ದೆಹಲಿ: ಮೊದಲೆಲ್ಲ ತನಗೂ ಸುಕೇಶ್ಗೂ ಪರಿಚಯವೇ ಇಲ್ಲ ಎಂದು ಹೇಳುತ್ತಿದ್ದ ಬಾಲಿವುಡ್ ನಟಿ ಜಾಕ್ಲೀನ್ ಫರ್ನಾಂಡಿಸ್, ಈಗ ಒಂದೊಂದೇ ವಿಷಯಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸುರೇಶ್ನಿಂದ ತನ್ನ ಬದುಕು ಮತ್ತು ಕೆರಿಯರ್ ಎರಡೂ ಹಾಳಾಯಿತು ಎಂದು ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: ಕರಣ್ ಜೋಹರ್ಗೆ ‘RRR’ ಚಿತ್ರದ ಹಕ್ಕುಗಳನ್ನು ರಾಜಮೌಳಿ ಯಾಕೆ ಕೊಡಲಿಲ್ಲ? ಇಲ್ಲಿದೆ ಉತ್ತರ …
200 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ ನಟಿ ಜಾಕ್ಲೀನ್ ರ್ನಾಂಡಿಸ್ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ ಹಾಗೂ ಹಣ ಪಡೆದಿದ್ದಾರೆ ಎಂಬ ಆರೋಪ ಜಾಕ್ಲೀನ್ ಫರ್ನಾಂಡಿಸ್ ಮೇಲಿದೆ.
ಈ ಹಿನ್ನೆಲೆಯಲ್ಲಿ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿರುವ ಜಾಕ್ಲೀನ್, ‘ನನಗೆ ಸುಕೇಶ್ ಪರಿಚಯವಾಗಿದ್ದು ಪಿಂಕಿ ಇರಾನಿ ಅವರಿಂದ. ಗೃಹ ಸಚಿವಾಲಯದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದಾರೆ ಎಂದು ಪರಿಚಯ ಮಾಡಿಕೊಟ್ಟಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಂಬಂಧಿ ಹಾಗೂ ಅಲ್ಲಿನ ಮಾಧ್ಯಮ ಸಮೂಹ ಸಂಸ್ಥೆಯನ್ನು ನಡೆಸುತ್ತಿರುವುದಾಗಿ ಪರಿಚಯ ಮಾಡಿಕೊಟ್ಟಿದ್ದು. ಆತನ ಅಪರಾಧ ಹಿನ್ನೆಲೆಯ ಬಗ್ಗೆ ಆಕೆ ನನಗೆ ಹೇಳಿರಲಿಲ್ಲ’ ಎಂದು ಜಾಕ್ಲೀನ್ ಹೇಳಿಕೊಂಡಿದ್ದಾರೆ.
ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಸುಕೇಶ್, ಜಾಕ್ಲೀನ್ ಅವರನ್ನು ಪರಿಚಯ ಮಾಡಿಕೊಂಡಿದ್ದರಂತೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ. ದಕ್ಷಿಣದ ಚಿತ್ರರಂಗಗಳಲ್ಲೂ ನೀವು ನಟಿಸಬೇಕು. ನಾನು ಹಲವು ಸಿನಿಮಾಗಳನ್ನು ನಿರ್ಮಿಸುತ್ತಿದ್ದೇನೆ, ನಾವು ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದ. ಒಮ್ಮೆ ನಾನು ಕೇರಳದಲ್ಲಿರುವಾಗ ಪ್ರಯಾಣಕ್ಕಾಗಿ ಸುಕೇಶ್ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದ. ಎರಡು ಬಾರಿ ಚೆನ್ನೈನಲ್ಲಿ ಆತನನ್ನು ಭೇಟಿಯಾದಾಗ ಪ್ರೈವೇಟ್ ಜೆಟ್ ವ್ಯವಸ್ಥೆ ಮಾಡಿದ್ದ’ ಎಂದು ಜಾಕ್ಲೀನ್ ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪ-ಅಮ್ಮನ ಸಮಾಧಿ ಬಳಿ ‘ದುನಿಯಾ’ ವಿಜಯ್ ಹುಟ್ಟುಹಬ್ಬ
ಸುಕೇಶ್ ಬಂಧನವಾದ ಮೇಲಷ್ಟೇ ಜಾಕ್ಲೀನ್ಗೆ ಆತನ ಅಪರಾಧ ಚಟುವಟಿಕೆಗಳ ಬಗ್ಗೆ ಗೊತ್ತಾಯಿತಂತೆ. ‘ಸುಕೇಶ್ ಬಂಧನವಾದ ಬಳಿಕವಷ್ಟೇ ಅವನ ಅಪರಾಧ ಹಿನ್ನೆಲೆಯ ಬಗ್ಗೆ ಗೊತ್ತಾಯಿತು. ಆತ ನನ್ನ ದಾರಿ ತಪ್ಪಿಸುವುದರ ಜತೆಗೆ ಜೀವನ, ಕರಿಯರ್ ಎರಡೂ ಹಾಳು ಮಾಡಿದ’ ಎಂದಿದ್ದಾರೆ.