ಕನ್ನಡ ಸಾಹಿತ್ಯದ ಚಿರಂತನ ಪೂರ್ಣಚಂದ್ರ

ಬದುಕಿನಲ್ಲೂ, ಬರಹದಲ್ಲೂ ನಮ್ಮ ಯುವಜನಾಂಗಕ್ಕೆ ಮಾದರಿಯಾಗಬೇಕಾದವರು ತೇಜಸ್ವಿ. ತಮ್ಮ ಬರಹಗಳಿಗೆ ವಸ್ತುಗಳನ್ನು ಸುತ್ತಲಿನ ಜಗತ್ತಿನ ವ್ಯಾಪಾರಗಳಲ್ಲೇ ಕಂಡುಕೊಂಡು ಕನ್ನಡ ಸಾಹಿತ್ಯವನ್ನು ಅದ್ವಿತೀಯವಾಗಿ ಶ್ರೀಮಂತಗೊಳಿಸಿದರು. ಹೀಗಾಗಿಯೇ ಅವರ ಕಥೆಕಾದಂಬರಿಗಳ ಸನ್ನಿವೇಶಗಳು, ಪಾತ್ರಗಳು ನಮಗೆ ಅಪರಿಚಿತವೆನಿಸುವುದಿಲ್ಲ.

 ಕನ್ನಡದ ಮೇರು ಸಾಹಿತಿಗಳಲ್ಲೊಬ್ಬರಾದ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ನಮ್ಮನ್ನಗಲಿ ನಾಳೆ, ಏಪ್ರಿಲ್ 5ಕ್ಕೆ ಹನ್ನೊಂದು ವರ್ಷಗಳಾಗಲಿವೆ. ಆದರೆ, ಅವರ ನಿತ್ಯನೂತನವೆನಿಸುವ, ಅವರದೇ ವಿಶಿಷ್ಟ ಛಾಪಿನ ಬರಹಗಳು ನಮ್ಮ ಜತೆಗಿವೆ, ಆ ಮೂಲಕ ತೇಜಸ್ವಿಯರನ್ನು ಜೀವಂತವಾಗಿರಿಸಿವೆ. ಇಂತಹ ವಿಶಿಷ್ಟ ಲೇಖಕನನ್ನು ‘ಜಗದಗಲ’ದ ಅಸಾಹಿತ್ಯಕ ಓದುಗವರ್ಗಕ್ಕೆ ಸರಳವಾಗಿ ಪರಿಚಯಿಸುವ ಒಂದು ಪುಟ್ಟ ಪ್ರಯತ್ನ ಇದು.

ತೇಜಸ್ವಿಯವರ ಬರಹಗಳ ಪರಿಚಯ ನನಗಾದದ್ದು ನಲವತ್ತನಾಲ್ಕು ವರ್ಷಗಳ ಹಿಂದೆ. ಇಂಥದೇ ಏಪ್ರಿಲ್ ತಿಂಗಳ ಆರಂಭದ ಒಂದು ಮಧ್ಯಾಹ್ನ ಅದು. ಒಂಭತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಬೇಸಗೆ ರಜೆಯ ಮಜಾ ಅನುಭವಿಸುತ್ತಿದ್ದ ನನ್ನ ಕೈಯಲ್ಲಿ ‘ಕಸ್ತೂರಿ’ ಮಾಸಿಕದ ವಸಂತ ಸಂಚಿಕೆ ಇತ್ತು ಮತ್ತು ತೇಜಸ್ವಿಯವರ ‘ನಿಗೂಢ ಮನುಷ್ಯರು’ ಕಿರುಕಾದಂಬರಿ ಅದರಲ್ಲಿತ್ತು. ಮಳೆಯೊಂದಿಗೆ ಆರಂಭವಾಗಿ, ಮಳೆಯೊಂದಿಗೆ ಮುಂದೆ ಸಾಗಿ, ಮಳೆಯೊಂದಿಗೇ ಕೊನೆಯಾಗುವ ಆ ಕಥನವನ್ನು ಅತ್ತಿತ್ತ ಅಲುಗದೇ ಒಂದೇ ಭಂಗಿಯಲ್ಲಿ ಕೂತು ಓದಿ ಮುಗಿಸಿದಾಗ ಸ್ವಲ್ಪ ಕೈಕಾಲು ಆಡಿಸಲೆಂದು ಮನೆಯಿಂದ ಹೊರಹೋಗಬೇಕೆನಿಸಿದ್ದು ಸಹಜವೇ ಆಗಿತ್ತು. ಮರುಕ್ಷಣ ಏನೋ ಬೇಸರ. ‘ಈ ಜಿಟಿಜಿಟಿ ಮಳೆಯಲ್ಲಿ ಹೇಗೆ ತಾನೆ ಹೊರಹೋಗೋದು? ಥತ್!’ ಎಂದುಕೊಳ್ಳುತ್ತ ಬೇಸರದಿಂದಲೇ ಹೊರಗೆ ಕಣ್ಣಾಡಿಸಿದೆ, ಅವಾಕ್ಕಾದೆ.

ಹೊರಗೆ ಪ್ರಖರ ಬಿಸಿಲಿತ್ತು! ಮಳೆಯಿರಲಿ, ಮಳೆ ಬಿದ್ದ ಕುರುಹಾಗಲೀ, ಮಳೆ ತರುವ ಮುಗಿಲುಗಳ ಸುಳಿವಾಗಲೀ ಇರಲಿಲ್ಲ. ತೇಜಸ್ವಿಯವರ ‘ನಿಗೂಢ ಮನುಷ್ಯರು’ವಿನಲ್ಲಿನ ಮಳೆ ನಾನಿದ್ದ ಪರಿಸರದ ಅರಿವನ್ನೇ ನನ್ನಿಂದ ಮರೆಮಾಡಿ ನನ್ನನ್ನು ಬೇರೊಂದು ನಿಗೂಢಲೋಕಕ್ಕೆ ಒಯ್ದು ಕೆಡವಿತ್ತು! ತೇಜಸ್ವಿಯವರ ಬರಹಗಳಲ್ಲಿನ ನಿಗೂಢ, ನವರಸಭರಿತ, ಕಲಿಕೆಯ ಲೋಕಕ್ಕೆ ನಾನು ಪ್ರವೇಶಿಸಿದ್ದು ಹೀಗೆ.

ಜೀವನದ ಬೆರಗು: ನವಿರು ಹಾಸ್ಯದೊಡನೆ ಗಂಭೀರ ಸತ್ಯಗಳನ್ನು ಕಣ್ಣಮುಂದೆ ಕಟ್ಟಿದಂತೆ ಅನಾವರಣಗೊಳಿಸುವ ತೇಜಸ್ವಿಯವರ ಕಥೆಗಳಲ್ಲಿ ಕಾಣುವ ವಿಭಿನ್ನ ಬದುಕಿನ ಅಥವಾ ಬದುಕಿನ ವಿಭಿನ್ನ ಚಿತ್ರಣ ನನಗೆ ಅನನ್ಯ. ‘‘ಸ್ವರೂಪ, ಕರ್ವಾಲೋ, ಕಿರಗೂರಿನ ಗಯ್ಯಾಳಿಗಳು, ಮಾಯಾಮೃಗ, ನಿಗೂಢ ಮನುಷ್ಯರು, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕಗಳಲ್ಲಿ’ ಅವರು ಸೃಷ್ಟಿಸುವ ಬದುಕಂತೂ ಬೆರಗು ಹುಟ್ಟಿಸುವಷ್ಟರ ಮಟ್ಟಿಗೆ ವಾಸ್ತವದ ಪಡಿಯಚ್ಚು. ಅವರ ಕಲ್ಪನೆಯ ಡೇರ್ ಡೆವಿಲ್ ಮುಸ್ತಾಫಾ, ತಬರ, ಕುಬಿ ಡಾಕ್ಟರ್, ತುಕ್ಕೋಜಿ, ಕೃಷ್ಣೇಗೌಡ, ಅಣ್ಣಪ್ಪಣ್ಣ- ಮುಂತಾದ ನೂರೊಂದು ಪಾತ್ರಗಳು ಮನುಷ್ಯಸ್ವಭಾವದ ನೂರೊಂದು ವೈಚಿತ್ರ್ಯ ವೈರುದ್ಧಗಳೊಡನೆ, ಮನುಷ್ಯಸಂಬಂಧದ ಸಾವಿರದೊಂದು ಆಯಾಮಗಳೊಡನೆ ನಾವೆಂದೂ ಮರೆಯಲಾಗದ ಬಗೆಯಲ್ಲಿ ನಮ್ಮನ್ನು ಮುಖಾಮುಖಿಯಾಗಿಸುತ್ತವೆ. ಅವರ ಬರಹಗಳಲ್ಲಿ ಅಜರಾಮರರಾಗಿಹೋಗಿರುವ ಮಾರ ಮತ್ತು ಅವನನ್ನು ಕಾಡಿಸುವ ಕುಕ್ಕುಟ ಪಿಶಾಚ, ಕೊಳಕ ಮಾಸ್ತಿ ಮತ್ತವನ ಬಡಪಾಯಿ ನಾಯಿ, ಪ್ಯಾರ ಮತ್ತವನ ಪ್ಯಾಂಟಿನೊಳಗೆ ನುಗ್ಗಿ ಫಜೀತಿಗಟ್ಟಿಸುವ ಓತಿಕ್ಯಾತ, ಹಾವಾಡಿಗ ಎಂಗ್ಟ, ಅವನ ಹೆಂಡತಿ, ಅವಳ ಮೊಲೆಯನ್ನು ಗುಡಗುಡಿ ಸೇದುವಂತೆ ಕಚ್ಚಿಕೊಂಡಿರುವ ಮಗು, ಲಾರಿ ಡ್ರೈವರುಗಳ ಪಟ್ಟದರಾಣಿಯರಂತಹ ಹೈವೇ ಗರ್ಲ್್ಸ ಜಗಳಗಂಟ ಬಂಗಾಳಿ, ‘‘ನಾನು ಲಿಂಗಾಯತ, ಹಾವು ನಮಗೆ ದೇವರು’ ಹಾಗೂ ‘‘ಅಯ್ಯೋ ನನ್ನ ಹೆಂಡತಿ ಬಸುರಿ, ನಾನು ಹಾವು ಹೊಡೆಯುವುದಿಲ್ಲ’ ಎಂದು ಹೇಳಿ ಓಡಿಹೋಗುವ ‘ವಿಜ್ಞಾನಿ’ಗಳು, ದನ ಮೇಯಿಸುವ ಬೆಪ್ಪು ತಲಪುರಕಿ, ದುರುಳ ಸಬ್​ಇನ್ಸ್​ಪೆಕ್ಟರ್ ಪೀಟರ್ ರಾಣಿ, ಬೇಟೆಯೆಂದರೆ ತುದಿಗಾಲಲ್ಲಿ ನಿಲ್ಲುವ ಕಿವಿ ಮತ್ತದರ ಮೂತಿಗೇ ಉಚ್ಚೆಯ ಪಿಚಕಾರಿ ಹೊಡೆಯುವ ಕಪ್ಪೆ, ನರಕದ ತುತ್ತೂರಿಯಂತೆ ಕೂಗಿ ದಿಕ್ಕೆಡಿಸುವ ಹಂದಿಮರಿ, ಶಾಂತಾ ಅವರನ್ನು ಸಮುದ್ರಸ್ನಾನಕ್ಕಿಳಿಸಲು ಹಂಚಿಕೆ ಹಾಕುವ ಅಂಡಮಾನಿನ ಅಕ್ಟೋಪಸ್, ಕಣ್ಣಿಗೆಲ್ಲ ಟಾರ್ ಮೆತ್ತಿಕೊಂಡು ದಿಕ್ಕುತೋಚದೇ ಹುಚ್ಚೆದ್ದು ಕುಣಿಯುವ ಕಾಳಪ್ಪನ ಕೋಬ್ರ, ಫಾರೆಸ್ಟರ್ ಗಾಡ್ಲಿಯನ್ನೇ ಬೋನಿನೊಳಗೆ ಕೂಡಿಹಾಕುವ ಮಂಗಗಳು- ಮುಂತಾದ ಅಸಂಖ್ಯ ನೈಜಪಾತ್ರಗಳು ಈ ಜಗತ್ತು ಅದೆಷ್ಟು ವೈವಿಧ್ಯಮಯ, ಸ್ವಾರಸ್ಯಕರ ಎಂದು ಸಾರಿಹೇಳುತ್ತವೆ. ಜತೆಗೆ, ತೇಜಸ್ವಿಯವರ ಕುತೂಹಲಪೂರ್ಣ ಕಣ್ಣು ಕಿವಿಗಳ ಬಗ್ಗೆ ಬೆರಗು ಹುಟ್ಟಿಸುತ್ತವೆ.

ತಾವು ಕಂಡ ಜನ ಜಾನುವಾರುಗಳ, ಹಕ್ಕಿ ಹಾವುಗಳ ಬಗ್ಗೆ ಬರೆಯುವಾಗ, ಅಷ್ಟೇಕೆ ತಮ್ಮ ಬಗ್ಗೆಯೇ ಹೇಳಿಕೊಳ್ಳುವಾಗ ತೇಜಸ್ವಿಯವರ ಬರಹಗಳಲ್ಲಿ ಕಂಡುಬರುವುದು ಇನಿತೂ ಕಲ್ಮಶವಿಲ್ಲದ ಪ್ರಾಮಾಣಿಕತೆ. ತೇಜಸ್ವಿಯವರದು ನೇರ ನಡೆ, ನೇರ ನುಡಿ. ಸ್ವರ್ಗ ನರಕ, ದೇವರು ದೆವ್ವ- ಮುಂತಾದುವುಗಳ ಬಗ್ಗೆ ನಂಬಿಕೆಯೇ ಇಲ್ಲದ, ಜಗತ್ತಿನ ಎಲ್ಲ ಕ್ರಿಯೆ ಪ್ರಕ್ರಿಯೆಗಳಿಗೆ ಭೌತಿಕ ಕಾರಣಗಳಿವೆ ಎಂದು ನಂಬುವ ಒಂದು ಬಗೆಯ ‘ಅಗ್ನೋಸ್ಟಿಕ್’ ವಿಚಾರಧಾರೆ ಅವರದಾಗಿತ್ತು. ಅವರ ಬರಹಗಳಲ್ಲಿ ಪ್ರಧಾನವಾಗಿ ಕಾಣಬರುವ ವೈಜ್ಞಾನಿಕತೆ ಬಗ್ಗೆ ಯಾರೋ ಪ್ರಶ್ನೆ ಮಾಡಿದಾಗ ತೇಜಸ್ವಿ ಹೇಳಿದ್ದು- ‘ನಾವು ಬದುಕಬೇಕಾದ್ದೇ ಹಾಗಲ್ಲವೇ?’ ಅಂತ.

ತೇಜಸ್ವಿಯವರು ಕಥಾಲೋಕಕ್ಕೆ ಪ್ರವೇಶಿಸಿದ್ದು ಐವತ್ತರ ದಶಕದ ಉತ್ತರಾರ್ಧದಲ್ಲಿ, 1959ರ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ’ ಮೊದಲ ಹಾಗೂ ಮೂರನೆಯ ಬಹುಮಾನಗಳೆರಡನ್ನು ತಮ್ಮದಾಗಿಸಿಕೊಳ್ಳುವ ಮೂಲಕ. ಆಗ ಸಾಹಿತ್ಯಾಸಕ್ತರನ್ನು ತಮ್ಮತ್ತ ಸೆಳೆದುಕೊಂಡ ತೇಜಸ್ವಿಯವರಿಗೆ ವಿರೋಧಿಗಳು ಹುಟ್ಟಿಕೊಂಡದ್ದೂ ಆಗಲೇ. ‘ಇವನು ಕಥೆಗಳನ್ನು ತನ್ನ ಅಪ್ಪನಿಂದ ಬರೆಸಿಕೊಂಡಿದ್ದಾನೆ’ ಎಂಬ ಕೊಂಕಿನ ಮೂಲಕ ಸರೀಕರು ತಮ್ಮ ಅಸೂಯೆಯನ್ನು ಹೊರಹಾಕಿದ್ದನ್ನು ತೇಜಸ್ವಿ ‘ಅಣ್ಣನ ನೆನಪು’ ಕೃತಿಯಲ್ಲಿ ದಾಖಲಿಸಿದ್ದಾರೆ. ನಂತರದ ವರ್ಷಗಳಲ್ಲಿ ತೇಜಸ್ವಿಯವರ ಪ್ರತಿಭೆ ಅನಾವರಣಗೊಂಡ ಬಗೆ ಅವರ ಅಭಿಮಾನಿಗಳ ಸಂಖ್ಯೆಯನ್ನು ಅಗಾಧವಾಗಿ ಹೆಚ್ಚಿಸಿದರೆ, ವಿರೋಧಿಗಳು ಮುಖ ಬಿಗಿದುಕೊಂಡಾದರೂ ಮೆಚ್ಚುವಂತೇ ಮಾಡಿತು.

ಕಥೆಗಾರ ತೇಜಸ್ವಿ: ತೇಜಸ್ವಿಯವರು ಕಥೆಗಾರಿಕೆ ಅರಂಭಿಸಿದ್ದು ನವ್ಯಪಂಥದ ಆರಂಭಕಾಲದಲ್ಲಿ. ಸಹಜವಾಗಿಯೇ ನವ್ಯದ ಸುಳಿಗೆ ಸಿಲುಕಿದ ತೇಜಸ್ವಿ ಆ ಮಾರ್ಗದಲ್ಲಿ ಸ್ವಲ್ಪಕಾಲ ಸಾಗಿ ನಂತರ ಅದನ್ನು ತೊರೆದು ತಮ್ಮದೇ ‘ಹೊಸ ದಿಗಂತ’ವನ್ನು ಸೃಷ್ಟಿಸಿಕೊಂಡರು. ‘ಹುಲಿಯೂರಿನ ಸರಹದ್ದು’ ಸಂಕಲನಕ್ಕೂ ‘ಅಬಚೂರಿನ ಪೋಸ್ಟಾಫೀಸು’ ಸಂಕಲನಕ್ಕೂ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದ ಓದುಗರಿಗೆ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ. ನವ್ಯಪಂಥವನ್ನು ತೊರೆಯುವುದು ತೇಜಸ್ವಿಯವರಿಗೆ ಅನಿವಾರ್ಯವಾಗಿತ್ತು ಎಂದು ನನಗನಿಸುತ್ತದೆ. ನಮ್ಮ ಪ್ರಮುಖ ನವ್ಯ ಬರಹಗಾರರು ಇಂಗ್ಲಿಷ್ ಮೇಷ್ಟ್ರುಗಳಾಗಿದ್ದುದು ನಿಮಗೂ ಗೊತ್ತಿದೆ. ಹೀಗಾಗಿಯೇ, ಇಂಗ್ಲಿಷ್ ಸಾಹಿತ್ಯದಲ್ಲಿ ಹಾಗೂ ಇಂಗ್ಲಿಷ್​ನಲ್ಲಿ ಲಭ್ಯವಿದ್ದ ಇತರ ಪಾಶ್ಚಾತ್ಯ ಭಾಷೆಗಳ ಸಾಹಿತ್ಯದಲ್ಲಿ, ಮುಖ್ಯವಾಗಿ ಫ್ರೆಂಚ್ ಸಾಹಿತ್ಯದಲ್ಲಿ ಆ ದಿನಗಳಲ್ಲಿ ಢಾಳಾಗಿ ಕಾಣುತ್ತಿದ್ದ ಮನೋವಿಶ್ಲೇಷಣೆ, ವೈಚಾರಿಕತೆ ಹಾಗೂ ಸಮಾಜ-ಆರ್ಥಿಕ ಸಿದ್ಧಾಂತಗಳು ಅವರುಗಳ ಕಥೆಗಾರಿಕೆಯನ್ನು ಗಾಢವಾಗಿ ಪ್ರಭಾವಿಸಿದ್ದವು.

ಕೆಲವರಂತೂ ಆ ದಿನಗಳಲ್ಲಿ ಕನ್ನಡದ ಓದುಗವರ್ಗಕ್ಕೆ ಅಗೋಚರವಾಗಿಯೇ ಉಳಿದಿದ್ದ ಫ್ರಾಂಜ್ ಕಾಫ್ಕಾ, ಜೀನ್ ಪಾಲ್ ಸಾರ್ತ್್ರ ಅವರಂತಹ ಯುರೋಪಿಯನ್ ಲೇಖಕರ ಬರಹಗಳನ್ನು ಕನ್ನಡಕ್ಕೆ ನೇರವಾಗಿ ಭಟ್ಟಿಯಿಳಿಸಿ ‘ಗಣ್ಯ ಲೇಖಕ’ರ ಪಟ್ಟ ಗಳಿಸಿಕೊಂಡರು. ಆದರೆ ಈ ವಾಮಮಾರ್ಗ ತೇಜಸ್ವಿಯವರಿಗೆ ಇಷ್ಟವಿರಲಿಲ್ಲವಷ್ಟೇ ಅಲ್ಲ ಪಾಶ್ಚಾತ್ಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಗುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಅವರೇ ಹೇಳಿಕೊಳ್ಳುವಂತೆ ಅವರ ಇಂಗ್ಲಿಷ್ ಜ್ಞಾನ ಅತ್ಯಲ್ಪ. ಎಷ್ಟು ಕನಿಷ್ಠ ಅಂದರೆ ’ಏಛಿ’ ಎನ್ನುವುದು ‘ಹೆ’ ಅಂತಾಗಬೇಕಲ್ಲ, ಅದೇಕೆ ‘ಹಿ’ ಅಂತಾಗುತ್ತದೆ ಎಂದು ಅಚ್ಚರಿ ಪಡುವಷ್ಟು! ಈ ಕಾರಣದಿಂದಲೇ ತೇಜಸ್ವಿಯವರಿಗೆ ಇಂಗ್ಲಿಷ್​ನಲ್ಲಿ ಲಭ್ಯವಿದ್ದ ಸಾಹಿತ್ಯವನ್ನು ಓದುವುದಾಗಲಿಲ್ಲ, ಅದರ ಪ್ರಭಾವಕ್ಕೆ ಸಿಲುಕುವುದಕ್ಕೂ ಆಗಲಿಲ್ಲ. ತೇಜಸ್ವಿ ತಮ್ಮ ಬರಹಗಳಿಗೆ ವಸ್ತುಗಳನ್ನು ಸುತ್ತಲಿನ ಜಗತ್ತಿನ ವ್ಯಾಪಾರಗಳಲ್ಲೇ ಕಂಡುಕೊಂಡರು, ಕನ್ನಡ ಸಾಹಿತ್ಯವನ್ನು ಅದ್ವಿತೀಯವಾಗಿ ಶ್ರೀಮಂತಗೊಳಿಸಿದರು. ಹೀಗಾಗಿಯೇ ಅವರ ಕಥೆಕಾದಂಬರಿಗಳ ಸನ್ನಿವೇಶಗಳು, ಪಾತ್ರಗಳು ನಮಗೆ ಅಪರಿಚಿತವೆನಿಸುವುದಿಲ್ಲ, ಬೇರೊಂದೆಡೆಯಿಂದ ಬಲವಂತವಾಗಿ ಎಳೆದು ತಂದು ನಮ್ಮ ಮುಂದೆ ನಿಲ್ಲಿಸಿದಂತೆನಿಸುವುದಿಲ್ಲ.

ಸಾಹಿತ್ಯಕೃಷಿಯ ಆರಂಭದ ವರ್ಷಗಳಲ್ಲಿ ತೇಜಸ್ವಿಯವರು ‘ನಳಿನಿ ದೇಶಪಾಂಡೆ’ ಎಂಬ ಸ್ತ್ರೀನಾಮದಲ್ಲಿ ಕವನಗಳನ್ನು ಬರೆದದ್ದುಂಟು! ಗುಟ್ಟಾಗಿದ್ದ ಈ ವಿಷಯವನ್ನು ಸಾಹಿತ್ಯಕ ಗೆಳೆಯರ ಗುಂಪಿನಲ್ಲಿ ರಟ್ಟುಮಾಡಿದವರು ಕವಿ ಸುಮತೀಂದ್ರ ನಾಡಿಗರು. ಇದನ್ನು ಯಾರೂ ನಂಬದೇ, ‘ಸ್ತ್ರೀಯರ ಭಾವನೆಗಳನ್ನು ಸಹಜವಾಗಿ ಅಭಿವ್ಯಕ್ತಿಸುವುದು ಪುರುಷರಿಗೆ ಸಾಧ್ಯವೇ ಇಲ್ಲ’ ಎಂದಾಗ ‘ಯಾಕಾಗದು?’ ಎಂದ ನಾಡಿಗರು ಅಲ್ಲೇ, ಆ ಘಳಿಗೆಯಲ್ಲೇ ‘ಥೂ ಹೋಗೇ, ಪೋಲಿ ಕಣೇ ನೀನು’ ಎಂಬ ಅಪ್ಪಟ ಹೆಣ್ಣುಕವನ ಬರೆದು ತೋರಿಸಿಯೇಬಿಟ್ಟರು. ಆಮೇಲೆ ನಳಿನಿ ದೇಶಪಾಂಡೆ ಯಾರೆಂದು ಎಲ್ಲರಿಗೂ ಗೊತ್ತಾಗಲು ಹೆಚ್ಚುಕಾಲ ಬೇಕಾಗಲಿಲ್ಲ.

ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಲೇಖಕ: 90ರ ದಶಕದಿಂದೀಚೆಗೆ ತೇಜಸ್ವಿಯವರು ಸೃಜನಶೀಲ ಸಾಹಿತ್ಯವನ್ನು ಬದಿಗಿಟ್ಟು, ನೈಲ್ ನದಿ, ಮಾನವಶಾಸ್ತ್ರ ಮತ್ತು ಹಾರುವ ತಟ್ಟೆಗಳ ಬಗೆಗಿನ ಬರಹಗಳು, ವಿಸ್ಮಯ ಹಾಗೂ ಮಿಲನಿಯಮ್ ಸರಣಿಗಳ ಮೂಲಕ ಕನ್ನಡದ ಓದುಗರಿಗೆ ತೆರೆದಿಟ್ಟ ಜಗತ್ತು ಅಗಾಧ, ವಿಶಾಲ. ಈ ವಿಷಯಗಳ ಬಗ್ಗೆ ಇಂಗ್ಲಿಷ್​ನಲ್ಲಿ ಸಾಕಷ್ಟು ಓದಿರುವ ನನಗೆ ತೇಜಸ್ವಿಯವರ ಬರಹಗಳು ನೀಡುವ ವಿವರಗಳು ದಶಕಗಳಷ್ಟು ಹಳೆಯದೆನಿಸಿದರೂ ಕನ್ನಡ ಓದುಗರಿಗೆ ಈ ವಿಷಯಗಳನ್ನು ಪರಿಚಯಿಸಲು, ಇಷ್ಟಾದರೂ ವಿವರಗಳನ್ನು ನೀಡಲು ಅವರು ನಡೆಸಿದ ಪ್ರಯತ್ನದ ಬಗ್ಗೆ ಅತೀವ ಮೆಚ್ಚುಗೆಯಿದೆ.

ತಮ್ಮ ಬದುಕಿನ ಕೊನೆಯ ದಶಕದಲ್ಲಿ ಕಂಪ್ಯೂಟರಿನ ಅಂತರ್ಜಾಲದಲ್ಲಿ ಸಿಲುಕಿಹೋಗಿ, ಅಲ್ಲಿ ಸಿಗುವ ವಿಷಯಗಳನ್ನು ಕನ್ನಡಕ್ಕಿಳಿಸುವುದನ್ನೇ ಹೆಚ್ಚಾಗಿ ಮಾಡಿದ ತೇಜಸ್ವಿಯವರನ್ನು ‘ಇಂಟರ್​ನೆಟ್ ಸಾಹಿತಿ’ ಎಂದು ಕಟಕಿಯಾಡಿದವರಿದ್ಡಾರೆ. ಆದರೆ ತೇಜಸ್ವಿಯವರ ಆಸಕ್ತಿಯಲ್ಲಾದ ಬದಲಾವಣೆಯನ್ನು ನಾನು ಬೇರೊಂದು ಬಗೆಯಲ್ಲಿ ನೋಡುತ್ತೇನೆ. ಐವತ್ತರ ದಶಕದ ಅಂತ್ಯದಲ್ಲಿ ಬರವಣಿಗೆಯನ್ನಾರಂಭಿಸಿದ ತೇಜಸ್ವಿ ನಂತರದ ನಾಲ್ಕೂವರೆ ದಶಕಗಳಿಗಿಂತಲೂ ಮೀರಿದ ತಮ್ಮ ಬರಹದ ಬದುಕಿನಲ್ಲಿ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಸಾಗಿಬಂದರು, ಏಕತಾನತೆಯನ್ನು ಮೀರಿ ಹೊಸಹೊಸ ದಾರಿಗಳನ್ನು ಅರಸಿ ವಿಹರಿಸಿ ನಮ್ಮನ್ನೂ ಅಲ್ಲಿ ಸುತ್ತಾಡಿಸಿದರು. ಅವರ ಸಮಕಾಲೀನರಲ್ಲಿ ಅನೇಕರು ಐವತ್ತರ ದಶಕದಲ್ಲಿ ಬರೆದಂತಹ ಬರಹಗಳನ್ನೇ ಐವತ್ತು ವರ್ಷಗಳ ನಂತರವೂ ಬರೆಯುತ್ತಿದುದನ್ನು ನೋಡಿದ್ದೇವೆ. ಅವರ ‘ಚೀರ್ ಲೀಡರ್ಸ್’ಗಳಾಗಿ ನಡೆದುಕೊಳ್ಳುವ ಕೆಲವು ವಿಮರ್ಶಕರು ಹಾಡಿದ್ದನ್ನೇ ಹಾಡುವ ಈ ಕಿಸುಬಾಯಿದಾಸರ ಬರಹಗಳಲ್ಲಿ ಹೊಸಹೊಸ ಹೊಳಹುಗಳನ್ನು ಭ್ರಮಿಸಿಕೊಂಡು ಅವರನ್ನು ಇನ್ನೂ ಚಲಾವಣೆಯಲ್ಲಿಟ್ಟಿದ್ದಾರೆ. ಇಂಥವರೇ ಬದಲಾವಣೆ, ಬೆಳೆಯುವಿಕೆಯನ್ನೇ ಉಸಿರಾಗಿಸಿಕೊಂಡು ನಿತ್ಯನೂತನರಾಗಿ ಬರೆದು ಬದುಕಿದ ತೇಜಸ್ವಿಯರನ್ನು ಕತ್ತಲೆಗೆ ಸರಿಸುತ್ತಿರುವವರು.

ನಿಜ ಹೇಳಬೇಕೆಂದರೆ ಬದುಕಿನಲ್ಲೂ, ಬರಹದಲ್ಲೂ ನಮ್ಮ ಯುವಜನಾಂಗಕ್ಕೆ ಮಾದರಿಯಾಗಬೇಕಾದವರು ತೇಜಸ್ವಿ. ಕುವೆಂಪು ಅವರ ಮಗನಾಗಿ ತೇಜಸ್ವಿ ತಂದೆಯ ಪ್ರಭಾವವನ್ನು ತಮ್ಮ ಏಳಿಗೆಗೆ ಎಂದೂ ಉಪಯೋಗಿಸಿಕೊಳ್ಳಲಿಲ್ಲ. ತಂದೆತಾಯಿಯದಿರಲಿ, ಮಾವ ಅತ್ತೆ, ತಮಗಿಂತಲೂ ಕಿರಿಯ ಗೆಳೆಯ-ಗೆಳತಿಯರ ಪ್ರಭಾವವನ್ನು ಬಳಸಿಕೊಂಡು ಮೇಲೇರುವ ಜನರಿರುವ ಈ ಕಾಲದಲ್ಲಿ ತೇಜಸ್ವಿ ತಮ್ಮ ಬರಹದ ಬದುಕಿಗೆ ಯಾರನ್ನೂ ಮೆಟ್ಟಲಾಗಿಸಿಕೊಳ್ಳಲಿಲ್ಲ. ಮೈಸೂರಿನಲ್ಲಿ ಅಧ್ಯಾಪಕರಾಗಿ ಕೊನೆಗೆ ವೈಸ್ ಛಾನ್ಸಲರ್ ಆಗುವುದು ತೇಜಸ್ವಿಯವರಿಗೆ ಕಷ್ಟವೇನೂ ಆಗಿರಲಿಲ್ಲ. ಅವರದನ್ನು ಬಿಟ್ಟು ಮಲೆನಾಡಿನ ಮೂಲೆಯಲ್ಲಿ ತಮಗಿಷ್ಟವಾದ ಕೆಲಸಗಳಲ್ಲಿ ತೊಡಗಿಕೊಂಡರು, ಕೋವಿ ಹಿಡಿದು ಹಂದಿ ಬೇಟೆಯಾಡಿದರು, ಕ್ಯಾಮೆರಾ ಹಿಡಿದು ಹಕ್ಕಿಗಳ ಫೋಟೋ ತೆಗೆದರು. ಒಬ್ಬ ಸಾಹಿತಿಯಾಗಿ ಆ ಕ್ಷೇತ್ರ ನೀಡಬಹುದಾದ ಸವಲತ್ತುಗಳ ಬೆನ್ನುಹತ್ತಿ ಅವರೆಂದೂ ಹೋಗಲಿಲ್ಲ, ಸ್ಥಾನಮಾನ, ಪ್ರಶಸ್ತಿ ಗೌರವಗಳಿಗಾಗಿ ಇತರರೊಡನೆ ಸ್ಪರ್ಧೆಗಿಳಿಯಲಿಲ್ಲ, ಯಾರ ದಾರಿಗೂ ಅಡ್ಡವಾಗಿ ನಿಲ್ಲಲಿಲ್ಲ. ಪ್ರಶಸ್ತಿಗಳಿಗಾಗಿ, ಸರ್ಕಾರಿ ಸವಲತ್ತುಗಳಿಗಾಗಿ ವಾಮಮಾರ್ಗ ಹಿಡಿದ, ಇತರರ ಪ್ರಶಸ್ತಿಗಳಿಗೆ ಕಲ್ಲುಹಾಕಿದ, ಹಾಗೆಲ್ಲ ಮಾಡುತ್ತ ದ್ವಂದ್ವ ಬದುಕು ಬದುಕಿದ ಕೆಲವು ಸಮಕಾಲೀನ ಸಾಹಿತಿಗಳ ಜತೆ ಹೋಲಿಸಿದಾಗ ತೇಜಸ್ವಿಯವರ ಔನ್ನತ್ಯ ನಮಗರಿವಾಗುತ್ತದೆ. ಬದುಕಿನಲ್ಲೂ, ಬರಹದಲ್ಲೂ ತೇಜಸ್ವಿ ಮಾದರಿಯಾಗಿ ನಿಲ್ಲುತ್ತಾರೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *