More

    ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಕುಟುಂಬ

    ಬಾಗೇಪಲ್ಲಿ: ಕಾಂಗ್ರೆಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ಹತ್ತಾರು ಭ್ರಷ್ಟಾಚಾರಗಳನ್ನು ಮಾಡಿ ಜನರ ಹಣ ಲೂಟಿ ಮಾಡಿ ಜೈಲು ಸೇರಿರುವ ಹಾಗೂ ಬೇಲ್ ಮೇಲೆ ಹೊರಗಿರುವವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹರಿಹಾಯ್ದರು.

    ಬಾಗೇಪಲ್ಲಿ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ರೋಡ್ ಶೋ ಉದ್ದೇಶಿಸಿ ಮಾತನಾಡಿ, ಭ್ರಷ್ಟಾಚಾರದ ಹತ್ತಾರು ಪ್ರಕರಣಗಳಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಗಡೆ ತಿರುಗಾಡುತ್ತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಬಿಜೆಪಿಯವರು ನೀತಿ ಪಾಠ ಕಲಿಯುವ ಅಗತ್ಯವಿಲ್ಲ. ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದ 5 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿ, ಬಿಬಿಎಂಪಿಯ ಕುಡಿಯುವ ನೀರಿನ ಯೋಜನೆ, ಸ್ಟೀಲ್ ಬ್ರಿಡ್ಜ್ ನಿರ್ಮಾಣ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳಲ್ಲಿ ಭ್ರಷ್ಟಾಚಾರದ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್ಸಿಗರಿಂದ ಭ್ರಷ್ಟಾಚಾರದ ನೀತಿ ಪಾಠ ಹೇಳಿಸಿಕೊಳ್ಳಬೇಕಾ ಎಂದು ಸಿದ್ದರಾಮಯ್ಯ ಅವರನ್ನು ಜನರು ಪ್ರಶ್ನಿಸಬೇಕಾಗಿದೆ. ಕಾಂಗ್ರೆಸ್‌ನ ಅರ್ಧ ಜನ ಜೈಲಿನಲ್ಲಿದ್ದರೆ, ಅರ್ಧ ಜನ ಬೇಲ್ ಮೇಲೆ ಹೊರಗಡೆ ಇದ್ದಾರೆ. ಇಂತಹವರಿಂದ ರಾಜ್ಯದ ಜನತೆಗೆ ಏನು ಉಪಯೋಗವಾಗಲಿದೆ. ಕೋಟ್ಯಂತರ ಹಣ ಅಕ್ರಮ ಸಂಪಾದನೆ ಮಾಡಿರುವ ಡಿ.ಕೆ.ಶಿವಕುಮಾರ್ ಸಿಬಿಐ ನ್ಯಾಯಾಲಯದ ತನಿಖೆ ಎದುರಿಸುತ್ತಿದ್ದು, ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರದ ಕುಟುಂಬವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಕೇಂದ್ರ ಸರ್ಕಾರದ ಎಲ್ಲ ಜನಪರ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷಗಳಲ್ಲಿ ಬ್ರೇಕ್ ಹಾಕುವ ಹುನ್ನಾರ ಮಾಡುತ್ತಿತ್ತು. ಬಿಜೆಪಿ ರಾಜ್ಯದಲ್ಲಿ ಬೇರೂರಿದ್ದ ಧರ್ಮ ಆಧಾರಿತ ಮೀಸಲಾತಿ ರದ್ದುಗೊಳಿಸಿ ಜಾತಿ ಆಧಾರಿತವಾಗಿ ಮೀಸಲಾತಿ ಹೆಚ್ಚಿಸಿ ಹಿಂದುಳಿದ ಜನಾಂಗದ ಸರ್ವ ಜಾತಿಗಳಿಗೂ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಿದೆ. ಬಿಜೆಪಿ ಸರ್ಕಾರ ಕೊಟ್ಟಿರುವ ಜಾತಿ ಆಧಾರಿತ ಮೀಸಲಾತಿ ರದ್ದು ಮಾಡುತ್ತೇವೆಂದು ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಘೋಷಣೆ ಮಾಡುತ್ತಾರೆ, ಆದರೆ ಯಾವ ಜಾತಿಯ ಮೀಸಲಾತಿ ತೆಗೆದು ಹಾಕುತ್ತೆ ಎಂದು ಹೇಳುತ್ತಿಲ್ಲ ಎಂದರು.
    ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಮಾತನಾಡಿ, ಕಾಂಗ್ರೆಸ್ ಶಾಸಕರು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದರೆ ಜನರು ಅವರನ್ನು ಏಕೆ ತಿರಸ್ಕಾರ ಮಾಡುತ್ತಾರೆ? ಕ್ಷೇತ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಸ್ಥಳೀಯರು, ಹೊರಗಿನವರು ಎಂಬ ಮಾತು ಹೇಳುತ್ತಿರುವುದು ಕಾಂಗ್ರೆಸ್ಸಿಗರು ಮಾತ್ರ, ಆಂಧ್ರಪ್ರದೇಶದಿಂದ ಬಾಗೇಪಲ್ಲಿಗೆ ಬಂದಿರುವ ಸುಬ್ಬಾರೆಡ್ಡಿ ಸ್ಥಳೀಯರು ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದರು.

    ಮುಖಂಡರಾದ ವೆಂಕಟರೆಡ್ಡಿ, ಸುಧಾಕರರೆಡ್ಡಿ, ಬೈರಪ್ಪ, ಅಶ್ವತ್ಥರೆಡ್ಡಿ, ಗುಡಿಬಂಡೆ ಕೃಷ್ಣಾರೆಡ್ಡಿ, ಜಿ.ವಿ.ಕೃಷ್ಣಾರೆಡ್ಡಿ, ಪಿ.ಎಸ್.ವೆಂಕಟರೆಡ್ಡಿ, ಮಲ್ಲಿಕಾರ್ಜುನರೆಡ್ಡಿ ಮತ್ತಿತರರು ಇದ್ದರು.

    ಕೈನಿಂದ ಗ್ಯಾರಂಟಿ ಇಲ್ಲದ ಯೋಜನೆ: ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರ ದೇಶದ ವಿಕಾಸಕ್ಕಾಗಿ ಜನಪರವಾದ ಯೋಜನೆ ಘೋಷಿಸಿದರೆ, ಕಾಂಗ್ರೆಸ್ಸಿಗರು ಗ್ಯಾರಂಟಿ ಇಲ್ಲದ ಯೋಜನೆಗಳನ್ನು ೋಷಣೆ ಮಾಡಿ ಜನರನ್ನು ಮೋಸ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ಸಿಗರ ಮೋಸಕ್ಕೆ ಬಲಿಯಾಗಿ ಮತ ಹಾಕಿದರೆ ದೇಶದ ಅಭಿವೃದ್ಧಿ ಮತ್ತೆ ಕುಂಠಿತವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಉದ್ದೇಶಕ್ಕಾಗಿ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರನ್ನು ಕ್ಷೇತ್ರದ ಜನರು ಗೆಲ್ಲಿಸಬೇಕು ಎಂದು ಜೆ.ಪಿ.ನಡ್ಡಾ ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts