ಮುಧೋಳ: ಎಲ್ಲಿ ನೋಡಿದರಲ್ಲಿ ರೈತರು, ಕಬ್ಬು ಬೆಳೆಗಾರರು, ವಿವಿಧ ಕಾರ್ಖಾನೆ ಮಾಲೀಕರು….
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೂರು ವರ್ಗದ ಜನರ ಭಾಗಿಯಾಗಿ ತಮ್ಮ ಸಮಸ್ಯೆಗಳ ನಿವಾರಣೆಗೆ ಆರೋಗ್ಯಕರವಾದ ಚರ್ಚೆ ನಡೆಸಿದ್ದು ಮುಧೋಳ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರತಿನಿತ್ಯ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹತ್ತಾರು ಸಮಸ್ಯೆ ನಿವಾರಣೆಗೆ ಮಾಲೀಕರ ಹಾಗೂ ರೈತರ ಸಮನ್ವಯದ ಸಭೆ ಸಾಕ್ಷಿಯಾಯಿತು.
ರೈತ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರು, ಕೃಷಿ ವಿಜ್ಞಾನಿಗಳು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೂರಾರು ರೈತರು ಪಾಲ್ಗೊಂಡು ಆರೋಗ್ಯಕರ ಚರ್ಚೆ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಕಾರ್ಖಾನೆ ಮಾಲೀಕರು, ರೈತರು, ಸರ್ಕಾರ ಒಬ್ಬರಿಗೊಬ್ಬರು ಬೇಕಾದವರು. ಕಾರ್ಖಾನೆಯವರಿಗೆ ರೈತರ ಅವಶ್ಯಕತೆ ಇರುತ್ತದೆ. ರೈತರು ಬೇರೆ ಬೆಳೆ ಬೆಳೆಯಲು ಆರಂಭಿಸಿದರೆ ಕಾರ್ಖಾನೆಯವರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಆಗುತ್ತದೆ. ಈ ಭಾಗದಲ್ಲಿನ ಕಬ್ಬಿನ ಬಿಲ್ ಬಾಕಿ 98.41 ಕೋಟಿ ರೂ. ಕೂಡಲೇ ಕಾರ್ಖಾನೆ ಮಾಲೀಕರು ನೀಡಲು ಮುಂದಾಗಬೇಕು. ನಮ್ಮ ಸರ್ಕಾರ ರೈತರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಹೇಳಿದರು.
ಕಬ್ಬು ಸಾಗಣೆಯಲ್ಲಿ 10 ಕಿ.ಮೀ. ಹಾಗೂ 100 ಕಿ.ಮೀ.ಗೂ ಒಂದೇ ತೆರನಾದ ಬೆಲೆ ನಿಗದಿ ಮಾಡಿದ್ದೀರಿ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕಾರ್ಖಾನೆಯವರು ರಿಕವರಿ ಒಂದೇ ರೀತಿಯಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಲಗಾಣಿ ಬಗ್ಗೆ ಇನ್ನೂ ಚರ್ಚೆ ಆಗಬೇಕು. ಇದಕ್ಕೆ ಸೂಕ್ತ ಕ್ರಮ ತರಲು ನಾನು ಸದಾ ಸಿದ್ಧ. ಅದಕ್ಕೆ ರೈತರು ಸಹಕರಿಸಬೇಕು. ಜಿಲ್ಲೆಯ ಎಲ್ಲ ಕಾರ್ಖಾನೆಯವರು ಸೇರಿ ಒಂದು ಬ್ಯಾಂಕ್ ಮಾಡಿ. ಇದರಿಂದ ರೈತರಿಗೆ ಬಿಲ್ ಕೊಡಲು ಅನುಕೂಲವಾಗುತ್ತದೆ ಎಂದರು.
ನಮ್ಮ ಸರ್ಕಾರ ರೈತರ ಮೇಲಿನ 11 ಪ್ರಕರಣಗಳನ್ನು ಹಿಂಪಡೆದುಕೊಂಡಿದೆ. ಕಬ್ಬಿನಿಂದ ಪೂರಕ ವಸ್ತುಗಳ ತಯಾರಿಸಲು ಮುಂದೆ ಬಂದರೆ ಸರ್ಕಾರ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ನಾನು ನಿಮ್ಮ ಜತೆಗೆ ಸದಾಕಾಲ ಇರುತ್ತೇನೆ ಎಂದರು.
ನಿರಾಣಿ ಸಕ್ಕರೆ ಕಾರ್ಖಾನೆ ಮುಖ್ಯಸ್ಥ ಸಂಗಮೇಶ ನಿರಾಣಿ ಮಾತನಾಡಿ, ದೇಶದಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ನೀಡಿರುವ ಹೆಮ್ಮೆ ಮುಧೋಳ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಲ್ಲುತ್ತದೆ. ಕಬ್ಬಿನಿಂದ ಸರಿಸುಮಾರು 26 ಪೂರಕ ವಸ್ತುಗಳನ್ನು ತಯಾರಿಸಲಾಗುತ್ತಿದೆ ಎಂದರು.
ಕಬ್ಬಿಗೆ 4500ಕ್ಕೂ ಅಧಿಕ ದರ ನೀಡಲು ಸಕ್ಕರೆಯೊಂದನ್ನೇ ನಂಬಿಕೊಂಡರೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಖಾನೆಗಳು ದಿಟ್ಟ ಹೆಜ್ಜೆ ಇರಿಸಿವೆ. ರೈತರಿಗೆ ಸರ್ಕಾರ ಸ್ಪಂದನೆ ಮಾಡಬೇಕು. ಅಂದಾಗ ಮಾತ್ರ ರೈತರಿಗೆ ಹೆಚ್ಚಿನ ದರ ದೊರೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಿರಾಣಿ ಶುಗರ್ಸ್‌ನಿಂದ ಸಿಹಿಜೋಳ ಬಿತ್ತನೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಇದರಿಂದ ಎಥೆನಾಲ್ ತಯಾರಿಕೆಗೆ ಹೆಚ್ಚು ಅನುಕೂಲವಾಗಲಿದೆ. ಒಂದು ವೇಳೆ ಇದು ಯಶಸ್ವಿಯಾದರೆ ಇಲ್ಲಿನ ರೈತರು ಆರ್ಥಿಕವಾಗಿ ಬಲಿಷ್ಠರಾಗಲು ಅನುಕೂಲವಾಗಲಿದೆ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕು ಎಂದರು.
ಭಾರಾಮತಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುತ್ತಿದ್ದು, ಈ ಭಾಗದ ರೈತರು ಅಲ್ಲಿಗೆ ತೆರಳಿ ಅಧ್ಯಯನ ಕೈಗೊಳ್ಳಬೇಕು. ಪ್ರವಾಹ ಬಂದಾಗ ಕಬ್ಬಿಗೆ ತೊಂದರೆಯಾಗುತ್ತದೆ. ಅಂತಹ ಕಬ್ಬಿಗೆ ಪರಿಹಾರ ನೀಡಬೇಕು. ಸಕ್ಕರೆ ದರವನ್ನು ವಾಣಿಜ್ಯ ಹಾಗೂ ಮನೆ ಬಳಕೆಗೆ ಬೇರೆ ಬೇರೆ ನಿಗದಿ ಮಾಡಬೇಕು. ರೈತರಿಗೆ ಹದಿನೈದು ದಿನಕ್ಕೆ ಒಮ್ಮೆ ಬಿಲ್ ಪಾವತಿಗೆ ಸಕ್ಕರೆ ಮಾರಾಟಕ್ಕೆ ಮುಕ್ತ ಅವಕಾಶ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಆರ್.ಬಿ. ಸುತಗುಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆನವರ, ಬಯೋ ರಿಫೈನರಿ ಸಮೀರವಾಡಿಯ ಬಾಲಚಂದ್ರ ಭಕ್ಷಿ, ಉಪನ್ಯಾಸಕ ಎಸ್.ಎ. ಗದ್ದನಕೇರಿ, ಕೃಷಿ ವಿಜ್ಞಾನಿ ಅರುಣಕುಮಾರ ಬಿ., ಸುಭಾಷ ಶಿರಬೂರ, ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಗೋವಿಂದಪ್ಪ ಗುಜ್ಜನ್ನವರ, ದುಂಡಪ್ಪ ಯರಗಟ್ಟಿ ಇದ್ದರು. ರೈತ ಮುಖಂಡ ಎ.ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಐದು ಕಾರ್ಖಾನೆ ಮಾಲೀಕರು, ಅಧಿಕಾರಿಗಳ ಜತೆಗೆ ಸಾಕಷ್ಟು ಸಂಖ್ಯೆಯ ರೈತರು ಕಬ್ಬು ಬೆಳೆ ಬೆಳೆಯುವ ಸಂದರ್ಭದಲ್ಲಿನ ಹಲವಾರು ಸಮಸ್ಯೆಗೆ ಸಂವಾದದ ಮೂಲಕ ಪರಿಹಾರ ಕಂಡುಕೊಂಡರು. ಪದೇ ಪದೆ ಕಬ್ಬಿನ ಬೆಲೆ ನಿಗದಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂವಾದ ಯಶಸ್ವಿಯಾಯಿತು.