ಯೋಗಲೋಕದ ಯೋಗಿರಾಜ

ಅನಾರೋಗ್ಯಪೀಡಿತ ಬಾಲಕನೊಬ್ಬ ಆರೋಗ್ಯ ಸುಧಾರಣೆಗಾಗಿ ಯೋಗ ಕಲಿತು ಉತ್ತಮ ಆರೋಗ್ಯ ಸಂಪಾದಿಸಿದ್ದಲ್ಲದೆ, ಆ ವಿದ್ಯೆಯನ್ನು ಜಗತ್ತಿಗೆ ಹಂಚಬೇಕೆಂದು ಸಂಕಲ್ಪಿಸಿದ. ಆ ಬಾಲಕ ಮುಂದೆ ಬಿ.ಕೆ.ಎಸ್. ಐಯಂಗಾರ್ ಎಂದು ಪ್ರಸಿದ್ಧರಾದರು. ಯೋಗ ಎಂದಕೂಡಲೇ ತಕ್ಷಣ ನೆನಪಾಗುವ ಹೆಸರು ಅವರದೇ. ನಾಳೆಯಿಂದ ಪ್ರಾರಂಭವಾಗಲಿರುವ ಅವರ ಜನ್ಮಶತಮಾನೋತ್ಸವದ ನಿಮಿತ್ತ ಈ ಬರಹ.

ಒಬ್ಬ ವ್ಯಕ್ತಿ ತನ್ನಲ್ಲಿರುವ ಅಸಾಧಾರಣ ಶಕ್ತಿಯನ್ನು ಸದುಪಯೋಗಪಡಿಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಅವರೇ ಸಾಕ್ಷಿ. ಮಹಾಭಾರತದ ಏಕಚಕ್ರಾಧಿಪುರವು ಮುಂದೆ ಊರಿನ ಕೊಳವೊಂದರಲ್ಲಿ ಬೆಳ್ಳಿ ಬಟ್ಟಲೊಂದು ದೊರೆತ ಕಾರಣ ಬೆಳ್ಳೂರು ಎಂದು ಹೆಸರಾಯಿತೆಂಬ ಪ್ರತೀತಿ ಇದೆ. ಇದು ಕೋಲಾರ ಜಿಲ್ಲೆಯ ನರಸಾಪುರ ತಾಲ್ಲೂಕಿನಲ್ಲಿದೆ. ಇಲ್ಲಿಯೇ ಬಿ.ಕೆ.ಎಸ್.ಐಯಂಗಾರರು ಜನ್ಮ ತಳೆದದ್ದು. ಶಾಲಾ ಉಪಾಧ್ಯಾಯರಾದ ತಂದೆ ಕೃಷ್ಣಮಾಚಾರ್ಯ ಮತ್ತು ತಾಯಿ ಶೇಷಮ್ಮನವರದು 13 ಮಕ್ಕಳ ಬಡ ಕುಟುಂಬ. 11ನೆಯ ಮಗುವಾಗಿ 1918ರ ಡಿಸೆಂಬರ್ 14ರ ರಾತ್ರಿ ಹುಟ್ಟಿದ ಐಯಂಗಾರರ ಬಾಲ್ಯದ ಸಮಯದಲ್ಲಿ ಇಡೀ ಊರೇ ವಿಷಮ ಶೀತಜ್ವರದಿಂದ ನರಳುತ್ತಿತ್ತು. ಒಂದಿಲ್ಲೊಂದು ರೋಗಬಾಧೆ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ಬಾಲಕ ಐಯಂಗಾರ್ ಸದಾ ನರಳುತ್ತಿದ್ದ. ಇಂತಹ ವಿಷಮ ಪರಿಸ್ಥಿತಿಯ ಮಧ್ಯೆ ಒಂಬತ್ತನೆಯ ವಯಸ್ಸಿಗೇ ತಂದೆಯನ್ನು ಕಳೆದುಕೊಂಡದ್ದು ಕುಟುಂಬವನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಿತು. ಈ ಸಂಕಷ್ಟವನ್ನು ಅನುಭವಿಸುತ್ತಲೇ ಐದಾರು ವರ್ಷ ಕಳೆದ ಅವರು, ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ಪಡೆದರು. ತದನಂತರ ಯೋಗಗುರು ಪ್ರೊ. ತಿರುಮಲೆ ಕೃಷ್ಣಮಾಚಾರ್ಯರಿಂದ ಮೈಸೂರಿಗೆ ಬರುವಂತೆ ಐಯಂಗಾರ್​ಗೆ ಸೂಚನೆ ಬಂತು.

ಕೃಷ್ಣಮಾಚಾರ್ಯರು ಬಿ.ಕೆ.ಎಸ್. ಐಯಂಗಾರ್ ಅವರ ಅಕ್ಕನ ಗಂಡ ಅರ್ಥಾತ್ ಬಾವ. ಅವರು ವೇದ-ಉಪನಿಷತ್, ಯೋಗ, ಆಯುರ್ವೆದ ವಿದ್ಯೆಗಳಲ್ಲಿ ನಿಷ್ಣಾತ ಪಂಡಿತ. ಮದ್ರಾಸಿನಲ್ಲಿ ನೆಲೆಸಿದ್ದ ಅವರನ್ನು ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ರಾಜಕುಟುಂಬಕ್ಕೆ ಯೋಗ ಕಲಿಸಲು ಆಹ್ವಾನಿಸಿದ್ದರು. ಕೃಷ್ಣಮಾಚಾರ್ಯರು ಆನಂದತುಂದಿಲರಾಗಿ ಮೈಸೂರಿಗೆ ಬಂದು ನೆಲೆಸಿದ್ದರು. ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಅಕ್ಕ-ಬಾವನ ಬಳಿ ಪಡೆದ ಆಶ್ರಯ ಐಯಂಗಾರರ ಬದುಕಿಗೆ ಮಹತ್ವದ ತಿರುವು ನೀಡಿತು. ಕೃಷ್ಣಮಾಚಾರ್ಯರ ಮಾರ್ಗದರ್ಶನದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿದ ಯೋಗಸಾಧನೆಯಿಂದ ಐಯಂಗಾರ್ ಅವರ ಆರೋಗ್ಯ ಸುಧಾರಿಸಿತು.

ಯೋಗಾಭ್ಯಾಸ ಕಲಿತ ಎರಡು ವರ್ಷಗಳಲ್ಲಿಯೇ ಅವರು ಕೃಷ್ಣಮಾಚಾರ್ಯರ ನಿರ್ದೇಶನದ ಮೇರೆಗೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಯೋಗಶಿಕ್ಷಕರಾದರು. ನಂತರ ಗುರುಗಳ ಆಣತಿಯಂತೆ 1937ರಲ್ಲಿ ಖಾಸಗಿಯಾಗಿ ಯೋಗಶಿಕ್ಷಣ ನೀಡಲು ಪುಣೆಗೆ ಬಂದುದು ಅವರ ಜೀವನದ ಮಹತ್ತರ ಬದಲಾವಣೆಗೆ ನಾಂದಿಯಾಯಿತು.

ಯೋಗದೀಪಿಕಾ, ಪ್ರಾಣಾಯಾಮ ದೀಪಿಕಾ: ಮಾನವನ ಪರಿಪೂರ್ಣ ಆರೋಗ್ಯಕ್ಕೆ ಬೇಕಾದ ವಿಷಯಗಳನ್ನು ಕುರಿತು ಐಯಂಗಾರ್ ಬರೆದ 14 ಪುಸ್ತಕಗಳ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. 17 ಭಾಷೆಗಳಲ್ಲಿ ದೇಶವಿದೇಶಗಳಲ್ಲಿ ಅನೇಕ ಆವೃತ್ತಿಗಳನ್ನು ಹೊಂದಿವೆ. ಅವರು 1966ರಲ್ಲಿ ಯೋಗದೀಪಿಕಾ (ಲೈಟ್ ಆನ್ ಯೋಗ) ಎನ್ನುವ ಪುಸ್ತಕವನ್ನು ಬರೆದರು. 200ಕ್ಕೂ ಹೆಚ್ಚು ಯೋಗಾಸನಗಳ ಬಗ್ಗೆ ಸಚಿತ್ರ ವಿವರಗಳಿದ್ದ ಈ ಪುಸ್ತಕ ಅತ್ಯಂತ ಕಡಿಮೆ ಸಮಯದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಿತು. ಪ್ರಾಣಾಯಾಮ ದೀಪಿಕಾ ಪುಸ್ತಕದಲ್ಲಿ ಅಷ್ಟಾಂಗಯೋಗದ ಪ್ರಮುಖ ಭಾಗವಾದ ಪ್ರಾಣಾಯಾಮವನ್ನು ಪರಿಚಯಿಸಿ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಐಯಂಗಾರ್ ದಂಪತಿಗೆ ಐವರು ಪುತ್ರಿಯರು, ಒಬ್ಬ ಪುತ್ರ. ಹಿರಿಯ ಪುತ್ರಿ ಗೀತಾ ಮತ್ತು ಮಗ ಪ್ರಶಾಂತ ಅಂತಾರಾಷ್ಟ್ರೀಯ ಯೋಗಶಿಕ್ಷಕರು. ಪತ್ನಿಯ ನಿಧನಾನಂತರ ಅವರ ಹೆಸರಿನಲ್ಲಿ 1975ರಲ್ಲಿ ಐಯಂಗಾರ್ ಪುಣೆಯಲ್ಲಿ ಪ್ರಾರಂಭಿಸಿದ ‘ರಮಾಮಣಿ ಮೆಮೋರಿಯಲ್ ಯೋಗ ಸೆಂಟರ್’ನಲ್ಲಿ ಅನಾಟಮಿ, ಫಿಸಿಯಾಲಜಿಯ ಜೊತೆಜೊತೆಗೆ ಯೋಗಾಸನ, ಪ್ರಾಣಾಯಾಮಗಳನ್ನು ಕಲಿಸಲಾಗುತ್ತಿದೆ. 70 ದೇಶಗಳಲ್ಲಿ ಸರಿಸುಮಾರು 140 ಯೋಗಶಾಲೆಗಳನ್ನು ತೆರೆದು ಯೋಗ ಕಲಿಸಿದ ಕೀರ್ತಿ ಅವರದು. ಅನೇಕ ಕ್ರೀಡಾಸಕ್ತರು, ರಾಜಕಾರಣಿಗಳು, ಸಮಾಜ ಸುಧಾರಕರು, ಕಲಾವಿದರು ಐಯಂಗಾರ್ಯರಿಂದ ಕಲಿತ ಯೋಗದಿಂದ ಜೀವನದ ದಿಕ್ಕನ್ನೇ ಬದಲಿಸಿಕೊಂಡಿದ್ದಾರೆ.

ನಿಗರ್ವಿಯಾದ ಐಯಂಗಾರರು ಸ್ವಂತ ಊರಿಗೆ ಬಂದಾಗ ಅಲ್ಲಿ ಶಾಲೆ ಇಲ್ಲದ್ದು ತಿಳಿದು ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ಕಾಲೇಜುಗಳ ಕಟ್ಟಡಗಳನ್ನು ನಿರ್ವಿುಸಿದರು. ಮತ್ತೊಂದು ಬಾರಿ ಬಂದಾಗ ಊರಿನಲ್ಲಿ ಒಳ್ಳೆಯ ಗುಡಿ ಇಲ್ಲದ್ದನ್ನು ಗಮನಿಸಿ ಆಂಜನೇಯ, ಪತಂಜಲಿ ದೇವಸ್ಥಾನಗಳನ್ನು ನಿರ್ವಿುಸಿದರು. ಆಸ್ಪತ್ರೆ ಇಲ್ಲದ್ದನ್ನು ಗಮನಿಸಿ ಪ್ರಾಥಮಿಕ ಆರೋಗ್ಯ ಘಟಕವನ್ನು ತೆರೆಯಲು ಕಟ್ಟಡ ನಿರ್ಮಾಣ ಮಾಡಿಸಿದರು. ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಪ್ರಕಟಿಸುವ ಪಟ್ಟಿಯಲ್ಲಿ ಐಯಂಗಾರ್ ಅವರ ಹೆಸರು ಸಹ ಇತ್ತು.ಚೀನಾ ಸರ್ಕಾರ 2011ರಲ್ಲಿ ಅವರ ಭಾವಚಿತ್ರವಿರುವ ಏಳು ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿತ್ತು. ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಲಭಿಸಿವೆ. 2014ರ ಆಗಸ್ಟ್ 20ರಂದು ಅವರು ಪುಣೆಯಲ್ಲಿ ನಿಧನರಾದರು. ನಾಳೆಯಿಂದ ಜಗತ್ತಿನ ನಾನಾ ಕಡೆಗಳಲ್ಲಿ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುತ್ತದೆ.

ಯೋಗಾನಂದರ ಮೆಚ್ಚುಗೆ

1935ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದ ಪರಮಹಂಸ ಯೋಗಾನಂದರ ಎದುರು ಐಯಂಗಾರ್ ನೀಡಿದ ಯೋಗಾಸನಗಳ ಪ್ರದರ್ಶನವು ಯೋಗಾನಂದರ ಮೆಚ್ಚುಗೆಗೆ ಪಾತ್ರವಾಗಿತ್ತು.

ಐಯಂಗಾರ್ ಯೋಗ

ಹಠಯೋಗದ ಒಂದು ಪರಿಷ್ಕೃತ ರೂಪವೇ ‘ಐಯಂಗಾರ್ ಯೋಗ’. ಸವಿಸ್ತಾರವಾದ ವಿವರಣೆಯ ಜೊತೆಗೆ ಆಸನಗಳನ್ನೂ, ಪ್ರಾಣಾಯಾಮವನ್ನೂ ಮಾಡುವಾಗ ಪರಿಪೂರ್ಣ ಸ್ಥಿತಿಯನ್ನು ತಲುಪುವಂತೆ ದೇಹವನ್ನು ಸಜ್ಜುಗೊಳಿಸುವುದಕ್ಕೆ ಒತ್ತು ನೀಡುವುದು ‘ಐಯಂಗಾರ್ ಯೋಗ’ದ ವಿಶೇಷ. ಯೋಗಾಸನಗಳನ್ನು ಮಾಡಲು ನೆಲಕ್ಕೆ ಹಾಸುವ ಬಟ್ಟೆಯೊಂದನ್ನು ಬಿಟ್ಟರೆ ಬೇರೇನನ್ನೂ ಬಳಸದ ಅಂದಿನ ಸಾಂಪ್ರದಾಯಿಕ ವಿಧಾನಗಳನ್ನು ಬಿಟ್ಟು ಹಗ್ಗದ ಕುಣಿಕೆ, ಕೋಲು, ಕುರ್ಚಿ, ಇಟ್ಟಿಗೆ ಇವೇ ಮುಂತಾದ ಪರಿಕರಗಳನ್ನು ಬಳಸಿ ಕಲಿಸತೊಡಗಿದ ಪ್ರಥಮ ಗುರು ಐಯಂಗಾರ್.

ಬಹಳ ವರ್ಷಗಳ ಹಿಂದೆ ಬಿ.ಕೆ.ಎಸ್. ಐಯಂಗಾರ್ ಆಸನಗಳನ್ನು ಅಭ್ಯಸಿಸುತ್ತಿದ್ದ ಸಂದರ್ಭದಲ್ಲಿ ಯೋಗದ ಜ್ಞಾನ ಇಲ್ಲದವರು ಆ ಭಂಗಿಗಳನ್ನು ದೊಂಬರಾಟಕ್ಕೆ ಹೋಲಿಸಿದ್ದರಂತೆ. ಆ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದೇ ಅವರು ಯೋಗಕ್ಷೇತ್ರದಲ್ಲಿ ಉತ್ತುಂಗದ ಶಿಖರವೇರಲು ಸಹಕಾರಿಯಾಯಿತು. ಯೋಗ ಕೇವಲ ನೋಡುವ ರೀತಿಯನ್ನಷ್ಟೇ ಬದಲಿಸುವುದಿಲ್ಲ. ಅದು ನೋಡುಗನನ್ನೇ ಪರಿವರ್ತಿಸುತ್ತದೆ.

(ಬಿ.ಕೆ.ಎಸ್. ಐಯಂಗಾರ್ ಅವರ ಜೀವನವನ್ನು ಕುರಿತು ಮೈಸೂರಿನ ಹಿಮಾಲಯ ಫೌಂಡೇಷನ್ ಪ್ರಕಟಿಸಿರುವ ‘ಯೋಗ ಭೀಷ್ಮ’ ಕೃತಿಯಿಂದ ಆಯ್ದ ಭಾಗ)