ಇಸ್ಲಾಮಿಕ್ ಕ್ರಾಂತಿಗೆ ನಲವತ್ತು ವರ್ಷಗಳು

ಸಾಮಾಜಿಕವಾಗಿಯೂ ಇರಾನಿಯನ್ನರು ಪಶ್ಚಿಮ ಏಷ್ಯಾದ ಇತರ ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗಿಂತ ಹೆಚ್ಚು ಧಾರ್ವಿುಕ ಸ್ವಾತಂತ್ರ್ಯವನ್ನು ಹೊಂದಿದ್ದರು. ಒಟ್ಟಾರೆಯಾಗಿ ಶಾ ಆಳ್ವಿಕೆಯಲ್ಲಿ ಇರಾನ್ ಆರ್ಥಿಕವಾಗಿ ಸುಭದ್ರ, ಸೈನಿಕವಾಗಿ ಬಲಿಷ್ಠ, ಸಾಮಾಜಿಕವಾಗಿ ನೆಮ್ಮದಿಯ ಜನತೆಯನ್ನು ಹೊಂದಿದ ಒಂದು ಪ್ರಗತಿಶೀಲ ರಾಷ್ಟ್ರವಾಗಿತ್ತು. ಆದರೂ ಅಲ್ಲಿ ಕ್ರಾಂತಿಯಾಗಿದ್ದು ಒಂದು ಅಚ್ಚರಿಯ ಬೆಳವಣಿಗೆಯೇ ಸರಿ.

ಆಧುನಿಕ ಇರಾನ್​ನ ಸಮಾಜ, ರಾಜಕೀಯ, ರಾಜತಂತ್ರಗಳ ದಿಕ್ಕುದೆಸೆಯನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟ ಆಯಾತೊಲ್ಲಾ ರುಹೊಲ್ಲಾ ಖೊಮೇನಿ ನೇತೃತ್ವದ ಇಸ್ಲಾಮಿಕ್ ಕ್ರಾಂತಿ ಯಶಸ್ವಿಯಾಗಿ, ಅರಸ ಮೊಹಮದ್ ರೆಝಾ ಶಾ ಪಹ್ಲವಿಯ ಪತನವಾಗಿ ಇದೇ ಫೆಬ್ರವರಿಗೆ 40 ವರ್ಷಗಳಾದವು. ಈ ಸಂದರ್ಭದಲ್ಲಿ, ಕಳೆದ ನಾಲ್ಕು ದಶಕಗಳಲ್ಲಿ ಇರಾನ್ ಸಾಗಿಬಂದ ಹಾದಿಯತ್ತ ಒಂದು ಪಕ್ಷಿನೋಟ ಬೀರುವುದು ಈ ಲೇಖನದ ಉದ್ದೇಶ.

ಹಾಗೆ ನೋಡಿದರೆ, ಆ ದಿನದ ಇರಾನ್​ನಲ್ಲಿ ಕ್ರಾಂತಿಯಾದದ್ದೇ ಒಂದು ಅಚ್ಚರಿಯ ಬೆಳವಣಿಗೆ. ರೆಝಾ ಶಾನ ಆಳ್ವಿಕೆಯಲ್ಲಿ ಇರಾನ್ ಆರ್ಥಿಕವಾಗಿ ಗಮನಾರ್ಹ ಪ್ರಗತಿ ಸಾಧಿಸಿತ್ತು. ಸಾಮಾನ್ಯ ಇರಾನಿಯನ್ನರ ಜೀವನಮಟ್ಟ ಉತ್ತಮವಾಗಿತ್ತು. ಅರಸ ಶಾ ತನ್ನ ದೇಶವನ್ನು ‘ಏಷ್ಯಾದ ಜರ್ಮನಿ’ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದ. ಮಹತ್ವಾಕಾಂಕ್ಷಿಯಾದ ಆತ 1972-73ರ ಅಂತಾರಾಷ್ಟ್ರೀಯ ತೈಲಬಿಕ್ಕಟ್ಟಿನ ನಂತರ ಗಮನಾರ್ಹವಾಗಿ ಏರಿದ್ದ ವಿದೇಶಿ ವಿನಿಮಯ ಗಳಿಕೆಯನ್ನು ಬಳಸಿ ಇರಾನ್ ಅನ್ನು ಸೇನಾಶಕ್ತಿಯಲ್ಲಿ ಏಷ್ಯಾದಲ್ಲೇ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಬೆಳೆಸುವ ಕನಸು ಕಂಡಿದ್ದ. ಅದಕ್ಕಾಗಿ ಅಗತ್ಯವಿದ್ದ ಎಲ್ಲ ಕಾರ್ಯಕ್ರಮಗಳನ್ನೂ ರೂಪಿಸಿ ಅನುಷ್ಠಾನಗೊಳಿಸಿದ್ದ. ಶಾ ಆಳ್ವಿಕೆಯಲ್ಲಿ ಇರಾನ್ ಆರ್ಥಿಕವಾಗಿ ಸುಭದ್ರ, ಸೈನಿಕವಾಗಿ ಬಲಿಷ್ಠ, ಸಾಮಾಜಿಕವಾಗಿ ನೆಮ್ಮದಿಯ ಜನತೆಯನ್ನು ಹೊಂದಿದ ಪ್ರಗತಿಶೀಲ ರಾಷ್ಟ್ರವಾಗಿತ್ತು. ಆದರೂ ಅಲ್ಲಿ ಕ್ರಾಂತಿಯಾಯಿತು.

ನಾಲ್ಕು ದಶಕಗಳ ಹಿಂದೆ ಘಟಿಸಿದ ಕ್ರಾಂತಿಗೆ ಮುಖ್ಯವಾಗಿದ್ದುದು ರಾಜಕೀಯ ಕಾರಣಗಳು. ಅರಸ ಶಾಗೆ ಮಹತ್ವಾಕಾಂಕ್ಷೆ ಇದ್ದುದೇನೋ ನಿಜ. ಆದರೆ ಅಂದುಕೊಂಡಿದ್ದನ್ನೆಲ್ಲವನ್ನೂ ಯಾವುದೇ ವಿರೋಧವಿಲ್ಲದೆ ಸಾಧಿಸುವ ರಾಜಕೀಯ ಚಾಣಾಕ್ಷತನ ಹಾಗೂ ಮುತ್ಸದ್ದಿತನ ಅವನಲ್ಲಿರಲಿಲ್ಲ. ವಿವಿಧ ಪಟ್ಟಭದ್ರ ಹಿತಾಸಕ್ತಿಗಳೆಲ್ಲವೂ ಒಟ್ಟುಗೂಡಿ ತನ್ನ ಸಿಂಹಾಸನವನ್ನು ಅಲುಗಿಸುವುದನ್ನು ತಡೆಗಟ್ಟಲು ಆತ ಅವುಗಳನ್ನು ಒಂದರ ಮೇಲೆ ಒಂದನ್ನು ಎತ್ತಿಕಟ್ಟುವ ತಂತ್ರವನ್ನೇನೋ ಮಾಡಿ, ತಕ್ಕ ಮಟ್ಟಿಗೆ ಯಶಸ್ವಿಯೂ ಆದ. ಆದರೆ ಹಾಗೆ ಮಾಡುತ್ತಲೇ ತನ್ನ ಅಧಿಕಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ನಿರಂಕುಶಾಧಿಕಾರದತ್ತ ಮುಂದುವರಿದ. ತನ್ನ ವಿರೋಧಿಗಳ ಕ್ರೂರ ದಮನಕ್ಕೆಂದೇ ‘ಖಅಗಅಓ’ ಎಂಬ ಕುಪ್ರಸಿದ್ಧ ಗುಪ್ತಚರ ಇಲಾಖೆಯನ್ನು ಹುಟ್ಟುಹಾಕಿದ. ಶಾನ ಈ ತಂತ್ರಗಳು ಅಂತಿಮವಾಗಿ ಅವನನ್ನೇ ಬಲಿತೆಗೆದುಕೊಂಡುಬಿಟ್ಟವು.

ಅರಸ ಶಾನ ವಿರೋಧಿಗಳಿಗೆ ಅವನ ವಿರುದ್ಧ ಜನಬೆಂಬಲ ಗಳಿಸಿಕೊಳ್ಳಲು ಕೈಗೆ ಸಿಕ್ಕಿದ ಒಂದೇ ಅಸ್ತ್ರ- ಧರ್ಮ. ಬೇರಾವ ಮಾರ್ಗದಿಂದಲೂ ಜನತೆಯನ್ನು ಅವನ ವಿರುದ್ಧ ಕೆರಳಿಸುವುದು ಸಾಧ್ಯವಿರಲಿಲ್ಲ. ‘ಶಾ ಆಳ್ವಿಕೆಯಲ್ಲಿ ಇಸ್ಲಾಂ ಮೂಲೆಗುಂಪಾಗಿದೆ, ಪಾಶ್ಚಾತ್ಯ ಸಂಸ್ಕೃತಿ ಇರಾನ್​ನ ಮುಸ್ಲಿಂ ಸಂಸ್ಕೃತಿಯನ್ನು ನುಂಗಿಹಾಕುತ್ತಿದೆ, ಇದನ್ನು ತಡೆಗಟ್ಟಲೇಬೇಕು’ ಎಂಬ ಕೂಗಿನೊಡನೆ ಆರಂಭವಾದ ಶಾ-ವಿರೋಧಿ ದಂಗೆಗಳಿಗೆ ಸ್ವಾಭಾವಿಕವಾಗಿಯೇ ಶಾನ ಕಡುಟೀಕಾಕಾರ ಧರ್ಮಗುರು ಅಯಾತೊಲ್ಲಾ ಖೊಮೇನಿ ನಾಯಕನಾಗಿ ಹೊರಹೊಮ್ಮಿದ. ಈ ಖೊಮೇನಿ 14 ವರ್ಷ ನೆರೆಯ ಇರಾಕ್​ನಲ್ಲಿ, ಒಂದು ವರ್ಷ ಪ್ಯಾರಿಸ್​ನಲ್ಲಿ ದೇಶಭ್ರಷ್ಟನಾಗಿ ಬದುಕಿದ್ದು 1979ರ ಫೆಬ್ರವರಿ 1ರಂದು ಭಾರಿ ಜನಬೆಂಬಲದೊಂದಿಗೆ ಸ್ವದೇಶಕ್ಕೆ ಹಿಂತಿರುಗಿದ. ಅದಾದ 11 ದಿನಗಳಲ್ಲಿ ಶಾ ಆಳ್ವಿಕೆ ಅಂತ್ಯಗೊಂಡಿತು. ಶಾ ಬದುಕಿನ ದುರಂತವೆಂದರೆ ಅವನಿಗಾಗಿ ಹೋರಾಡಲು ಅವನೇ ತೀವ್ರ ಮಹತ್ವಾಕಾಂಕ್ಷೆ ಹಾಗೂ ಅತೀವ ಪರಿಶ್ರಮದಿಂದ ಕಟ್ಟಿದ್ದ ಸೈನ್ಯವೂ ತಯಾರಿರಲಿಲ್ಲ. ‘ನಿಮ್ಮ ಸೋದರರ ಮೇಲೆ ನೀವೇ ಗುಂಡು ಹಾರಿಸುತ್ತೀರಾ?’ ಎಂಬ ಪ್ರದರ್ಶನಕಾರಿಗಳ ಪ್ರಶ್ನೆಗೆ ಉತ್ತರವಾಗಿ ಸೈನಿಕರ ಕೋವಿ ಹಿಡಿದ ಕೈಗಳು ತಾವಾಗಿಯೇ ಕೆಳಗಿಳಿದವು. ನಂತರದ ನಾಲ್ಕು ದಶಕಗಳಲ್ಲಿ ಇರಾನ್ ಸಾಗಿಬಂದಿರುವ ಹಾದಿಯನ್ನು ನೋಡಿದರೆ, 1979ರ ಫೆಬ್ರವರಿಯ ಕ್ರಾಂತಿ ಇರಾನಿಯರನ್ನು ಬಾಣಲೆಯಿಂದ ಬೆಂಕಿಗೆ ದೂಡಿದ ದುರಂತ ವಿಪರ್ಯಾಸ ಗೋಚರವಾಗುತ್ತದೆ. ಯಾವ ಜನತೆಯ ಬೆಂಬಲದಿಂದ ತಾನು ಅಧಿಕಾರಕ್ಕೆ ಬಂದನೋ ಆ ಜನತೆಯನ್ನೇ ಖೊಮೇನಿ ಮಧ್ಯಯುಗದ ಕತ್ತಲೆಗೆ ದೂಡಿದ. ಇರಾನ್ ಅನ್ನು ‘ಇಸ್ಲಾಮಿಕ್ ಗಣರಾಜ್ಯ’ ಎಂದು ಘೊಷಿಸಿ ಆಡಳಿತದ ಎಲ್ಲ ರಂಗಗಳಲ್ಲೂ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೊಳಿಸಿದ. ಈ ಪ್ರಕ್ರಿಯೆಯಲ್ಲಿ ತೀವ್ರವಾಗಿ ನೊಂದವರು ಶಾ ಆಳ್ವಿಕೆಯಲ್ಲಿ ಗಣನೀಯ ಸ್ವಾತಂತ್ರ್ಯ ಅನುಭವಿಸಿದ್ದ ಮಹಿಳೆಯರು, ಅನ್ಯಧರ್ವಿುೕಯರು ಹಾಗೂ ಪ್ರಗತಿಪರ ಚಿಂತನೆಯ ಮುಸ್ಲಿಮರು. ಕ್ರಾಂತಿಯಾದ ಒಂದು ವರ್ಷದಲ್ಲಿ ಖೊಮೇನಿ ಮತ್ತು ಮೆಹ್ದಿ ಬಝಾರ್ಗನ್ ಸರ್ಕಾರ ಕ್ರಾಂತಿಯ ವಿರೋಧಿಗಳೆಂದು ಅನುಮಾನ ಬಂದವರನ್ನೆಲ್ಲ ಸಾರಾಸಗಟಾಗಿ ಗಲ್ಲಿಗೇರಿಸಿತು. ಈ ಮಾರಣಹೋಮದಲ್ಲಿ ಬಲಿಯಾದವರ ಒಟ್ಟು ಸಂಖ್ಯೆ ಬಹುಶಃ ಎಂದಿಗೂ ಬಹಿರಂಗವಾಗದು. ಇದರ ಜತೆಗೆ, ‘ಸಟಾನಿಕ್ ವರ್ಸಸ್’ ಕೃತಿಯಲ್ಲಿ ಪ್ರವಾದಿ ಮಹಮದ್​ರ ಬಗ್ಗೆ ನಿಂದನೀಯ ವಾಕ್ಯಗಳಿವೆ ಎಂಬ ಕಾರಣಕ್ಕಾಗಿ ಆ ಕೃತಿಯನ್ನು ಬಹಿಷ್ಕರಿಸಿ, ಕಾದಂಬರಿಕಾರ ಸಲ್ಮಾನ್ ರಶ್ದಿಯ ತಲೆದಂಡ ಕೇಳಿದ್ದು, ಆ ಕೃತಿಯ ಜಪಾನಿ ಅನುವಾದಕನ ಹತ್ಯೆ, ಇಟಾಲಿಯನ್ ಅನುವಾದಕನ ಮೇಲೆ ದಾಳಿ- ಇವೆಲ್ಲವೂ ಖೊಮೇನಿ ಆಳ್ವಿಕೆಯ ಕೆಲವು ಪರಿಚಿತ ಪುಟಗಳು. ‘ಸಟಾನಿಕ್ ವರ್ಸಸ್’ನಲ್ಲಿ ದೈವನಿಂದೆಯ ವಾಕ್ಯಗಳಿವೆ ಎಂದು ಖೊಮೇನಿ ಅರಿತದ್ದೇ ಭಾರತದ ರಾಜೀವ್ ಗಾಂಧಿ ಸರ್ಕಾರ ಆ ಕೃತಿಯನ್ನು ಬಹಿಷ್ಕರಿಸಿದಾಗ ಎಂಬುದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಸ್ವಾರಸ್ಯಕರ ಅಂಶ.

ಖೊಮೇನಿ ಇರಾನ್​ನ ವಿದೇಶಾಂಗ ನೀತಿಯನ್ನು ಪೂರ್ತಿಯಾಗಿ ಬದಲಿಸಿಬಿಟ್ಟ. ಶಾ ಕಾಲದಲ್ಲಿ ಇರಾನ್​ನ ಘನಿಷ್ಠ ಮಿತ್ರನಾಗಿದ್ದ ಅಮೆರಿಕವನ್ನು ‘ಪರಮ ಸೈತಾನ’ ಎಂದು ಕರೆದು ದೂರವಿಟ್ಟ. ಲೆಬನಾನ್​ನಲ್ಲಿ ಯುದ್ಧಕೋರ ‘ಹೆಜ್ಬೊಲ್ಲಾ’ ಸಂಘಟನೆಯ ಹಿಂದೆ ನಿಂತು ಆ ನತದೃಷ್ಟ ರಾಷ್ಟ್ರ ಅರಾಜಕತೆಯ ಮತ್ತೊಂದು ಮಜಲಿಗೆ ಇಳಿಯಲು ಕಾರಣನಾದ. ಇದೆಲ್ಲದರಿಂದಾಗಿ ತನ್ನ ದೇಶಕ್ಕೆ ನೇಹಿಗರೇ ಇಲ್ಲದಂತೆ ಮಾಡಿದ. ಪರಿಣಾಮವಾಗಿ ಇರಾನ್​ನ ಅರ್ಥವ್ಯವಸ್ಥೆ, ಸೇನಾಸಾಮರ್ಥ್ಯ ಕುಸಿಯಿತು. ಇದು ನೆರೆಯ ಇರಾಕ್​ನ ಮಹತ್ವಾಕಾಂಕ್ಷಿ ಅಧ್ಯಕ್ಷ ಸದ್ದಾಂ ಹುಸೇನ್ ಬಾಯಲ್ಲಿ ನೀರೂರಿಸಿತು. ಷತ್-ಅಲ್-ಅರಬ್ ಜಲಗಡಿಯನ್ನು ತನ್ನ ದೇಶಕ್ಕೆ ಅನುಕೂಲಕರವಾಗುವಂತೆ ಬದಲಾಯಿಸಿಕೊಳ್ಳಲು ಇದೇ ಸುಸಮಯ ಎಂದೆಣಿಸಿದ ಸದ್ದಾಂ 1980ರ ಸೆಪ್ಟೆಂಬರ್ 23ರಂದು ಇರಾನ್ ಮೇಲೆ ಆಕ್ರಮಣವೆಸಗಿದ. ಖೊಮೇನಿಯ ಇಸ್ಲಾಮಿಕ್ ಮೂಲಭೂತವಾದಿ ಕಂಟಕವನ್ನು ನಿವಾರಿಸಲು ಇದೇ ಸುಸಮಯ ಎಂದೆಣಿಸಿದ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳೆರಡೂ ಸದ್ದಾಂನ ಬೆಂಬಲಕ್ಕೆ ನಿಂತವು. ಕೊನೆಗೂ, ಸದ್ದಾಂನ ಆಕ್ರಮಣಶೀಲತೆಗೆ ಸಮರ್ಥ ಪ್ರತಿರೋಧ ಒಡ್ಡಿ, ತನ್ನ ದೇಶದ ಜತೆಗೆ ತನ್ನದೇ ಇಸ್ಲಾಮಿಕ್ ಕ್ರಾಂತಿಯ ಮರ್ಯಾದೆಯನ್ನೂ ಕಾಪಾಡಿಕೊಳ್ಳಲು ಖೊಮೇನಿಗೆ ನೆರವಾದದ್ದು ಅರಸ ಶಾ ಸಂಗ್ರಹಿಸಿಟ್ಟಿದ್ದ ಅಗಾಧ ಶಸ್ತ್ರಾಸ್ತ್ರ ಭಂಡಾರ.

1991-92ರಲ್ಲಿ ಸೋವಿಯತ್ ಒಕ್ಕೂಟ ಛಿದ್ರವಾಗಿ ಇರಾನ್​ನ ನೆರೆಯಲ್ಲಿ ಆರು ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರಗಳು ಉದಯಿಸಿದಾಗ ಖೊಮೇನಿಯ ಇಸ್ಲಾಮಿಕ್ ಮೂಲಭೂತವಾದಿ ಗಾಳಿ ಅಲ್ಲಿಗೂ ಬೀಸಬಹುದೆಂಬ ಅತಂಕ ಜಾಗತಿಕ ಸಮುದಾಯವನ್ನು ಕಾಡಿದ್ದುಂಟು. ಆದರೆ ಈ ಆರೂ ದೇಶಗಳ ಜನತೆ ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಹಾಗೂ ಭಾಷಿಕವಾಗಿ ಜಾತ್ಯತೀತ ಟರ್ಕಿಗೆ ಹತ್ತಿರವಾದ್ದರಿಂದ ಹಾಗೂ ಏಳು ದಶಕಗಳ ಸೋವಿಯತ್ ಕಮ್ಯೂನಿಸ್ಟ್ ಅನುಭವ ದಿಂದಾಗಿ ಅವುಗಳಲ್ಲಿ ಖೊಮೇನಿಯ ಮೂಲಭೂತವಾದ ಜನಮಾನ್ಯತೆ ಗಳಿಸಲಿಲ್ಲ.

ಖೊಮೇನಿಯ ನಂತರದ ಇರಾನಿ ನಾಯಕರು ಹಂತಹಂತವಾಗಿ ಪ್ರಜಾಸತ್ತೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದ್ದು ಒಂದು ಸಕಾರಾತ್ಮಕ ಬೆಳವಣಿಗೆ. ಕಳೆದೆರಡು ದಶಕಗಳಲ್ಲಿ ಇರಾನ್​ನ ಅಧ್ಯಕ್ಷರ ಹಾಗೂ ಶಾಸನಸಭೆಯಾದ ‘ಮಜ್ಲೀಸ್’ನ ಸದಸ್ಯರುಗಳ ಚುನಾವಣೆಗಳಲ್ಲಿ ಕಂಡುಬಂದ ಪ್ರಜಾಸತ್ತಾತ್ಮಕ ಅಂಶಗಳು ಪಶ್ಚಿಮ ಏಷ್ಯಾದ ಇತರ ಯಾವುದೇ ಮುಸ್ಲಿಂ ದೇಶದಲ್ಲೂ ಕಂಡುಬರುವುದಿಲ್ಲ. ಆದರೆ, ಕಳೆದ ದಶಕದಲ್ಲಿ ಅಧ್ಯಕ್ಷ ಮಹಮೂದ್ ಅಹ್ಮದಿ ನೆಜಾದ್​ರ ಅಣ್ವಸ್ತ್ರದ ಬಯಕೆಯಿಂದಾಗಿ ಇರಾನ್ ಮತ್ತೆ ಸುದ್ದಿಯಾಯಿತು. ಸ್ವತಃ ಅಣುಭೌತವಿಜ್ಞಾನಿಯಾದ ಅಹ್ಮದಿ ನೆಜಾದ್ ಇರಾನ್ ಅನ್ನು ಅಣ್ವಸ್ತ್ರ ರಾಷ್ಟ್ರವಾಗಿಸಲು ಪಣತೊಟ್ಟು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿಸಿದರು. ಪರಿಣಾಮವಾಗಿ ಇರಾನ್ ಹಲವು ಬಗೆಯ ಆರ್ಥಿಕ ದಿಗ್ಬಂಧನಗಳಿಗೊಳಗಾಯಿತು. ಕೊನೆಗೆ, ಇರಾನ್ ಜತೆಗೆ ಅಮೆರಿಕ ಸೇರಿದಂತೆ ನಾಲ್ಕು ಪ್ರಮುಖ ರಾಷ್ಟ್ರಗಳು 2015ರ ಡಿಸೆಂಬರ್​ನಲ್ಲಿ ಮಾಡಿಕೊಂಡ ಒಪ್ಪಂದ, ಆ ಮೂಲಕ ಅಣ್ವಸ್ತ್ರ ಬಯಕೆಯನ್ನು ಕೈಬಿಡುವುದಾಗಿ ಇರಾನ್ ನೀಡಿದ ವಾಗ್ದಾನ ಆರ್ಥಿಕ ದಿಗ್ಬಂಧನಗಳನ್ನು ತಗ್ಗಿಸಿತೇನೋ ನಿಜ. ಆದರೆ ತನ್ನ ವಾಗ್ದಾನದ ನಿಭಾಯಿಸುವಿಕೆಯಲ್ಲಿ ಇರಾನ್ ಪ್ರಾಮಾಣಿಕವಾಗಿಲ್ಲ ಎಂದು ಆಪಾದಿಸಿ ಅಧ್ಯಕ್ಷ ಟ್ರಂಪ್ ಆ ಒಪ್ಪಂದದಿಂದ ಅಮೆರಿಕವನ್ನು ಇತ್ತೀಚೆಗೆ ಹೊರಗೊಯ್ದಿದ್ದಾರೆ. ಆದರೆ ಈ ವಿಷಯದಲ್ಲಿ ಅಮೆರಿಕಕ್ಕೆ ಹೇಳಿಕೊಳ್ಳುವ ಬೆಂಬಲ ದೊರೆಯುತ್ತಿಲ್ಲ.

ಈ ನಡುವೆ ಇರಾನ್ ಹಿಡಿದ ಮತ್ತೊಂದು ಋಣಾತ್ಮಕ ಹಾದಿಯ ಪರಿಚಯವೂ ಅಗತ್ಯ. ತನ್ನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಪಶ್ಚಿಮದ ರಾಷ್ಟ್ರಗಳು ಒಡ್ದಿದ ತಡೆಗೆ ಪ್ರತಿಯಾಗಿ ಮುಸ್ಲಿಂ ಜಗತ್ತಿನ ಬೆಂಬಲ ಗಳಿಸಲು ಮತ್ತು ತನ್ನ ಪ್ರತಿಕ್ರಿಯಾಸಾಮರ್ಥ್ಯವನ್ನು ಪ್ರದರ್ಶಿಸಲು ಇರಾನ್ ಏಳು ವರ್ಷಗಳ ಹಿಂದೆ ಭಯೋತ್ಪಾದನೆಯ ಮಾರ್ಗ ಹಿಡಿದಿತ್ತು. 2012ರ ಆರಂಭದ ತಿಂಗಳುಗಳಲ್ಲಿ ಏಷ್ಯಾದ ಅರ್ಧ ಡಜನ್ ದೇಶಗಳಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಅಥವಾ ಅದರ ವಿಫಲಯತ್ನಕ್ಕೆ ಇರಾನ್ ಕಾರಣವಾಗಿತ್ತು. ಭಯೋತ್ಪಾದನೆಯನ್ನು ಇರಾನ್ ಸರ್ಕಾರಿ ನೀತಿಯಾಗಿ ಅನುಸರಿಸಲು ಆರಂಭಿಸಿರುವುದರ ಸೂಚನೆ ಇದು. ಈ ಬೆಳವಣಿಗೆ, ಲಾಡೆನ್​ನ ಅಂತ್ಯ ಹಾಗೂ ಲಿಬಿಯಾದಲ್ಲಿ ಅಧ್ಯಕ್ಷ ಗಢಾಫಿಯ ಪತನಾನಂತರ ವಿಶ್ವರಂಗದಲ್ಲಿ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಅಂತ್ಯವಾಯಿತೆಂಬ ನಂಬಿಕೆಯನ್ನು ಹುಸಿಯಾಗಿಸಿತು. ಅದೃಷ್ಟವಶಾತ್, ಹಲವು ವಿಫಲ ಪ್ರಯತ್ನಗಳ ನಂತರ ಭಯೋತ್ಪಾದನಾ ಚಟುವಟಿಕೆಗಳ ಪ್ರಾಯೋಜನೆಗೆ ಇರಾನ್ ನಿಲುಗಡೆಗೆ ತಂದಿತು. ಇದಕ್ಕೆ ಹಲವು ಕಾರಣಗಳಿದ್ದವು. ಭಯೋತ್ಪಾದನಾ ಕೃತ್ಯಗಳ ವಿಫಲತೆಯ ಜತೆಗೇ ಭಯೋತ್ಪಾದನೆಯನ್ನು ಸರ್ಕಾರಿ ನೀತಿಯಾಗಿ ಅನುಸರಿಸಿದ ಯಾವ ರಾಷ್ಟ್ರವೂ ಇದುವರೆಗೆ ಯಶಸ್ವಿಯಾಗಿಲ್ಲ ಮತ್ತು ಆ ನೀತಿ ಅನುಸರಿಸಿದ ನಾಯಕರು ಹೀನಾಯವಾಗಿ ಚರಿತ್ರೆಯ ಕಸದಬುಟ್ಟಿಗೆ ಸೇರಿದ್ದಾರೆ ಎಂಬ ಐತಿಹಾಸಿಕ ಸತ್ಯದ ಅರಿವು ಇರಾನಿ ನಾಯಕರಿಗೆ ಕ್ಷಿಪ್ರಕಾಲದಲ್ಲೇ ಆಯಿತು. ಜತೆಗೇ, ಆಂತರಿಕ ಬೆಳವಣಿಗೆಗಳೂ ಇರಾನಿ ನಾಯಕತ್ವಕ್ಕೆ ವಿವೇಕ ಮೂಡಿಸುವ ಕೆಲಸ ಮಾಡಿವೆ. ಕಳೆದೊಂದು ದಶಕದಲ್ಲಿ ಇಸ್ಲಾಮಿಕ್ ಪ್ರಭುತ್ವದ ನಿರಂಕುಶಾಧಿಕಾರಕ್ಕೆ ಇರಾನಿ ಜನತೆಯಲ್ಲಿ, ಮುಖ್ಯವಾಗಿ ಯುವಜನತೆಯಲ್ಲಿ ಅಸಂತೋಷ ವೃದ್ಧಿಸುತ್ತಿದೆ ಮತ್ತು ಅದು 2010ರಿಂದೀಚೆಗೆ ಆಗಾಗ್ಗೆ ಸರ್ಕಾರಿ-ವಿರೋಧಿ ಚಳವಳಿಗಳ ಮೂಲಕ ವ್ಯಕ್ತಗೊಳ್ಳುತ್ತಿದೆ. ವಿದೇಶನೀತಿಯಲ್ಲಿ ಇರಾನಿ ನಾಯಕತ್ವದ ನಕಾರಾತ್ಮಕ ನಡವಳಿಕೆಗಳು ಮುಂದುವರಿಯುತ್ತಲೇ ಹೋದರೆ, ಮುಂದೊಮ್ಮೆ ಇರಾನಿ ಜನತೆ ಮೈಕೊಡವಿ ಮೇಲೆದ್ದು ಬದಲಾವಣೆಯ ರಣಕಹಳೆಯೂದಿದರೆ ಅವರ ಬೆಂಬಲಕ್ಕೆ ವಿಶ್ವಸಮುದಾಯ ನಿಲ್ಲುವುದು ಖಚಿತ ಮತ್ತು 2011ರಲ್ಲಿ ಲಿಬಿಯಾದಲ್ಲಾದದ್ದು ಇರಾನ್​ನಲ್ಲಿ ಘಟಿಸಬಹುದು ಎಂಬ ದುಃಸ್ವಪ್ನ ಇರಾನ್​ನ ಪ್ರಭುಗಳನ್ನು ಕಾಡಲಾರಂಭಿಸಿದ್ದು ಗಮನಿಸಬೇಕಾದ ಅಂಶ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)