Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ವಿದೇಶೀ ದುಷ್ಟಚತುಷ್ಟಯರ ಸ್ವದೇಶೀ ಕೈಗಳು

Wednesday, 13.06.2018, 3:05 AM       No Comments

ಶೀತಲ ಸಮರ ಅಂತ್ಯವಾದೊಡನೆ ಜಾಗತಿಕ ರಾಜಕೀಯ-ಸಾಮಾಜಿಕ ವಾತಾವರಣವೂ ಬದಲಾಯಿತು. ಆದರೆ ಇದರಿಂದ ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಿಬಿಟ್ಟರೆ ತಮ್ಮ ಅಸ್ತಿತ್ವಕ್ಕೇ ಅಪಾಯ ಎಂದೆಣೆಸಿದ ಪಶ್ಚಿಮದ ಶಕ್ತಿಗಳು ತಮ್ಮ ಉಳಿವಿಗಾಗಿ ಹೊಸ ಹೊಸ ಕಾರ್ಯಯೋಜನೆಗಳನ್ನು ಜಾರಿಗೊಳಿಸಿದವು. ಭಾರತದಲ್ಲೂ ಅದರ ಪರಿಣಾಮ ಕಂಡುಬಂತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಯ ಸಂಚಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ, ಮಾವೋವಾದಿ ಎಂದು ಹೇಳಲಾಗುತ್ತಿರುವ, ರೋನಾ ವಿಲ್ಸನ್ ನನ್ನ ಹಳೆಯ ವಿದ್ಯಾರ್ಥಿ. ನಡೆನುಡಿಯಲ್ಲಿ ವಿನಯವಂತನಾಗಿದ್ದು ನೀಟಾಗಿ ಉಡುಪು ಧರಿಸುತ್ತಿದ್ದ ವಿಲ್ಸನ್ ಮುಕ್ತವಾಗಿ ನಗಬಲ್ಲವರಾಗಿದ್ದರು. ಅದಕ್ಕೊಂದು ಉದಾಹರಣೆ ನನಗೆ ನೆನಪಾಗುತ್ತಿದೆ. ಚಳಿಗಾಲದ ರಜೆಯ ಹಿಂದಿನ ಸಂಜೆ ನಾವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಒಂದು ಗೆಟ್​ಟುಗೆದರ್ ಅದು, ನೆಪಕ್ಕೆ ಕ್ರಿಸ್​ವುಸ್ ಆಚರಣೆ ಸಹಾ. ಅಲ್ಲಿ ನಾನು ಕ್ರೈಸ್ತ ಸಂನ್ಯಾಸಿನಿಯರ ಬಗ್ಗೆ ಒಂದು ಜೋಕ್ ಹೇಳಿದೆ. ಎಲ್ಲರೂ ನಕ್ಕರು. ವಿಲ್ಸನ್ ಜೋರಾಗಿಯೇ ನಕ್ಕರು. ಎಷ್ಟು ಜೋರಾಗಿ ಅಂದರೆ ನಗುವ ಭರದಲ್ಲಿ ಕೈಯಲ್ಲಿದ್ದ ಕಪ್ ಅಲುಗಿ ಬಿಸಿ ಚಹಾ ಅವರ ತೊಡೆಗಳ ಮೇಲೆ ಚೆಲ್ಲಿಹೋಯಿತು. ತಣ್ಣೀರು ಹಾಕಿಕೊಳ್ಳಲೆಂದು ಆತ ಬಾತ್​ರೂಮ್ತ್ತ ಓಡಿದ್ದು ನನಗಿನ್ನೂ ನೆನಪಿದೆ.

ಒಬ್ಬ ವಿದ್ಯಾರ್ಥಿಯಾಗಿ ವಿಲ್ಸನ್ ಬುದ್ಧಿವಂತ. ಎರಡು ವರ್ಷಗಳಲ್ಲಿ ಅವರ ಬ್ಯಾಚ್​ಗೆ ನಾನು ಬೋಧಿಸಿದ ನಾಲ್ಕು ಪಠ್ಯವಿಷಯಗಳಲ್ಲಿ ಆತ ಹೆಚ್ಚು ಆಸಕ್ತಿ ತೋರಿದ್ದು ರಾಜಕೀಯ ಚಿಂತನೆ (Political Thought) ಬಗ್ಗೆ. ವಿಲ್ಸನ್ ಎಡಪಂಥೀಯ ವಿಚಾರಧಾರೆಯತ್ತ ವಾಲಿದ್ದವರು ಎಂದು ನನಗೆ ಸ್ಪಷ್ಟವಾಗಿಯೇ ತಿಳಿದುಹೋಗಿತ್ತು. ಅಂತಹ ಮನೋಭಾವದ ಹಲವು ವಿದ್ಯಾರ್ಥಿಗಳು ನನಗೆದುರಾಗಿದ್ದಾರೆ, ಆದರೆ ವಿಲ್ಸನ್ ಬಹುತೇಕ ಅವರೆಲ್ಲರಿಗಿಂತಲೂ ಭಿನ್ನವಾಗಿದ್ದರು. ನನ್ನ ಜತೆ ಅಭಿಪ್ರಾಯಭೇದವನ್ನು ಆತ ವ್ಯಕ್ತಪಡಿಸುತ್ತಿದ್ದುದು ವಿನಯದಿಂದ ಹಾಗೂ ಸುಸಂಸ್ಕೃತ ವಿಧಾನದಲ್ಲಿ. ಚರ್ಚೆಯಲ್ಲಿ ಎಂದೂ ವಿತಂಡವಾದ, ಅಡ್ಡಮಾತುಗಳಿರುತ್ತಿರಲಿಲ್ಲ. ಇದು ಕಾಲು ಶತಮಾನದ ಹಿಂದಿನ ಕಥೆ.

ಇಂದು ಅದೇ ವಿಲ್ಸನ್, ಮಹಾರಾಷ್ಟ್ರ ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲಾ ಪವಾರ್ ಹೇಳುವ ಪ್ರಕಾರ, ದೇಶದ ಪ್ರಧಾನಮಮಂತ್ರಿಯ ಹತ್ಯೆಯ ಅಗತ್ಯವನ್ನು ಮನಗಾಣಿಸಿ ‘ಕಾಮ್ರೇಡ್ ಪ್ರಕಾಶ್’ ಎಂಬ ವ್ಯಕ್ತಿಗೆ ಪತ್ರ ಬರೆಯುತ್ತಾರೆ! ಮೋದಿ-ರಾಜ್ ಅನ್ನು ಅಂತ್ಯಗೊಳಿಸಲು ಪಕ್ಷವು ನಿಖರ ಹೆಜ್ಜೆಗಳನ್ನಿಡಬೇಕು ಎಂದು ಹೇಳುವ ಅವರು ರಾಜೀವ್ ಗಾಂಧಿ ಮಾದರಿಯ ಹತ್ಯಾ ಯೋಜನೆಯನ್ನು ಅನುಸರಿಸಬಯಸುತ್ತಾರೆ! ‘ನಮ್ಮ ಕೃತ್ಯ ಆತ್ಮಹತ್ಯೀಯವೆನಿಸಬಹುದು, ನಾವು ವಿಫಲವಾಗುವ ಸಾಧ್ಯತೆ ಬಹಳಷ್ಟಿದೆ… ಆದರೆ ಇಂಥದೊಂದು ಪ್ರಯತ್ನದ ಬಗ್ಗೆ ಪಕ್ಷ ಗಮನ ಹರಿಸುವ ಅಗತ್ಯವಿದೆ’ ಎಂದು ವ್ಯಾವಹಾರಿಕ ಬುದ್ಧಿವಂತಿಕೆ ಪ್ರದರ್ಶಿಸುತ್ತಾರೆ.

ದೆಹಲಿ ಪೊಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರ ಪೊಲೀಸರು ರೋನಾ ವಿಲ್ಸನ್​ರನ್ನು ಬಂಧಿಸಿದ್ದು ರಾಷ್ಟ್ರದ ರಾಜಧಾನಿಯಲ್ಲೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ದಕ್ಷಿಣ ದೆಹಲಿಯ ಪ್ರತಿಷ್ಠಿತ ಬಡಾವಣೆ ಮುನಿರ್ಕಾ ಡಿಡಿಎ ಫ್ಲಾಟ್ಸ್ ನಲ್ಲಿ. ಸುರಕ್ಷಾ ಪಡೆಗಳು ಮತ್ತು ಮಾಧ್ಯಮಗಳು ಹೇಳುತ್ತಿರುವ ಪ್ರಕಾರ ವಿಲ್ಸನ್ ಒಬ್ಬ ನಗರ ಪ್ರದೇಶದ ಮಾವೋವಾದಿ (Urban Maoist). ಅಂದರೆ ಒಂದು ಕಾಲದಲ್ಲಿ, ಬಹುಪಾಲು ಜನರು ತಿಳಿದಿರುವಂತೆ ಈಗಲೂ, ಒರಟು ಬಟ್ಟೆ ಧರಿಸಿ, ಬಂದೂಕು ಹಿಡಿದು ಕಾಡುಗಳಲ್ಲಿ ಅಜ್ಞಾತರಾಗಿ ಅಲೆದಾಡುತ್ತಿದ್ದ ನಕ್ಸಲೀಯರು ಇಂದು ರಾಷ್ಟ್ರದ ರಾಜಧಾನಿಯಲ್ಲೇ ಸುಸಜ್ಜಿತ ವಸತಿಗಳಲ್ಲೇ, ಎಲ್ಲ ಆಧುನಿಕ ಸೌಲಭ್ಯಗಳನ್ನೂ ಹೊಂದಿ ಬದುಕುತ್ತಿದ್ದಾರೆ. ಹಿಂದೆ ಹಳ್ಳಿಗಳ ಜಮೀನುದಾರರು, ಬಡ್ಡಿ ವ್ಯವಹಾರ ನಡೆಸುವವರು, ಒಟ್ಟಾರೆ ಶೋಷಕರನ್ನು ಮತ್ತು ಅವರಿಗೆ ರಕ್ಷಣೆ ನೀಡುತ್ತಿದ್ದ ಪೊಲೀಸರನ್ನು ಕೊಲ್ಲುತ್ತಿದ್ದ ಮಾವೋವಾದಿಗಳು ಇಂದು ದೇಶದ ಪ್ರಧಾನಮಂತ್ರಿಯನ್ನೇ ಹತ್ಯೆಗೈಯಲು ಸಂಚು ರೂಪಿಸುತ್ತಿದ್ದಾರೆ. ಈ ಘಾತಕ ರೂಪಾಂತರದ ಪರಿಯನ್ನು ಪರಿಚಯಿಸುವುದು ಎರಡು ಭಾಗಗಳ ಈ ಲೇಖನದ ಉದ್ದೇಶ.

ಶೀತಲ ಸಮರ ಅಂತ್ಯಗೊಂಡ ನಂತರದ ಈ ಮೂರು ದಶಕಗಳಲ್ಲಿ ರಾಜಕೀಯ ಭಯೋತ್ಪಾದನೆ (Political Terrorism)  ಹಾಗೂ ಎಡಪಂಥೀಯ ಉಗ್ರವಾದ (Leftist Extremism) ತಾತ್ವಿಕವಾಗಿ ಹಾಗೂ ಪ್ರಾಯೋಗಿಕವಾಗಿ ಬಹಳಷ್ಟು ಬದಲಾಗಿಹೋಗಿವೆ. ಶೀತಲ ಸಮರದ ದಿನಗಳಲ್ಲಿ ರಾಜಕೀಯ ಭಯೋತ್ಪಾದನೆಯನ್ನು ಎಸಗುತ್ತಿದ್ದುದು ಸರ್ಕಾರೀ ಗುಪ್ತಚರ ಸಂಸ್ಥೆಗಳು ಹಾಗೂ ಅವುಗಳ ನಿಯಂತ್ರಣ- ಪೋಷಣೆಯಲ್ಲಿದ್ದ ಸಂಘಟನೆಗಳು. ಇವುಗಳ ಗುರಿ ಮುಖ್ಯವಾಗಿ ರಾಷ್ಟ್ರನಾಯಕರು. ತನ್ನ ಹಿತಾಸಕ್ತಿಗಳಿಗೆ ಮಾರಕವೆನಿಸುವ, ತನ್ನ ವಿರೋಧಿ ಸೋವಿಯೆತ್ ಯೂನಿಯನ್​ಗೆ ಅನುಕೂಲಕರವೆನಿಸುವ ನೀತಿಗಳನ್ನು ಅನುಸರಿಸುವ ತೃತೀಯ ಜಗತ್ತಿನ ನಾಯಕರನ್ನು ಸತ್ತೆಯಿಂದ ಕೆಳಗಿಳಿಸುವುದು ಅಥವಾ ಹತ್ಯೆಗೈಯುವುದು ಅಮೆರಿಕಾದ ಸಿಐಎ ರೂಢಿಸಿಕೊಂಡಿದ್ದ ಕಾರ್ಯಯೋಜನೆ. ಇರಾನ್​ನ ಮೊಹಮದ್ ಮೊಸಾದೆಘ್, ಇಂಡೋನೇಶಿಯಾದ ಸುಕಾರ್ನೇ, ಕಾಂಗೋದ ಪ್ಯಾಟ್ರಿಸ್ ಲುಮುಂಬಾ, ಚಿಲಿಯ ಸಾಲ್ವದೋರ್ ಅಲೆಂದೇ ಸಿಐಎ ತಂತ್ರಗಳಿಗೆ ಬಲಿಯಾದ ಕೆಲ ಪ್ರಮುಖರು. ಸೋವಿಯೆತ್ ಯೂನಿಯನ್​ನ ಕೆಜಿಬಿ ನೇರ ಕಾರ್ಯಾಚರಣೆ ನಡೆಸದೇ ತನ್ನ ಬಹುತೇಕ ಕೆಲಸಗಳನ್ನು ತಾನು ಸಾಕಿದ್ದ ಸಂಘಟನೆಗಳಿಂದ ಸಾಧಿಸಿಕೊಳ್ಳುತ್ತಿತ್ತು. ಪ್ಯಾಲೆಸ್ತೈನ್ ಲಿಬರೇಷನ್ ಆರ್ಗನೈಝೇಶನ್, ಯುಗೊಸ್ಲಾವಿಯಾ, ಜಪಾನ್, ಪೆರು ಮತ್ತು ಆಫ್ರಿಕಾದ ಉದ್ದಗಲಕ್ಕೂ ಕಾರ್ಯನಿರತವಾಗಿದ್ದ ಎಡಪಂಥೀಯ ಹಾಗೂ ವಿಭಜನಾ ಸಂಘಟನೆಗಳು ಜಗತ್ತಿನಾದ್ಯಂತ ಮಾಸ್ಕೋ ಪರವಾಗಿ ಭಯೋತ್ಪಾದಕ ಕೃತ್ಯಗಳನ್ನೆಸಗುತ್ತಿದ್ದವು. ಆ ದಿನಗಳಲ್ಲಿ ಎಲ್ಲೆಡೆ ವ್ಯಾಪಕವಾಗಿದ್ದ ಅರಾಜಕತೆ ಅವುಗಳ ಕುಕೃತ್ಯಗಳಿಗೆ ಹೇರಳ ಅವಕಾಶಗಳನ್ನೊದಗಿಸುತ್ತಿತ್ತು. ಕೆಜಿಬಿ ನೇರವಾಗಿ ನಡೆಸುತ್ತಿದ್ದ ಕೃತ್ಯವೆಂದರೆ ನಿಯಮಿತವಾಗಿ ಹೇರಳ ಲಂಚ ನೀಡುವ ಮೂಲಕ ಇಡೀಇಡೀ ರಾಜಕೀಯ ಪಕ್ಷಗಳನ್ನೇ, ರಾಜಕಾರಣಿಗಳನ್ನೇ ಕೊಂಡುಕೊಳ್ಳುವುದು ಹಾಗೂ ಕುಪ್ರಚಾರ ನಡೆಸುವುದು. ಪತ್ರಕರ್ತರಿಗೆ, ಪ್ರಾಧ್ಯಾಪಕರಿಗೆ ಹೇರಳ ಹಣ ತೆತ್ತು ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಪತ್ರಿಕೆಗಳಲ್ಲಿ ಸುಳ್ಳು ಲೇಖನಗಳನ್ನು ಬರೆಸಿ ಪ್ರಕಟಿಸುವುದು ಕೆಜಿಬಿಯ ಚಾಳಿಯಾಗಿತ್ತು. ಇತ್ತೀಚಿಗೆ ಬಹಿರಂಗಗೊಂಡಿರುವ ಕೆಜಿಬಿಯ ರಹಸ್ಯ ದಸ್ತಾವೇಜೊಂದರ ಪ್ರಕಾರ 1980ರ ದಶಕದ ಮಧ್ಯದಲ್ಲಿ, ಅಂದರೆ ಆರ್ಥಿಕ ಸಂಕಷ್ಟಗಳಿಂದಾಗಿ ಸೋವಿಯೆತ್ ಯೂನಿಯನ್ ಕುಸಿದುಹೋಗುತ್ತಿದೆ ಎನ್ನುವಾಗ ಒಂದೇ ವರ್ಷದಲ್ಲಿ ಕೆಜಿಬಿ ಹಣ ತೆತ್ತು ಬರೆಸಿದ ಸುಳ್ಳು ಲೇಖನಗಳ ಸಂಖ್ಯೆ ಹದಿನಾರು ಸಾವಿರ! ಇನ್ನು ಸೋವಿಯೆತ್ ಯೂನಿಯನ್ ಉಚ್ಪ್ರಾಯದಲ್ಲಿದ್ದಾಗ, ಶೀತಲ ಸಮರ ಉಗ್ರವಾಗಿದ್ದಾಗ ಸುಳ್ಳುಲೇಖನಗಳ ಪ್ರಮಾಣ ಎಷ್ಟಿದ್ದಿರಬಹುದು!

1990ರ ಸುಮಾರಿಗೆ ಶೀತಲ ಸಮರ ಅಂತ್ಯಗೊಂಡು ಸೋವಿಯೆತ್ ಯೂನಿಯನ್ ಮತ್ತು ಪೂರ್ವ ಯೂರೋಪಿನಲ್ಲಿನ ಕಮ್ಯೂನಿಸ್ಟ್ ಸತ್ತೆಗಳು ಒಂದೊಂದಾಗಿ ಉರುಳತೊಡಗಿದಾಗ ಅದುವರೆಗೂ ಕೆಜಿಬಿಯ ಪೇ ರೋಲ್​ನಲ್ಲಿದ್ದ ಸಹಸ್ರಾರು ರಾಜಕಾರಣಿಗಳು, ಪತ್ರಕರ್ತರು, ಪ್ರಾಧ್ಯಾಪಕರು ಹಾಗೂ ವಿಚಾರವಾದಿಗಳಿಗೆ ಹಣ ಸಂದಾಯವಾಗುವುದು ಏಕಾಏಕಿ ನಿಂತುಹೋಯಿತು. ಅದು ತಾತ್ಕಾಲಿಕ ಅಷ್ಟೇ. ಇವರ ಉಪಯುಕ್ತತೆಯನ್ನು ಕೆಲ ಜಾಗತಿಕ ಶಕ್ತಿಗಳು ಗುರುತಿಸಿ ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳಲು ಹಂಚಿಕೆ ಹಾಕಿದವು. ಯಾಕೆಂದರೆ ಅದು ಆ ಶಕ್ತಿಗಳ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.

ಶೀತಲ ಸಮರದ ಅಂತ್ಯವನ್ನು ಇತಿಹಾಸಕಾರ ಫ್ರಾನ್ಸಿಲ್ ಫುಕಯಾಮಾ ವರ್ಣಿಸಿದ್ದು ಇತಿಹಾಸದ ಅಂತ್ಯ (End of History) ಅಂತ. ಫುಕಯಾಮಾರ ಸಿದ್ಧಾಂತವನ್ನು ಅತೀ ಸರಳವಾಗಿ ಹೀಗೆ ಸಂಕ್ಷೇಪಿಸಬಹುದು- ‘ಸರ್ವಾಧಿಕಾರಿ ಮತ್ತು ಸಮತಾವಾದಿ ಮೌಲ್ಯಗಳ ವಿರುದ್ಧ ಪ್ರಜಾಪ್ರಭುತ್ವವಾದಿ ಮತ್ತು ಬಂಡವಾಳಶಾಹಿ ಮೌಲ್ಯಗಳು ಗಳಿಸಿದ ಜಯದಿಂದಾಗಿ ಜಗತ್ತು ಘರ್ಷಣೆಗಳಿಂದ ಮುಕ್ತವಾಗುತ್ತದೆ, ಅಂದರೆ ಇನ್ನು ಮುಂದೆ ಇತಿಹಾಸದಲ್ಲಿ ದಾಖಲಿಸಲು ಯೋಗ್ಯವೆನಿಸುವಂತಹ ಬೆಳವಣಿಗೆಗಳು ಘಟಿಸುವುದಿಲ್ಲ.’ 1989ರಲ್ಲಿ ಪ್ರತಿಷ್ಠಿತ National Interest ಜರ್ನಲ್​ನಲ್ಲಿ ಫುಕಯಾಮಾರ ಈ ಆಶಾವಾದ ಪ್ರಕಟವಾದದ್ದು ವಿಶ್ವಾದ್ಯಂತ ಅದೆಷ್ಟೋ ಮಂದಿಗೆ ಸಂತಸವನ್ನೂ, ಭವಿಷ್ಯದ ಬಗ್ಗೆ ನೆಮ್ಮದಿಯನ್ನೂ ಉಂಟುಮಾಡಿದರೆ ಒಂದಷ್ಟು ಜನ ತಮ್ಮ ಬದುಕೇ ಅಂತ್ಯವಾದಂತೆ ಕಂಗೆಟ್ಟರು.

ಅಲ್ಲಿಯವರೆಗೆ ಅಂತಾರಾಷ್ಟ್ರೀಯ ಅರಾಜಕತೆಯನ್ನೂ, ಘರ್ಷಣೆಗಳನ್ನೂ, ಯುದ್ಧಗಳನ್ನೂ, ಯುದ್ಧಗಳ ಭೀತಿಯನ್ನೂ ದಿನನಿತ್ಯವೂ ರೋಚಕವಾಗಿ ಬಣ್ಣಿಸಿಯೇ ಜಾಗತಿಕ ಮಾಧ್ಯಮಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತಿದ್ದುದು. ಹಾಗೆಯೇ, ಮತಪ್ರಚಾರಕ್ಕೆ ವಿಪುಲ ಅವಕಾಶ ಒದಗಿಸುತ್ತಿದ್ದ ತೃತೀಯ ಜಗತ್ತಿನ ಅರಾಜಕತೆ ಹಾಗೂ ಸಾಮಾಜಿಕ ಅಶಾಂತಿಯೇ ಧಾರ್ವಿುಕ ಸಂಸ್ಥೆಗಳನ್ನು ಜೀವದಿಂದಿರಿಸಿದ್ದು. ಹಾಗೆಯೇ, ಪಶ್ಚಿಮ ಯೂರೋಪ್ ಮತ್ತು ಅಮೆರಿಕಾದ ಹಲವಾರು ವೈಚಾರಿಕ ಸಂಘಟನೆಗಳು ಸಮಾನತೆ ಮತ್ತು ಮಾನವ ಹಕ್ಕುಗಳ ಹೆಸರಿನಲ್ಲಿ ಒಂದು ವರ್ಗವನ್ನು ಇನ್ನೊಂದು ವರ್ಗದ ವಿರುದ್ಧ ಸದಾ ಎತ್ತಿಕಟ್ಟುತ್ತಾ ತೃತೀಯ ಜಗತ್ತಿನ ಸಮಾಜಗಳಲ್ಲಿನ ಬಿರುಕುಗಳನ್ನು ಮತ್ತಷ್ಟು ಅಗಲಗೊಳಿಸುತ್ತಾ ಆ ಕಾರಣದಿಂದಲೇ ಶ್ರೀಮಂತ ಸರ್ಕಾರಗಳು, ವಿಶ್ವಸಂಸ್ಥೆ ಹಾಗೂ ಖಾಸಗಿ ದಾನಿಗಳಿಂದ ಹೇರಳ ದೇಣಿಗೆ ಪಡೆಯುತ್ತಾ ಅಸ್ತಿತ್ವ ಕಾಪಾಡಿಕೊಂಡಿದ್ದವು. ಈ ಎಲ್ಲಾ ಘರ್ಷಣೆ, ಅಶಾಂತಿ, ಸಮಾಜೋ-ಧಾರ್ವಿುಕ ಪಲ್ಲಟಗಳನ್ನು ದಿನನಿತ್ಯವೂ ವ್ಯಾಖ್ಯಾನಿಸುತ್ತಾ, ಹೊಸ ಹೊಸ ಸಿದ್ಧಾಂತಗಳನ್ನು ಹೊಸೆಯುತ್ತಾ ‘ಪ್ರಗತಿಪರ’ ಬುದ್ಧಿಜೀವಿ ವರ್ಗ ಹೇರಳ ಹಣವನ್ನೂ, ಪ್ರಶಸ್ತಿಪುರಸ್ಕಾರಗಳನ್ನೂ, ಸ್ಥಾನಮಾನಗಳನ್ನೂ ಗಳಿಸಿಕೊಂಡು ತಂತಮ್ಮ ಸಮಾಜಗಳಲ್ಲಿ Elite ವರ್ಗವಾಗಿ ಮೆರೆಯುತ್ತಿತ್ತು. ಇನ್ನು ಫುಕಯಾಮಾ ಪ್ರಕಾರ ಪ್ರಪಂಚ ಘರ್ಷಣೆರಹಿತವಾದರೆ, ಪ್ರಜಾಪ್ರಭುತ್ವ ಸಾರ್ವತ್ರಿಕವಾದರೆ ಮೇಲೆ ತಿಳಿಸಿದಂಥ ಮಾಧ್ಯಮಗಳು ಮತ್ತು ಧಾರ್ವಿುಕ ಸಂಸ್ಥೆಗಳ ಅಂತ್ಯವಾದಂತೇ ಮತ್ತು ವೈಚಾರಿಕ ಸಂಘಟನೆಗಳು ಹಾಗೂ ಬುದ್ಧಿಜೀವಿ ವರ್ಗ ಅಪ್ರಸ್ತುತವಾದಂತೇ. ಆದರೆ ಸೋಲೊಪ್ಪಿಕೊಳ್ಳಲು ಈ ದುಷ್ಟಚತುಷ್ಟಯರು ತಯಾರಾಗಿರಲಿಲ್ಲ. ತಂತಮ್ಮ ಭವಿಷ್ಯಕ್ಕಾಗಿ ಕರಾಳ ಯೋಜನೆಗಳನ್ನು ತರಾತುರಿಯಲ್ಲಿ ರೂಪಿಸಿದವು.

ಪರಿಣಾಮವಾಗಿ…

ಇಸ್ಲಾಮಿಕ್ ಮೂಲಭೂತವಾದ ಎದ್ದುನಿಂತಿತು. ಶ್ವೇತ ಉತ್ತರ ಅಮೆರಿಕಾ, ಪಶ್ಚಿಮ ಯೂರೋಪ್, ಆಸ್ಟ್ರೇಲಿಯಾ ಹಾಗೂ ಧನಿಕ ಅರೇಬಿಯನ್ ಪರ್ಯಾಯದ್ವೀಪದ ಹೊರತಾಗಿ ಉಳಿದೆಲ್ಲೆಡೆ ವಿಭಜನಾಶಕ್ತಿಗಳು ವಿಜೃಂಭಿಸತೊಡಗಿ ಕೆಲ ದೇಶಗಳು ರಕ್ತಸಿಕ್ತವಾಗಿ ಛಿದ್ರಗೊಂಡವು, ಮತ್ತೆ ಕೆಲವು ನಿರಂತರ ಅಂತರ್ಯುದ್ಧ-ಅಶಾಂತಿ-ಅರಾಜಕತೆಯಲ್ಲಿ ಬೇಯತೊಡಗಿದವು…

ಉತ್ತರ ಅಮೆರಿಕಾ, ಪಶ್ಚಿಮ ಯೂರೋಪ್, ಆಸ್ಟ್ರೇಲಿಯಾ ಹಾಗೂ ಅರೇಬಿಯನ್ ಪರ್ಯಾಯದ್ವೀಪ ಶಾಂತ ಹಾಗೂ ಅರಾಜಕತಾರಹಿತ ಎಂದು ಹೇಳಿದೆನಲ್ಲವೇ? ಅದಕ್ಕೆ ಕಾರಣ ಇಷ್ಟೆ- ಈ ನಾಲ್ಕೂ ಪ್ರದೇಶಗಳು ಮಾಧ್ಯಮಗಳ, ಧಾರ್ವಿುಕ ಸಂಸ್ಥೆಗಳ, ವೈಚಾರಿಕ ಸಂಘಟನೆಗಳ ನೆಲೆ ಮತ್ತು ಹಣದ ಪೂರೈಕೆದಾರರು! ದುರದೃಷ್ಟವಶಾತ್ ನಮ್ಮ ಭಾರತ ಆ ನಾಲ್ಕು ಪ್ರದೇಶಗಳಲ್ಲೊಂದಕ್ಕಾದರೂ ಸೇರಿರದ ಪರಿಣಾಮವಾಗಿ ದುಷ್ಟ ಚತುಷ್ಟಯರ ಕರಾಳ ಯೋಜನೆಗಳಿಗೆ ರಂಗಸ್ಥಳವಾಗುವ ಸಂಕಷ್ಟಕ್ಕೀಡಾಯಿತು.

ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕಿ್ಸ್-ಲೆನಿನಿಸ್ಟ್) ಎಂಬ ಉಗ್ರ ಎಡಪಂಥೀಯ ನಕ್ಸಲೈಟ್ಸ್ ಅಥವಾ ಮಾವೋವಾದಿ ಸಂಘಟನೆ 1960ರ ದಶಕದ ಉತ್ತರಾರ್ಧದಲ್ಲಿ ಅಸ್ತಿತ್ವಕ್ಕೆ ಬಂದಾಗ ಅದರ ಮೇಲೆ ಚೀನೀ ಹಿಡಿತ ಹಾಗೂ ಪ್ರಭಾವ ಇದ್ದದ್ದು ನಿಜ. ಹಾಗೆಯೇ ಈ ಸಂಘಟನೆ ಚೀನೀ ನೇತಾರ ಮಾವೋ ಝೆ ಡಾಂಗ್ ರೂಪಿಸಿ ಯಶಸ್ವಿಯಾಗಿ ಪ್ರಯೋಗಿಸಿದ ರೈತಾಪಿ ವರ್ಗದ ಸಶಸ್ತ್ರ ಸಂಘರ್ಷದ ಮೂಲಕ ಭಾರತದಲ್ಲಿ ಸಮಾಜೋ-ರಾಜಕೀಯ-ಆರ್ಥಿಕ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿದ್ದದ್ದೂ ನಿಜ. ಆದರೆ ಶೀತಲ ಸಮರದ ಅಂತ್ಯದೊಂದಿಗೆ ಚೀನಾದ ಉದ್ದೇಶಗಳು ಬದಲಾದವು. ಕುಸಿದ ಸೋವಿಯೆತ್ ಯೂನಿಯನ್ ಸ್ಥಾನದಲ್ಲಿ ತಾನು ಸೂಪರ್ ಪವರ್ ಆಗಬೇಕೆಂದು ಬಯಸಿದ ಆ ದೇಶ ವಿಶ್ವರಂಗದಲ್ಲಿ ತನ್ನ ತಾತ್ವಿಕ ಪ್ರಭಾವದ ಹರಡುವಿಕೆಯನ್ನು ಬದಿಗಿಟ್ಟು ಆರ್ಥಿಕ ಪ್ರಗತಿ ಹಾಗೂ ಸೇನಾಶಕ್ತಿಯ ವೃದ್ಧಿಗೆ, ಆ ಮೂಲಕ ಜಾಗತಿಕ ಮಟ್ಟದಲ್ಲಿ ರಾಜಕೀಯ ಪ್ರಭಾವದ ವೃದ್ಧಿಗೆ ಆದ್ಯತೆ ನೀಡಿತು. ಪರಿಣಾಮವಾಗಿ, ನಮ್ಮಲ್ಲಿನ ಮಾವೋವಾದಿಗಳಿಗೆ ಚೀನಾದಿಂದ ಹರಿದು ಬರುತ್ತಿದ್ದ ಧನಪ್ರವಾಹ ಕುಗ್ಗಿ, ಅವರ ಚಟುವಟಿಕೆಗಳೂ ಕುಗ್ಗಿದವು. ನಾಗರಿಕ ಬದುಕಿಗೆ ಒಗ್ಗಿಕೊಂಡಿಲ್ಲದ ಮಾವೋವಾದಿಗಳು ಆಗ ಬೆಂಬಲಕ್ಕಾಗಿ ಬೇರೆ ಮೂಲಗಳತ್ತ ನೋಡತೊಡಗಿದರು. ಪಶ್ಚಿಮದ ದುಷ್ಟಚತುಷ್ಟಯರ ಗಮನ ಅವರತ್ತ ಹೊರಳಿತು. ಏಕಾಏಕಿ ಉಲ್ಬಣಗೊಂಡಿದ್ದ (ಉಲ್ಬಣಗೊಳಿಸಲ್ಪಟ್ಟಿದ್ದ) ಕಾಶ್ಮೀರ ಸಮಸ್ಯೆ ಹಾಗೂ ಮಂಡಲ್-ಮಸ್ಜಿದ್ ಗಲಾಟೆಯಿಂದಾಗಿ 1990ರ ದಶಕದ ಭಾರತ ದುಷ್ಟಚತುಷ್ಟಯರಿಗೆ ಈಗಾಗಲೇ ಫಲವತ್ತಾದ ನೆಲದಂತೆ ಕಂಡಿತ್ತು. ಇನ್ನು ಮಾವೋವಾದಿ ಹಿಂಸಾಚಾರವನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರೆ ಭಾರತ ಅನಂತ ಕಾಲದವರೆಗೆ ಚಿನ್ನದ ಮೊಟ್ಟೆ ಇಡುವ ಬಾತುಕೋಳಿಯೇ ಸರಿ!

ಹೀಗೆ ಭಾರತದ ಹಳ್ಳಿಗಾಡಿನ ಅರೆಶಿಕ್ಷಿತ ಮಾವೋವಾದಿಗಳ ಜತೆ ಪಶ್ಚಿಮದ ಅತಿಶಿಕ್ಷಿತ ನಗರವಾಸಿ ಮಾಧ್ಯಮಗಳು ಮತ್ತು ವಿಚಾರವಾದಿಗಳ ಘಟಬಂಧನವೇರ್ಪಟ್ಟಾಗ ಪಶ್ಚಿಮ ಬಂಗಾಳದಿಂದ ಹಿಡಿದು ಕರ್ನಾಟಕದವರೆಗೆ ರೆಡ್ ಕಾರಿಡಾರ್ ನಿರ್ವಣವಾಯಿತು. ಭಾರತದ ಕಾಡುಗಳಲ್ಲಿನ ಬಂದೂಕುಗಳು ಮತ್ತು ಪಶ್ಚಿಮದ ಮಹಾನಗರಗಳಲ್ಲಿನ ಹರಿತ ಆದರೆ ಕುತ್ಸಿತ ಮಿದುಳುಗಳ ನಡುವೆ ಮಧ್ಯವರ್ತಿಯಾಗಿ ನಮ್ಮ ನಗರಗಳಲ್ಲಿ ರೋನಾ ವಿಲ್ಸನ್​ರಂತಹ ಅರ್ಬನ್ ಲೆಫ್ಟಿಸ್ಟ್ಸ್ ಕಾಣಿಸಿಕೊಳ್ಳತೊಡಗಿದರು. ಅವರಿಗೆ ಅಗತ್ಯವಾದ ಮಾಧ್ಯಮ-ಬೌದ್ಧಿಕ-ವೈಚಾರಿಕ ಸಮರ್ಥನೆಗೆ ಈಗಾಗಲೇ ವ್ಯವಸ್ಥೆಯಾಗಿತ್ತು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top