ಇಟಲಿ ದಂಪತಿ ಮಡಿಲಿಗೆ ಗವಿಸಿದ್ದೇಶ: ಅಮೂಲ್ಯ ಕೇಂದ್ರದಿಂದ ಹಸ್ತಾಂತರ, ದತ್ತು ಪಡೆಯಲು ಸ್ವದೇಶಿಗರ ಹಿಂದೇಟು

ಗದಗ: ಕೊಪ್ಪಳದ ಗವಿಸಿದ್ದೇಶ ಎಂಬ ಅನಾಥ ಮಗು ಇಟಲಿ ದಂಪತಿ ಮಡಿಲು ಸೇರಿದ ಹೃದಯರ್ಸ³ ಕಾರ್ಯಕ್ರಮಕ್ಕೆ ನೂರಾರು ಜನ ಸಾಕ್ಷಿಯಾದರು.

ನಗರದ ಬೆಟಗೇರಿಯ ಹೆಲ್ತ್ ಕ್ಯಾಂಪ್​ನಲ್ಲಿರುವ ಸೇವಾಭಾರತಿ ಟ್ರಸ್ಟ್​ನ ಅಮೂಲ್ಯ ದತ್ತು ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ದತ್ತು ಪೂರ್ವ ಪೋಷಕತ್ವ ಕಾರ್ಯಕ್ರಮದಲ್ಲಿ ಅಪರೂಪದ ಕಾರ್ಯ ನಡೆಯಿತು.

ಹೆತ್ತವರಿಗೆ ಬೇಡವಾದ ಕಂದಮ್ಮ ಗಳನ್ನು ಬೆಳೆಸಿ ಪೋಷಿಸುವ ಅಮೂಲ್ಯ ದತ್ತು ಕೇಂದ್ರ ಕಾರ್ಯಕರ್ತರಿಗೆ ಮಗುವನ್ನು ವಿದೇಶಿಗರ ಕೈಗಿಡುವ ಸಂದರ್ಭದಲ್ಲಿ ಕಣ್ಣಾಲಿಗಳು ತುಂಬಿದ್ದವು.

ಕುತ್ತಿಗೆ ಭಾಗದಲ್ಲಿ ಕೊಂಚ ನರ ದೌರ್ಬಲ್ಯ ಕಾಣಿಸಿಕೊಂಡಿದ್ದು, ಮಗುವನ್ನು ಸ್ವದೇಶಿಗರು ದತ್ತು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ, ಇಟಲಿಯ ಮಾಟಿಯೋ ಬರ್ಬೆರಾ, ಓಂಗಾರೋ ಅಲೆಗ್ಝಾಂಡ್ರಾ ಬ್ರೂನಾ ಕಾರಮೇಲಾ ದಂಪತಿ ದತ್ತು ಪಡೆದಿದ್ದಾರೆ. ಕರುಳಬಳ್ಳಿಯನ್ನು ಎಸೆದು ಹೋಗಿದ್ದ ಮಹಾ ತಾಯಿಯ ಪುತ್ರನೊಬ್ಬ ಅಮೂಲ್ಯ ದತ್ತು ಸಂಸ್ಥೆ ಮೂಲಕ ವಿದೇಶಕ್ಕೆ ತೆರಳುತ್ತಿದ್ದಾನೆ.

ದತ್ತು ಪಡೆದ ವಿದೇಶಿ ದಂಪತಿ, ಗವಿಸಿದ್ದೇಶ ಅನಾಥ ಮಗುವಲ್ಲ. ಅವನು ನಮ್ಮ ಪ್ರೀತಿಯ ಪುತ್ರ. ಆತನನ್ನು ಉತ್ತಮ ನಾಗರಿಕನನ್ನಾಗಿಸುತ್ತೇವೆ. ಭಾರತ ಮತ್ತು ಇಟಲಿ ದೇಶದ ಸಾಂಸ್ಕೃತಿಕ ಕೊಂಡಿಯಾಗಿ ಆತನನ್ನು ಬೆಳೆಸುತ್ತೇವೆ. ಎರಡೂ ದೇಶಗಳ ಬೆಸೆಯುವಂತಹ ರಾಯಭಾರಿಯನ್ನಾಗಿ ಮಾಡುತ್ತೇವೆ ಎಂದರು.

ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆ ಕಾರ್ಯ ಅನನ್ಯ. ಅಮೂಲ್ಯ ದತ್ತು ಸ್ವೀಕಾರ ಕೇಂದ್ರಕ್ಕೆ 5 ಲಕ್ಷ ರೂ. ಅನುದಾನ ನೀಡಲಾಗುವುದು. ಕೇಂದ್ರಕ್ಕೆ ಅಗತ್ಯವಿರುವ ಕಟ್ಟಡಕ್ಕೂ ಅನುದಾನ ನೀಡಲಾಗುವುದು ಎಂದರು.

2 Replies to “ಇಟಲಿ ದಂಪತಿ ಮಡಿಲಿಗೆ ಗವಿಸಿದ್ದೇಶ: ಅಮೂಲ್ಯ ಕೇಂದ್ರದಿಂದ ಹಸ್ತಾಂತರ, ದತ್ತು ಪಡೆಯಲು ಸ್ವದೇಶಿಗರ ಹಿಂದೇಟು”

Leave a Reply

Your email address will not be published. Required fields are marked *