ಭಾರತ-ಅಮೆರಿಕ ಜತೆಯಾಗಿದ್ದರೇ ಒಳಿತು…

India America

ಎರಿಕ್ ಗಾರ್ಸೆಟ್ಟಿ
ಹದಿಹರೆಯದಲ್ಲಿ ನಾನು ಮೊದಲ ಬಾರಿ ಭಾರತಕ್ಕೆ ಬಂದಾಗ, ಈ ದೇಶ ನನ್ನ ಮನಸೂರೆಗೊಳ್ಳಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಆದರೆ ಇಂದು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ನನ್ನ ಅವಧಿ ಪೂರ್ಣಗೊಳ್ಳುವ ಈ ಕ್ಷಣ ನನ್ನೊಳಗೆ ಧನ್ಯತೆಯ ಭಾವ ತುಂಬಿದೆ. ಈ ದೇಶ ನನಗೆ ಹಲವು ಹೊಸ ಹೊಳಹುಗಳನ್ನು ನೀಡಿದೆ. ಜಗತ್ತಿನ ಶಾಂತಿ ಮತ್ತು ಸಮೃದ್ಧಿಯ ಗುರಿಯನ್ನು ಜೊತೆಯಾಗಿ ಸಾಧಿಸುವ ಆಶಾಭಾವವನ್ನು ಬೆಳಗಿಸಿದೆ.

ನನ್ನ ಅವಧಿಯಲ್ಲಿ ಈ ಅಸಾಧಾರಣ ದೇಶದ ಉದ್ದಗಲಕ್ಕೂ ಸಂಚರಿಸುವ ಸದವಕಾಶ ನನಗೆ ಒದಗಿತ್ತು. ಮುಂಬೈನ ಚಟುವಟಿಕೆಯಿಂದ ಕೂಡಿದ ಬೀದಿಗಳಿಂದ ಹಿಡಿದು ಕೋಲ್ಕತ್ತಾದ ಸಾಂಸ್ಕೃತಿಕ ಕೇಂದ್ರಗಳವರೆಗೆ, ಹಿಮಾಲಯ, ಅರುಣಾಚಲದ ತಪ್ಪಲಿನಿಂದ ಹಿಡಿದು ದೇಶದ ದಕ್ಷಿಣ ಭೂಶಿರ ಕನ್ಯಾಕುಮಾರಿಯವರೆಗೆ ಎಲ್ಲ ಸ್ಥಳಗಳನ್ನೂ ಸಂದರ್ಶಿಸಿದೆ. ಹಲವು ವಿಷಯಗಳನ್ನು ಅರಿತೆ. ಅದರಲ್ಲಿ ಅತ್ಯಂತ ಮಹತ್ವದ್ದು ‘ನಿಜವಾಗಿಯೂ ಅಮೆರಿಕ ಮತ್ತು ಭಾರತ ಜತೆಗೂಡಿ ಕೆಲಸ ಮಾಡಿದರೆ ಒಳಿತು’ ಎಂಬುದು.

ಅಂಕಿ ಅಂಶಗಳು ಇದರ ಸ್ಪಷ್ಟ ಚಿತ್ರಣ ನೀಡುತ್ತವೆ. ಎರಡೂ ದೇಶಗಳ ನಡುವೆ ಸರಿಸುಮಾರು 200 ಶತಕೋಟಿ ಡಾಲರ್ ವಹಿವಾಟಿನ ಮೂಲಕ ಅಮೆರಿಕವು ಭಾರತದ ಅತಿದೊಡ್ಡ ವ್ಯಾವಹಾರಿಕ ಪಾಲುದಾರನಾಗಿದೆ; 3 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಓದುತ್ತಿದ್ದಾರೆ. ಅಮೆರಿಕದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಸಂಖ್ಯೆ ಭಾರತೀಯರದ್ದಾಗಿದೆ; ಸತತ ಎರಡನೇ ವರ್ಷ 10 ಲಕ್ಷ ನಾನ್ ಇಮಿಗ್ರಂಟ್ ವೀಸಾ ನೀಡಿದ್ದೇವೆ; ನಮ್ಮ ಭೂಮಿಯ ರಕ್ಷಣೆಗಾಗಿ ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಕಾರ್ಯಕ್ರಮಗಳಿಗೆ 9.25 ಶತಕೋಟಿ ಡಾಲರ್​ಗಳಷ್ಟು ಹಣಕಾಸು ಸೌಲಭ್ಯವನ್ನು ಒದಗಿಸಲಾಗಿದೆ; ಭಾರತದ 4.5 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗುವ ಆರೋಗ್ಯ ಕ್ಷೇತ್ರದ 90ಕ್ಕೂ ಹೆಚ್ಚು ನಾವೀನ್ಯತೆಯ ಉಪಕ್ರಮಗಳನ್ನು ಜತೆಯಾಗಿ ಕೈಗೆತ್ತಿಕೊಂಡಿದ್ದೇವೆ. ಈ ಅಂಕಿ ಅಂಶಗಳು ಅದ್ಭುತವೆನಿಸಿದರೂ ನಮ್ಮ ಅಸಾಮಾನ್ಯ ಕಥನಕ್ಕೆ ಇವು ಸಂಪೂರ್ಣ ನ್ಯಾಯ ಒದಗಿಸುವುದಿಲ್ಲ.

ಶಾಂತಿ, ಸಮೃದ್ಧಿ, ಭೂಮಿ ಮತ್ತು ಜನ (ಕಛಿಚ್ಚಛಿ, ಕ್ಟಟಠಟಛ್ಟಿಜಿಠಿಢ, ಕ್ಝಚ್ಞಛಿಠಿ ಚ್ಞಛ ಕಛಿಟಟ್ಝಛಿ): ಅಮೆರಿಕದ ರಾಯಭಾರಿಯಾಗಿ ಭಾರತಕ್ಕೆ ನಾನು ಕಾಲಿಟ್ಟ ದಿನದಿಂದ, ನಾವು ಜತೆಯಾಗಿ ಮಾಡಬಹುದಾದ ಕಾರ್ಯಗಳ ಹರವು ನನ್ನನ್ನು ಬೆರಗುಗೊಳಿಸಿತು. ತಂತ್ರಜ್ಞಾನ, ವಾಣಿಜ್ಯ-ವ್ಯಾಪಾರ, ಮಹಿಳಾ ಸಬಲೀಕರಣ, ಆರೋಗ್ಯ ಸೇವೆ, ಸಾಗರದಾಳದಿಂದ ಬಾಹ್ಯಾಕಾಶದವರೆಗೆ ಸುರಕ್ಷಿತ ಹಾಗೂ ಸುಭದ್ರ ಇಂಡೋ- ಪೆಸಿಫಿಕ್ ಪ್ರದೇಶ ಸೇರಿದಂತೆ ಊಹೆಗೂ ನಿಲುಕದಷ್ಟು ಕ್ಷೇತ್ರಗಳಲ್ಲಿ ಭಾರತೀಯರು ಮತ್ತು ಅಮೆರಿಕನ್ನರು ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಹೆಸರಿಸಿದ ನಾಲ್ಕು ಪಿ (ಕಛಿಚ್ಚಛಿ, ಕ್ಟಟಠಟಛ್ಟಿಜಿಠಿಢ, ಕ್ಝಚ್ಞಛಿಠಿ ಚ್ಞಛ ಕಛಿಟಟ್ಝಛಿ) ವಲಯಗಳಲ್ಲಿ ಉತ್ತಮ ಜಗತ್ತು ಹಾಗೂ ಉಜ್ವಲ ಭವಿಷ್ಯಕ್ಕಾಗಿ ನಾವು ಜತೆಯಾಗಿ ಮಾಡುತ್ತಿರುವ ಕೆಲಸಗಳನ್ನು ಖುದ್ದಾಗಿ ನೋಡಿದ್ದೇನೆ. ಅಹಮದಾಬಾದ್​ಗೆ ನನ್ನ ಮೊದಲ ಅಧಿಕೃತ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿಯೇ ನಾನು ಇದನ್ನು ಗಮನಿಸಿದೆ. ಅಲ್ಲಿ ಮಹಿಳಾ ಸಾರಥ್ಯದ ಸೇವಾ ಸಂಸ್ಥೆಯ ಮುಖಂಡರೊಂದಿಗಿನ ಭೇಟಿಯಲ್ಲಿ ಇದು ವೇದ್ಯವಾಯಿತು. ಅವರ ಅನುಭವಗಳು ಹವಾಮಾನ ವೈಪರೀತ್ಯ ಕುರಿತು ಜಾಗತಿಕ ಜಾಗೃತಿಯ ತುರ್ತು ಅಗತ್ಯವಿದೆ ಎಂಬುದನ್ನು ಎತ್ತಿ ತೋರಿಸುತ್ತವೆ.

ಪುಣೆಯ ಸೀರಂ ಇನ್ಸ್​ಟಿಟ್ಯೂಟ್​ನಲ್ಲಿ ಭಾರತೀಯ ಉತ್ಪಾದಕರು, ಅಮೆರಿಕ ಮೂಲದ ಬಯೊಟೆಕ್ನಾಲಜಿ ಕಂಪನಿ ಹಾಗೂ ಯುನೈಟೆಡ್ ಕಿಂಗ್ಡಮ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಯುಕ್ತ ಪ್ರಯತ್ನದ ಫಲವಾಗಿ ಮೊದಲ ಬ್ಯಾಚ್​ನ ಮಲೇರಿಯಾ ಲಸಿಕೆಗಳನ್ನು ತಯಾರಿಸಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್​ಗೆ ಕಳುಹಿಸಲು ಟ್ರಕ್​ಗೆ ಲೋಡ್ ಮಾಡುವ ಕಾರ್ಯಕ್ಕೆ ಸಾಕ್ಷಿಯಾಗಿದ್ದು, ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.

ಹಲವು ಪ್ರಮುಖ ಶೃಂಗಸಭೆಗಳಲ್ಲಿ ಭಾರತೀಯ ಉದ್ಯಮಿಗಳ ನಿಯೋಗಗಳಿಗೆ ಜತೆಯಾಗುವ ಮೂಲಕ ಸೆಲೆಕ್ಟ್ ಯು.ಎಸ್. ಶೃಂಗಸಭೆಯಲ್ಲಿ ಇದುವರೆಗಿನ ಅತಿ ದೊಡ್ಡ ನಿಯೋಗದೊಂದಿಗೆ ಭಾಗವಹಿಸಿ ಒಟ್ಟಾರೆ 3.4 ಶತಕೋಟಿ ಡಾಲರ್​ಗಳನ್ನು ಅಮೆರಿಕದಲ್ಲಿ ಹೂಡಿಕೆ ಮಾಡುವಂತಾಗಿದ್ದು ಗೌರವದ ಸಂಗತಿ. ಇದರೊಂದಿಗೆ ಯು.ಎಸ್. ಇಂಡಿಯಾ ಏವಿಯೇಷನ್ ಸಮಿಟ್​ನಲ್ಲಿ ಖಾಸಗಿ ವಲಯದ ಪ್ರತಿನಿಧಿಗಳು 150 ಶತಕೋಟಿ ಡಾಲರ್​ಗಳ ಯು.ಎಸ್. ಏರ್​ಕ್ರಾಫ್ಟ್ ಖರೀದಿ ಮತ್ತು ಹರಿಯಾಣದಲ್ಲಿ ಏವಿಯೇಷನ್ ಹಬ್ ಸ್ಥಾಪಿಸುವ ಯೋಜನೆಗೆ ಸಮ್ಮತಿಸುವ ಮೂಲಕ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಬೆಳವಣಿಗೆಗೆ ಬದ್ಧತೆಯನ್ನು ತೋರಿದ್ದಾರೆ.

ಭಾರತದ ಭವ್ಯ ಕಲೆ ಮತ್ತು ಸಂಸ್ಕೃತಿಯ ಪರಂಪರೆ ನನ್ನನ್ನು ಸದಾ ಬೆರಗುಗೊಳಿಸಿದೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಹಾಗೂ ನಮ್ಮ ಕಲೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಸ್ಪರ ಸುಗಮ ವಿನಿಮಯಕ್ಕೆ ಅನುವು ಮಾಡುವ ಯು.ಎಸ್.- ಇಂಡಿಯಾ ಕಲ್ಚರಲ್ ಪ್ರಾಪರ್ಟಿ ಒಪ್ಪಂದಕ್ಕೆ ಸಹಿ ಮಾಡಲು ಹೆಮ್ಮೆಯೆನಿಸಿತ್ತು.

ಇದರೊಂದಿಗೆ ಅಮೆರಿಕದಲ್ಲಿ ಕ್ರಿಕೆಟ್​ನ ಬೆಳವಣಿಗೆಯನ್ನು ಪೋಷಿಸಿದ್ದು ಖುಷಿ ನೀಡಿದ ವಿಷಯ. 2023ರಲ್ಲಿ ಮೇಜರ್ ಲೀಗ್ ಕ್ರಿಕೆಟ್ ಆರಂಭದಿಂದ ಹಿಡಿದು ನನ್ನ ತವರು ಲಾಸ್ ಏಂಜಲೀಸ್​ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ಅನ್ನು ಪರಿಚಯಿಸಲು ನೆರವಾಗಿದ್ದು ಸಂತಸ ನೀಡಿದೆ.

ಅಮೆರಿಕಕ್ಕೆ ಭಾರತ ಇತರ ದೇಶಗಳಂತಲ್ಲ. ಅತ್ಯಂತ ವಿಶೇಷವಾದುದು. ಅಮೆರಿಕ ಮತ್ತು ಭಾರತ ತಮ್ಮ ಜ್ಞಾನ ಹಾಗೂ ಪರಿಶ್ರಮವನ್ನು ಒಗ್ಗೂಡಿಸಿದಾಗ ನಾವು ತೆರೆಯಲಾರದ ಬಾಗಿಲೇ ಇಲ್ಲ, ನಾವು ಕರೆತರಲಾರದ ಗೆಳೆಯನೇ ಇಲ್ಲ. ಏಕೆಂದರೆ ನಾವು ಸಮಷ್ಟಿಯ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ.

ಸಹಕಾರ, ಭರವಸೆಯ ಭವಿಷ್ಯದ ಮುನ್ನೋಟ: ಈ ಅಸಾಧಾರಣ ಅಧ್ಯಾಯವನ್ನು ಮುಗಿಸುವ ಹೊತ್ತಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದರೆ, ಕಿಶೋರಾವಸ್ಥೆಯಲ್ಲಿ ನಾನು, ಇಂದು ನಾನಿರುವ ಸ್ಥಾನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ನಾವು ಜತೆಯಾಗಿ ಕಂಡ ಕನಸನ್ನು ಊಹಿಸಲೂ ಸಾಧ್ಯವಿರಲಿಲ್ಲ. ಕೆಲವೊಮ್ಮೆ ಸಣ್ಣ ಭಿನ್ನಾಭಿಪ್ರಾಯಗಳಲ್ಲಿ ಎದುರಿಗಿರುವ ಅಡ್ಡಿ ಆತಂಕಗಳಿಗೇ ಹೆಚ್ಚು ಗಮನ ನೀಡಿ, ದಿಗಂತದಾಚೆಗಿನದ ಭವಿಷ್ಯವನ್ನು ನಿರ್ಲಕ್ಷಿಸುವ ಸಾಧ್ಯತೆ ಇರುತ್ತದೆ. ಆದರೆ ನಮ್ಮೊಳಗಿನ ಬಾಂಧವ್ಯವು ನಮ್ಮ ಭಿನ್ನಾಭಿಪ್ರಾಯಗಳನ್ನೂ ಮೀರಿದ್ದು. ಅಮೆರಿಕ ಮತ್ತು ಭಾರತದ ಸಂಬಂಧದ ಬಗ್ಗೆ ನಾನು ಅಸೀಮ ವಿಶ್ವಾಸವನ್ನು ಹೊಂದಿದ್ದೇನೆ. ವಾಯು ಗುಣಮಟ್ಟ, ತಂತ್ರಜ್ಞಾನದ ಸದ್ಬಳಕೆ, ಜಗತ್ತಿನಾದ್ಯಂತ ಕಾಡುತ್ತಿರುವ ಮಿಲಿಟರಿ ಬೆದರಿಕೆಗಳಂತಹ ಸವಾಲುಗಳನ್ನು ನಾವು ಜತೆಯಾಗಿ ಎದುರಿಸುವುದು ಸುಲಭ.

ಮಹಾತ್ಮಾ ಗಾಂಧಿಯವರ ಮಾತುಗಳಲ್ಲಿ ಹೇಳುವುದಾದರೆ, ‘ನಮ್ಮ ಭವಿಷ್ಯವು ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ’. ಆದ್ದರಿಂದ ನಾವು ಜತೆಜತೆಯಾಗಿ ಶಾಂತಿ, ಸಮೃದ್ಧಿ ಮತ್ತು ನಮ್ಮ ಜನರ ಬಾಂಧವ್ಯದ ಬೆಸುಗೆಯ ಸದಾಶಯದೊಂದಿಗೆ ಕೆಲಸ ಮಾಡೋಣ. ನಿಮ್ಮ ಸ್ನೇಹಪರತೆ, ವಿವೇಚನೆ ಮತ್ತು ಅಚಲ ಸ್ನೇಹಕ್ಕೆ ನಾನು ಚಿರಋಣಿ. ಇಂತಹ ಅದ್ಭುತ ದೇಶದಲ್ಲಿ ಅಮೆರಿಕದ ರಾಯಭಾರಿಯಾಗಿ ಕೆಲಸ ಮಾಡಿದ್ದು, ನನ್ನ ಜೀವಮಾನದಲ್ಲಿ ದೊರೆತ ಅತ್ಯುನ್ನತ ಗೌರವವಾಗಿದೆ. ಎರಡೂ ದೇಶಗಳೂ ಜತೆಯಾಗಿ ಉಜ್ವಲ ಭವಿಷ್ಯ ರೂಪಿಸುವ ನಿರೀಕ್ಷೆಯನ್ನು ಹೊಂದಿದ್ದೇನೆ. ನಿಮ್ಮನ್ನು ನನ್ನ ಹೃದಯದಲ್ಲಿ ಸದಾ ಕಾಪಿಡುವೆ. ತುಂಬ ಧನ್ಯವಾದಗಳು. ಶುಭ ವಿದಾಯ.

(ಲೇಖಕರು ಭಾರತದಲ್ಲಿ ಅಮೆರಿಕದ ರಾಯಭಾರಿ)

ಗೌತಮ್​ ಗಂಭೀರ್​ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್​

ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು; ಅಪಘಾತದ ಕುರಿತು ಅಸಲಿ ವಿಚಾರ ಬಿಚ್ಚಿಟ್ಟ ಸಚಿವೆ Laxmi Hebbalkar ಸಹೋದರ

Share This Article

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…