ಉಮೇಶ್​ ಜಾಧವ್​ 50 ಕೋಟಿ ರೂ. ಗೆ ಜನರ ಆಶೀರ್ವಾದ ಮಾರಾಟ ಮಾಡಿದ್ದಾರೆ: ಡಿಸಿಎಂ ಪರಮೇಶ್ವರ್ ವಾಗ್ದಾಳಿ

ಕಲಬುರಗಿ: ಉಮೇಶ್​ ಜಾಧವ್ ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಲಾಯಕ್ ಇಲ್ಲ. ಜಾಧವ್ ಅವರು ಪ್ಯಾಕೇಜ್ ಡೀಲ್​ನಲ್ಲಿ ಬಿಜೆಪಿಗೆ ಮಾರಾಟವಾಗಿದ್ದಾರೆ. 50 ಕೋಟಿ ರೂಪಾಯಿಗೆ ಜನರ ಆಶೀರ್ವಾದವನ್ನು ಮಾರಾಟ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಕಿಡಿಕಾರಿದರು.

ಚಿಂಚೋಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯಕ್ಕೆ ಸೇರಿದವರು, ಡಾಕ್ಟರ್ ಇದ್ದಾರೆ ಟಿಕೆಟ್ ಕೊಡಿ‌ ಎಂದು ಅಂದು ಒತ್ತಾಯ ಮಾಡಿದ್ದರು. ಆದರೆ, ಉಮೇಶ್​ ಜಾಧವ್ ಇಂದು ಬಿಜೆಪಿ ಪಾಲಾಗುತ್ತಾರೆ ಎಂದು ಅಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಅಧಿವೇಶನದಲ್ಲಿ ನಾವು ಉಮೇಶ್​ಜಾಧವ್​ರನ್ನ ಹುಡುಕುತ್ತಿದ್ದರೆ, ಜಾಧವ್ ಮುಂಬೈನ ಹೋಟೆಲ್​ನಲ್ಲಿ ಇದ್ದರು ಎಂದು ವ್ಯಂಗ್ಯವಾಡಿದರು.

ಶಾಸಕರನ್ನು ಮಾರಾಟ ಮಾಡುವ ಮತ್ತು ಕೊಂಡುಕೊಳ್ಳುವ ಪ್ರವೃತ್ತಿಯನ್ನ ಮಾಜಿ ಸಿಎಂ ಯಡಿಯೂರಪ್ಪ ಹುಟ್ಟು ಹಾಕಿದರು ಎಂದ ಅವರು, ಯಡಿಯೂರಪ್ಪ ಹೊಸದಾಗಿ ಏನು ಪ್ರಯತ್ನ ಮಾಡುತ್ತಿಲ್ಲ. ಅವರು ತುಂಬಾ ವೇಗವಾಗಿದ್ದು, ಮೇ 24ರಂದು ಮುಖ್ಯಮಂತ್ರಿ ಆಗುವ ಯೋಚನೆಯಲ್ಲಿದ್ದಾರೆ. ಬಿಎಸ್​ವೈ ಎಷ್ಟೇ ಪ್ರಯತ್ನ ಮಾಡಿದರೂ ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ. ಸರ್ಕಾರ ಬೀಳಿಸುವ ಪ್ರಯತ್ನವೂ ನಡೆಯುವುದಿಲ್ಲ ಎಂದು ಪರಮೇಶ್ವರ್​, ಬಿ.ಎಸ್​.ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಹಳಷ್ಟು ಬಾರಿ ಖರ್ಗೆಗೆ ಮುಖ್ಯಮಂತ್ರಿ ಪದವಿ ತಪ್ಪಿದೆ

ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರದ ಹಿರಿಯ ನಾಯಕರಾಗಿದ್ದು, ಸ್ವಾಭಾವಿಕವಾಗಿಯೇ ಖರ್ಗೆ ಈ ರಾಜ್ಯದ ಸಿಎಂ ಆಗಬೇಕಿತ್ತು. ಕಾಂಗ್ರೆಸ್​​ನಲ್ಲಿ ಅವರಷ್ಟು ದುಡಿಮೆ ಯಾವ ನಾಯಕರೂ ಮಾಡಿಲ್ಲ. ಬಹಳಷ್ಟು ಬಾರಿ ಖರ್ಗೆಗೆ ಮುಖ್ಯಮಂತ್ರಿ ಪದವಿ ತಪ್ಪಿರುವುದು ನಿಜ. ಕುಮಾರಸ್ವಾಮಿ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್​ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸ್ಪಷ್ಟನೆ ನೀಡಿದರು.(ದಿಗ್ವಿಜಯ ನ್ಯೂಸ್​)