ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ಅಪರಾಧಿಗೆ 2 ವರ್ಷ ಜೈಲು

ಮಂಗಳೂರು: ಮರಕಡ ಗ್ರಾಮದ ಬಾಯಾಡಿ ಎಂಬಲ್ಲಿ ನಡೆದ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ಅಪರಾಧಿ ರಾಮ ನಲ್ಕೆ(45) ಎಂಬಾತಗೆ 2 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣ ವಿವರ: ರಾಮ ನಲ್ಕೆ ತನ್ನ ಪತ್ನಿ ಮೋಹಿನಿ ಮತ್ತು ಮಕ್ಕಳಾದ ಧನುಷ್, ಧನ್ಯಾ ಜತೆ ಮರಕಡದ ಬಾಯಾಡಿ ಎಂಬಲ್ಲಿ ಬಾಡಿಗೆ ಮನೆಯೊಂದಲ್ಲಿ ವಾಸವಾಗಿದ್ದರು. 2018ರ ಮೇ 17ರಂದು ರಾತ್ರಿ ರಾಮ ನಲ್ಕೆ ಕೆಲಸ ಮುಗಿಸಿ ಮನೆಗೆ ಬಂದು ಮದ್ಯ ಸೇವಿಸುತ್ತಿದ್ದ. ಇದನ್ನು ಪತ್ನಿ ಮೋಹಿನಿ ವಿರೋಧಿಸಿದ್ದಾರೆ. ಕೋಪಗೊಂಡ ರಾಮ ನಲ್ಕೆ ಪತ್ನಿಗೆ ಬೈದು ಹೊಟ್ಟೆಗೆ ಕಾಲಿನಿಂದ ತುಳಿದು ಗಂಭೀರ ಹಲ್ಲೆ ಮಾಡಿದ್ದ. ಪರಿಣಾಮ ನೆಲಕ್ಕೆ ಬಿದ್ದ ಮೋಹಿನಿ ಮರುದಿನ ಬೆಳಗ್ಗೆ ಏಳದಿದ್ದಾಗ ಕೊಲೆ ಮಾಡುವ ಉದ್ದೇಶದಿಂದ ತಾನು ಸೇದುತ್ತಿದ್ದ ಬೀಡಿಯ ಬೆಂಕಿಯಿಂದ ಮೋಹಿನಿ ಅವರ ಕೈ, ಕಾಲು ಸೊಂಟ ಸುಟ್ಟು ಗಾಯಗೊಳಿಸಿದ್ದ. ಇದಾದ ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ 2018ರ ಮೇ 19ರಂದು ಬೆಳಗ್ಗೆ 4.30ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಮೃತರ ಪುತ್ರ ನೀಡಿದ ದೂರಿನ ಆಧಾರದಲ್ಲಿ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಮೃತರ ಇಬ್ಬರು ಮಕ್ಕಳು ಚಿಕ್ಕಮ್ಮನ ಜತೆ ವಾಸವಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನಗರದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯಿರುವ ವಸತಿ ಶಾಲೆಗೆ ಮಕ್ಕಳನ್ನು ಸೇರ್ಪಡೆಗೊಳಿಸಬೇಕು. ಮೃತ ಮೋಹಿನಿಯವರ ತಂಗಿ ಶಶಿಕಲಾ ಅವರು ಪ್ರತಿ ತಿಂಗಳು ಇಬ್ಬರು ಮಕ್ಕಳನ್ನು ಜೈಲುವಾಸದಲ್ಲಿರುವ ತಂದೆಯನ್ನು ತೋರಿಸಲು ಕರೆದುಕೊಂಡು ಹೋಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

11 ಸಾಕ್ಷಿಗಳ ವಿಚಾರಣೆ: ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಒಟ್ಟು 11 ಸಾಕ್ಷಿಗಳ ವಿಚಾರಣೆ ನಡೆಸಿ, ಆರೋಪಿ ಕಲಂ 498ಎ, 304(11)ರಡಿ ಅಪರಾಧಿಯೆಂದು ಘೋಷಿಸಿದ್ದಾರೆ. ಆರೋಪಿಗೆ 2 ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಶಿಕ್ಷೆ ತೀರ್ಪು ನೀಡಿದ್ದಾರೆ. ಅಪರಾಧಿ ಬಂಧನ ಬಳಿಕ ಜೈಲಿನಲ್ಲೇ ಇರುವ ಕಾರಣ ನ್ಯಾಯಾಂಗ ಬಂಧನ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಕಾವೂರು ಪೊಲೀಸ್ ನಿರೀಕ್ಷಕ ಕೆ.ಆರ್.ನಾಕ್ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಇಬ್ಬರು ಮಕ್ಕಳು, ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಸಾಕ್ಷಿ ಹೇಳಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.

Leave a Reply

Your email address will not be published. Required fields are marked *