ಓ ಜೆರುಸಲೇಂ! ವಾಸ್ತವ ಮುಚ್ಚಿಟ್ಟ ಕುಹಕಿಗಳು

ತನ್ನ ದೂತಾವಾಸವನ್ನು ಇಸ್ರೇಲ್​ನ ಟೆಲ್ ಅವಿವ್​ನಿಂದ ಜೆರುಸಲೇಂಗೆ ಸ್ಥಳಾಂತರಿಸುವ ಅಮೆರಿಕದ ಕ್ರಮ ಉದ್ವಿಗ್ನ ಪರಿಸ್ಥಿತಿಯನ್ನೇ ಹುಟ್ಟುಹಾಕಿ, ಗಾಝಾ-ಇಸ್ರೇಲ್ ಗಡಿಭಾಗದಲ್ಲಿ ಗಣನೀಯ ಸಾವುನೋವಿಗೂ ಕಾರಣವಾಗಿದೆ. ಈ ಬೆಳವಣಿಗೆಯ ಆಸುಪಾಸಿನ ಅವಲೋಕನವಿದು.

ಇಸ್ರೇಲ್ ಕುರಿತಾಗಿ ತಾನು ಹೊಂದಿದ್ದ, ಎರಡು ದಶಕಗಳಿಗಿಂತಲೂ ದೀರ್ಘವಾದ ದ್ವಂದ್ವವೊಂದನ್ನು ಅಮೆರಿಕ ಪರಿಹರಿಸಿಕೊಂಡಿದೆ. ಅಮೆರಿಕದ ರಾಯಭಾರ ಕಚೇರಿಯನ್ನು ಟೆಲ್ ಅವಿವ್​ನಿಂದ ಜೆರುಸಲೇಂಗೆ ಸ್ಥಳಾಂತರಿಸುವ ಕೆಲಸವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ್ದಾರೆ. ಈ ಕ್ರಮವನ್ನು ಹಲವು ಯುರೋಪಿಯನ್ ರಾಷ್ಟ್ರಗಳು ಖಂಡಿಸಿರುವುದಲ್ಲದೆ ಗಾಝಾ-ಇಸ್ರೇಲ್ ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿ ಐವತ್ತಕ್ಕೂ ಹೆಚ್ಚು ಪ್ರಾಣಹಾನಿಯಾಗಿದೆ. ಮತ ಮತ್ತು ರಾಜಕೀಯದ ಘಾತಕ ಮಿಶ್ರಣದಿಂದಾಗಿ 2 ಶತಮಾನಗಳಿಂದಲೂ ಕುದಿಯುವ ಹಂಡೆಯಾಗಿರುವ ಪಶ್ಚಿಮ ಏಷ್ಯಾದ ದುರಂತ ಇತಿಹಾಸಕ್ಕೆ ಮತ್ತೊಂದು ರಕ್ತರಂಜಿತ ಪುಟವನ್ನು ಸೇರಿಸಿರುವ ಅಪಾದನೆ ಟ್ರಂಪ್ ವಿರುದ್ಧ ಕೇಳಿಬರುತ್ತಿದೆ. ಆದರೆ ಈ ಆಪಾದನೆ ನಿರಾಧಾರವಾದದ್ದಷ್ಟೇ ಅಲ್ಲ, ಉದ್ದೇಶಪೂರ್ವಕ ಕುಟಿಲತನದಿಂದ ಕೂಡಿದ್ದೂ ಆಗಿದೆ ಎನ್ನುವುದು ಇತಿಹಾಸ ಹಾಗೂ ವರ್ತಮಾನದ ನಿಷ್ಪಕ್ಷಪಾತ ಅಧ್ಯಯನದಿಂದ ತಿಳಿದುಬರುವ ಸತ್ಯ.

ಚೆಲ್ಲಾಪಿಲ್ಲಿಯಾದ ಯೆಹೂದ್ಯರು: ಮೊದಲಿಗೆ, ಕ್ರಿ.ಪೂ. 1ನೆಯ ಶತಮಾನದಲ್ಲಿ ರೋಮನ್ನರಿಂದ, ನಂತರ ಕ್ರಿ.ಶ. 7ನೆಯ ಶತಮಾನದಲ್ಲಿ ಅರಬ್ ಮುಸ್ಲಿಮರಿಂದ ತಮ್ಮ ಅಸ್ತಿತ್ವಕ್ಕೇ ಎರಗಿಬಂದ ಮಾರಣಾಂತಿಕ ಹೊಡೆತಗಳಿಂದ ಅಳಿದುಳಿದ ಯೆಹೂದ್ಯರು ಭಾರತವೂ ಸೇರಿದಂತೆ ಪ್ರಪಂಚದೆಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಚದುರಿಹೋದದ್ದೀಗ ಇತಿಹಾಸ. ಭಾರತವೊಂದನ್ನುಳಿದು ತಾವು ಆಶ್ರಯ ಪಡೆದ ಇತರೆಲ್ಲ ದೇಶಗಳಲ್ಲಿ ಜನಾಂಗೀಯ ವರ್ಗೀಕರಣ, ಧಾರ್ವಿುಕ ಅಸಹಿಷ್ಣುತೆ ಮತ್ತು ಹಕ್ಕುಗಳ ನಿರಾಕರಣೆಯಿಂದಾಗಿ ಅವಮಾನ ಹಾಗೂ ಪರಕೀಯ ಭಾವದಿಂದ ಶತಮಾನಗಳವರೆಗೆ ನರಳಿದ ಯೆಹೂದ್ಯರು ಮತ್ತೆ ತಮ್ಮ ಮೂಲನೆಲೆಗೆ ಹಿಂದಿರುಗಿ, ತಮ್ಮದೇ ಸ್ವತಂತ್ರ ದೇಶವನ್ನು ನಿರ್ವಿುಸಿಕೊಂಡು, ಸ್ವಾಭಿಮಾನಿ ರಾಷ್ಟ್ರವಾಗಿ ವಿಶ್ವಸಮುದಾಯದಲ್ಲಿ ತಲೆಯೆತ್ತಿ ನಿಲ್ಲುವ ನಿರ್ಧಾರವನ್ನು 19ನೇ ಶತಮಾನದ ಉತ್ತರಾರ್ಧದಲ್ಲಿ ಕೈಗೊಂಡಿದ್ದರಲ್ಲಿ ಯಾವ ಅಸಹಜತೆಯೂ ಇಲ್ಲ, ಯಾವ ತಪ್ಪೂ ಇಲ್ಲ. ನಿಜ ಹೇಳಬೇಕೆಂದರೆ, ಯೆಹೂದ್ಯರ ಸ್ವಾಭಿಮಾನ ವಿಶ್ವಾದ್ಯಂತ ಆಕ್ರಮಣಕ್ಕೊಳಗಾದ, ತುಳಿತಕ್ಕೊಳಗಾದ ಇತರ ಜನಾಂಗ-ರಾಷ್ಟ್ರಗಳಿಗೆ ಮಾದರಿಯಾಗುವಂಥದ್ದು. ಅಮೆರಿಕದ ಸಮಾಜ ಹಾಗೂ ಸರ್ಕಾರ ಯೆಹೂದ್ಯರ ಬಗ್ಗೆ ಸಹಾನುಭೂತಿ ತಳೆದದ್ದರ ಹಿನ್ನೆಲೆ ಇದು.

ಪ್ಯಾಲೆಸ್ತೈನ್ ಅನ್ನು ಯೆಹೂದಿಯರು ಮತ್ತು ಅರಬ್ ಮುಸ್ಲಿಮರ ನಡುವೆ ಹಂಚಿ ಎರಡು ಹೊಸ ರಾಷ್ಟ್ರಗಳ ನಿರ್ವಣಕ್ಕೆ ವಿಶ್ವಸಂಸ್ಥೆ 1947ರ ನವೆಂಬರ್​ನಲ್ಲಿ ಅನುಮೋದನೆ ನೀಡಿತು. ಈ ‘ವಿಭಜನಾ ಯೋಜನೆ’ಯಲ್ಲಿ ಯೆಹೂದಿಯರಿಗೆ ಹಾಗೂ ಮುಸ್ಲಿಮರಿಗೆ ಸರಿಸುಮಾರು ಸಮನಾಗಿಯೇ ನೆಲವನ್ನು ಹಂಚಿದರೂ, ಪ್ರಮುಖ ನಗರ ಜೆರುಸಲೇಂ ಬಗ್ಗೆ ಎರಡೂ ಸಮುದಾಯಗಳು ಹೊಂದಿದ್ದ ಗಾಢ ಭಾವನಾತ್ಮಕ ಸಂಬಂಧಗಳ ಹಿನ್ನೆಲೆಯಲ್ಲಿ ಅದನ್ನು ಯಾರೊಬ್ಬರಿಗೂ ನೀಡದೆ ಪ್ರತ್ಯೇಕವಾಗಿರಿಸಲಾಗಿತ್ತು. ಅಂತಿಮವಾಗಿ, ಯೆಹೂದ್ಯರು ವಿಶ್ವಸಂಸ್ಥೆ ತಮಗೆ ಕೊಟ್ಟಿದ್ದ ಪ್ರದೇಶದಲ್ಲಿ 1948ರ ಮೇ 14ರಂದು ಸಂಜೆ 6 ಗಂಟೆಗೆ ಸ್ವತಂತ್ರ ಇಸ್ರೇಲ್ ರಾಷ್ಟ್ರವನ್ನು ಅಸ್ತಿತ್ವಕ್ಕೆ ತಂದರು. ಸರಿಯಾಗಿ 11 ನಿಮಿಷಗಳ ನಂತರ ಅಮೆರಿಕ ನವರಾಷ್ಟ್ರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಿತು.

ಮೊಳಕೆಯಲ್ಲೇ ಚಿವುಟುವ ಯತ್ನ: ಬೆನ್ ಗುರಿಯನ್ ಮತ್ತು ಖೇಮ್ ಏಝ್ರಿಯಲ್ ವೇಝå್ಮ್ಯಾನ್​ರಂತಹ ದಕ್ಷ ಹಾಗೂ ದೂರದೃಷ್ಟಿಯುಳ್ಳ ನಾಯಕರ ಮುಂದಾಳತ್ವದಲ್ಲಿ ಯೆಹೂದಿಯರು ನವರಾಷ್ಟ್ರಕ್ಕೆ ಅಗತ್ಯವಾದ ಪೂರ್ವತಯಾರಿಯನ್ನೆಲ್ಲ ಮಾಡಿಕೊಂಡೇ ಇಸ್ರೇಲನ್ನು ಸ್ಥಾಪಿಸಿದರು. ಆದರೆ ಇಂತಹ ಯಾವುದೇ ಯೋಜನೆ ಅರಬ್ ಪಾಳಯದಲ್ಲಿ ನಡೆದಿರಲಿಲ್ಲ. ತಮ್ಮ ನಡುವೆ ಇಸ್ರೇಲ್ ಕಠಾರಿಯಂತೆ ನೆಟ್ಟುಕೊಳ್ಳಹೊರಡುವುದೆಂದು ಶಂಕಿಸಿದ ಅರಬ್ ದೇಶಗಳು ಯೆಹೂದಿ ರಾಷ್ಟ್ರದ ಸ್ಥಾಪನೆಯನ್ನೇ ಶತಾಯಗತಾಯ ತಡೆಯುವುದಾಗಿ ಹೇಳಿದ ಮಾತನ್ನೇ ನಂಬಿದ ಅವರು ತಮ್ಮ ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿ ಹಾಗೂ ವ್ಯಾವಹಾರಿಕವಾಗಿ ಯೋಚಿಸಿ ನಿರ್ಣಯ ತೆಗೆದುಕೊಳ್ಳುವುದರಲ್ಲಿ ವಿಫಲರಾಗಿದ್ದರು. ಅರಬ್ ರಾಷ್ಟ್ರಗಳೇನೋ ಇಸ್ರೇಲನ್ನು ಮೊಳಕೆಯಲ್ಲೇ ಚಿವುಟಿಹಾಕಲು ಆ ಎಳೆಯ ರಾಷ್ಟ್ರದ ಮೇಲೆ ಎರಗಿದವು, ನಿಜ. ಆದರೆ 2 ಸಹಸ್ರಮಾನಗಳ ದೀರ್ಘಕಾಲದ ನಂತರ ದಕ್ಕಿದ್ದ ಸ್ವತಂತ್ರ, ಸ್ವಾಭಿಮಾನಿ ಅಸ್ತಿತ್ವವನ್ನು ಕಳೆದುಕೊಳ್ಳಲು ಯೆಹೂದಿಯರು ತಯಾರಾಗಿರಲಿಲ್ಲ. ಶತ್ರುಗಳನ್ನು ಸಮರ್ಥವಾಗಿ ಎದುರಿಸಿದ ಇಸ್ರೇಲ್ ಅವರನ್ನೆಲ್ಲ ಹಿಮ್ಮೆಟ್ಟಿಸಿ ತನ್ನ ಸ್ವತಂತ್ರ ಅಸ್ತಿತ್ವವನ್ನು ಕಾಪಾಡಿಕೊಂಡದ್ದಷ್ಟೇ ಅಲ್ಲ, ಪ್ಯಾಲೆಸೆôನ್ ಅರಬ್ಬರಿಗೆ ನೀಡಿದ್ದ ಪ್ರದೇಶಗಳಲ್ಲಿ ಬಹುಭಾಗವನ್ನು ಆಕ್ರಮಿಸಿಕೊಂಡಿತು. ಅರಬ್ಬರಿಗೆ ಉಳಿದದ್ದು ಪಶ್ಚಿಮದಲ್ಲಿ ಪುಟ್ಟ ಗಾಝಾ ಪಟ್ಟಿ, ಪೂರ್ವದಲ್ಲಿ ಜೋರ್ಡಾನ್ ನದಿಯ ಪಶ್ಚಿಮ ತಟದಲ್ಲಿನ ಪ್ರದೇಶ ‘ವೆಸ್ಟ್ ಬ್ಯಾಂಕ್’ ಮಾತ್ರ. ಆಗ ಅವರ ಮುಂದಿದ್ದ ವ್ಯಾವಹಾರಿಕ ಮಾರ್ಗ ಅಳಿದುಳಿದ ಪ್ರದೇಶಗಳನ್ನಾದರೂ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಸ್ವತಂತ್ರ ಪ್ಯಾಲೆಸೆôನ್ ರಾಷ್ಟ್ರವನ್ನು ಸ್ಥಾಪಿಸಿಕೊಂಡು, ನಂತರ ಕಳೆದುಹೋದ ಪ್ರದೇಶಗಳಿಗಾಗಿ ಪ್ರಯತ್ನ ಆರಂಭಿಸುವುದಾಗಿತ್ತು. ಆದರೆ ಅದರಲ್ಲೂ ಅವರು ವಿಫಲವಾದ ಕಾರಣ ನಾಗರಿಕ ಆಡಳಿತದ ಉದ್ದೇಶಕ್ಕಾಗಿ ಗಾಝಾವನ್ನು

ಈಜಿಪ್ಟ್​ಗೂ, ವೆಸ್ಟ್ ಬ್ಯಾಂಕ್ ಅನ್ನು ಜೋರ್ಡಾನ್​ಗೂ ಒಪ್ಪಿಸಲಾಯಿತು. ಆಗ ಪ್ರಮುಖ ನಗರ ಜೆರುಸಲೇಂ ದ್ವಿಭಾಗವಾಗಿ ವಿಭಜನೆಗೊಂಡು ಪಶ್ಚಿಮ ಭಾಗ ಇಸ್ರೇಲ್​ನ ಹಿಡಿತಕ್ಕೆ ಒಳಗಾದರೆ, ಪೂರ್ವದ ಮುಸ್ಲಿಂಬಾಹುಳ್ಯದ ವಿಭಾಗ ವೆಸ್ಟ್ ಬ್ಯಾಂಕ್​ನ ಭಾಗವಾಗಿ ಜೋರ್ಡಾನ್​ನ ಆಡಳಿತಕ್ಕೆ ಹೋಯಿತು. ಇಷ್ಟಾಗಿಯೂ, ತಮ್ಮ ಪ್ರಾಚೀನ ಇತಿಹಾಸದ ಜತೆ ಬೇರ್ಪಡಿಸಲಾಗದಂತೆ ಬೆರೆತುಹೋಗಿರುವ ಜೆರುಸಲೇಂ ನಗರ ಇಡಿಯಾಗಿ ತಮ್ಮದು ಎಂಬುದು ಇಸ್ರೇಲಿಯರ ಘೊಷಿತ ನೀತಿಯಾಯಿತು. ಆದರೆ, ಪೂರ್ವ ಜೆರುಸಲೇಂನ ‘ಹಳೆಯ ನಗರ’ ಅರಬ್ ಮುಸ್ಲಿಂಮಯವಾಗಿರುವ ಹಾಗೂ ಇಲ್ಲಿರುವ ಅಲ್ ಅಖ್ಸಾ ಮಸೀದಿ ಮುಸ್ಲಿಮರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಮೂರನೆಯದಾಗಿರುವ ಪ್ರಸಕ್ತ ವಾಸ್ತವವನ್ನು ಗುರುತಿಸಿದ ವಿಶ್ವ ಸಮುದಾಯ ನಗರದ ಈ ಭಾಗದ ಮೇಲೆ ಇಸ್ರೇಲ್ ಹಕ್ಕು ಸ್ಥಾಪಿಸುವುದನ್ನು ಒಪ್ಪಿಕೊಳ್ಳಲಿಲ್ಲ. ಅದು ಅಮೆರಿಕದ ನೀತಿ ಕೂಡ.

1967ರ ‘ಆರು ದಿನಗಳ ಯುದ್ಧ’ದಲ್ಲಿ ಇಸ್ರೇಲ್ ಸೇನೆ ಗಾಝಾ ಮತ್ತು ಇಡೀ ವೆಸ್ಟ್ ಬ್ಯಾಂಕ್ ಜತೆಗೆ ಪೂರ್ವ ಜೆರುಸಲೇಂ ಅನ್ನೂ ತನ್ನ ವಶಕ್ಕೆ ತೆಗೆದುಕೊಂಡಿತು. 13 ವರ್ಷಗಳ ನಂತರ 1980ರಲ್ಲಿ ಐಕ್ಯ ಜೆರುಸಲೇಂ ನಗರ ತನ್ನ ರಾಜಧಾನಿಯೆಂದು ಘೊಷಿಸಿದ ಇಸ್ರೇಲ್ ಸರ್ಕಾರ ಹಂತಹಂತವಾಗಿ ತನ್ನೆಲ್ಲ ಆಡಳಿತ ಕಚೇರಿಗಳನ್ನು ಟೆಲ್ ಅವಿವ್​ನಿಂದ ಜೆರುಸಲೇಂಗೆ ಸ್ಥಳಾಂತರಿಸಿತು. ಗಮನಿಸಬೇಕಾದ ವಿಷಯವೆಂದರೆ ಇಸ್ರೇಲ್ ಸರ್ಕಾರಿ ಕಚೇರಿಗಳೆಲ್ಲವೂ ಜೆರುಸಲೇಂ ನಗರದ ಪಶ್ಚಿಮ ಭಾಗದಲ್ಲಿವೆ ಹಾಗೂ ಆ ಭಾಗದ ಮೇಲೆ ಇಸ್ರೇಲ್​ನ ಹಕ್ಕು ಅಂತಾರಾಷ್ಟ್ರೀಯ ರಂಗದಲ್ಲಿ ಮಾನ್ಯವಾಗಿದೆ. ಈ ಕಾರಣದಿಂದಾಗಿಯೇ ಇಸ್ರೇಲ್​ನ ಕ್ರಮ ಅಮೆರಿಕಕ್ಕೆ ಅನುಚಿತವೆನಿಸಲಿಲ್ಲ. ಮತ್ತೊಂದು ಮುಖ್ಯ ಅಂಶವೆಂದರೆ, ಪಶ್ಚಿಮ ಜೆರುಸಲೇಂ ಅನ್ನು ಇಸ್ರೇಲ್ ತನ್ನ ರಾಜಧಾನಿಯಾಗಿಸಿಕೊಳ್ಳುವುದನ್ನು ಮಾನ್ಯ ಮಾಡಿದ ಅಮೆರಿಕ, ಪೂರ್ವ ಜೆರುಸಲೇಂ ಮೇಲೆ ಆ ಯೆಹೂದಿ ರಾಷ್ಟ್ರದ ಸಾರ್ವಭೌಮತ್ವವನ್ನು ಒಪ್ಪಿಕೊಂಡಿಲ್ಲ. ಪೂರ್ವ ಜೆರುಸಲೇಂ ಅಲ್ಲದೆ ಅದಕ್ಕೆ ಹೊಂದಿಕೊಂಡ ವೆಸ್ಟ್ ಬ್ಯಾಂಕ್​ನ ಇತರ ಅರಬ್ ಪ್ರದೇಶಗಳಲ್ಲಿ ಯೆಹೂದಿಯರನ್ನು ನೆಲೆಗೊಳಿಸುವ ಇಸ್ರೇಲ್ ಸರ್ಕಾರದ ಪ್ರಯತ್ನಗಳನ್ನೂ ಅಮೆರಿಕ ಒಪ್ಪಿಕೊಂಡಿಲ್ಲ.

ಕಚೇರಿ ಸ್ಥಳಾಂತರದ ನಿರ್ಣಯ: ಈ ನೀತಿಗನುಗುಣವಾಗಿಯೇ, ಅಮೆರಿಕದ ರಾಯಭಾರ ಕಚೇರಿಯನ್ನು ಪಶ್ಚಿಮ ಜೆರುಸಲೇಂಗೆ ಸ್ಥಳಾಂತರಿಸುವ ನಿರ್ಣಯವೊಂದನ್ನು ಕಾಂಗ್ರೆಸ್ 1995ರಲ್ಲಿ ಅಂಗೀಕರಿಸಿತು. ಆದರೆ, ಆ ನಿರ್ಣಯಕ್ಕೆ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್​ರ ಸಲಹೆ ಹಾಗೂ ಮನವಿಯ ಮೇರೆಗೆ ಸೇರಿಸಿದ ಕಲಮೊಂದರ ಪ್ರಕಾರ ದೂತಾವಾಸದ ಸ್ಥಳಾಂತರವನ್ನು 6 ತಿಂಗಳವರೆಗೆ ಮುಂದೂಡುವ ಅಧಿಕಾರ ಅಧ್ಯಕ್ಷರಿಗಿರುತ್ತದೆ. ಇದರಿಂದೇನಾಯಿತೆಂದರೆ, ದೂತಾವಾಸವನ್ನು ಜೆರುಸಲೇಂಗೆ ಸ್ಥಳಾಂತರಿಸುವ ವಿಷಯ ಕಳೆದ 23 ವರ್ಷಗಳಿಂದಲೂ 6 ತಿಂಗಳಿಗೊಮ್ಮೆ ಅಮೆರಿಕ ಸರ್ಕಾರದ ಮುಂದೆ ಬರುತ್ತಿತ್ತು ಮತ್ತು ಅಧ್ಯಕ್ಷರುಗಳು ಅದನ್ನು ಇನ್ನೂ 6 ತಿಂಗಳಿಗೆ ಮುಂದೂಡುತ್ತಿದ್ದರು! ಬಿಲ್ ಕ್ಲಿಂಟನ್, ಕಿರಿಯ ಜಾರ್ಜ್ ಬುಷ್, ಬರಾಕ್ ಒಬಾಮಾ ಮಾಡಿಕೊಂಡು ಬಂದದ್ದು ಇದನ್ನೇ. ಆದರೆ, ಈ ಮುಂದೂಡುವ ನೀತಿಯನ್ನು ಮುಂದುವರಿಸಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಅವರು ಕೊಡುವ ನೇರ ವಿವರಣೆ ಇದು- ‘ಹಿಂದಿನ ಅಧ್ಯಕ್ಷರುಗಳು ಈ (ದೂತಾವಾಸವನ್ನು ಸ್ಥಳಾಂತರಿಸುವ) ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಪ್ರಮುಖ ಆಶ್ವಾಸನೆಯನ್ನಾಗಿ ನೀಡಿದ್ದರೂ ಅದನ್ನು ನೆರವೇರಿಸುವುದರಲ್ಲಿ ಅವರೆಲ್ಲರೂ ವಿಫಲರಾದರು. ನಾನು ನೆರವೇರಿಸುತ್ತಿದ್ದೇನೆ’.

ಟ್ರಂಪ್ ನಿರ್ಣಯವನ್ನು ಅಮೆರಿಕದ ಒಳಗೂ ಹೊರಗೂ ವಿರೋಧಿಸುವವರ ಮುಖ್ಯ ವಾದವೆಂದರೆ ದೂತಾವಾಸದ ಸ್ಥಳಾಂತರದಿಂದಾಗಿ ಅಮೆರಿಕ ಇಸ್ರೇಲೀಯರ ಪರ, ಪ್ಯಾಲೆಸೆôನೀಯರ ವಿರೋಧಿ ಎಂಬ ಭಾವನೆ ಮೂಡುತ್ತದೆ, ಇದರಿಂದಾಗಿ ಎರಡೂ ಬಣಗಳ ನಡುವೆ ನಿಷ್ಪಕ್ಷಪಾತಿ ಸಂಧಾನಕಾರನ ಪಾತ್ರ ವಹಿಸುವುದು ಅಮೆರಿಕಕ್ಕೆ ಇನ್ನು ಮುಂದೆ ಸಾಧ್ಯವಾಗಲಾರದು ಎನ್ನುವುದು. ಇದಕ್ಕೆ ಟ್ರಂಪ್ ಸರ್ಕಾರ ನೀಡುವ ವಿವರಣೆಯೆಂದರೆ, ಈ ನಿರ್ಣಯವನ್ನು ಮುಂದೂಡಿದಷ್ಟೂ ಅದನ್ನು ಸಾಧಿಸಲಾಗದಂತಹ ಸ್ಥಿತಿ ನಿರ್ವಣವಾಗುತ್ತದೆ. ಈಗ ತಕ್ಷಣಕ್ಕೆ ವಿರೋಧ, ಪ್ರತಿಭಟನೆ ಬರಬಹುದು. ಅದರೆ, ನಿಧಾನವಾಗಿ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಆ ಒಪ್ಪಿಕೊಳ್ಳುವಿಕೆಯೇ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿಗೆ ಹೆಚ್ಚಿನ ಅವಕಾಶ ಒದಗಿಸುತ್ತದೆ.

ಭೂಪಟದಿಂದಲೇ ಮಾಯಮಾಡುವ ಉದ್ದೇಶ: ಈ ವಿವರಣೆ ಸರಿಯೆಂದು ಹೇಳಲು ಐತಿಹಾಸಿಕ ಉದಾಹರಣೆಗಳಿವೆ. 1948ರಲ್ಲಿ ಇಸ್ರೇಲ್​ನ ಸ್ಥಾಪನೆಯನ್ನು ಪ್ಯಾಲೆಸೆôನ್ ಅರಬ್ಬರಾಗಲೀ ಸುತ್ತಲ ಯಾವ ಅರಬ್ ದೇಶವಾಗಲೀ ಒಪ್ಪಿರಲಿಲ್ಲ. ಅದನ್ನು ನಿರ್ನಾಮ ಮಾಡಿಬಿಡಬೇಕೆಂದೇ ಅವೆಲ್ಲ ಟೊಂಕಕಟ್ಟಿ ನಿಂತಿದ್ದವು. ಆದರೆ ವಿಶ್ವಸಂಸ್ಥೆ ಹಾಗೂ ಜಗತ್ತಿನ ಬಹುತೇಕ ದೇಶಗಳು ಇಸ್ರೇಲ್​ಗೂ ಬದುಕುವ ಹಕ್ಕಿದೆ ಎಂದರಿತು ಆ ಯೆಹೂದಿ ರಾಷ್ಟ್ರದ ಅಸ್ತಿತ್ವವನ್ನು ಒಪ್ಪಿಕೊಂಡ ಪರಿಣಾಮ, ಅಂತಿಮವಾಗಿ 1978ರಲ್ಲಿ ಈಜಿಪ್ಟ್​ನಿಂದ ಆರಂಭವಾಗಿ ಅರಬ್ ದೇಶಗಳು ಒಂದೊಂದಾಗಿ ಇಸ್ರೇಲನ್ನು ಮಾನ್ಯಮಾಡತೊಡಗಿದವು. ಅಲ್ಲಿಗೆ, ಪರಿಹರಿಸಲು ಸಾಧ್ಯವೇ ಇಲ್ಲ ಎಂಬಂತಿದ್ದ ಅಂತಾರಾಷ್ಟ್ರೀಯ ಸಮಸ್ಯೆಯೊಂದು ಅರ್ಧದಷ್ಟು ಪರಿಹಾರವಾದಂತಾಯಿತು. ಇನ್ನೂ ಆಸಕ್ತಿಯ ವಿಷಯವೆಂದರೆ ಇಸ್ರೇಲನ್ನು ಭೂಪಟದಿಂದಲೇ ಮಾಯಮಾಡುವ ಉದ್ದೇಶದಿಂದ ಸ್ಥಾಪನೆಯಾಗಿ ಅದಕ್ಕಾಗಿ ರಕ್ತಪಾತದ ಮಾರ್ಗ ಹಿಡಿದಿದ್ದ ಪ್ಯಾಲೆಸೆôನ್ ಲಿಬರೇಷನ್ ಆರ್ಗನೈಸೇಷನ್ (ಪಿಎಲ್​ಒ) 1988ರ ನವೆಂಬರ್ 15ರಂದು ಇಸ್ರೇಲ್​ನ ಅಸ್ತಿತ್ವವನ್ನು ಮಾನ್ಯಮಾಡಿ, ತಾನು ಹಿಂಸೆಯ ಮಾರ್ಗ ತೊರೆಯುತ್ತಿರುವುದಾಗಿ ಘೋಷಿಸಿತು. ಅಲ್ಲಿಂದೀಚೆಗೆ 1993ರ ಒಪ್ಪಂದದಿಂದ ಆರಂಭವಾಗಿ ಎರಡೂ ಪಾಳಯಗಳ ನಡುವೆ ಹಲವಾರು ಶಾಂತಿ ಒಪ್ಪಂದಗಳಾಗಿವೆ, ಗಾಝಾ ಮತ್ತು ವೆಸ್ಟ್ ಬ್ಯಾಂಕ್​ನಲ್ಲಿ ಹಂತಹಂತವಾಗಿ ಅರೆಸ್ವಾಯತ್ತ ಪ್ಯಾಲೆಸೆôನ್ ರಾಷ್ಟ್ರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ, ಅಧ್ಯಕ್ಷ ಟ್ರಂಪ್ ನಿರೀಕ್ಷಿಸುವಂತೆ ದೂತಾವಾಸದ ಬಗೆಗಿನ ಅವರ ನಿಲುವು ಮುಂದೆ ಸಕಾರಾತ್ಮಕ ಬೆಳವಣಿಗೆಗೆ ನಾಂದಿ ಹಾಡಬಹುದು.

ಜತೆಗೆ, ದೂತಾವಾಸದ ಸ್ಥಳಾಂತರ ವ್ಯಾವಹಾರಿಕ ಕೂಡ. ಅಮೆರಿಕ ಮತ್ತು ಇಸ್ರೇಲ್ ನಡುವೆ ಘನಿಷ್ಠ ರಾಜತಾಂತ್ರಿಕ, ಸೇನಾ ಹಾಗೂ ಆರ್ಥಿಕ ಸಂಬಂಧಗಳಿರುವುದರಿಂದಾಗಿ ಅಮೆರಿಕದ ರಾಯಭಾರಿ ಉಚ್ಚ ಸ್ತರದ ಇಸ್ರೇಲಿ ನಾಯಕರನ್ನು, ಅಧಿಕಾರಿಗಳನ್ನು ಅಡಿಗಡಿಗೆ ಭೇಟಿಯಾಗಬೇಕಾಗುತ್ತದೆ. ಹೀಗಾಗಿ, ತಾವು ಪ್ರತಿದಿನವೂ ಟೆಲ್ ಅವಿವ್​ನಿಂದ ಜೆರುಸಲೇಂಗೆ ಕಾರಿನಲ್ಲಿ ಹೋಗಿ ಬರುತ್ತಿದ್ದುದಾಗಿ ಮಾಜಿ ರಾಯಭಾರಿ ಡೇನಿಯಲ್ ಬಿ. ಶೇಪಿರೋ ಬರೆಯುತ್ತಾರೆ. ಇತರ ದೇಶಗಳ ರಾಯಭಾರಿಗಳಿಗೆ ಅಂತಹ ಮಹತ್ವದ ಕಾರ್ಯ ದಿನನಿತ್ಯವೂ ಇರುವುದಿಲ್ಲ. ಹೀಗಾಗಿ ತಂತಮ್ಮ ದೂತಾವಾಸವನ್ನು ಜೆರುಸಲೇಂಗೆ ಸ್ಥಳಾಂತರಿಸುವ ಜರೂರೂ ಅವಕ್ಕಿಲ್ಲ. ಆದರೆ, ನೈಜಕಾರಣವನ್ನು ಮುಚ್ಚಿಟ್ಟ ಅವು ತಾವು ಪ್ಯಾಲೆಸೆôನಿಯರ ಮನನೋಯಿಸುವುದಿಲ್ಲವೆಂದು ತಿಪ್ಪೆಸಾರಿಸುತ್ತಿವೆ.

ಪ್ಯಾಲೆಸ್ತೈನಿಯರ ‘ಮನನೋಯಿಸುವ’ ವಿಷಯವನ್ನೇ ತೆಗೆದುಕೊಂಡರೆ ಅಲ್ಲೂ ಅಚ್ಚರಿ ಎದುರಾಗುತ್ತದೆ. ಅಮೆರಿಕದ ಕ್ರಮಕ್ಕೆ ವಿರೋಧ ಭುಗಿಲೆದ್ದಿರುವುದು ಗಾಝಾದಲ್ಲಿ. ಜೆರುಸಲೇಂಗೆ ಹೊಂದಿಕೊಂಡೇ ಇರುವ ವೆಸ್ಟ್ ಬ್ಯಾಂಕ್​ನಲ್ಲಿ ಅಂತಹ ಪ್ರತಿಭಟನೆಗಳೇನೂ ಇಲ್ಲ. ಇದಕ್ಕೆ ಕಾರಣ ಇಷ್ಟೇ- ವೆಸ್ಟ್ ಬ್ಯಾಂಕ್​ನಲ್ಲಿ ಆಡಳಿತ ನಡೆಸುತ್ತಿರುವ ಪಿಎಲ್​ಒ, ಯಾವುದೇ ಸಮಸ್ಯೆಯ ಪರಿಹಾರಕ್ಕೆ ಹಿಂಸೆಯ ಮಾರ್ಗವನ್ನು ತೊರೆದು 30 ವರ್ಷಗಳಾಗುತ್ತಿವೆ. ಆದರೆ ಗಾಝಾದಲ್ಲಿ ಅಧಿಕಾರ ಹಿಡಿದಿರುವ ಹಮಸ್ ಒಂದು ಉಗ್ರಗಾಮಿ ಸಂಘಟನೆ. ಹಿಂಸಾಚಾರ ಅದರ ಜಾಯಮಾನ. ಇನ್ನೂ ವಿಶೇಷವೆಂದರೆ, ಹಮಸ್​ನ ಬೆನ್ನಿಗಿರುವುದು ಇರಾನ್. ಇತ್ತೀಚಿನ ದಶಕಗಳಲ್ಲಿ ಅರಬ್ ದೇಶಗಳಿಗಿಂತಲೂ ಇರಾನ್​ನ ಮೂಲಭೂತವಾದಿ ಸತ್ತೆ ಇಸ್ರೇಲ್ ವಿರುದ್ಧ ಉಗ್ರದ್ವೇಷ ಕಾರುತ್ತಿದೆ. ಈಗ ‘ಇರಾನ್ ಅಣುಒಪ್ಪಂದ’ದಿಂದ ಅಮೆರಿಕವನ್ನು ಟ್ರಂಪ್ ಹೊರತಂದು ಇರಾನ್ ಮೇಲೆ ಉಗ್ರಕ್ರಮದ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಟೆಹರಾನ್​ನ ಬಂಟ ಹಮಸ್ ಅಮೆರಿಕ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *