ಉಗ್ರದಮನಕ್ಕೆ ಪುರಾವೆ: 170 ಉಗ್ರರ ಹತ್ಯೆ, 45 ಗಾಯಾಳು, ಸರ್ಜಿಕಲ್ ದಾಳಿಗೆ ಇಟಲಿ ಸಾಕ್ಷ್ಯ

ನವದೆಹಲಿ: ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ದಾಳಿಗೆ ಇಟಲಿಯಿಂದ ಸಾಕ್ಷ್ಯ ಸಿಕ್ಕಿದೆ. ಭಾರತದ ವೈಮಾನಿಕ ಕಾರ್ಯಾಚರಣೆಯಲ್ಲಿ 170 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಸೇನೆ ಹಾಗೂ ಸ್ಥಳೀಯ ಮೂಲಗಳ ಖಚಿತ ಮಾಹಿತಿ ಆಧರಿಸಿ ಇಟಲಿ ಪತ್ರಕರ್ತೆ ಹಾಗೂ ಲೇಖಕಿ ಫ್ರಾನ್ಸೆಸ್ಕಾ ಮ್ಯಾರಿನೋ ಖಚಿತಪಡಿಸಿದ್ದಾರೆ. ಆ ಮೂಲಕ ಸೇನಾಪಡೆಯ ಪ್ರಾಮಾಣಿಕತೆ, ದಕ್ಷತೆಯನ್ನೇ ಅನುಮಾನಿಸಿದ್ದ ಕಾಂಗ್ರೆಸ್ ಒಳಗೊಂಡ ಪ್ರತಿಪಕ್ಷಗಳಿಗೆ ಮತ್ತೊಮ್ಮೆ ಮುಖಭಂಗವಾಗಿದೆ.

ಏನಿದೆ ವರದಿಯಲ್ಲಿ?: ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಉಗ್ರರ ಆತ್ಮಾಹುತಿ ದಾಳಿ ಬಳಿಕ ಫೆ. 26ರ ನಸುಕಿನ ವೇಳೆಯಲ್ಲಿ (3.30) ಭಾರತೀಯ ವಾಯುಪಡೆ ಬಾಲಾಕೋಟ್​ನ ಉಗ್ರರ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತು. ವಿಷಯ ತಿಳಿಯುತ್ತಿದ್ದಂತೆಯೇ ಬಾಲಾಕೋಟ್​ನಿಂದ 20 ಕಿ.ಮೀ.ದೂರದಲ್ಲಿರುವ ಶಿಂಕಿಯಾರಿ ಸೇನಾ ನೆಲೆಯಿಂದ ತುಕಡಿಗಳನ್ನು ರವಾನಿಸಲಾಯಿತು. ಈ ತುಕಡಿಗಳು ಬೆಳಗ್ಗೆ 6ಕ್ಕೆ ಬಾಲಾಕೋಟ್ ತಲುಪಿ ಗಾಯಗೊಂಡ ಉಗ್ರರನ್ನು ಶಿಂಕಿಯಾರಿಯಲ್ಲಿರುವ ಹರ್ಕತ್-ಉಲ್- ಮುಜಾಹಿದ್ದೀನ್ (ಎಚ್​ಯುುಎಂ) ಶಿಬಿರಕ್ಕೆ ರವಾನಿಸಿದರು. ಅಲ್ಲಿ ಸೇನಾ ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು. ಆದರೆ, ಗಂಭೀರವಾಗಿ ಗಾಯಗೊಂಡ 20 ಉಗ್ರರು ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿದರು. ಎಚ್​ಯುುಎಂ ಶಿಬಿರದಲ್ಲಿ ಈಗಲೂ ಸುಮಾರು 45 ಉಗ್ರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಉಗ್ರರನ್ನು ಎಚ್​ಯುುಎಂ ಶಿಬಿರದಿಂದ ಹೊರಹೋಗದಂತೆ ಸೇನೆ ತಡೆದಿದೆ ಎಂದು ಫ್ರಾನ್ಸೆಸ್ಕಾ ಮರಿನೋ ಹೇಳಿದ್ದಾರೆ.

ವಾಯು ದಾಳಿಯಲ್ಲಿ ಮಡಿದವರಲ್ಲಿ ಅಫ್ಘಾನಿಸ್ತಾನದಿಂದ ಬಂದಿದ್ದ ಇಬ್ಬರು, ಜೆಇಎಂನ 11 ತರಬೇತಿದಾರರು ಮತ್ತು ಬಾಂಬ್ ತಯಾರಿಕೆಯಲ್ಲಿ ನಿಪುಣರಾದ ಉಗ್ರರು, ತರಬೇತಿಗಾಗಿ ಕರೆತಂದಿದ್ದ ಯುವಕರು ಸೇರಿದ್ದರೆಂದು ಮರಿನೋ ತಿಳಿಸಿದ್ದಾರೆ.

ಕಾಂಗ್ರೆಸ್​ಗೆ ಮುಖಭಂಗ: ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಯುಪಿಎ ಆಡಳಿತದ ಅವಧಿಯಲ್ಲೂ ಪಾಕ್ ಮೇಲೆ 6 ಸಲ ಸರ್ಜಿಕಲ್ ದಾಳಿ ನಡೆಸಿದ್ದಾಗಿ ಹೇಳಿದ್ದ ಕಾಂಗ್ರೆಸ್​ಗೆ ಮಂಗಳವಾರವಷ್ಟೇ ಮುಖಭಂಗವಾಗಿತ್ತು. 2016ಕ್ಕೆ ಮುನ್ನ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿದ ಯಾವುದೇ ದಾಖಲೆ ಇಲ್ಲ ಎಂದು ಆರ್​ಟಿಐ ಅರ್ಜಿಯೊಂದಕ್ಕೆ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿತ್ತು. ಇದೀಗ ಬಾಲಾಕೋಟ್ ದಾಳಿಯಲ್ಲಿ ಉಗ್ರರು ಮೃತಪಟ್ಟಿರುವುದನ್ನು ವಿದೇಶಿ ಪತ್ರಕರ್ತೆ ಖಚಿತಪಡಿಸಿರುವುದರಿಂದ ಕಾಂಗ್ರೆಸ್​ಗೆ ಮತ್ತೆ ಮುಖಭಂಗವಾಗದಂತಾಗಿದೆ.

40 ಯೋಧರ ಹತ್ಯೆಗೆ ಪ್ರತೀಕಾರ: ಫೆ. 14ರಂದು ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ತುಕುಡಿಗಳನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಜೆಇಎಂನ ಆತ್ಮಾಹುತಿ ದಾಳಿಕೋರ ಕಾರ್ ನುಗ್ಗಿಸಿ ಸ್ಪೋಟಿಸಿಕೊಂಡಿದ್ದ. ಈ ದುರ್ಘಟನೆಯಲ್ಲಿ 40 ಯೋಧರು ಸ್ಥಳದಲ್ಲೇ ಹುತಾತ್ಮರಾದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಫೆ.26ರಂದು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಮತ್ತು ಪಾಕಿಸ್ತಾನದಲ್ಲಿನ ಬಾಲಾಕೋಟ್​ನಲ್ಲಿದ್ದ ಜೆಇಎಂ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಈ ಏರ್​ಸ್ಟ್ರೈಕ್​ನಲ್ಲಿ ಉಗ್ರರ ಶಿಬಿರ ಧ್ವಂಸವಾಗಿ 300 ಭಯೋತ್ಪಾದಕರು ಸತ್ತಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಿರೋಧ ಪಕ್ಷಗಳು ಈ ದಾಳಿಯನ್ನೇ ಸಂದೇಹಿಸಿದ್ದವು. ಪಠಾಣ್​ಕೋಟ್ ವಾಯು ನೆಲೆ ಮತ್ತು

ಉರಿ ಸೇನಾ ಶಿಬಿರದ ಮೇಲೆ ಜೆಇಎಂ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ 2016ರ ಸೆ. 29ರಂದು ಪಿಒಕೆಯಲ್ಲಿದ್ದ ಉಗ್ರರ ಶಿಬಿರ, ಲಾಂಚಿಂಗ್ ಪ್ಯಾಡ್​ಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಾಗಲೂ ವಿರೋಧ ಪಕ್ಷಗಳು ಸಾಕ್ಷ್ಯಕ್ಕೆ ಆಗ್ರಹಿಸಿದ್ದವು. ಪಾಕ್ ಉಗ್ರ ಶಿಬಿರ ಧ್ವಂಸಗೊಂಡಿರುವುದನ್ನು ಗೂಗಲ್​ನ ಉಪಗ್ರಹ ಚಿತ್ರವೂ ಖಚಿತಪಡಿಸಿತ್ತು.

ಉಗ್ರ ಶಿಬಿರದ ಕುರುಹೇ ಇಲ್ಲ!

ಸರ್ಜಿಕಲ್ ದಾಳಿಗೆ ಧ್ವಂಸಗೊಂಡ ಬಾಲಾಕೋಟ್​ನ ಜಿಇಎಂ ಶಿಬಿರ ಬೆಟ್ಟದ ಮೇಲಿತ್ತು. ಅಲ್ಲಿಗೆ ಹೋಗಲು ಕಾಲುದಾರಿಯಷ್ಟೇ ಇತ್ತು. ಸದ್ಯ ಈ ಸ್ಥಳವೀಗ ಸೇನೆಯ ನಿಯಂತ್ರಣದಲ್ಲಿದ್ದು, ಕ್ಯಾಪ್ಟನ್ ರ್ಯಾಂಕ್​ನ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅಲ್ಲಿ ಉಗ್ರರು ಇದ್ದರು ಎಂಬ ಕುರುಹನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ. ಜೆಇಎಂ ಮುಖ್ಯಸ್ಥ ಅಜರ್​ನನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಗ್ರರ ಶಿಬಿರವಿದ್ದ ಸ್ಥಳದಲ್ಲೀಗ ಧಾರ್ವಿುಕ ಶಿಕ್ಷಣದ ತಲೀಮ್​ಉಲ್-ಕುರಾನ್​ನ ಫಲಕ ಹಾಕಲಾಗಿದೆ. ಮಕ್ಕಳು ಮತ್ತು ಮೂರ್ನಾಲ್ಕು ಶಿಕ್ಷಕರು ಮಾತ್ರ ಅಲ್ಲಿದ್ದಾರೆ. ಸ್ಥಳೀಯ ಪೊಲೀಸರಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಂಪೂರ್ಣ ಸಾಕ್ಷ್ಯನಾಶ

ಬಾಲಾಕೋಟ್ ಮೇಲೆ ಭಾರತ ನಡೆಸಿದ ಏರ್​ಸ್ಟ್ರೈಕ್​ನಿಂದ ಹಾನಿಯೇ ಆಗಿಲ್ಲವೆಂದು ಹೇಳುತ್ತಿರುವ ಪಾಕ್, ಘಟನಾ ಸ್ಥಳಕ್ಕೆ ಯಾರನ್ನೂ ಬಿಡುತ್ತಿಲ್ಲ. ಭಾರತ ಹಾಕಿದ ಬಾಂಬ್ ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದರಿಂದ ಹಲವು ಮರಗಳು ಬಿದ್ದು, ದೊಡ್ಡ ಕುಳಿ ಉಂಟಾಯಿತು. ಭಾರತ ಹೇಳಿಕೊಳ್ಳುತ್ತಿರುವಂತೆ ಅಲ್ಲಿ ಉಗ್ರರ ಶಿಬಿರ ಇರಲಿಲ್ಲವೆಂದು ಪಾಕ್ ವಿಶ್ವ ಸಮುದಾಯವನ್ನು ನಂಬಿಸಲು ಪ್ರಯತ್ನಿಸುತ್ತಿದೆ. ತನ್ನ ಹೇಳಿಕೆಯನ್ನು ಸಾಬೀತು ಮಾಡಲು ಭಾರತದ ಮಾಧ್ಯಮದವರನ್ನು ಬಾಲಾಕೋಟ್​ಗೆ ಕರೆದೊಯ್ಯಲು ಸಿದ್ಧ ಎಂದು ಪಾಕ್ ಕೆಲವು ದಿನಗಳ ಹಿಂದೆ ಹೇಳಿತ್ತು. ಸತ್ತ ಉಗ್ರರ ಕುಟುಂಬದವರು ಅಥವಾ ಗಾಯಗೊಂಡವರನ್ನು ಜೆಇಎಂನ ಮುಖಂಡರು ಭೇಟಿಯಾಗಿದ್ದರು ಮತ್ತು ವಿಷಯವನ್ನು ಬಾಯಿಬಿಡದಂತೆ ಮಾಡಲು ಹಣಕಾಸಿನ ನೆರವನ್ನು ನೀಡಿದ್ದಾರೆ ಎನ್ನಲಾಗಿದೆ.