ವಿಶ್ವ ಬ್ಯಾಂಕ್‌ ಅಧ್ಯಕ್ಷೀಯ ರೇಸ್‌ನಲ್ಲಿ ಟ್ರಂಪ್‌ ಪುತ್ರಿ ಇವಾಂಕ, ಮಾಜಿ ರಾಯಬಾರಿ ನಿಕ್ಕಿ ಹ್ಯಾಲೆ

ವಾಷಿಂಗ್ಟನ್: ಜಿಮ್ ಯಾಂಗ್ ಕಿಮ್ ಅವರ ನಿರ್ಗಮನದ ನಂತರ ತೆರವಾಗಿರುವ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ, ಸಲಹೆಗಾರ್ತಿ ಇವಾಂಕ ಟ್ರಂಪ್ ಹಾಗೂ ವಿಶ್ವಸಂಸ್ಥೆಯ ಅಮೆರಿಕ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ರೇಸ್‌ನಲ್ಲಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ತನ್ನ ಎರಡನೇ ಅವಧಿಯ ವಿಶ್ವಬ್ಯಾಂಕ್‌ ಅಧ್ಯಕ್ಷ ಹುದ್ದೆ ಮುಕ್ತಾಯಗೊಳ್ಳಲು ಮೂರು ವರ್ಷ ಬಾಕಿ ಇರುವಾಗಲೇ ಸ್ಥಾನದಿಂದ ಹಿಂದೆ ಸರಿದಿರುವುದಾಗಿ ಸೋಮವಾರವಷ್ಟೇ ಕಿಮ್‌ ಅವರು ಘೋಷಿಸಿದ್ದರು.

ಕಳೆದ ತಿಂಗಳಷ್ಟೇ ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಲ್ಲದೆ ಅಂತಾರಾಷ್ಟ್ರೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಡೆವಿಡ್ ಮಾಲ್ಪಸ್ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿಯ ಯುಎಸ್‌ ಏಜೆನ್ಸಿ ಮುಖ್ಯಸ್ಥ ಮಾರ್ಕ್‌ ಗ್ರೀನ್ ಅವರಿಂದಲೂ ಕೂಡ ಹುದ್ದೆಯನ್ನು ಹಿಂಪಡೆಯಲಾಗಿತ್ತು.

ಸಂಭಾವ್ಯ ಅಭ್ಯರ್ಥಿಗಳ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಖಜಾನೆ ಇಲಾಖೆಯು ಹೇಳಿದ್ದು, ಹಲವಾರು ಗಮನಾರ್ಹವಾದ ಶಿಫಾರಸುಗಳನ್ನು ಇಲಾಖೆ ಪಡೆದುಕೊಂಡಿದೆ. ವಿಶ್ವಬ್ಯಾಂಕ್‌ನ ಅಧ್ಯಕ್ಷರ ನಾಮನಿರ್ದೇಶನಕ್ಕಾಗಿ ಆಂತರಿಕ ವಿಮರ್ಶೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆ. ಗವರ್ನರ್‌ ಅವರೊಂದಿಗೆ ಹೊಸ ಅಧ್ಯಕ್ಷರ ಆಯ್ಕೆಗೆ ಎದುರುನೋಡುತ್ತಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ.

2ನೇ ವಿಶ್ವಯುದ್ಧದ ನಂತರ ಸ್ಥಾಪನೆಯಾದ ವಿಶ್ವ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಅಮೆರಿಕವೇ ಬ್ಯಾಂಕ್‌ನ ಅಧ್ಯಕ್ಷರ ಆಯ್ಕೆ ಮಾಡುವುದು ಅಲಿಖಿತ ಒಪ್ಪಂದವಾಗಿದೆ. ಆದರೆ, ಅಧ್ಯಕ್ಷರಾಗಿ ಆಯ್ಕೆಯಾಗುವವರು ಅವಧಿ ಪೂರ್ಣಗೊಳಿಸುತ್ತಾರೆ ಎಂಬ ಭರವಸೆ ಇರುವುದಿಲ್ಲ.

ಕಿಮ್‌ ಅವರು 2012ರಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಮನಿರ್ದೇಶನಗೊಂಡಿದ್ದ ಮೊದಲ ಅಮೆರಿಕನ್ ಆಗಿದ್ದಾರೆ. ಆಯ್ಕೆ ಪ್ರಕ್ರಿಯೆಯು ತೆರೆದ, ಅರ್ಹತೆ ಆಧಾರಿತ ಮತ್ತು ಪಾರದರ್ಶಕವಾಗಿರುತ್ತದೆ. ಅಮೆರಿಕದವರಲ್ಲದ ಅಭ್ಯರ್ಥಿಗಳನ್ನು ತಳ್ಳಿಹಾಕುವುದಿಲ್ಲ ಎಂದು ಬ್ಯಾಂಕ್‌ನ ಆಡಳಿತ ಮಂಡಳಿ ತಿಳಿಸಿದೆ. (ಏಜೆನ್ಸೀಸ್)