ಪನ್ ಮುನ್ ಜೋಮ್ ಫಲಶ್ರುತಿ

ಕೊರಿಯಾ ಪರ್ಯಾಯದ್ವೀಪ ಜಾಗತಿಕ ರಾಜಕಾರಣದ ಮಹತ್ವದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇನ್ನೇನು ಅಣ್ವಸ್ತ್ರ ಯುದ್ಧ ಆರಂಭವಾಗಿಯೇಬಿಡಬಹುದೆಂಬ ಆತಂಕ ಸೃಷ್ಟಿಯಾಗಿದ್ದರ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ಮುಖಂಡರ ಭೇಟಿ ನಿಜಕ್ಕೂ ಮಹತ್ವಪೂರ್ಣ. ಉತ್ತರ ಕೊರಿಯಾ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಿಲ್ಲಿಸಿರುವುದು ಜಾಗತಿಕ ಶಾಂತಿ ನಿಟ್ಟಿನಲ್ಲಿ ಗಮನಾರ್ಹ.

ಪರಸ್ಪರ ವಿರೋಧಿ ದೇಶಗಳ ನಡುವಿನ ಸಂಬಂಧಗಳು ಏಕಾಏಕಿ ಕೆಟ್ಟುಹೋಗಿ, ಇನ್ನೇನು ಯುದ್ಧ ಆರಂಭವಾಗಿಯೇಬಿಟ್ಟಿತು ಎನ್ನುವಂಥ ಸ್ಥಿತಿ ನಿರ್ಮಾಣವಾಗಿ ಎಲ್ಲೆಡೆ ಆತಂಕವನ್ನು ಸೃಷ್ಟಿಸುತ್ತಿದ್ದಂತೆ, ಪರಿಸ್ಥಿತಿ ನಾಟಕೀಯವಾಗಿ ಬದಲಾಗಿ ಸ್ನೇಹಪರ ಮಾತುಕತೆಗಳು ಆರಂಭವಾಗಿ, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಹೊರಹಾಕುವ ಸಂದರ್ಭಗಳು ಜಾಗತಿಕ ಇತಿಹಾಸದಲ್ಲಿ ಮತ್ತೆ ಮತ್ತೆ ಘಟಿಸಿವೆ. ಇಂತಹ ಬೆಳವಣಿಗೆಗಳ ಹಿಂದೆ ಎರಡು ಕಾರಣಗಳಿರುತ್ತವೆ. ಒಂದು- ಸಶಸ್ತ್ರ ಘರ್ಷಣೆ ಘಟಿಸಲಿಲ್ಲವಾದ್ದರಿಂದ ಪರಸ್ಪರ ಗಡಿಯೂ ಬದಲಾಗಿರುವುದಿಲ್ಲ. ಹೀಗಾಗಿ ಪರಸ್ಪರ ದೂರುಗಳಿಗೆ ಅವಕಾಶವಿರುವುದಿಲ್ಲ. ಎರಡು- ಯುದ್ಧದಿಂದಾಗಬಹುದಾಗಿದ್ದ ವಿವಿಧ ಬಗೆಯ ಹಾನಿಗಳ ಚಿತ್ರಣ ರಾಷ್ಟ್ರನಾಯಕರುಗಳ ಅರಿವಿಗೆ ನಿಲುಕಿ, ಮುಂದೆ ಅಂತಹ ಪರಿಸ್ಥಿತಿ ನಿರ್ವಣವಾಗದಿರುವಂತೆ ಎಚ್ಚರಿಕೆ ವಹಿಸುವ ವಿವೇಕಶೀಲ ಚಿಂತನೆಗೆ ಅವರನ್ನು ಪ್ರೇರೇಪಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ನಡುವೆ 1962ರ ಅಕ್ಟೋಬರ್​ನಲ್ಲಿ ಘಟಿಸಿದ ‘ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು’ (Cuban Missile Crisis) ಮತ್ತದರ ನಂತರದ ಬೆಳವಣಿಗೆಗಳು.

ತನ್ನ ತೀರಕ್ಕೆ ಮುನ್ನೂರು ಕಿಲೋಮೀಟರ್​ಗಳಿಗಿಂತಲೂ ಹತ್ತಿರದ ಕ್ಯೂಬಾದಲ್ಲಿ ಅಣ್ವಸ್ತ್ರ ಕ್ಷಿಪಣಿಗಳನ್ನು ಸೋವಿಯತ್ ಯೂನಿಯನ್ ನಿಯೋಜಿಸುತ್ತಿದೆಯೆಂಬ ಮಾಹಿತಿ ದೊರೆತೊಡನೇ ಅಮೆರಿಕ ಉಗ್ರಕ್ರಮಕ್ಕೆ ಮುಂದಾಯಿತು. ಕ್ಯೂಬಾ ಸುತ್ತಲೂ ನೌಕಾ ದಿಗ್ಬಂಧನವೊಡ್ಡಿ ಅಲ್ಲಿಗೆ ಕ್ಷಿಪಣಿಗಳ ಭಾಗಗಳನ್ನು ಸಾಗಿಸುತ್ತಿದ್ದ ಸೋವಿಯತ್ ನೌಕೆಗಳ ದಾರಿಗಡ್ಡವಾಗಿ ಅಮೆರಿಕನ್ ನೌಕೆಗಳು ನಿಂತವು. ಆ ಎರಡು ಅಣ್ವಸ್ತ್ರ ದೈತ್ಯರ ನಡುವೆ ಸಮರ ಆರಂಭವಾಗಬಹುದೆಂಬ ಆತಂಕ ಎಲ್ಲೆಡೆ ಮೂಡಿತು. ಯುದ್ಧ ಅಂದರೆ ಅಣ್ವಸ್ತ್ರ ಯುದ್ಧವಷ್ಟೇ! ವಾಸ್ತವವಾಗಿ, 1962ರ ಅಕ್ಟೋಬರ್ 27ರಂದು ಅಂತಹ ಅನಾಹುತದ ಅಂಚಿನಲ್ಲಿ ವಿಶ್ವ ನಿಂತಿತ್ತು. ಅದೃಷ್ಟವಶಾತ್, ಅಣ್ವಸ್ತ್ರ ಯುದ್ಧದ ಭೀಕರತೆಯನ್ನು ಇಬ್ಬರು ನಾಯಕರೂ ಮನಗಂಡರು. ಕ್ಯೂಬಾದಲ್ಲಿನ ತಮ್ಮ ಚಟುವಟಿಕೆಗಳನ್ನು ನಿಲುಗಡೆಗೆ ತರಲು ಸೋವಿಯತ್ ನೇತಾರ ನಿಕಿತಾ ಕ್ರಶ್ಚೇವ್ ಮನಸ್ಸು ಮಾಡಿದ್ದರಿಂದ ಹಾಗೂ ಟರ್ಕಿ ಮತ್ತು ಇಟಲಿಗಳಲ್ಲಿದ್ದ ಅಮೆರಿಕನ್ ಅಣ್ವಸ್ತ್ರ ಕ್ಷಿಪಣಿಗಳ ಬಗೆಗಿನ ಸೋವಿಯತ್ ಆತಂಕಗಳಿಗೆ ಅಧ್ಯಕ್ಷ ಕೆನಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದಾಗಿ ಮಾನವಕುಲ ವಿನಾಶದಿಂದ ಕೊನೇಕ್ಷಣದಲ್ಲಿ ಬಚಾವಾಯಿತು. ನಿಜ ಹೇಳಬೇಕೆಂದರೆ ತಮ್ಮೆರಡು ರಾಷ್ಟ್ರಗಳು ಇಡೀ ವಿಶ್ವವನ್ನು ಎಂತಹ ದುರಂತದ ಅಂಚಿಗೊಯ್ದಿದ್ದವೆಂಬುದರ ಕರಾಳ ಚಿತ್ರಣದ ಅರಿವು ಎರಡೂ ದೇಶಗಳ ನಾಯಕರಿಗೆ ಪೂರ್ಣವಾಗಿ ದಕ್ಕಿದ್ದು ಬಿಕ್ಕಟ್ಟು ಅಂತ್ಯವಾದ ಮೇಲೆಯೇ ಅಂತೆ. ಇನ್ನೊಮ್ಮೆ ಅಂತಹ ಪರಿಸ್ಥಿತಿ ಏರ್ಪಡದಂತೆ ಎಚ್ಚರಿಕೆ ವಹಿಸುವ ಸಲುವಾಗಿಯೇ ಎರಡೂ ಅಣ್ವಸ್ತ್ರ ದೈತ್ಯರ ನಡುವೆ ಉಚ್ಚಸ್ತರೀಯ ಮಾತುಕತೆಗಳು ಆರಂಭವಾದವು. ಪ್ರಪಂಚದ ಎಲ್ಲೆಡೆ ಹರಡಿಕೊಂಡಿದ್ದ ಎರಡೂ ಸೇನೆಗಳ ನಡುವೆ ಯಾವುದೋ ಒಂದು ಮೂಲೆಯಲ್ಲಿ ಛಕ್ಕನೆ ಕಿಡಿ ಹೊತ್ತುವಂತಹ ಸ್ಥಿತಿ ನಿರ್ವಣವಾಗಿ, ಮರುಕ್ಷಣ ಅದು ವಿಶ್ವವ್ಯಾಪಿಯಾಗದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ಇಬ್ಬರು ಅಧ್ಯಕ್ಷರ ನಡುವೆ ಸದಾ ನೇರಸಂಪರ್ಕದ ಅಗತ್ಯವನ್ನು ಮನಗಂಡ ಮಾಸ್ಕೋ ಮತ್ತು ವಾಷಿಂಗ್ಟನ್ ತಮ್ಮ ನಡುವೆ ‘ಹಾಟ್​ಲೈನ್’ ಸಂಪರ್ಕವನ್ನು ಏರ್ಪಡಿಸಿಕೊಂಡವು. ಇದು ಇನ್ನೂ ಮುಂದುವರಿದು, ಮರುವರ್ಷವೇ ‘ಸೀಮಿತ ಅಣ್ವಸ್ತ್ರಪರೀಕ್ಷಣಾ ನಿಷೇಧ ಒಪ್ಪಂದ’ (Limited Test Ban Treaty)ಕ್ಕೆ ಸಹಿಬಿದ್ದು ಹಂತಹಂತದ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ದಾರಿ ಮಾಡಿಕೊಟ್ಟಿತು. ಘರ್ಷಣೆಯ ಅಂಚಿಗೆ ತಲುಪಿ ಕೊನೇಕ್ಷಣದಲ್ಲಿ ಹಿಂತೆಗೆದುದರ ಸಕಾರಾತ್ಮಕ ಪರಿಣಾಮವಿದು. ಒಂದುವೇಳೆ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ಘಟಿಸದೇ ಇದ್ದಿದ್ದರೆ ಎರಡು ದೈತ್ಯರಾಷ್ಟ್ರಗಳ ನಡುವೆ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಪ್ರಕ್ರಿಯೆ ಆರಂಭವಾಗುತ್ತಿತ್ತೇ ಎಂಬ ಅನುಮಾನವಿದೆ.

ಇಂತಹದೇ ಬೆಳವಣಿಗೆ ಇದೇ ಏಪ್ರಿಲ್ 27ರಂದು ಪೂರ್ವದ ಕೊರಿಯಾ ಪರ್ಯಾಯದ್ವೀಪದಲ್ಲಿ ಘಟಿಸಿದೆ. ಅಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್-ಉನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾ-ಇನ್ ಉಭಯ ದೇಶಗಳ ಗಡಿಯಲ್ಲಿನ ಪನ್​ವುುನ್​ಜೋಮ್ಲ್ಲಿರುವ ‘ಶಾಂತಿ ಗೃಹ’ದಲ್ಲಿ ಭೇಟಿಯಾದರು. ಇತ್ತೀಚಿನ ವರ್ಷಗಳ ಜಾಗತಿಕ ರಾಜಕಾರಣದಲ್ಲಿನ ಮಹತ್ವಪೂರ್ಣ ಪ್ರಸಂಗವಿದು. 1945ರಲ್ಲಿ ಕೊರಿಯಾ ಪರ್ಯಾಯದ್ವೀಪ ವಿಭಜನೆಯಾದಂದಿನಿಂದ ಎರಡೂ ದೇಶಗಳ ಅಧ್ಯಕ್ಷರುಗಳ ನಡುವಿನ ಮೂರನೆಯ ಭೇಟಿ ಇದು ಹಾಗೂ ಈ ಭೇಟಿಗಾಗಿ ಉತ್ತರ ಕೊರಿಯಾದ ಅಧ್ಯಕ್ಷರೊಬ್ಬರು ಮೊಟ್ಟಮೊದಲ ಬಾರಿಗೆ ದಕ್ಷಿಣ ಕೊರಿಯಾದ ನೆಲದಲ್ಲಿ ಕಾಲಿಟ್ಟಿದ್ದಾರೆ ಎನ್ನುವ ಕಾರಣಗಳಿಂದಷ್ಟೇ ಈ ಬೆಳವಣಿಗೆ ಮಹತ್ವ ಪಡೆದುಕೊಳ್ಳುವುದಿಲ್ಲ. ಇದರ ನಿಜವಾದ ಮಹತ್ವ ಅಡಗಿರುವುದು, ಇನ್ನೇನು ಅಣ್ವಸ್ತ್ರ ಯುದ್ಧ ಆರಂಭವಾಗಿಯೇಬಿಡಬಹುದೆಂಬ ಆತಂಕ ಸೃಷ್ಟಿಯಾಗಿದ್ದರ ಹಿನ್ನೆಲೆಯಲ್ಲಿ ಈ ಭೇಟಿ ಜರುಗಿದ್ದು ಎನ್ನುವುದರಲ್ಲಿ.

ಕೊರಿಯಾ ಬಿಕ್ಕಟ್ಟು ಆರಂಭವಾದದ್ದು 1945ರಲ್ಲಿ ಎರಡನೆಯ ಮಹಾಯುದ್ಧ ಮುಗಿದ ಮರುಘಳಿಗೆಯೇ. ಕಳೆದ ಅರ್ಧ ಶತಮಾನದಿಂದಲೂ ಕೊರಿಯಾ ಪರ್ಯಾಯದ್ವೀಪವನ್ನು ಆಕ್ರಮಿಸಿಕೊಂಡಿದ್ದ ಜಪಾನ್ ಮಹಾಯುದ್ಧದಲ್ಲಿ ಸೋತಾಗ ಕೊರಿಯಾದಲ್ಲಿ ಬೀಡುಬಿಟ್ಟಿದ್ದ ಅದರ ಸೇನೆಯನ್ನು ನಿಶ್ಶಸ್ತ್ರೀಕರಣಗೊಳಿಸುವ ಜವಾಬ್ದಾರಿಯನ್ನು ಅಮೆರಿಕ ಮತ್ತು ಸೋವಿಯತ್ ಯೂನಿಯನ್ ತೆಗೆದುಕೊಂಡವು. ಒಪ್ಪಂದದ ಪ್ರಕಾರ 38 ಡಿಗ್ರಿ ಉತ್ತರ ಅಕ್ಷಾಂಶದ ದಕ್ಷಿಣಕ್ಕಿದ್ದ ಪ್ರದೇಶದಲ್ಲಿ ಅಮೆರಿಕನ್ನರೂ, ಉತ್ತರದಲ್ಲಿ ರಷಿಯನ್ನರೂ ತಂತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿತ್ತು. ಜಪಾನಿ ಸೇನೆಯ ನಿಶ್ಶಸ್ತ್ರೀಕರಣ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯವಾದ ನಂತರ ಇಡೀ ಕೊರಿಯಾ ಮತ್ತೆ ಒಂದುಗೂಡಿ ಏಕಸರ್ಕಾರದ ಆಡಳಿತಕ್ಕೆ ಒಳಪಡಬೇಕಾಗಿತ್ತು. ಆದರೆ, ಸೋವಿಯತ್ ಯೂನಿಯನ್ ತನ್ನ ಹತೋಟಿಯಲ್ಲಿದ್ದ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಕೈಗೊಂಬೆ ಕಮ್ಯೂನಿಸ್ಟ್ ಸರ್ಕಾರವನ್ನು ಸ್ಥಾಪಿಸಿ ಕೊರಿಯಾದ ಐಕ್ಯತೆಗೆ ಧಕ್ಕೆ ತಂದಿತು. ಇದಕ್ಕೆ ಪ್ರತಿಯಾಗಿ ಅಮೆರಿಕ ದಕ್ಷಿಣದಲ್ಲಿ ತನ್ನ ಪರವಾದ ಸರ್ಕಾರಕ್ಕೆ ಮನ್ನಣೆ ನೀಡಿತು. ಪರಿಣಾಮವಾಗಿ, ಕೊರಿಯಾ ಪರ್ಯಾಯದ್ವೀಪ ಏಕೀಕೃತ ರಾಷ್ಟ್ರವಾಗಿ ವಿಶ್ವಸಮುದಾಯಕ್ಕೆ ಸೇರುವ ಬದಲು ಬೃಹದ್​ರಾಷ್ಟ್ರಗಳ ಶೀತಲಸಮರದ ಆಡುಂಬೊಲವಾಗಿ ಬದಲಾಗಿ ಅದರ ವಿಭಜನೆ ಶಾಶ್ವತವಾಯಿತು. ಹಾಗೆ ನೋಡಿದರೆ, ಮರುಏಕೀಕರಣ ಎರಡೂ ಕೊರಿಯಾಗಳ ಘೊಷಿತ ನೀತಿ. ಆದರೆ, ಪ್ರಶ್ನೆಯೆಂದರೆ ಆ ಮರುಏಕೀಕರಣವಾಗಬೇಕಾದ್ದು ಉತ್ತರ ಕೊರಿಯಾ ಅನುಸರಿಸುತ್ತಿರುವ ಕಮ್ಯೂನಿಸ್ಟ್ ವ್ಯವಸ್ಥೆಯಡಿಯಲ್ಲೋ ಅಥವಾ ದಕ್ಷಿಣ ಕೊರಿಯಾ ಪ್ರತಿಪಾದಿಸುವ ಬಂಡವಾಳಶಾಹಿ-ಪ್ರಜಾಸತ್ತಾತ್ಮಕ ವ್ಯವಸ್ಥೆಯಡಿಯಲ್ಲೋ ಎನ್ನುವುದು.

ಜಂಗೀಕುಸ್ತಿ: 1949ರಲ್ಲಿ ನೆರೆಯ ಚೀನಾದಲ್ಲಿ ಸ್ಥಾಪನೆಯಾದ ಕಮ್ಯೂನಿಸ್ಟ್ ಸರ್ಕಾರ ಉತ್ತರ ಕೊರಿಯಾದ ಕಮ್ಯೂನಿಸ್ಟ್ ಸರ್ಕಾರದ ಬೆನ್ನಿಗೆ ಗಟ್ಟಿಯಾಗಿ ನಿಲ್ಲುತ್ತಿದ್ದಂತೇ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಉತ್ತರ ಕೊರಿಯಾ ತನ್ನ ನೀತಿ ನಿಲುವುಗಳಿಗೆ ಮತ್ತಷ್ಟು ಬಿಗಿಯಾಗಿ ಅಂಟಿಕೊಂಡಿತು. ಅಷ್ಟೇ ಅಲ್ಲ, ಚೀನಾ ಮತ್ತು ಸೋವಿಯತ್ ಯೂನಿಯನ್​ಗಳ ಬೆಂಬಲದಿಂದ 1950ರ ಜೂನ್​ನಲ್ಲಿ ದಕ್ಷಿಣ ಕೊರಿಯಾ ಮೇಲೆ ದಾಳಿಯೆಸಗಿ ಕ್ಷಿಪ್ರ ಸೈನಿಕ ಕಾರ್ಯಾಚರಣೆ ಮೂಲಕ ಆ ದೇಶವನ್ನು ಸರಿಸುಮಾರು ಇಡಿಯಾಗಿ ಆಕ್ರಮಿಸಿಕೊಂಡೂಬಿಟ್ಟಿತು. ಆದರೆ, ಅಮೆರಿಕ ಸುಮ್ಮನಿರಬೇಕಲ್ಲ. ದಕ್ಷಿಣ ಕೊರಿಯಾದ ಪರವಾಗಿ ಅಂತಾರಾಷ್ಟ್ರೀಯ ಸೇನೆಯೊಂದನ್ನು ವ್ಯವಸ್ಥೆಗೊಳಿಸುವ ತನ್ನ ಯೋಜನೆಗೆ ವಿಶ್ವಸಂಸ್ಥೆಯ ಅಂಗೀಕಾರ ಪಡೆದುಕೊಂಡು ಯುದ್ಧದಲ್ಲಿ ಮಧ್ಯಪ್ರವೇಶಿಸಿತು. ಅನತಿ ಕಾಲದಲ್ಲೇ ಅಮೆರಿಕ ನೇತೃತ್ವದ ಅಂತಾರಾಷ್ಟ್ರೀಯ ಸೇನೆ ಮೇಲುಗೈ ಸಾಧಿಸಿ ದಕ್ಷಿಣ ಕೊರಿಯಾವನ್ನು ವಿಮೋಚನೆಗೊಳಿಸಿದ್ದಲ್ಲದೆ ಉತ್ತರ ಕೊರಿಯಾದೊಳಗೇ ಪ್ರವೇಶಿಸಿತು. ಕೊನೆಗೂ ಉತ್ತರ ಕೊರಿಯಾವನ್ನು ಬಚಾವು ಮಾಡಿದ್ದು ಅದರ ಪರವಾಗಿ ಯುದ್ಧರಂಗಕ್ಕೆ ಧುಮುಕಿದ ಚೀನೀ ಸೇನೆ. ಹೀಗೆ, ದಕ್ಷಿಣ ಕೊರಿಯಾವನ್ನು ನುಂಗಿ ನೊಣೆದು ಇಡೀ ಕೊರಿಯಾ ಪರ್ಯಾಯ ದ್ವೀಪದಲ್ಲಿ ತನ್ನ ಕಮ್ಯೂನಿಸ್ಟ್ ಶಾಸನವನ್ನು ಸ್ಥಾಪಿಸುವ ಬಯಕೆಗೆ ಮುಳ್ಳಾಗಿ ನಿಂತಿರುವ ಅಮೆರಿಕವನ್ನು ತನ್ನ ಪರಮಶತ್ರು ಎಂದು ಉತ್ತರ ಕೊರಿಯಾ ಬಗೆಯುತ್ತದೆ. ಅಮೆರಿಕದ ವಿರೋಧಿ ಸಂಘಟನೆಗಳಿಗೆ ಬೆಂಬಲ ನೀಡುವುದು, ಅಮೆರಿಕದ ಮಿತ್ರದೇಶಗಳಾದ ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ಭದ್ರತೆಗೆ ಧಕ್ಕೆಯೊದಗುವ ನೀತಿಗಳನ್ನು ಅನುಸರಿಸುತ್ತ ಆ ಮೂಲಕ ಅಮೆರಿಕೆಗೆ ಶಾಶ್ವತ ತಲೆನೋವಾಗುವುದು ಉತ್ತರ ಕೊರಿಯಾದ ನೀತಿಗಳ ಮೂಲತತ್ತ್ವವೇ ಆಗಿಹೋಗಿದೆ.

ಅಣ್ವಸ್ತ್ರ ಸಿ.ಡಿ. ಸಾಗಿಸಿದ ಭುಟ್ಟೋ: ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು 1990ರ ದಶಕದ ಆದಿಯಲ್ಲೇ ಹಮ್ಮಿಕೊಂಡ ಉತ್ತರ ಕೊರಿಯಾ ಮೊದಲಿಗೆ ಸೋವಿಯತ್ ಯೂನಿಯನ್​ನಿಂದ ಪಡೆದುಕೊಂಡಿದ್ದ ಸ್ಕಡ್ ಕ್ಷಿಪಣಿಗಳನ್ನು ಪರಿಷ್ಕರಿಸಿ 2009ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್​ನ ಯಾವುದೇ ಭಾಗವನ್ನು ತಲುಪಬಲ್ಲ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿತು. ಈ ನಡುವೆ ಅದು ಅಣ್ವಸ್ತ್ರಗಳನ್ನೂ ಗಳಿಸಿಕೊಂಡಿತು. ಉತ್ತರ ಕೊರಿಯಾಗೆ ಅಣ್ವಸ್ತ್ರ ತಂತ್ರಜ್ಞಾನ ಸಿಕ್ಕಿದ್ದು ಪಾಕಿಸ್ತಾನದಿಂದ. ಆಗಿನ ಪ್ರಧಾನಮಂತ್ರಿ ಬೇನಜಿರ್ ಭುಟ್ಟೋ 1993ರಲ್ಲಿ ಉತ್ತರ ಕೊರಿಯಾಗೆ ಅಧಿಕೃತ ಭೇಟಿ ನೀಡಿದಾಗ ಅಣ್ವಸ್ತ್ರ ತಂತ್ರಜ್ಞಾನವಿದ್ದ ಸಿ.ಡಿ.ಯನ್ನು ತಮ್ಮ ಕೋಟಿನ ಒಳಜೇಬಿನಲ್ಲಿಟ್ಟುಕೊಂಡು ಹೋದರು. ಹಿಂತಿರುಗುವಾಗ ಉತ್ತರ ಕೊರಿಯಾ ನೀಡಿದ ಕ್ಷಿಪಣಿ ತಂತ್ರಜ್ಞಾನದ ವಿವರಗಳು ಅವರಲ್ಲಿದ್ದವು. ಹೀಗೆ ಒಂದು ದೇಶದ ಪ್ರಧಾನಮಂತ್ರಿಯಾಗಿ, ನಿರ್ಬಂಧಿತ ಅಣ್ವಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನದ ಕಳ್ಳಸಾಗಾಣಿಕೆದಾರಳ ಪಾತ್ರವನ್ನು ಬೇನಜಿರ್ ಭುಟ್ಟೋ ನಿರ್ವಹಿಸಿದರು. ತಾನು ಪಾಕಿಸ್ತಾನದ ಕ್ಷಿಪಣಿ ಯೋಜನೆಗಳ ತಾಯಿ ಎಂದಾಕೆ ಮತ್ತೆಮತ್ತೆ ಹೇಳಿಕೊಳ್ಳುತ್ತಿದ್ದುದರ ಹಿಂದಿನ ರಹಸ್ಯ ಇದು.

ಹೀಗೆ, ಅಣ್ವಸ್ತ್ರಗಳನ್ನೂ, ಅವುಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿಗಳನ್ನೂ ಪಡೆದುಕೊಳ್ಳುವ ಯೋಜನೆಯನ್ನು ಉತ್ತರ ಕೊರಿಯಾ ಹಂತಹಂತವಾಗಿ ವಿಸ್ತರಿಸುತ್ತ ಸಾಗಿತು. ಪ್ರಸಕ್ತ ಅಧ್ಯಕ್ಷ ಕಿಮ್ ಜಾಂಗ್-ಉನ್ 2011ರಲ್ಲಿ ಅಧಿಕಾರಕ್ಕೇರುತ್ತಿದ್ದಂತೆ ಸಮೂಹನಾಶಕ ಅಸ್ತ್ರಗಳ ಯೋಜನೆ ತ್ವರಿತ ಗತಿಯಲ್ಲಿ ಮುಂದುವರಿದು ಕಳೆದ ವರ್ಷ ಅದು ಅಮೆರಿಕದ ನೆಲಕ್ಕೇ ಅಣ್ವಸ್ತ್ರಗಳಿಂದ ಅಪ್ಪಳಿಸಬಲ್ಲ ಸಾಮರ್ಥ್ಯ ಪಡೆದುಕೊಂಡಿತು. ನಂತರದ ನಾಲ್ಕೈದು ತಿಂಗಳುಗಳು ಜಗತ್ತಿಗೆ ನೆನಪಿಸಿದ್ದು ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ದಿನಗಳನ್ನು.

ಟ್ರಂಪ್ ಕಟ್ಟುನಿಟ್ಟಿನ ಕ್ರಮ: ವಾಸ್ತವವಾಗಿ, ಸ್ವಿಜರ್ಲೆಂಡ್​ನಲ್ಲಿ ಶಿಕ್ಷಣ ಪಡೆದ ಕಿಮ್ ಅಧಿಕಾರಕ್ಕೆ ಬಂದರೆ ತನ್ನ ದೇಶವನ್ನು ಶಾಂತಿಯ, ಆರ್ಥಿಕ ಅಭಿವೃದ್ಧಿಯ ಹಾದಿಯತ್ತ ಕೊಂಡೊಯ್ಯಬಹುದೆಂಬ ಆಶಯ ಅಂತಾರಾಷ್ಟ್ರೀಯ ರಂಗದಲ್ಲಿತ್ತು. ಆದರೆ ಕಿಮ್ ಆಂತರಿಕವಾಗಿ ಸರ್ವಾಧಿಕಾರಿ ಆಡಳಿತವನ್ನು ಅತೀವ ಹೇಯ ಎನ್ನುವ ಮಟ್ಟಕ್ಕಿಳಿಸಿದರು. ಜತೆಗೆ, ದಕ್ಷಿಣ ಕೊರಿಯಾ ಮತ್ತು ಜಪಾನ್​ಗಳ ಸುರಕ್ಷೆಗೆ ಮಾರಕವಾಗುವ ಯೋಜನೆಗಳನ್ನು ಪ್ರಕಟಿಸತೊಡಗಿ ವಿಶ್ವಶಾಂತಿಗೆ ಕಂಟಕವಾಗಿ ಬೆಳೆದರು. ಇದೆಲ್ಲ ನಡೆದದ್ದು ಒಬಾಮ ಆಡಳಿತಾವಧಿಯಲ್ಲಿ. ಆದರೆ, ಡೊನಾಲ್ಡ್ ಟ್ರಂಪ್ ಶ್ವೇತಭವನ ಪ್ರವೇಶಿಸುತ್ತಿದ್ದಂತೆ ಕಿಮ್ ಅದೃಷ್ಟರೇಖೆ ಕೆಳಮುಖವಾಗತೊಡಗಿತು. ಕಿಮ್ ಶಾಂತಿಕಂಟಕ ಯೋಜನೆಗಳನ್ನು ಉಗ್ರವಾಗಿ ಖಂಡಿಸಿದ ಟ್ರಂಪ್ ಆರ್ಥಿಕ ಬಹಿಷ್ಕಾರಗಳ ಮೂಲಕ ಮೊದಲೇ ಹೀನಾವಸ್ಥೆಯಲ್ಲಿದ್ದ ಉತ್ತರ ಕೊರಿಯಾದ ಅರ್ಥವ್ಯವಸ್ಥೆ ನೆಲಕಚ್ಚುವಂತೆ ಮಾಡಿದರು. ಇದು ಸಾಲದೆಂಬಂತೆ, ಅಗತ್ಯ ಬಿದ್ದರೆ ಅಣ್ವಸ್ತ್ರ ದಾಳಿಯೆಸಗಿ ಅದರ ಬೆನ್ನುಮೂಳೆ ಮುರಿಯುವುದಲ್ಲದೆ ಅಧ್ಯಕ್ಷ ಕಿಮ್ನ್ನೂ ಪದಚ್ಯುತಿಗೊಳಿಸುವುದಾಗಿ ಟ್ರಂಪ್ ನೇರವಾಗಿ ಎಚ್ಚರಿಕೆ ನೀಡಿದರು. ಅಂತೂ ಉತ್ತರ ಕೊರಿಯಾದ ಹುಚ್ಚಾಟಗಳಿಗೆ ತಕ್ಕ ಶಾಸ್ತಿಯೆಸಗುವ ಜಾಗತಿಕ ನಾಯಕನೊಬ್ಬ ಕೊನೆಗೂ ಕಾಣಿಸಿಕೊಂಡ.

ಇದರ ಪರಿಣಾಮವೇ ಕಿಮ್ ತನ್ನ ಶಾಂತಿಕಂಟಕ ಹಾದಿ ತೊರೆಯುವಂತೆ ಮಾಡಿದ್ದು. ದಕ್ಷಿಣ ಕೊರಿಯಾದ ಸುರಕ್ಷೆಗೆ ತಾವು ಹಾನಿಯೆಸಗುವುದಿಲ್ಲವೆಂದು ಕಳೆದ ಡಿಸೆಂಬರ್​ನಲ್ಲಿ ಘೊಷಿಸಿದ ಅವರು ಆ ದೇಶದ ಅಧ್ಯಕ್ಷ ಮೂನ್ ಜಾ-ಇನ್ ಜತೆ ರಾಜತಾಂತ್ರಿಕ ಸಂಪರ್ಕ ಸಾಧಿಸಿದರು. ಅಧ್ಯಕ್ಷ ಟ್ರಂಪ್​ರನ್ನೂ ಭೇಟಿಯಾಗುವ ಇರಾದೆ ವ್ಯಕ್ತಪಡಿಸಿದರು. ತಮ್ಮ ಈ ಹೊಸ ನೀತಿಗಳಿಗೆ ಚೀನಾದಿಂದ ಬರಬಹುದಾದ ಯಾವುದೇ ಪ್ರತಿಕೂಲ ಪ್ರತಿಕ್ರಿಯೆಯನ್ನು ನಿವಾರಿಸಿಕೊಳ್ಳುವ ಉದ್ದೇಶದಿಂದ ಮಾರ್ಚ್ ಮಾಸಾಂತ್ಯದಲ್ಲಿ ಬೀಜಿಂಗ್​ಗೆ ಭೇಟಿಯಿತ್ತು ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರ ಬೆಂಬಲವನ್ನೂ ಗಳಿಸಿಕೊಂಡರು. ಈ ಎಲ್ಲ ತಯಾರಿಯೊಂದಿಗೆ ದಕ್ಷಿಣ ಕೊರಿಯಾದ ಅಧ್ಯಕ್ಷರನ್ನವರು ಭೇಟಿಯಾಗಿ ಇತಿಹಾಸ ನಿರ್ವಿುಸಿದ್ದಾರೆ, ತಮ್ಮ ಅಣ್ವಸ್ತ್ರ ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸುವುದಾಗಿಯೂ ಘೊಷಿಸಿದ್ದಾರೆ. ಅವರ ಈ ಸಕಾರಾತ್ಮಕ ಯೋಜನೆಗಳಿಗೆ ಸ್ಪಂದಿಸಿರುವ ಅಧ್ಯಕ್ಷ ಟ್ರಂಪ್ ಮುಂದಿನ ತಿಂಗಳು ಪನ್​ವುುನ್​ಜೋಮ್ ಶಾಂತಿಗೃಹದಲ್ಲೇ ಅವರನ್ನು ಭೇಟಿಯಾಗುವುದಾಗಿ ಘೊಷಿಸಿದ್ದಾರೆ.

ಕಿಮ್ ನೀತಿಗಳು ಈಗ ಸೃಷ್ಟಿಸಿರುವ ನಿರೀಕ್ಷೆ, ಆಶೋತ್ತರಗಳಿಗನುಗುಣವಾಗಿಯೇ ಮುಂದುವರಿದರೆ ಕೊರಿಯಾ ಪರ್ಯಾಯದ್ವೀಪವಷ್ಟೇ ಅಲ್ಲ, ಜಾಗತಿಕ ರಂಗದಲ್ಲೇ ಶಾಂತಿಯ ಹೊಸ ಯುಗವೊಂದನ್ನು ನಿರೀಕ್ಷಿಸಬಹುದಾಗಿದೆ. ಈ ನಿರೀಕ್ಷೆಯ ಜತೆಜತೆಯೇ, ಕಿಮ್ ಹಾಗೂ ಟ್ರಂಪ್ ಇಬ್ಬರೂ ಏಕಾಏಕಿ ಮನಸ್ಸು ಬದಲಾಯಿಸುವುದರಲ್ಲಿ ನಿಸ್ಸೀಮರು ಎಂಬ ವಾಸ್ತವವನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *