ಒಳಹೊರಗಿನ ಶತ್ರುಗಳು ಜತೆಗೂಡಿ ಹರಡಿದ ಬಲೆ

ದೇಶಿ-ವಿದೇಶಿ ಶಕ್ತಿಗಳೆಲ್ಲವುಗಳ ಉದ್ದೇಶಕ್ಕೆ ಅತ್ಯಂತ ಪೂರಕ ಬೆಳವಣಿಗೆ ಈ ಪುಲ್ವಾಮಾ ಘಟನೆ. 40 ಯೋಧರನ್ನು ಬಲಿತೆಗೆದುಕೊಂಡ ಆತ್ಮಹತ್ಯಾ ದಾಳಿ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಬಿಟ್ಟಿದೆ. ಮೋದಿ ಯಾವ ಹೆಜ್ಜೆಯಿಟ್ಟರೂ ಅದು ಅವರನ್ನು ಒಳ-ಹೊರಗಿನ ವಿರೋಧಿಗಳು ಹೆಣೆದಿರುವ ಬಲೆಯಲ್ಲಿ ಕೆಡವಿಬಿಡುತ್ತದೆ!

ಪಾಕಿಸ್ತಾನದ ಪೂರ್ವ-ಪಶ್ಚಿಮದ ನೆರೆನಾಡುಗಳಾದ ಭಾರತ ಮತ್ತು ಇರಾನ್​ಗಳೆರಡೂ ಕಳೆದವಾರ ಕೇವಲ 24 ಗಂಟೆಗಳ ಅವಧಿಯಲ್ಲಿ ಒಂದೇಬಗೆಯ ಭೀಕರ ಭಯೋತ್ಪಾದಕ ದಾಳಿಗೊಳಗಾಗಿವೆ. ಫೆಬ್ರವರಿ 13ರಂದು ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇರಾನ್​ನ ಉಚ್ಚಸ್ತರೀಯ ರಕ್ಷಣಾಪಡೆಯಾದ ‘ಇಸ್ಲಾಮಿಕ್ ರೆವಲೂಷನರಿ ಗಾರ್ಡ್್ಸ ಫೋರ್ಸಸ್’ಗೆ ಸೇರಿದ ಸೈನಿಕರು ಪ್ರಯಾಣಿಸುತ್ತಿದ್ದ ಬಸ್​ಗೆ ಸ್ಪೋಟಕಗಳಿಂದ ತುಂಬಿದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ 27 ರೆವಲೂಷನರಿ ಗಾರ್ಡ್್ಸ ಮರಣ ಹೊಂದಿದರು. ಅತ್ಮಹತ್ಯಾ ದಾಳಿಯ ಹೊಣೆ ಹೊತ್ತದ್ದು ಸುನ್ನಿ ಭಯೋತ್ಪಾದನಾ ಸಂಘಟನೆಯಾದ ಜೈಶ್ ಅಲ್-ಅದ್ಲ್. ಇದರ ಮೂಲವಿರುವುದು ಪಾಕಿಸ್ತಾನದಲ್ಲಿ.

ಇರಾನ್​ನಲ್ಲಿ ಘಟಿಸಿದ್ದು ಮರುದಿನವೇ ಯಥಾವತ್ತಾಗಿ ಭಾರತದ ಕಾಶ್ಮೀರದಲ್ಲಿ ಮರುಕಳಿಸಿತು. ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರ ಬಸ್​ಗೆ ಡಿಕ್ಕಿ ಹೊಡೆದ ಸ್ಪೋಟಕಭರಿತ ವಾಹನ 40 ಯೋಧರನ್ನು ಬಲಿ ತೆಗೆದುಕೊಂಡಿತು. ದಾಳಿಯ ಹೊಣೆ ಹೊತ್ತದ್ದು ಜೈಶ್-ಎ-ಮೊಹಮ್ಮದ್. ಇದರ ಮೂಲವಿರುವುದೂ ಪಾಕಿಸ್ತಾನದಲ್ಲೇ.

ಜಾಗತಿಕ ಇಸ್ಲಾಮಿಕ್ ಭಯೋತ್ಪಾದನೆಯ ಕೇಂದ್ರಸ್ಥಾನವಾದ ಪಾಕಿಸ್ತಾನದ ಪೂರ್ವ-ಪಶ್ಚಿಮಗಳೆರಡರಲ್ಲೂ ಸರಿಸುಮಾರು ಏಕಕಾಲಕ್ಕೆ ಘಟಿಸಿದ ಈ ಎರಡೂ ಆತ್ಮಹತ್ಯಾ ದಾಳಿಗಳಾಗಿದ್ದವು ಮತ್ತು ಬಲಿಯಾದ ಇರಾನಿ ಹಾಗೂ ಭಾರತೀಯ ಯೋಧರ ಸಂಖ್ಯೆಯನ್ನು ಪರಿಗಣಿಸಿದರೆ ಈ ದಾಳಿಗಳು ಇದುವರೆಗಿನ ಅತ್ಯಂತ ದೊಡ್ಡ ಪ್ರಮಾಣದ, ಅತಿಘಾತಕವಾದ ದಾಳಿಗಳಾಗಿವೆ. ದಾಳಿಗಳ ಸಮಯ ಮತ್ತು ವಿಧಾನ ಇವೆರಡೂ ಏಕಕಾಲದಲ್ಲಿ, ಏಕಸ್ಥಳದಲ್ಲಿ, ಏಕನಿರ್ದೇಶನದಲ್ಲಿ ರೂಪುಗೊಂಡಿರುವ ಸಾಧ್ಯತೆಯನ್ನು ಡಾಣಾಡಂಗುರವಾಗಿ ಸಾರುತ್ತವೆ. ಇರಾನಿ ಮತ್ತು ಭಾರತೀಯ ವಿದೇಶಾಂಗ ಇಲಾಖೆಗಳೆರಡೂ ಟೆೆಹರಾನ್ ಮತ್ತು ದೆಹಲಿಗಳಲ್ಲಿರುವ ಪಾಕಿಸ್ತಾನಿ ರಾಯಭಾರಿಗಳನ್ನು ಕರೆದು ಛೀಮಾರಿ ಹಾಕಿದ್ದಲ್ಲದೆ ಲಿಖಿತ ಎಚ್ಚರಿಕೆಯನ್ನೂ ನೀಡಿವೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಪುಲ್ವಾಮಾ ಹತ್ಯಾಕಾಂಡದ ಸಂಚುಗಾರರಿಗೆ ಶಿಕ್ಷೆ ಖಚಿತ ಎಂದು ಸಾರ್ವಜನಿಕವಾಗಿ ಘೊಷಿಸಿದ್ದಾರೆ. ದೇಶದ ಸಾರ್ವಜನಿಕ ಅಭಿಪ್ರಾಯವಂತೂ ಪಾಕಿಸ್ತಾನಕ್ಕೆ ಯುದ್ಧದ ಮೂಲಕ ಶಾಸ್ತಿ ಮಾಡಬೇಕೆನ್ನುವುದರ ಪರವಾಗಿದೆ. ಪುಲ್ವಾಮಾ ದಾಳಿಯ ಭೀಕರತೆ ರಾಷ್ಟ್ರದ ಸಂವೇದನೆಯನ್ನು ಈ ಪರಿಯಾಗಿ ಕಲಕಿರುವುದನ್ನು ಸುಲಭವಾಗಿಯೇ ಅರ್ಥಮಾಡಿಕೊಳ್ಳಬಹುದು. ಇದನ್ನು ಪರಿಣಾಮಕಾರಿಯಾಗಿ ತಡೆಯದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬ ಆತಂಕ ಸಹಜವೇ.

ಆದರೆ ಇಲ್ಲಿ ಎರಡು ಪ್ರಶ್ನೆಗಳು ಎದುರಾಗುತ್ತವೆ- 1. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಜತೆ ಯುದ್ಧ ಸಾಧುವೇ? 2. ಪುಲ್ವಾಮಾ ದಾಳಿಗೆ ಪಾಕಿಸ್ತಾನವಷ್ಟೇ ಕಾರಣವೇ? ನಾವೀಗ ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆಗಳಿವು. ಅಣ್ವಸ್ತ್ರ ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಿದಾಗಲೇ ನಮ್ಮ ಸುರಕ್ಷೆಯ ಜತೆ ಚೆಲ್ಲಾಟವಾಡಲು ಆ ದುರುಳ ದೇಶಕ್ಕೆ ನಾವು ಅವಕಾಶ ಮಾಡಿಕೊಟ್ಟುಬಿಟ್ಟೆವು. ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನಕ್ಕಿಂತ ಭಾರತ ಹಲವು ಪಟ್ಟು ಬಲಿಷ್ಠ ಮತ್ತು ಯುದ್ಧದಲ್ಲಿ ಅವಷ್ಟೇ ಬಳಕೆಯಾದರೆ ನಮಗೆ ಜಯ ನಿಶ್ಚಿತ. ಹೀಗಾಗಿ ಹಿಂದೆ ಕಾಶ್ಮೀರದಲ್ಲಿ ಪಾಕಿಸ್ತಾನ ತಂಟೆ ಎಬ್ಬಿಸಿದಾಗೆಲ್ಲ ಭಾರತ ಅದನ್ನು ಬೇರೆಡೆ ಯುದ್ಧಕ್ಕೆಳೆದು ಮಣಿಸಿ ಅದರ ಕೈಗಳನ್ನು ಕಟ್ಟಿಹಾಕುತ್ತಿತ್ತು. 1965ರ ಯುದ್ಧ ಇದಕ್ಕೊಂದು ಉದಾಹರಣೆ. ಆದರೆ 1987ರಲ್ಲಿ ರಹಸ್ಯವಾಗಿ ಅಣ್ವಸ್ತ್ರ ಗಳಿಸಿಕೊಳ್ಳುವುದರ ಮೂಲಕ ಪಾಕಿಸ್ತಾನ ಸಾಂಪ್ರದಾಯಿಕ ಅಸ್ತ್ರಗಳಲ್ಲಿ ಭಾರತ ಹೊಂದಿದ್ದ ಮೇಲುಗೈಯನ್ನು ಅರ್ಥಹೀನಗೊಳಿಸಿಬಿಟ್ಟಿದೆ. ಕಾಶ್ಮೀರದಲ್ಲಿ 1990ರಲ್ಲಿ ಆರಂಭವಾದ ಪಾಕ್-ಪ್ರಾಯೋಜಿತ ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತ ಪರಿಣಾಮಕಾರಿ ಪ್ರಯತ್ನಕ್ಕೆ ಮುಂದಾದಾಗೆಲ್ಲ ಪಾಕಿಸ್ತಾನ ಅಣ್ವಸ್ತ್ರ ಝುಳಪಿಸಿ ನಮ್ಮ ಕೈಗಳನ್ನು ಕಟ್ಟಿಹಾಕುತ್ತಿದೆ.

ನಮ್ಮ ವಿರುದ್ಧ ಅಣ್ವಸ್ತ್ರಗಳನ್ನು ಬಳಸುವ ಸ್ಥೈರ್ಯ ಪಾಕಿಸ್ತಾನಕ್ಕಿಲ್ಲ, ನಾವು ಬೆದರಿಕೆ ಒಡ್ಡಿದರೆ ಅದು ಬಾಲ ಮುದುರಿಕೊಳ್ಳುತ್ತದೆ ಎಂದು ‘ಆರಾಮಕುರ್ಚಿ ವಿಶೇಷಜ್ಞರು’ ದನಿಯೆತ್ತರಿಸಿ ಕೂಗುವುದನ್ನು ಕೇಳುತ್ತಿದ್ದೇನೆ. ಈ ಮೂರ್ಖರಿಗೆ ಇತಿಹಾಸದ ಅರಿವೇ ಇಲ್ಲ. ಕಾಶ್ಮೀರದಿಂದ ಭಾರತ ತನ್ನ ಸೇನೆಯನ್ನು ತಕ್ಷಣ ಹೊರತೆಗೆಯಬೇಕೆಂದೂ, ಇಲ್ಲದಿದ್ದರೆ ಅಣ್ವಸ್ತ್ರ ದಾಳಿಯೆಸಗುವುದಾಗಿಯೂ ಪಾಕಿಸ್ತಾನ 1990ರ ಜುಲೈನಲ್ಲಿ ಭಾರತಕ್ಕೆ ಸಂದೇಶ ಕಳಿಸಿದ್ದು ಎಷ್ಟು ಜನರಿಗೆ ನೆನಪಿದೆ? ಆ ಸಂದೇಶ ಹುಡುಗಾಟದ್ದೇನಾಗಿರಲಿಲ್ಲ. ಸರ್ಗೇಧಾ ವಾಯುನೆಲೆಯಲ್ಲಿ ಅಣ್ವಸ್ತ್ರಗಳನ್ನು ಎಫ್-16 ಯುದ್ಧವಿಮಾನಗಳಿಗೇರಿಸಿ, ಕಾಕ್​ಪಿಟ್​ನಲ್ಲಿ ಸಜ್ಜಾಗಿ ಕೂತು ಮುಂದಿನ ಆಜ್ಞೆಗಾಗಿ ಕಾಯುವಂತೆ ಪೈಲಟ್​ಗಳಿಗೆ ಹೇಳಿಯೇ ಪಾಕಿಸ್ತಾನ ನಮಗೆ ಎಚ್ಚರಿಕೆ ನೀಡಿದ್ದು. ಅದು ಆಯ್ಕೆ ಮಾಡಿಕೊಂಡದ್ದೂ ಮಂಡಲ್-ಮಸ್ಜಿದ್ ಗಲಾಟೆ, ಉಪಪ್ರಧಾನಿ ದೇವಿಲಾಲ್​ರ ನೌಟಂಕಿಗಳಿಂದ ಬಲಹೀನ ವಿ.ಪಿ. ಸಿಂಗ್ ಸರ್ಕಾರ ತತ್ತರಿಸುತ್ತಿದ್ದ ವಿಷಮ ಸನ್ನಿವೇಶವನ್ನು. ಆಗ ನಮ್ಮ ನೆರವಿಗೆ ಬಂದದ್ದು ‘ನಮ್ಮದು ಶಾಂತಿಯುತ ಅಣ್ವಸ್ತ್ರ ಪರೀಕ್ಷೆ’ ಎಂದು ಹೇಳುತ್ತಲೇ ಇಂದಿರಾ ಗಾಂಧಿ ರಹಸ್ಯವಾಗಿ ತಯಾರಿಸಿಟ್ಟಿದ್ದ ಅಣ್ವಸ್ತ್ರಗಳು! ಅವುಗಳನ್ನು ಪಾಕಿಸ್ತಾನದ ಮೇಲೆ ಪ್ರಯೋಗಿಸುವುದಾಗಿ ವಿದೇಶಮಂತ್ರಿ ಐ.ಕೆ. ಗುಜ್ರಾಲ್ ಇಸ್ಲಾಮಾಬಾದ್​ಗೆ ಪ್ರತಿಸಂದೇಶ ಕಳಿಸಿದಾಗಷ್ಟೇ ಪಾಕ್ ಸರ್ಕಾರ ತಣ್ಣಗಾದದ್ದು. ಕಾಕ್​ಪಿಟ್​ಗಳಲ್ಲಿ ಸಜ್ಜಾಗಿ ಕೂತಿದ್ದ ಪೈಲಟ್​ಗಳಿಗೆ ಇಳಿದು ಮನೆಗೆ ಹೋಗುವಂತೆ ಹೇಳಲಾಯಿತೆಂದು ರಹಸ್ಯ ವರದಿಗಳು ಹೇಳುತ್ತವೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. 1999ರ ಮೇ-ಜುಲೈ ಕಾರ್ಗಿಲ್ ಯುದ್ಧದ ಸಮಯದಲ್ಲಿ ಕದನವನ್ನು ಅಂತಾರಾಷ್ಟ್ರೀಯ ಗಡಿಗಿರಲಿ ಕಾಶ್ಮೀರದ ಕದನವಿರಾಮ ರೇಖೆಯ ಇತರ ಭಾಗಗಳಿಗಾದರೂ ವಿಸ್ತರಿಸಿ ಪಾಕ್ ಸೇನಾಬಲವನ್ನು ಕುಗ್ಗಿಸಲು ಪ್ರಧಾನಿ ವಾಜಪೇಯಿ ಯತ್ನಿಸಿದಾಗ ಅವರನ್ನು ತಡೆದದ್ದು ಪಾಕಿಸ್ತಾನ ಝುಳಪಿಸಿದ ಅಣ್ವಸ್ತ್ರ. ಸೋಲುತ್ತಿದ್ದೇವೆ ಎಂದರಿವಾದಾಗ ಅಣ್ವಸ್ತ್ರಗಳನ್ನು ಬಳಸಲು ಪ್ರಧಾನಿ ನವಾಜ್ ಷರೀಫ್ ತಯಾರಾದರು. ಅವರನ್ನು ಛೀಮಾರಿ ಮತ್ತು ಉಗ್ರ ಬೆದರಿಕೆಯ ಮೂಲಕ ತಡೆದದ್ದು ಅಧ್ಯಕ್ಷ ಬಿಲ್ ಕ್ಲಿಂಟನ್. ಮತ್ತೆ, 2001ರ ಡಿಸೆಂಬರ್ ಪಾರ್ಲಿಮೆಂಟ್ ದಾಳಿಯ ನಂತರದ 10 ತಿಂಗಳಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಾಶಪಡಿಸಲೆಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಲು 3 ಸಲ ಪ್ರಯತ್ನಿಸಿತು. ಮೂರು ಸಲವೂ ಪಾಕಿಸ್ತಾನ ಅಣ್ವಸ್ತ್ರ ಝುಳಪಿಸಿ ನಮ್ಮ ಸೇನೆಯನ್ನು ಹಿಮ್ಮೆಟ್ಟಿಸಿತು.

ಇದೆಲ್ಲವೂ ಹೇಳುವುದು- ಸೋಲು ಖಚಿತ ಎಂದರಿವಾದಾಗ ಅಣ್ವಸ್ತ್ರ ಬಳಸಲು ಪಾಕಿಸ್ತಾನಿಯರು ಹಿಂಜರಿಯುವುದೇ ಇಲ್ಲ; ಆ ದುರುಳರನ್ನು ಯಾವ ಮಾನವೀಯತೆ, ನಾಗರಿಕತೆ, ಸಂಸ್ಕೃತಿ, ಧರ್ಮವೂ ತಡೆಯುವುದಿಲ್ಲ ಎಂಬ ಕರಾಳಸತ್ಯವನ್ನು. ಅಂತಹವರು ಇಂದು ಸೋಲಿಗೆ ಮೈಯೊಡ್ಡಿ ತಣ್ಣಗೆ ಕೂತುಬಿಡುತ್ತಾರೆ ಎಂದು ನಂಬುವುದು ಅದೆಷ್ಟು ಅವಿವೇಕಿತನ! ಅವರ ದಾಳಿಗೆ ಪ್ರತಿಯಾಗಿ ನಾವೂ ದಾಳಿ ನಡೆಸಬಹುದು, ಇಡೀ ಪಾಕಿಸ್ತಾನವನ್ನು ನಿರ್ನಾಮ ಮಾಡಬಲ್ಲಷ್ಟು ಸಾಮರ್ಥ್ಯ ನಮಗಿದೆ ನಿಜ. ಆದರೆ, ಅದಕ್ಕೆ ನಾವು ತೆರಬೇಕಾದ ಬೆಲೆ ಎಷ್ಟು? ನಾವೇ ಅರೆಜೀವವಾದಾಗ ವೈರಿ ಸತ್ತಿರುವುದು ಅಥವಾ ಬದುಕಿರುವುದು ನಮಗೆ ಮುಖ್ಯವಾಗುತ್ತದೆಯೇ?

ಒಟ್ಟಿನಲ್ಲಿ ಅಣ್ವಸ್ತ್ರ ಗಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಿ ನಾವು ನಮ್ಮ ಕೈಗಳನ್ನೇ ಕಟ್ಟಿಹಾಕಿಕೊಂಡುಬಿಟ್ಟೆವು. ಈ ದುರಂತಕ್ಕೆ ನಾವು ಯಾರನ್ನು ದೂಷಿಸಬೇಕು? ಪಾಕ್ ರಹಸ್ಯ ಅಣ್ವಸ್ತ್ರ ಕಾರ್ಯಯೋಜನೆಗಳ ವಿವರ ಪಡೆಯಲು ‘ರಾ’ ಅನ್ನು ನಿಯೋಜಿಸಿದ್ದ, ನಿಖರ ಮಾಹಿತಿ ದೊರೆತೊಡನೆ ನ್ಯೂಕ್ಲಿಯರ್ ರಿಯಾಕ್ಟರ್​ಗಳನ್ನು ನಾಶಪಡಿಸಲು ಮನಸ್ಸು ಮಾಡಿದ್ದ ಇಂದಿರಾ ಗಾಂಧಿಯವರನ್ನು ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ಹೊರಗಟ್ಟಿದ ಭಾರತೀಯ ಮತದಾರನನ್ನೇ? ‘ರಾ’ ಮಾಡಿದ ಎಲ್ಲ ತನಿಖೆಯನ್ನೂ ತಿಪ್ಪೆಗೆಸೆದ, ಪಾಕಿಗಳು ತಮ್ಮ ನ್ಯೂಕ್ಲಿಯರ್ ರಿಯಾಕ್ಟರ್​ಗಳನ್ನು ರಕ್ಷಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ, ಅದಕ್ಕಾಗಿ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಶಾನ್-ಎ-ಪಾಕಿಸ್ತಾನ್’ ಅನ್ನು ಹಣೆಗಂಟಿಸಿಕೊಂಡು ಬೀಗಿದ ಮೊರಾರ್ಜಿ ದೇಸಾಯಿ ಅವರನ್ನೇ? ಒಟ್ಟಿನಲ್ಲಿ ನಮ್ಮಿಂದ ತಪ್ಪು ನಡೆದುಹೋಯಿತು. ಅದರ ದುಷ್ಪರಿಣಾಮವನ್ನು ಇಂದಿಗೂ ಅನುಭವಿಸುತ್ತಿದ್ದೇವೆ.

ಈಗ ಎರಡನೆಯ ಪ್ರಶ್ನೆ- ಪುಲ್ವಾಮಾ ಘಟನೆಗೆ ಪಾಕಿಸ್ತಾನವಷ್ಟೇ ಕಾರಣವೇ? ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ತಮ್ಮ ರಾಜತಾಂತ್ರಿಕ ನಡೆಗಳಿಂದ ಪಾಕಿಸ್ತಾನವನ್ನು ಇತರ ದೇಶಗಳಿಂದಿರಲಿ, ಮುಸ್ಲಿಂ ದೇಶಗಳಿಂದಲೇ ದೂರವಾಗಿಸಿಬಿಟ್ಟಿದ್ದಾರೆ. ಎಲ್ಲೆಡೆಯಿಂದ ಆದಾಯ ಕಳೆದುಕೊಂಡು ನಿರ್ಗತಿಕ ಸ್ಥಿತಿಗೆ ಪಾಕಿಸ್ತಾನ ತಲುಪಿಬಿಟ್ಟಿದೆ. ಅದಕ್ಕೆ ಕಾರಣವಾದ ಮೋದಿ ಮತ್ತೆ ಪ್ರಧಾನಿಯಾದರೆ ಪಾಕಿಸ್ತಾನ ರಾಜತಾಂತ್ರಿಕವಾಗಿ ಪೂರ್ಣ ಏಕಾಂಗಿಯಾಗುವುದು ಮತ್ತು ಆರ್ಥಿಕವಾಗಿ ಸಂಪೂರ್ಣ ನೆಲಕಚ್ಚುವುದು ನಿಶ್ಚಿತ ಎಂದು ಪಾಕ್ ಆಡಳಿತಗಾರರಿಗೆ ಅರ್ಥವಾಗಿಹೋಗಿದೆ. ಹೀಗಾಗಿ ಮುಂದಿನ ಚುನಾವಣೆಗಳನ್ನು ಮೋದಿಯವರಿಗೆ ಎಷ್ಟು ಸಾಧ್ಯವೋ ಅಷ್ಟು ಕಠಿಣವಾಗಿಸುವುದು ಪಾಕ್ ನೀತಿಯಾಗಿದೆ. ದೊಕ್ಲಾಮ್ಲ್ಲಿ ಚೀನಾವನ್ನು ಸಮರ್ಥವಾಗಿ ಎದುರಿಸಿದ, ಮಾಲ್ದೀವ್ಸ್, ಶ್ರೀಲಂಕಾಗಳಿಂದ ಚೀನಾವನ್ನು ಹೊರಗೋಡಿಸುತ್ತಿರುವ ಮೋದಿ ಮತ್ತೆ ಪ್ರಧಾನಿಯಾಗುವುದು ಬೀಜಿಂಗ್ ಪ್ರಭುಗಳಿಗೂ ಬೇಕಾಗಿಲ್ಲ.

ಈ ಎರಡು ಬಾಹ್ಯಶಕ್ತಿಗಳೊಂದಿಗೆ, ಮೋದಿಯವರನ್ನು ಅಧಿಕಾರದಿಂದ ಹೊರಗಿಡುವುದು ದೇಶೀಯ ಶಕ್ತಿಗಳಿಗೂ ಬೇಕಾಗಿದೆ. ಕಳೆದ 2 ವರ್ಷಗಳಲ್ಲಿ ನಮ್ಮ ಸುರಕ್ಷಾಪಡೆಗಳು ನಾನೂರಕ್ಕೂ ಹೆಚ್ಚಿನ ಭಯೋತ್ಪಾದಕರನ್ನು ಕೊಂದಿವೆ. ಕಾಶ್ಮೀರಿ ಆತಂಕವಾದಿಗಳಿಗೆ ಈ ಬಗೆಯ ಹೊಡೆತ ಹಿಂದೆಂದೂ ಬಿದ್ದಿರಲಿಲ್ಲ. ಹೀಗಾಗಿ, ಮೋದಿ ಮತ್ತೆ ಪ್ರಧಾನಿಯಾಗಕೂಡದು ಎನ್ನುವುದು ಅವರ ನಿಖರ ಉದ್ದೇಶ. ಜತೆಗೆ, ತಮ್ಮದೇ ಕಾರಣಗಳಿಗಾಗಿ, ಇಲ್ಲಿನ ಕೆಲ ರಾಜಕೀಯ ಪಕ್ಷಗಳಿಗೂ, ಮಾಧ್ಯಮಸಂಸ್ಥೆಗಳಿಗೂ, ವಿದೇಶಿ-ಪ್ರಾಯೋಜಿತ ಧಾರ್ವಿುಕ-ಸಾಮಾಜಿಕ ಎನ್​ಜಿಒಗಳಿಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಬೇಕಿಲ್ಲ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಅವೆಲ್ಲವೂ ಪಣತೊಟ್ಟಿವೆ.

ವಿದೇಶಿ-ದೇಶಿ ಶಕ್ತಿಗಳೆಲ್ಲವುಗಳ ಉದ್ದೇಶಕ್ಕೆ ಅತ್ಯಂತ ಪೂರಕವಾದ ಬೆಳವಣಿಗೆ ಈ ಪುಲ್ವಾಮಾ ಘಟನೆ. 40 ಯೋಧರನ್ನು ಬಲಿತೆಗೆದುಕೊಂಡ ಆತ್ಮಹತ್ಯಾ ದಾಳಿ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಬಿಟ್ಟಿದೆ. ಮೋದಿ ಯಾವ ಹೆಜ್ಜೆಯಿಟ್ಟರೂ ಅದು ಅವರನ್ನು ಒಳ-ಹೊರಗಿನ ವಿರೋಧಿಗಳು ಹೆಣೆದಿರುವ ಬಲೆಯಲ್ಲಿ ಕೆಡವಿಬಿಡುತ್ತದೆ! ಮೋದಿ ಪ್ರತೀಕಾರದ ಕ್ರಮವಾಗಿ ಯುದ್ಧಕ್ಕಿಳಿದರೆ, ಮೊದಲ ಹಂತದಲ್ಲಿ ಹೊರಗಿನ ಶತ್ರುಗಳು ಕ್ರಿಯಾಶೀಲವಾಗುತ್ತಾರೆ, ಅವರಿಗೆ ಒಳಗಿನ ಶತ್ರುಗಳು ಮೌನವಾಗಿ ಸಹಕರಿಸುತ್ತಾರೆ. ಅಣ್ವಸ್ತ್ರದ ಬೆದರಿಕೆಯೊಡ್ಡುತ್ತ ಯುದ್ಧವನ್ನು ಚುನಾವಣೆಗಳವರೆಗೂ ಎಳೆಯುವುದು, ಭಾರತೀಯರಿಗೆ ತ್ವರಿತ ಜಯವನ್ನು ತಪ್ಪಿಸುವುದು, ಆ ಮೂಲಕ ಮೋದಿ ಬಗ್ಗೆ ಭಾರತೀಯ ಮತದಾರ ಭ್ರಮನಿರಸನಗೊಳ್ಳುವಂತೆ ಮಾಡುವುದು ಪಾಕಿಸ್ತಾನದ ನೀತಿಯಾಗುತ್ತದೆ. ಎರಡನೆಯ ಹಂತದಲ್ಲಿ ಕ್ರಿಯಾಶೀಲವಾಗುವ ಒಳಗಿನ ಶತ್ರುಗಳು, ಮೋದಿ ಹಿಡಿದ ಯುದ್ಧದ ದಾರಿಯಿಂದಾಗಿ ದೇಶಕ್ಕೆ ಹಾನಿಯಾಗುತ್ತಿದೆಯೆಂದೂ ಪ್ರಚಾರ ಆರಂಭಿಸುತ್ತಾರೆ. ಹೀಗೆ ಹೊರಗಿನ-ಒಳಗಿನ ಶತ್ರುಗಳು ಒಟ್ಟುಗೂಡಿ ಮೋದಿಯವರನ್ನು ಮತದಾರನಿಂದ ದೂರ ಒಯ್ಯುತ್ತಾರೆ.

ತಮ್ಮ ಎರಡನೆಯ ಆಯ್ಕೆಯಾಗಿ ಮೋದಿ ಪ್ರತೀಕಾರದ ದೊಡ್ಡದೊಡ್ಡ ಮಾತಾಡಿಯೂ, ವಾಸ್ತವವನ್ನರಿತು ಯಾವುದೇ ತೀವ್ರ ಕ್ರಮಕ್ಕೆ ಮುಂದಾಗದೇಹೋದರೆ ಆಗ ಉದ್ಭವವಾಗುವ ಪರಿಸ್ಥಿತಿಯ ಮೊದಲ ಹಂತದಲ್ಲಿ ಒಳಗಿನ ಮೋದಿ-ವಿರೋಧಿಗಳು ಸಕ್ರಿಯರಾಗುತ್ತಾರೆ, ಹೊರಗಿನ ಶತ್ರುಗಳು ಮೌನವಾಗಿ ಸಹಕರಿಸುತ್ತಾರೆ. ರಾಷ್ಟ್ರಹಿತ ಕಾಪಾಡುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡುವುದು ಒಳಗಿನ ವಿರೋಧಿಗಳ ಯೋಜನೆಯಾಗುತ್ತದೆ. ಅದೂ ಮತದಾರನಲ್ಲಿ ಮೋದಿಯವವರ ಬಗ್ಗೆ ಭ್ರಮನಿರಸನ ವನ್ನುಂಟುಮಾಡುತ್ತದೆ. ಚುನಾವಣೆ ಹತ್ತಿರಾಗುತ್ತಿದ್ದಂತೆಯೇ ಎರಡನೆಯ ಹಂತ ಆರಂಭವಾಗುತ್ತದೆ ಮತ್ತು ಅದರಲ್ಲಿ ಒಳಗಿನ ಶತ್ರುಗಳ ಜತೆ ಹೊರಗಿನ ಶತ್ರುಗಳೂ ಕಾರ್ಯಾಚರಣೆಗಿಳಿಯುತ್ತಾರೆ, ಕಣಿವೆಯಲ್ಲಿ, ಸಾಧ್ಯವಾದರೆ ಇತರೆಡೆಯೂ ಭಯೋತ್ಪಾದಕ ದಾಳಿಗಳು ಘಟಿಸತೊಡಗುತ್ತವೆ. ಪರಿಣಾಮವಾಗಿ ಮೋದಿ ಮತದಾರನಿಂದ ದೂರದೂರ ಸರಿದುಹೋಗುತ್ತಾರೆ. ಒಳ-ಹೊರಗಿನ ಶತ್ರುಗಳ ದುರ್ಯೂೕಜನೆಗಳು ಯಶಸ್ವಿಯಾಗುತ್ತವೆ! ಹಾಗಿದ್ದರೆ ಮೋದಿಯವರ ಮುಂದಿರುವ ಪರಿಣಾಮಕಾರಿ ಮಾರ್ಗವೇನು? ರಾಷ್ಟ್ರಹಿತವನ್ನೂ, ತಮ್ಮ ಚುನಾವಣಾಸಾಫಲ್ಯವನ್ನೂ ಅವರು ಒಟ್ಟಿಗೆ ಸಾಧಿಸುವ ಮಾರ್ಗವೇನು? ಇದರ ವಿಶ್ಲೇಷಣೆ ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

2 Replies to “ಒಳಹೊರಗಿನ ಶತ್ರುಗಳು ಜತೆಗೂಡಿ ಹರಡಿದ ಬಲೆ”

  1. Brilliant.someof the facts are known to us.but the reality of nuclear weapons as a strategic weapons in our bilateral relations has been explained beautifully within the constraints of a column. Excellent professor

  2. ನಿಮ್ಮ ಅಂಕಣಗಳು ತುಂಬಾ ಚೆನ್ನಾಗಿ ಬರುತ್ತಿವೆ ಹಾಗೂ ನಿಮ್ಮ ಮಾಹಿತಿ ,ದೇಶದ ಸೂಕ್ಷ್ಮ ವಿಚಾರಗಳ ವಿವರಿಸಿ ಜನರನ್ನು, ದೇಶವನ್ನು ಜಾಗೃತ ಮಾಡುತ್ತಿರುವುದು ಹೆಮ್ಮೆಯ ವಿಚಾರ

Comments are closed.