ಬಂಗಾರವಾಯ್ತು ಭೂಮಿ

ಐಟಿ ಪ್ರಭಾವದಿಂದಾಗಿ ಸರ್ಜಾಪುರ ಏರಿಯಾ ಬೆಳೆಯುತ್ತಲೇ ಇದೆ. ಈ ಭಾಗದ ಭೂಮಿ ಬಂಗಾರದಂತಾಗಿದೆ. ಇಲ್ಲಿ ರಿಯಲ್ ಎಸ್ಟೇಟ್ ಕೂಡ ಭಾರಿ ಬೇಡಿಕೆ ಪಡೆದುಕೊಂಡಿದೆ.

|ಅಭಯ್ ಮನಗೂಳಿ

ಬೆಂಗಳೂರು: ಟಿ ಕ್ಷೇತ್ರದ ಪ್ರಭಾವದಿಂದಾಗಿ ಹಳ್ಳಿಯಂತ್ತಿದ್ದ ಹಲವು ಪ್ರದೇಶಗಳು ಆಧುನಿಕತೆ ಕಡೆ ವಾಲಿದ್ದು, ರಿಯಲ್ ಎಸ್ಟೇಟ್ ಕೂಡ ಎಲ್ಲಿಲ್ಲದ ಬೇಡಿಕೆಯನ್ನು ಪಡೆದುಕೊಂಡಿದೆ. ನಗರದ ಸರ್ಜಾಪುರ ಭಾಗವೂ ಇದಕ್ಕೆ ಹೊರತಾಗಿಲ್ಲ. ಐಟಿ ಕ್ಷೇತ್ರದಿಂದಾಗಿಯೇ ಇಲ್ಲಿನ ಭೂಮಿಗೆ ಭಾರಿ ಬೇಡಿಕೆ ಬಂದಿದೆ. ಹಿಂದೆ ಕೇವಲ ಕೃಷಿಭೂಮಿಯಿಂದ ಕೂಡಿದ್ದ ಈ ಪ್ರದೇಶವೀಗ ಹೊಸ ಬಡಾವಣೆಗಳು, ಅಪಾರ್ಟ್​ವೆುಂಟ್​ಗಳ ಮೂಲಕ ಕಂಗೊಳಿಸುತ್ತಿದ್ದು, ಅನೇಕ ಪ್ರದೇಶಗಳು ಪ್ರತಿಷ್ಠಿತರು ವಾಸಿಸುವ ಸ್ಥಳಗಳಾಗಿ ಪರಿವರ್ತನೆಗೊಂಡಿವೆ. ಸಾಮಾಜಿಕವಾಗಿಯೂ ಈ ಪ್ರದೇಶ ಅತ್ಯುತ್ತಮವಾಗಿದ್ದು, ಶಿಕ್ಷಣ, ಆರೋಗ್ಯಕ್ಕೆ ನಾನಾ ಅವಕಾಶಗಳು ಇಲ್ಲಿವೆ. ಪ್ರತಿಷ್ಠಿತ ಸಂಸ್ಥೆಗಳು ಸರ್ಜಾಪುರ ರಸ್ತೆಯಲ್ಲಿರುವುದರಿಂದ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿವೆ.

ಐಟಿ ಕಂಪನಿಗಳಿಂದ ಬೇಡಿಕೆ: ಸರ್ಜಾಪುರ ಸುತ್ತಮುತ್ತಲೂ ಬೇಡಿಕೆ ಹೆಚ್ಚಾಗಲು ಸುತ್ತುಮುತ್ತಲಿನ ಪ್ರದೇಶದಲ್ಲಿ ನಿರ್ವಣಗೊಂಡಿರುವ ಐಟಿ ಕಂಪನಿಗಳು ಪ್ರಮುಖ ಕಾರಣವಾಗಿವೆ. ಸರ್ಜಾಪುರದ ಅನೇಕ ಭಾಗಗಳ ಈಗಲೂ ಹಸಿರಿನಿಂದ ಕಂಗೊಳಿಸುತ್ತಿದ್ದು, ಟೆಕ್ಕಿಗಳು ಸಹ ಈ ಭಾಗದಲ್ಲಿ ಫ್ಲ್ಯಾಟ್​ಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಸರ್ಜಾಪುರ ಸುತ್ತಮುತ್ತ ಹೆಚ್ಚು ಕೆರೆಗಳಿವೆ. 27 ಕೆರೆಗಳು ಸರ್ಜಾಪುರ ಸುತ್ತಮುತ್ತಲಿದ್ದು, ಲೇಕ್​ವ್ಯೂ ಪ್ರಾಜೆಕ್ಟ್​ಗಳು ಸಹ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಅನೇಕ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿಗೆ ಹತ್ತಿರವಾಗುವುದರೊಂದಿಗೆ ಎಲೆಕ್ಟ್ರಾನಿಕ್ ಸಿಟಿ, ವೈಟ್​ಫೀಲ್ಡ್, ಕೋರಮಂಗಲದಂಥ ವಾಣಿಜ್ಯ ವಹಿವಾಟು ನಡೆಯುವ ಸ್ಥಳಗಳಿಗೂ ಸರ್ಜಾಪುರ ಹತ್ತಿರದಲ್ಲಿದೆ. ಸರ್ಜಾಪುರದಲ್ಲಿ ಭೂಮಿ ಬೆಲೆ ಹೆಚ್ಚಳಗೊಳ್ಳಲು ಇದು ಕೂಡ ಕಾರಣವಾಗಿದೆ. ನಗರದ ಹೆಚ್ಚುಪಾಲು ಬೆಳವಣಿಗೆ ಇನ್ನು ಮುಂದೇ ಸರ್ಜಾಪುರ ಸುತ್ತಮುತ್ತಲು ಎಂದು ಭಾವಿಸಲಾಗಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಈ ಭಾಗಕ್ಕೆ ಅಷ್ಟೇ ಒತ್ತು ನೀಡುತ್ತಿದೆ. ಟೆಕ್ಕಿಗಳಿಂದಾಗಿ ಸರ್ಜಾಪುರ ನಗರದ ಆಧುನಿಕ ಭಾಗವಾಗಿ ಕಂಗೊಳಿಸಲಿದೆ. ಮೇಲ್ಮಧ್ಯಮ ವರ್ಗದವರಿಗೆ ಈ ಪ್ರದೇಶ ಅತ್ಯಂತ ಸೂಕ್ತವಾಗಿದ್ದು, 1 ರಿಂದ 5 ಬಿಎಚ್​ಕೆ ವರೆಗಿನ ವಿಲ್ಲಾಗಳು, ಅಪಾರ್ಟ್​ವೆುಂಟ್​ಗಳು ಲಭ್ಯವಿವೆ.

ಸಾರಿಗೆ ಸಂಪರ್ಕವೂ ಸರಳ: ವೈಟ್​ಫೀಲ್ಡ್, ಇಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಮಾರತಹಳ್ಳಿ ಮತ್ತು ಹೊರವರ್ತಲಗಳನ್ನು ಸರ್ಜಾಪುರದಿಂದ ತಲುಪಲು ಸಾಕಷ್ಟು ಸೌಲಭ್ಯಗಳಿವೆ. ಬಿಎಂಟಿಸಿಯಿಂದ ನಿರಂತರ ಬಸ್​ಗಳಿದ್ದು, ಹೊಸಕೋಟೆ, ಕೋಲಾರ ತಲುಪುವ ರಾಷ್ಟ್ರೀಯ ಹೆದ್ದಾರಿಗಳು ಸಹ ಹತ್ತಿರದಲ್ಲಿವೆ. ಕಾರ್ವೆಲ್​ರಾಂ ರೈಲ್ವೆ ನಿಲ್ದಾಣವೂ ಸರ್ಜಾಪುರಕ್ಕೆ ಹತ್ತಿರವಾಗಲಿದ್ದು, ಯಾವುದೇ ಭಾಗವನ್ನೂ ತಲುಪಲು ಸುಸಜ್ಜಿತ ಸಾರಿಗೆ ವ್ಯವಸ್ಥೆಯಿದೆ. ಈ ಕಾರಣಕ್ಕಾಗಿಯೇ ಸರ್ಜಾಪುರ ಎಲ್ಲಿಲ್ಲದ ಬೇಡಿಕೆ ಪಡೆಯುತ್ತಿದೆ ಎಂದು ನಗರ ಯೋಜನಾ ತಜ್ಞರು ವಿವರಿಸುತ್ತಾರೆ.

ವೈಜ್ಞಾನಿಕವಾಗಿ ಬೆಳೆಯಲಿ

ಇತರೆಡೆಯಂತೆ ಸರ್ಜಾಪುರ ಬಳಿಯ ಕೆರೆಗಳು ಒತ್ತುವರಿ, ತ್ಯಾಜ್ಯ ಸೇರುವ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ತಕ್ಕಮಟ್ಟಿಗೆ ಇಲ್ಲನ ಕೆರೆಗಳು ಸುರಕ್ಷಿತವಾಗಿದ್ದು, ಅವುಗಳ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಬೆಳವಣಿಗೆ ಸಾಧಿಸಬೇಕಿದೆ. ಬಿಬಿಎಂಪಿ ಹಾಗೂ ಇತರ ಸ್ಥಳೀಯ ಪ್ರಾಧಿಕಾರಗಳು ಸಹ ವೈಜ್ಞಾನಿಕವಾಗಿ ಈ ಪ್ರದೇಶಗಳ ಬೆಳವಣಿಗೆಗೆ ಒತ್ತು ನೀಡಬೇಕೆಂಬ ಅಭಿಪ್ರಾಯವ್ಯಕ್ತವಾಗಿದೆ. ಇಲ್ಲಿನ ಕೆಲವು ಕೆರೆಗಳು ತ್ಯಾಜ್ಯದ ಸಮಸ್ಯೆಯನ್ನೂ ಎದುರಿಸುತ್ತಿದ್ದು, ಒಂದೆರಡು ಕೆರೆಗಳಿಗೆ ಒತ್ತುವರಿಯ ಭೂತವೂ ಕಾಡಿದೆ. ಎಲ್ಲ ಕೆರೆಗಳನ್ನು ಸುರಕ್ಷಿತವಾಗಿಡುವುದರೊಂದಿಗೆ ಬೆಳವಣಿಗೆಗೆ ಒತ್ತು ನೀಡಬೇಕು. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಳವಣಿಗೆಗೆ ಆದ್ಯತೆ ನೀಡಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *