ಇದು ಎಂಥಾ ಲೋಕವಯ್ಯಾ…!

ಸೂಪರ್ ಮಾರ್ಕೆಟ್​ನಲ್ಲಿ ಪುರುಷರಿಗೆ ನಿಷೇಧ

ಹೆಂಡತಿ ಶಾಪಿಂಗ್ ಮಾಡಲು ಸೂಪರ್ಮಾರ್ಕೆಟ್​ಗೆ ಹೋಗೋಣವೆಂದು ಕರೆದರೆ ಬಹುತೇಕ ಗಂಡಂದಿರಿಗೆ ಕಿರಿಕಿರಿ. ಏನೇನೋ ನೆಪ ಹೇಳಿ ತಪ್ಪಿಸಿಕೊಳ್ಳುವುದು ಮಾಮೂಲು. ಆದರೆ ಸೌದಿ ಅರೇಬಿಯಾದ ರಿಯಾದ್ ನಗರದ ಗಂಡಸರಿಗೆ ಈ ಕಷ್ಟವೇ ಇಲ್ಲ. ಏಕೆಂದರೆ ಅಲ್ಲಿ 16 ವರ್ಷ ವಯಸ್ಸು ಮೇಲ್ಪಟ್ಟ ಪುರುಷರು ಸೂಪರ್ ಮಾರ್ಕೆಟ್ ಪ್ರವೇಶಿಸುವಂತೆಯೇ ಇಲ್ಲ! ಇಂಥದ್ದೊಂದು ಕಾನೂನು ಅಲ್ಲಿದೆ. ಸೂಪರ್ ಮಾರ್ಕೆಟ್ ಒಳಗಡೆ ಮಹಿಳೆಯರು ಮತ್ತು 16 ವರ್ಷಕ್ಕಿಂತ ಕಡಿಮೆ ವಯೋಮಾನದ ಹುಡುಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದನ್ನು ಮೀರಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಬಣ್ಣ ಬಳಿಯಲೂ ಬೇಕು ಕಾನೂನು

ಮನೆಯ ಗೋಡೆಗೆ ಯಾವಾಗ ಪೇಂಟಿಂಗ್ ಮಾಡಬೇಕು, ಯಾವ ಕಲರ್ ಬಳಿಯಬೇಕು ಎನ್ನುವುದೆಲ್ಲ ಮನೆಯ ಯಜಮಾನರ ಆಯ್ಕೆ. ಬಾಡಿಗೆ ಮನೆಯಾದರೆ ಅದರ ಓನರ್, ಸ್ವಂತ ಮನೆಯಾದರೆ ನಮ್ಮ ನಿರ್ಧಾರವೇ ಫೈನಲ್. ಅದರಲ್ಲಿ ಎರಡು ಮಾತೇ ಇಲ್ಲ. ಆದರೆ ಸ್ವಿಡನ್​ನ ಕೆಲವು ನಗರಗಳಲ್ಲಿ ಹಾಗಲ್ಲ. ಗೋಡೆಗೆ ಬಣ್ಣ ಬಳಿಯಬೇಕಾದರೆ ಸರ್ಕಾರದ ಅನುಮತಿ ಬೇಕು! ಬಣ್ಣ ಬಳಿಯುವ ಮುನ್ನ ಪರವಾನಗಿಯನ್ನೂ ಪಡೆಯಬೇಕು. ಇಲ್ಲದಿದ್ದರೆ ಅಲ್ಲಿಯ ಕಾನೂನಿನ ಪ್ರಕಾರ ಮನೆಯ ಮಾಲೀಕರು ಶಿಕ್ಷೆ ಅನುಭವಿಸ ಬೇಕಾಗುತ್ತದೆ.

ಅನ್ನದಾನ ಮಾಡಿದರೆ ಕೈಕೋಳ

ಬಡವರಿಗೆ ಅನ್ನ ನೀಡಿದರೆ ಪುಣ್ಯ ಬರುತ್ತದೆ ಎನ್ನುತ್ತೇವೆ ನಾವು. ಆದರೆ ಫ್ಲೊರಿಡಾದಲ್ಲಿನ ಟ್ಯಾಂಪ್ ನಗರದಲ್ಲಿ ಅನ್ನ ನೀಡಿದರೆ ಕೈಕೋಳ ಹಾಕಲಾಗುತ್ತದೆ! ಏಕೆಂದರೆ ಅಲ್ಲಿಯ ಕಾನೂನು ಅನ್ನದಾನವನ್ನು ನಿಷೇಧಿಸಿದೆ. ಅಷ್ಟೇ ಅಲ್ಲ, ಬಡವರಿಗೆ ಬಟ್ಟೆಯನ್ನೂ ನೀಡಕೂಡದು. ಒಂದು ವೇಳೆ ಅನ್ನವನ್ನೋ, ಬಟ್ಟೆಯನ್ನೋ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳುವ ಇಚ್ಛೆ ಇದ್ದರೆ ಸರ್ಕಾರಕ್ಕೆ ಶುಲ್ಕ ಕಟ್ಟಿ ಪರವಾನಗಿ ಪಡೆದುಕೊಳ್ಳಬೇಕು. ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿದರೆ ಅವು ದುಬಾರಿ ಮೊತ್ತದ ವಿಮೆ ಮಾಡಿಸಬೇಕು.

ಖಾರದ ಸಾಸ್ ನಿಷಿದ್ಧ

ದಕ್ಷಿಣ ಅಮೆರಿಕದ ಪೆರುವಿನಲ್ಲಿರುವ ಜೈಲಿನಲ್ಲಿ ಕೈದಿಗಳ ಅಡುಗೆಗೆ ಖಾರವಾಗಿರುವ ಸಾಸ್ ನಿಷೇಧಿಸಲಾಗಿದೆ. ಖಾರವಾದ ಸಾಸ್ ಕಾಮೋತ್ತೇಜಕವಾಗಿರುವ ಕಾರಣ, ಸರ್ಕಾರ ಅದನ್ನು ನಿಷೇಧಿಸಿದೆಯಂತೆ. ಅಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಮೆಣಸಿನ ಸಾಸ್ ಕೂಡ ಕೈದಿಗಳಿಗೆ ಹಾಕುವಂತಿಲ್ಲ ಎನ್ನುತ್ತದೆ ಅಲ್ಲಿಯ ಕಾನೂನು.

Leave a Reply

Your email address will not be published. Required fields are marked *