಿಯ ಶಾಪ ಚರ್ಚೆಗೆ ಬಂದದ್ದುಂಟು. ಆದರೆ ಚುನಾವಣೆಯ ಫಲಿತಾಂಶವೇ ಒಂದು ಶಾಪದಂತೆ ವ್ಯಾಜ್ಯವಾಗಿ ಪರಿಣಮಿಸಿರುವ ಕಾರಣ ‘ಪ್ರವಾದಿಯ ಶಾಪ’ ಹಿನ್ನೆಲೆಗೆ ಸರಿದಿದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts