ಭಾರತದ ಆಸಿಯಾ ಬೀಬಿ ಆಗಬಯಸಿದ ನಾಸಿರುದ್ದೀನ್ ಶಾ

ಭಾರತದಲ್ಲಿ ಮುಸ್ಲಿಮರಿಗೆ ಸಮಾನ ಹಕ್ಕುಗಳಿವೆ. ರಾಷ್ಟ್ರಾಧ್ಯಕ್ಷನಿಂದ ಹಿಡಿದು ಸಾಮಾನ್ಯ ಕಾರಕೂನನವರೆಗೆ ಯಾವುದೇ ಸ್ಥಾನದಲ್ಲಿ ಹಿಂದೂಗಳಿಗಿರುವಷ್ಟೇ ಅವಕಾಶಗಳು ಅವರಿಗೂ ಇವೆ. ಸಾಂಸ್ಕೃತಿಕ, ಸಾಹಿತ್ಯಕ ಕ್ಷೇತ್ರಗಳಲ್ಲಿ ಅವರ ವಿರುದ್ಧ ಯಾವುದೇ ತಾರತಮ್ಯವಿಲ್ಲ. ಮುಸ್ಲಿಂ ನಟರೊಬ್ಬರು ‘ಬಾಲಿವುಡ್ ಕಾ ಬಾದ್​ಶಾ’ ಎಂದೇ ಬಿರುದಾಂಕಿತರಾಗಿದ್ದಾರೆ.

ಭಾವನಾತ್ಮಕತೆಗೆ ಯಾವ ಬೆಲೆಯನ್ನೂ ಕೊಡದ, ಸಂಪೂರ್ಣ ಲೆಕ್ಕಾಚಾರದ ಮನುಷ್ಯ ಮಹಮದ್ ಆಲಿ ಜಿನ್ನಾ ಬದುಕಿನಲ್ಲಿ ಕಣ್ಣೀರು ಹಾಕಿದ್ದು ಎರಡೇ ಸಲ ಎಂದು ಅವರ ಜೀವನಚರಿತ್ರೆ ‘ದ ಸೋಲ್ ಸ್ಪೋಕ್ಸ್​ಮ್ಯಾನ್’ ರಚಿಸಿದ ಆಯೇಷಾ ಜಲಾಲ್ ಬರೆಯುತ್ತಾರೆ. ಪತ್ನಿ ರತ್ತನ್​ಬಾಯಿ (ರತ್ತೀ) 1929ರಲ್ಲಿ ತೀರಿಕೊಂಡಾಗ ಮೊದಲ ಸಲವಾದರೆ, 1947ರ ಕೋಮು ಹತ್ಯಾಕಾಂಡಗಳ ಒಂದು ದಿನ ಕರಾಚಿ ನಗರದಲ್ಲಿನ ನಿರಾಶ್ರಿತ ಶಿಬಿರಕ್ಕೆ ಭೇಟಿ ನೀಡಿ ಹಿಂದೂಗಳ ಆಕ್ರಂದನ ನೋಡಿದಾಗ. ಪಾಕಿಸ್ತಾನವನ್ನು ಧರ್ಮನಿರಪೇಕ್ಷ, ಆಧುನಿಕ ರಾಷ್ಟ್ರವನ್ನಾಗಿ ನಿರ್ವಿುಸುವ ಅವರ ಇಂಗಿತ ಮತ್ತು ನಿರಾಶ್ರಿತರ ಶಿಬಿರದಲ್ಲಿ ಹನಿದ ಕಣ್ಣೀರು, ಭೀಕರ ಕೋಮುಗಲಭೆಯ ಆ ಕರಾಳ ದಿನಗಳಲ್ಲಿ ಆತಂಕಪೂರ್ಣ ಅನಿಶ್ಚಿತತೆಯಲ್ಲಿ ತೊಳಲುತ್ತಿದ್ದ ಅಸಹಾಯ ಹಿಂದೂಗಳಿಗೆ ಜೀವಸೆಲೆಯಂತೆಯೇ ಕಂಡುಬಂದವು.

ಆದರೆ ಏಕಕಾಲದಲ್ಲಿ ಕ್ಯಾನ್ಸರ್ ಮತ್ತು ಕ್ಷಯರೋಗಗಳಿಗೆ ಸಿಲುಕಿದ ಜಿನ್ನಾ ಸೆಪ್ಟೆಂಬರ್ 1948ರಲ್ಲಿ ನಿಧನರಾಗುವುದರೊಂದಿಗೆ ಧರ್ಮನಿರಪೇಕ್ಷತೆಯ ಜತೆ ಪಾಕಿಸ್ತಾನದ ಮಧುಚಂದ್ರ ಅಂತ್ಯಗೊಂಡಿತು. ಮುಸ್ಲಿಮರಿಗಾಗಿ ಸ್ಥಾಪಿತವಾದ ರಾಷ್ಟ್ರ ಇಸ್ಲಾಮಿಕ್ ಆಗಲೇಬೇಕು ಎಂದು ಪಟ್ಟುಹಿಡಿದ ಮೌಲಾನಾ ಮೌದೂದಿಯವರಂತಹ ಮುಸ್ಲಿಂ ಧರ್ಮಗುರುಗಳು ಹಾಗೂ ಅವರನ್ನು ಓಲೈಸುವ ರಾಜಕೀಯ ನೇತಾರರ ಮತ್ತು ಸೇನಾಧಿಕಾರಿಗಳ ಕಪಿಮುಷ್ಟಿಗೆ ಸಿಲುಕಿ ಪಾಕಿಸ್ತಾನ 1955ರಲ್ಲಿ ತನ್ನನ್ನು ತಾನು ‘ಇಸ್ಲಾಮಿಕ್ ರಿಪಬ್ಲಿಕ್’ ಎಂದು ಸಂವಿಧಾನದಲ್ಲಿ ಅಧಿಕೃತವಾಗಿ ಘೊಷಿಸಿಕೊಂಡಿತು. ಇಸ್ಲಾಮ್ ತಾತ್ವಿಕವಾಗಿ ಇಡೀ ಜಗತ್ತನ್ನು ಒಂದೇ ದೇಶವನ್ನಾಗಿ ನೋಡುತ್ತದೆ. ಮಾನವಜನಾಂಗವನ್ನು ಬೇರೆಬೇರೆಯಾಗಿಸಿ ಅವರಿಗೆ ವಿವಿಧ ರಾಷ್ಟ್ರೀಯತೆಯ ಹಣೆಪಟ್ಟಿ ಹಚ್ಚುವುದನ್ನು ಇಸ್ಲಾಮ್ ಒಪ್ಪುವುದಿಲ್ಲ. ಈ ಕಾರಣವನ್ನೊಡ್ಡಿ ಜಮಾತ್-ಇ-ಇಸ್ಲಾಮಿಯ ಸ್ಥಾಪಕರಾದ ಮೌದೂದಿ ಮೊದಲಿಗೆ ಪಾಕಿಸ್ತಾನದ ಸ್ಥಾಪನೆಯನ್ನೇ ವಿರೋಧಿಸಿದ್ದರು. ಆದರೆ ಪಾಕಿಸ್ತಾನ ಸೃಷ್ಟಿಯಾಗಿಯೇಹೋದಾಗ, ಮುಸ್ಲಿಮರಿಗಾಗಿ ರಚನೆಗೊಂಡ ದೇಶ ಇಸ್ಲಾಮಿಕ್ ಆಗಲೇಬೇಕು ಎಂದವರು ಉಗ್ರವಾಗಿ ಪ್ರತಿಪಾದಿಸಿದರು. ಈ ವಿಷಯವನ್ನೆತ್ತಿಕೊಂಡು 1951-53ರಲ್ಲಿ ದೇಶಾದ್ಯಂತ ಹಿಂಸಾತ್ಮಕ ಧಾರ್ವಿುಕ ಆಂದೋಲನಗಳು ಘಟಿಸಿದವು. ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಗುವುದರೊಂದಿಗೆ ಅದರ ಸ್ಥಾಪಕನ ಧರ್ಮನಿರಪೇಕ್ಷ ನಿಲುವುಗಳನ್ನು ಮುಂದಿನ ಜನಾಂಗಗಳಿಂದ ಮರೆಯಾಗಿಸುವ ಹುನ್ನಾರವೂ ಅಂದರೆ ‘ಇತಿಹಾಸವನ್ನು ತಿರುಚುವ ಕೃತ್ಯ’ವೂ ಆರಂಭವಾಯಿತು. ಜಿನ್ನಾ ನಿಷ್ಠಾವಂತ ಮುಸ್ಲಿಂ ಆಗಿರಲೇ ಇಲ್ಲ. ಅವರು ದಿನಕ್ಕೆ ಐದು ಸಲ ಪ್ರಾರ್ಥನೆ ಮಾಡುತ್ತಿರಲಿಲ್ಲ, ಮದ್ಯ ಹಾಗೂ ಹಂದಿಮಾಂಸವನ್ನು ಇಷ್ಟಪಟ್ಟು ಸೇವಿಸುತ್ತಿದ್ದರು. ಮುಸ್ಲಿಂ ಲೀಗ್ ನಾಯಕರು ಜಿನ್ನಾರನ್ನು ‘ಕಾಯದ್-ಎ-ಆಜಂ’ (ಮಹಾ ನಾಯಕ) ಎಂದು ಕರೆದರೆ, ಮೌಲಾನಾ ಮೌದೂದಿ ‘ಕಾಫಿರ್-ಎ-ಆಜಂ’ (ಮಹಾ ಧರ್ಮಭ್ರಷ್ಟ) ಎಂದು ಲೇವಡಿ ಮಾಡುತ್ತಿದ್ದರು!

ಜಿನ್ನಾ ಬಹಿರಂಗವಾಗಿ ಯಾವಾಗಲೂ ಧರಿಸುತ್ತಿದ್ದುದು ಸೂಟ್. ಆದರೆ ಆ ಚಿತ್ರಗಳನ್ನು ಮರೆಮಾಡಿ, ಜಿನ್ನಾ ಯಾವಾಗಲೋ ಒಮ್ಮೆ ಶೇರ್ವಾನಿ ಮತ್ತು ಟೋಪಿ ಧರಿಸಿದ್ದ ಚಿತ್ರವನ್ನು ಪಠ್ಯಪುಸ್ತಕಗಳಲ್ಲಿ, ಕರೆನ್ಸಿ ನೋಟ್​ಗಳಲ್ಲಿ, ಅಂಚೆಚೀಟಿಗಳಲ್ಲಿ ಮುದ್ರಿಸಿ ಅದೇ ಅವರ ವೇಷಭೂಷಣ ಎಂಬ ಚಿತ್ರಣ ಸೃಷ್ಟಿಸಲಾಯಿತು. ಅಷ್ಟೇ ಅಲ್ಲ, ಪಾಕಿಸ್ತಾನ ಧರ್ಮನಿರಪೇಕ್ಷ, ಆಧುನಿಕ ರಾಷ್ಟ್ರವಾಗಬೇಕು ಎಂದವರು ಪಾಕ್ ಸಂವಿಧಾನ ಸಭೆಯಲ್ಲಿ ಮಾಡಿದ್ದ ಘೊಷಣೆಗಳನ್ನು ಎಲ್ಲ ಅಧಿಕೃತ ದಾಖಲೆಗಳಿಂದ, ಸರ್ಕಾರಿ ಪ್ರಕಟಣೆಗಳಿಂದ, ಪಠ್ಯಪುಸ್ತಕಗಳಿಂದ ತೆಗೆದುಹಾಕಲಾಯಿತು! ಜಿನ್ನಾರ ಇಸ್ಲಾಮ್​ವಿರೋಧಿ ನೀತಿನಡವಳಿಕೆಗಳೆಲ್ಲವನ್ನೂ ಮರೆಮಾಡಿ, ಅವರೊಬ್ಬ ನಿಷ್ಠಾವಂತ ಮುಸ್ಲಿಂ ಆಗಿದ್ದರೆಂದು ಬಿಂಬಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದ್ದದ್ದು ಹೀಗೆ. ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾದ ಪರಿಣಾಮವಾಗಿ ಹಿಂದೂಗಳು ಮತ್ತಿತರ ಅಲ್ಪಸಂಖ್ಯಾತರು ಅಧಿಕೃತವಾಗಿ ಎರಡನೆಯ ದರ್ಜೆಯ ಪ್ರಜೆಗಳಾಗಿಹೋದರು. ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಮಂತ್ರಿಯ ಸ್ಥಾನಗಳು ಮುಸ್ಲಿಮರಿಗೆ ಮಾತ್ರ ಮೀಸಲಾದವು. ಇತರ ಸ್ಥಾನಗಳು ಹಾಗೂ ಸರ್ಕಾರಿ ನೌಕರಿಗಳಲ್ಲಿ ಹಿಂದೂಗಳಿಗೆ ಸಮಾನ ಅವಕಾಶವನ್ನು ಸಂವಿಧಾನ ನೀಡಿದರೂ ಎಲ್ಲೆಡೆ ತಾಂಡವವಾಡತೊಡಗಿದ ‘ಅಸಹಿಷ್ಣುತೆ’ಯಿಂದಾಗಿ ಅವರು ತಾರತಮ್ಯಕ್ಕೊಳಗಾಗತೊಡಗಿದರು. ಹಿಂದೂಗಳ ಮೇಲಿನ ದೌರ್ಜನ್ಯ ವ್ಯಾಪಕವಾಗತೊಡಗಿದವು. ಶ್ರೀಮಂತ ಹಿಂದೂಗಳ ಕಗ್ಗೊಲೆ ಹಾಗೂ ಆಸ್ತಿಯ ಲಪಟಾಯಿಸುವಿಕೆ, ಸ್ತ್ರೀಯರ ಅಪಹರಣ, ಅತ್ಯಾಚಾರ ಹಾಗೂ ಬಲವಂತದ ಮತಾಂತರಗಳು ಗ್ರಾಮೀಣ ಪಾಕಿಸ್ತಾನದಲ್ಲಿ ದಿನನಿತ್ಯದ ಘಟನೆಗಳಾಗಿವೆ. ದೇಶದಾದ್ಯಂತ ಹಿಂದೂ ಮಂದಿರಗಳು ಹಾಗೂ ಇನ್ನಿತರ ಪವಿತ್ರಸ್ಥಳಗಳನ್ನು ಹಾಳುಗೆಡವಲಾಗಿದೆ. ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಾಗ ಅಲ್ಲಿದ್ದ ಐದು ಸಾವಿರಕ್ಕೂ ಹೆಚ್ಚು ಮಂದಿರಗಳಲ್ಲಿ ಈಗ ಸುಸ್ಥಿತಿಯಲ್ಲಿ ಉಳಿದಿರುವಂತಹವು ಬೆರಳೆಣಿಕೆಯಷ್ಟು. ಕರಾಚಿ ನಗರವೊಂದರಲ್ಲೇ 480 ಮಂದಿರಗಳಿದ್ದವು. ಅವುಗಳಲ್ಲಿ 460ಕ್ಕೂ ಹೆಚ್ಚಿನ ಮಂದಿರಗಳು ಈಗ ಸರ್ಕಾರಿ ಕಚೇರಿಗಳಾಗಿ, ಶಾಲೆಗಳಾಗಿ, ಖಾಸಗಿ ವಾಸಸ್ಥಳಗಳಾಗಿ ಬದಲಾಯಿಸಲ್ಪಟ್ಟಿವೆ. ಮಿಲಿಟರಿ ಸರ್ವಾಧಿಕಾರಿ ಜಿಯಾ-ಉಲ್-ಹಕ್ ಜಾರಿಗೊಳಿಸಿದ ಹಲವಾರು ಇಸ್ಲಾಮಿಕ್ ಕಾಯಿದೆಗಳು ಹಿಂದೂಗಳು ಮತ್ತು ಸಿಖ್ಖರು ಬಹಿರಂಗವಾಗಿ ತಮ್ಮ ಧರ್ಮವನ್ನು ಆಚರಿಸಲು ಅವಕಾಶ ನೀಡುವುದಿಲ್ಲ. ಹಿಂದೂ ವಿವಾಹಕ್ಕೆ ಪಾಕಿಸ್ತಾನಿ ಕಾನೂನಿನ ಪ್ರಕಾರ ಮಾನ್ಯತೆಯೇ ಇಲ್ಲ. ಇವೆಲ್ಲ ಕಾರಣಗಳಿಂದಾಗಿ ಅಲ್ಲಿ ಹಿಂದೂಗಳ ಸಂಖ್ಯೆ ವರ್ಷವರ್ಷೇ ಇಳಿಯತೊಡಗಿತು. ನಲವತ್ತೇಳರಲ್ಲಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇಕಡ 18ರಿಂದ 20ರಷ್ಟಿದ್ದ ಹಿಂದೂಗಳು ಈಗ ಕೇವಲ 1.6%ಗೆ ಕುಸಿದಿದ್ದಾರೆ! ಅಲ್ಲಿನ ಹಿಂದೂಗಳ ಒಟ್ಟು ಸಂಖ್ಯೆ 25 ಲಕ್ಷಕ್ಕಿಂತಲೂ ಕಡಿಮೆ. ಪಾಕ್ ಕಾನೂನು ಪರಿಶಿಷ್ಟ ಜಾತಿ ಮತ್ತು ಜನಾಂಗದವರನ್ನು ಹಿಂದೂಗಳೆಂದು ಪರಿಗಣಿಸುವುದಿಲ್ಲ. ಅವರ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ 0.25ರಷ್ಟಿದೆ.

ಇಸ್ಲಾಮೀಕರಣ ಭಯಾನಕವಾಗಿ ಸಾಗಿದ್ದು ಜಿಯಾ ಆಳ್ವಿಕೆಯಲ್ಲಿ. ಪ್ರಧಾನಮಂತ್ರಿ ಭುಟ್ಟೋರನ್ನು ತಾನು ಪದಚ್ಯುತಗೊಳಿಸಿ ಗಲ್ಲಿಗೇರಿಸಿದ್ದನ್ನು ದೇಶದ ಜನತೆ ಒಪ್ಪಿಕೊಳ್ಳುತ್ತಿಲ್ಲ ಎಂದರಿವಾದ ಕೂಡಲೇ ಆ ಸರ್ವಾಧಿಕಾರಿ ಕುರ್ಚಿ ಭದ್ರಪಡಿಸಿಕೊಳ್ಳಲು ಇಸ್ಲಾಂ ಮೊರೆಹೊಕ್ಕರು. ಅದರಲ್ಲೂ 1982ರ ನಂತರ ತಮ್ಮ ಜನಾಂದೋಲನ ಭುಗಿಲೆದ್ದಾಗ ಜಿಯಾರ ಇಸ್ಲಾಂ ಹುಚ್ಚು ತಾರಕಕ್ಕೇರಿತು. ತನ್ನನ್ನು ರಕ್ಷಿಸುವ ಭದ್ರಕೋಟೆಯೆಂದರೆ ಇಸ್ಲಾಂ ಮಾತ್ರ ಎಂದು ಬಗೆದ ಆತ ತಾನು ‘ಇಸ್ಲಾಂನ ನಿಷ್ಠಾವಂತ ಸೈನಿಕ’ ಎಂದು ಘೊಷಿಸಿಕೊಂಡದ್ದಲ್ಲದೆ, ಇಸ್ಲಾಮಿಕ್ ಶಿಕ್ಷಣ ನೀಡುವ 25 ಸಾವಿರ ಮದ್ರಸಾಗಳು ದೇಶದಾದ್ಯಂತ ತಲೆಯೆತ್ತಲು ಅನುವು ಮಾಡಿಕೊಟ್ಟು ತನ್ಮೂಲಕ ಭಾವಿಪ್ರಜೆಗಳ ಚಿಂತನೆ ಮತ್ತು ಧಾರ್ವಿುಕ ಮನೋಭಾವನೆ ಗಳು ಸಂಕುಚಿತಗೊಳ್ಳವಂತಹ ದುರಂತಪ್ರಕ್ರಿಯೆಗೆ ನಾಂದಿ ಹಾಡಿದರು. ಆ ಮದ್ರಸಾಗಳಲ್ಲಿ ಬಹುತೇಕ ಈಗ ಜಿಹಾದಿ ಕಾರ್ಖಾನೆಗಳಾಗಿ ಹೋಗಿವೆ.

ಜಿಯಾ ಸಂವಿಧಾನಕ್ಕೆ ಹಾಗೂ ನ್ಯಾಯಾಂಗಕ್ಕೆ ಇಸ್ಲಾಂ ತತ್ತ್ವಗಳನ್ನೂ, ಶರಿಯ ಕಾನೂನುಗಳನ್ನೂ ಆಳವಡಿಸಿದರು. ಸಾಮಾನ್ಯ ನಾಗರಿಕರು ವೈಯಕ್ತಿಕ ಬದುಕಿನಲ್ಲಿ ಇಸ್ಲಾಂ ತತ್ತ್ವಗಳನ್ನು ಕಡ್ಡಾಯವಾಗಿ ಆಳವಡಿಸಿಕೊಳ್ಳುವಂತೆ ಒತ್ತಾಯಿಸುವ ‘ಹುದೂತ್’ ಕಾನೂನುಗಳನ್ನು ಜಾರಿಗೊಳಿಸಿದರು. ಅವರು ರೂಪಿಸಿದ ದೈವನಿಂದೆ ಕಾನೂನುಗಳ ಪ್ರಕಾರ, ಮುಸ್ಲಿಮೇತರನೊಬ್ಬ ಅಲ್ಲಾನ ಬಗ್ಗೆ, ಪ್ರವಾದಿ ಮಹಮದ್​ರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಎಂದು ಮುಸ್ಲಿಮನೊಬ್ಬ ಆಪಾದಿಸಿದರೆ ಸಾಕು, ಆ ಬಡಪಾಯಿ ಮುಸ್ಲಿಮೇತರ ಜೈಲುಪಾಲು, ಮರಣದಂಡನೆಗೆ ಬಲಿ! ಈ ಅಮಾನವೀಯ ಕಾನೂನಿಗೆ ಇತ್ತೀಚಿನ ಬಲಿ ಆಸಿಯಾ ನೌರೀನ್ ಎಂಬ 48 ವರ್ಷದ ಕ್ರಿಶ್ಚಿಯನ್ ಮಹಿಳೆ. ಆಸಿಯಾ ಬೀಬೀ ಎಂದು ಇಂದು ಜಗತ್ತಿನಾದ್ಯಂತ ಗುರುತಿಸಲ್ಪಡುವ ಈ ಕೂಲಿಕೆಲಸಗಾರ್ತಿ 2009ರಲ್ಲಿ ತನ್ನ ಸಹಕೂಲಿಕಾರ್ತಿಯರಿಂದ ದೈವನಿಂದೆಯ ಆಪಾದನೆಗೊಳಗಾದರು.

ಮರುವರ್ಷವೇ ಪಂಜಾಬ್​ನ ಶೇಕುಪುರ ಸ್ಥಳೀಯ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸಿತು. ಅದನ್ನು ಲಾಹೋರ್ ಹೈಕೋರ್ಟ್ ಸಹ ಎತ್ತಿಹಿಡಿಯಿತು. ಆಕೆಗೆ ಗಲ್ಲುಶಿಕ್ಷೆಯ ಜಾರಿಗಾಗಿ ರಾಷ್ಟ್ರಾದ್ಯಂತ ರ್ಯಾಲಿಗಳು ನಡೆದವು, ಮೌಲಾನಾ ಯೂಸುಫ್ ಖುರೇಶಿ ಎಂಬ ಮೌಲ್ವಿಯೊಬ್ಬ ಆಸಿಯಾ ಬೀಬಿಯ ತಲೆಗಾಗಿ ಐದು ಲಕ್ಷ ರೂಪಾಯಿ ಇನಾಮು ಘೊಷಿಸಿದ. ಆಕೆಯ ಪರವಾಗಿ ಮಾತಾಡಿದ ಅಲ್ಪಸಂಖ್ಯಾತರ ವಿಷಯಗಳ ಮಂತ್ರಿ ಶಾಭಾಜ್ ಭಟ್ಟಿ ಮತ್ತು ಪಂಜಾಬ್​ನ ಗವರ್ನರ್ ಸಲ್ಮಾನ್ ತಸೀರ್ ಹತ್ಯೆಗೀಡಾದರು. ಆಸಿಯಾ ಬೀಬಿಯ ಮರಣದಂಡನೆಯನ್ನು ಪಾಕ್ ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್​ನಲ್ಲಿ ರದ್ದುಪಡಿಸಿದಾಗ ಅದನ್ನು ವಿರೋಧಿಸಿ, ಆಕೆಯ ತಲೆದಂಡಕ್ಕಾಗಿ ಒತ್ತಾಯಿಸಿ ಬಲೂಚಿಸ್ತಾನದ ಹೊರತಾಗಿ ಇತರೆಲ್ಲೆಡೆ ಜನರು ಬೀದಿಗಿಳಿದರು. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಬದುಕಿನ ದಾರುಣತೆಯ ಒಂದು ಜ್ವಲಂತ ಉದಾಹರಣೆ ಆಸಿಯಾ ಬೀಬಿ. ಈಗ ನಟ ನಾಸಿರುದ್ದೀನ್ ಶಾ ತಾನು ಭಾರತದ ಆಸಿಯಾ ಬೀಬಿ ಎಂಬ ಚಿತ್ರಣ ಕೊಡಲು ಪ್ರಯತ್ನಿಸುತ್ತಿರುವಂತಿದೆ. ಅವರ ಗೋಳಿನಲ್ಲಿ ನಿಜವಿದೆಯೇ?

ಭಾರತದಲ್ಲಿ ಮುಸ್ಲಿಮರಿಗೆ ಸಮಾನ ಹಕ್ಕುಗಳಿವೆ. ರಾಜಕೀಯ ಪಕ್ಷಗಳ ಬಗ್ಗೆ ಹೇಳುವುದಾದರೆ, ಆಡಳಿತಾರೂಢ ಬಿಜೆಪಿ ತನ್ನ ಅಭಿವೃದ್ಧಿಯೋಜನೆಗಳ ಫಲ ಎಲ್ಲ ಧರ್ವಿುೕಯರಿಗೂ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳುತ್ತಿದೆ. ಕಾಂಗ್ರೆಸ್, ಕಮ್ಯೂನಿಸ್ಟ್, ಸಮಾಜವಾದಿ, ತೃಣಮೂಲ ಕಾಂಗ್ರೆಸ್ ಪಕ್ಷಗಳಂತೂ ಮುಸ್ಲಿಮರ ಹಿತಕ್ಕೇ ಪ್ರಾಮುಖ್ಯತೆ ನೀಡುತ್ತ ಬಂದಿವೆ. ಕೆಲ ಮಾಧ್ಯಮಗಳು, ಬುದ್ಧಿಜೀವಿ-ವಿಚಾರವಾದಿಗಳು ಬಹಿರಂಗವಾಗಿ ಮುಸ್ಲಿಮರ ಪರ. ಇಷ್ಟಾಗಿಯೂ, ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ, ಇಲ್ಲಿರಲು ಬಯಸುವುದಿಲ್ಲ ಎನ್ನುವ ಮುಸ್ಲಿಮರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ.

ವಿಶ್ವವಿದ್ಯಾಲಯವೊಂದರ ಕುಲಪತಿ, ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ, ಇರಾನ್​ನಲ್ಲಿ ಭಾರತದ ರಾಯಭಾರಿ, ಕೊನೆಯಲ್ಲಿ ಉಪರಾಷ್ಟ್ರಪತಿಯಾದ ಹಮೀದ್ ಅನ್ಸಾರಿ ಈ ದೇಶದಲ್ಲಿ ಎಲ್ಲವನ್ನೂ ಪಡೆದುಕೊಂಡು ಅನುಭವಿಸಿ, ಅಧಿಕಾರದಿಂದ ನಿವೃತ್ತಿಯಾಗುವ ವೇಳೆಯಲ್ಲಿ ‘ದೇಶದಲ್ಲಿ ಮುಸ್ಲಿಮರ ವಿರುದ್ಧ ಅಸಹಿಷ್ಣುತೆ ಇದೆ’ ಎನ್ನುತ್ತಾರೆ! ನಾಸಿರುದ್ದೀನ್ ಶಾ ಬಾಲಿವುಡ್​ನಲ್ಲಿ ಮಾಜಿಯಾಗಿಹೋದ ಮೇಲೆ ಅಸಹಿಷ್ಣುತೆಯ ಕೂಗು ಎತ್ತುತ್ತಾರೆ! ರಾಜಧಾನಿಯಲ್ಲಿ ಮೂರೂವರೆ ಸಾವಿರ ಸಿಖ್ಖರ ನರಮೇಧವಾದಾಗ, ಕಾಶ್ಮೀರಿ ಪಂಡಿತರು ಸಹಸ್ರಗಟ್ಟಲೆಯಲ್ಲಿ ಕೊಲೆಗೀಡಾದಾಗ, ಲಕ್ಷಗಟ್ಟಲೆಯಲ್ಲಿ ಮನೆಮಠ ಕಳೆದುಕೊಂಡು ನಿರ್ಗತಿಕ ನಿರಾಶ್ರಿತರಾದಾಗ ಇವರಿಗೆ ಅಸಹಿಷ್ಣುತೆ ಕಾಣಲೇ ಇಲ್ಲ! ಇವರುಗಳ ಮನಸ್ಸುಗಳು ಹೇಗೆ ಕೆಲಸ ಮಾಡುತ್ತಿವೆ ನೋಡಿ!

ಸರಿ, ಇಲ್ಲಿ ಅಸಹಿಷ್ಣುತೆ ಇದೆ ಎಂದು ಅತ್ತು ಇಲ್ಲಿರಲಾಗದೆ ಪಾಕಿಸ್ತಾನಕ್ಕೆ ಹೋಗಬಯಸಿದರೆ ಅವರಿಗೆ ಅಲ್ಲಿ ಸ್ವಾಗತವಿದೆಯೇ? ಈ ಮತಿಗೇಡಿಗಳಿಗೆ ಕಳೆದ 7 ದಶಕಗಳಲ್ಲಿ ಪಾಕಿಸ್ತಾನದಲ್ಲೇನಾಗಿದೆ ಎನ್ನುವುದರ ಅರಿವೇ ಇಲ್ಲ. ಪಾಕಿಸ್ತಾನದ ನಿರ್ವಣದಲ್ಲಿ ಮತ್ತು ಅದರ ಪ್ರಾರಂಭಿಕ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರು ಈಗಿನ ಭಾರತದ ಪ್ರದೇಶಗಳಿಂದ ವಲಸೆಹೋದ ಮುಸ್ಲಿಮರು. ದುರಂತವೆಂದರೆ ಅವರನ್ನು ತಮ್ಮವರೆಂದು ಸ್ಥಳೀಯರು ಇಂದಿಗೂ ಒಪ್ಪಿಕೊಂಡಿಲ್ಲ. ಅವರನ್ನು ‘ಮೊಹಾಜಿರ್’ ಅಂದರೆ ನಿರಾಶ್ರಿತರು ಎಂದು ಕರೆಯಲಾಗುತ್ತದೆ. ಅವರ ವಿರುದ್ಧ ಹಿಂಸಾಚಾರ ನಿರಂತರವಾಗಿ ರಾಷ್ಟ್ರದ ಎಲ್ಲೆಡೆ ಸಾಗುತ್ತಿದೆ. ಭಾರತಕ್ಕೆ ಹಿಂತಿರುಗಿಹೋಗಿ ಎಂದು ಅವರಿಗೆ ಹೇಳಲಾಗುತ್ತದೆ. ಅವರ ಹಿತರಕ್ಷಣೆಗೆಂದೇ ಹುಟ್ಟಿಕೊಂಡ ರಾಜಕೀಯ ಪಕ್ಷ ‘ಮೊಹಾಜಿರ್ ಕ್ವಾಮಿ ಇತ್ತೆಹಾದ್’. ಅದರ ನಾಯಕ ಅಲ್ತಾಫ್ ಹುಸೇನ್, ವಿರೋಧಿಗಳಿಗೆ 1983ರಷ್ಟು ಹಿಂದೆಯೇ ನೀಡಿದ ತಿರುಗೇಟು ಇಂದಿಗೂ ಪ್ರಸ್ತುತ-‘‘ಪಾಕಿಸ್ತಾನವನ್ನು ನಿರ್ವಿುಸಿದವರು ನಾವು. ಭಾರತಕ್ಕೆ ಹಿಂತಿರುಗಿ ಎಂದು ನೀವು ನಮಗೆ ಹೇಳುತ್ತಿದ್ದೀರಿ. ಆಯಿತು, ಹೋಗುತ್ತೇವೆ. ಹೋಗುವಾಗ ಪಾಕಿಸ್ತಾನವನ್ನೂ ಜತೆಗೆ ಕೊಂಡೊಯ್ಯುತ್ತೇವೆ’.

ಇಲ್ಲಿ ಅಸಹಿಷ್ಣುತೆ ಇದೆಯೆಂದು ಬೊಬ್ಬೆ ಹಾಕುವವರ ಕಣ್ಣುತೆರೆಸಲು ಈ ಮಾತುಗಳು ಸಾಕು. ಆಗಲೂ ಅರ್ಥವಾಗದಿದ್ದರೆ, ಅವರನ್ನು ಒಂದಷ್ಟು ದಿನ ಪಾಕಿಸ್ತಾನಕ್ಕೆ ಕಳುಹಿಸಿ ಪಾಕ್ ಹಿಂದೂಗಳ ಸ್ಥಿತಿ ಇರಲಿ, ಇಲ್ಲಿಂದ ಹೋದ ಮುಸ್ಲಿಮರ ಗತಿ ಏನಾಗಿದೆಯೆಂದು ನೋಡಲು ಅವಕಾಶ ಕಲ್ಪಿಸುವುದು ಒಳ್ಳೆಯದು.

2002ರ ಜನವರಿಯಲ್ಲಿರಬೇಕು, ಪತ್ರಕರ್ತ ಶೇಖರ್ ಗುಪ್ತಾ ತಮ್ಮ ಸಂಪಾದಕತ್ವದ ‘ಇಂಡಿಯನ್ ಎಕ್ಸ್​ಪ್ರೆಸ್’ ಪತ್ರಿಕೆಯಲ್ಲಿನ ‘ನ್ಯಾಷನಲ್ ಇಂಟರೆಸ್ಟ್’ ಅಂಕಣದಲ್ಲಿ ಬರೆದಿದ್ದ ಈ ಮಾತು ಈಗ ಬೇಡಬೇಡವೆಂದರೂ ನೆನಪಾಗುತ್ತಿದೆ. ಗುಪ್ತಾ ಬರೆದಿದ್ದದ್ದು ಇದು-‘‘ಹಿಂದೂಗಳ ಜತೆ ಇರಲಾಗದು ಎಂದು ಪಾಕಿಸ್ತಾನವನ್ನು ಪಡೆದುಕೊಂಡ ಮೇಲೆ, ಅದರ ರ್ತಾಕ ಮುಂದುವರಿಕೆಯಾಗಿ ಹೇಳಬಹುದಾದದ್ದು ‘ನನ್ನ ಭಾರತದಲ್ಲಿ ನಿನಗೆ ಸ್ಥಳವಿಲ್ಲ’ ಎಂದು’. ಇದೇ ಮಾತನ್ನು ಡಾ. ಬಿ.ಆರ್. ಅಂಬೇಡ್ಕರ್ 1947ರಲ್ಲೇ ಸುಸಂಸ್ಕೃತ ಭಾಷೆಯಲ್ಲಿ ಹೇಳಿದ್ದರು. ಧರ್ಮದ ಆಧಾರದ ಮೇಲೆ ದೇಶವಿಭಜನೆಯಾಗುವುದಾದರೆ, ಧರ್ಮಕ್ಕನುಗುಣವಾಗಿ ಎರಡೂ ದೇಶಗಳ ನಡುವೆ ಜನತೆಯೂ ವಿನಿಮಯವಾಗುವುದು ಸೂಕ್ತ ಎಂದು ಸಂವಿಧಾನ ಶಿಲ್ಪಿಯ ಅಭಿಮತವಾಗಿತ್ತು. ಅವರ ಮಾತಿನಂತೇ ನಡೆದಿದ್ದರೆ ಇಂದು ನಾಸಿರುದ್ದೀನ್ ಶಾ ತಮ್ಮ ದೇಶದಲ್ಲಿ ಅಸಹಿಷ್ಣುತೆ ಅನುಭವಿಸದೆ, ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಪಡದೇ ಸುಖವಾಗಿರುತ್ತಿದ್ದರು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

2 Replies to “ಭಾರತದ ಆಸಿಯಾ ಬೀಬಿ ಆಗಬಯಸಿದ ನಾಸಿರುದ್ದೀನ್ ಶಾ”

Comments are closed.