ಎಂ.ಎಸ್​. ಧೋನಿ ಅವರಿಂದ ಸಾಕಷ್ಟು ಕಲಿತ್ತಿದ್ದೇನೆ: ವಿರಾಟ್​ ಕೊಹ್ಲಿ

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್​ ಟೂರ್ನಿಯಿಂದ ವಿರಾಮವನ್ನು ಪಡೆದುಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ನಾಯಕತ್ವ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.

ಎಂ.ಎಸ್​. ಧೋನಿ ಅವರ ನಾಯಕತ್ವದಿಂದ ಹೆಚ್ಚು ಪ್ರಭಾವಿತಗೊಂಡಿರುವುದಾಗಿಯೂ ವಿರಾಟ್​ ಕೊಹ್ಲಿ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.

ನಾನು ಉಪನಾಯಕನಾಗಿ ಆಯ್ಕೆಯಾಗುವ ಮುಂಚೆ ಹಾಗೂ ನಾನು ಚಿಕ್ಕವನಿದ್ದಾಗಲೂ ಆಟದ ಬಗ್ಗೆ ಧೋನಿ ಅವರೊಂದಿಗೆ ಹೆಚ್ಚು ಮಾತನಾಡುತ್ತಿದ್ದೆ. ಅಲ್ಲದೆ, ನನ್ನ ಸಲಹೆಗಳನ್ನು ಅವರಿಗೆ ನೀಡುತ್ತಿದ್ದೆ ಎಂದು ವಿರಾಟ್​ ಹೇಳಿಕೊಂಡಿದ್ದಾರೆ.

ಆಟದ ಬಗ್ಗೆ ಯೋಚಿಸುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಇದೇ ಕಾರಣಕ್ಕಾಗಿ ನಾನು ನಾಯಕತ್ವವನ್ನು ಬಹಳ ಆನಂದಿಸುತ್ತೇನೆ. ಆಟದಲ್ಲಿ ಗುರಿ ಬೆನ್ನಟ್ಟುವುದನ್ನು ಇಷ್ಟಪಡುವ ನಾನು ಪಂದ್ಯದ ವೇಳೆ ಏನು ಮಾಡಬೇಕೆಂಬುದನ್ನು ಯೋಜಿಸುವುದಕ್ಕಾಗಿ ಬುದ್ಧಿ ಶಕ್ತಿಯನ್ನು ಉಪಯೋಗಿಸಲು ಇಷ್ಟುಪಡುವುದಾಗಿ ತಿಳಿಸಿದ್ದಾರೆ.

ನಾನು ಧೋನಿ ಅವರಿಂದ ಹೆಚ್ಚು ಕಲಿತಿದ್ದೇನೆ. ಹಲವು ಬಾರಿ ಸ್ಲಿಪ್​ ವಿಭಾಗದಲ್ಲಿ ಅವರ ಹತ್ತಿರವೇ ನಿಂತು ಅವರನ್ನು ಗಮನಿಸಿದ್ದೇನೆ ಎಂದು ಹೇಳಿದರು.

ಐದು ದಿನಗಳವರೆಗೆ ಆಡುವ ಟೆಸ್ಟ್​ ಪಂದ್ಯವನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸುವ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ICC)ಯ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ಟೆಸ್ಟ್​ ಪಂದ್ಯದ ದುರಸ್ತಿಗೆ ನಾನು ಒಪ್ಪುವುದಿಲ್ಲ. ಪಂದ್ಯಾವಳಿಯಲ್ಲೇ ಟೆಸ್ಟ್​ ಮಾದರಿಯ ಪಂದ್ಯ ಅಂತ್ಯಂತ ಸುಂದರವಾದದ್ದು ಎಂದು ಹೇಳಿದರು. (ಏಜೆನ್ಸೀಸ್​)