ಐಟಿ ದಾಳಿ ಹಿಂದೆ ಕಪಾಲಿ!

ಸಿಸಿಬಿ ಡ್ರಿಲ್​ನಲ್ಲಿ ಬಯಲಾಗಿತ್ತೇ ಸ್ಯಾಂಡಲ್​ವುಡ್ ವ್ಯವಹಾರ?

ಬೆಂಗಳೂರು: ಸ್ಯಾಂಡಲ್​ವುಡ್ ನಟ, ನಿರ್ಮಾಪಕರ ಮನೆ, ಕಚೇರಿಗಳ ಮೇಲೆ ನಡೆದ ಐಟಿ ದಾಳಿಗೆ ಮೀಟರ್ ಬಡ್ಡಿ ಮತ್ತು ಜೂಜಾಟ ದಂಧೆ ಆರೋಪದಡಿ ಇತ್ತೀಚೆಗಷ್ಟೇ ಸಿಸಿಬಿ ದಾಳಿಗೆ ಒಳಗಾಗಿದ್ದ ಕಪಾಲಿ ಮೋಹನ್ ಬಾಯ್ಬಿಟ್ಟ ಮಾಹಿತಿ ಕಾರಣ ಎಂಬ ಅಚ್ಚರಿ ಮಾಹಿತಿ ಬಹಿರಂಗವಾಗಿದೆ. ವಿಚಾರಣೆ ವೇಳೆ ಈತ ನೀಡಿದ್ದ ಮಹತ್ವದ ಮಾಹಿತಿ ಆಧರಿಸಿಯೇ ಐಟಿ ಕಾರ್ಯಾಚರಣೆ ನಡೆಯಿತೆಂದು ತಿಳಿದು ಬಂದಿದೆ.

ಕಪಾಲಿ ಮೋಹನ್ ಸ್ಯಾಂಡಲ್​ವುಡ್​ನ ಬಹುತೇಕ ಸ್ಟಾರ್ ನಟರು ಹಾಗೂ ನಿರ್ವಪಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ. ಕೆಲವು ನಟರ ಆಸ್ತಿ ನಿರ್ವಹಣೆ ಹಾಗೂ ಬಂಡವಾಳ ಹೂಡಿಕೆ ವಿಚಾರಗಳನ್ನು ಬಹಳ ವರ್ಷಗಳಿಂದ ನೋಡಿಕೊಳ್ಳುತ್ತಿರುವ ಕಪಾಲಿ ಮನೆ ಹಾಗೂ ಬಾಲಾಜಿ ಫೈನಾನ್ಸ್ ಕಚೇರಿಗಳ ಮೇಲೆ 2018ರ ಅಕ್ಟೋಬರ್​ನಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆಸ್ತಿ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಸಂಗತಿ ಬಯಲಾಗಿತ್ತು.

ಬಳಿಕ ವಿಚಾರಣೆ ವೇಳೆ ಕೆಲವೊಂದು ನಟರು ಹಾಗೂ ನಿರ್ವಪಕರ ಜತೆಗಿನ ಒಡನಾಟ, ವ್ಯವಹಾರದ ಬಗ್ಗೆಯೂ ಕಪಾಲಿ ಮೋಹನ್ ಬಾಯ್ಬಿಟ್ಟಿದ್ದ. ಇದರ ಸುಳಿವು ಪಡೆದೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸಿಸಿಬಿ ಮೂಲಗಳು ಮಾಹಿತಿ ನೀಡಿವೆ.

2 ಬಾರಿ ವಿಚಾರಣೆ: ಕಪಾಲಿ ಮೋಹನ್ ಒಡೆತನದ ಆರ್.ಜಿ. ರಾಯಲ್ಸ್ ಇಸ್ಪೀಟ್ ಕ್ಲಬ್, ಬಾಲಾಜಿ ಫೈನಾನ್ಸ್, ಮನೆಗಳ ಮೇಲೆ ಸಿಸಿಬಿ ಅಧಿಕಾರಿಗಳು ಅಕ್ಟೋಬರ್​ನಲ್ಲಿ ದಾಳಿ ನಡೆಸಿದ್ದರು. ನ.3 ಮತ್ತು 10ರಂದು ಕಪಾಲಿ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ನಲ್ಲಿನ ವ್ಯವಹಾರದ ಬಗ್ಗೆ ಮಾಹಿತಿ ಸಿಕ್ಕಿತೆಂದು ತಿಳಿದು ಬಂದಿದೆ.

ಗೃಹಬಂಧನದಿಂದ ಮುಕ್ತಿ!: ಐಟಿ ಅಧಿಕಾರಿಗಳ ಪರಿಶೀಲನೆಯಿಂದಾಗಿ 3 ದಿನಗಳಿಂದ ಯಾರೂ ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಶನಿವಾರ ಮಧ್ಯಾಹ್ನದ ವೇಳೆಗೆ ಪುನೀತ್, ಯಶ್, ಶಿವರಾಜ್​ಕುಮಾರ್, ಸುದೀಪ್ ಸೇರಿ ಎಲ್ಲರೂ ಸ್ವಲ್ಪ ನಿರಾಳರಾದರು. ಹುಬ್ಬಳ್ಳಿಯಲ್ಲಿ ಶನಿವಾರ ಸಂಜೆ ನಿಗದಿಯಾಗಿದ್ದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಪುನೀತ್ ಕುಟುಂಬದೊಂದಿಗೆ ತೆರಳಿದರು. ಶನಿವಾರ ‘ಬಿಗ್ ಬಾಸ್’ ರಿಯಾಲಿಟಿ ಶೋ ಶೂಟಿಂಗ್ ಇದ್ದ ಕಾರಣ ಸುದೀಪ್ ಬೆಳಗ್ಗೆಯೇ ಬಿಡದಿಯಲ್ಲಿರುವ ‘ಬಿಗ್ ಬಾಸ್’ ಮನೆಯತ್ತ ತೆರಳಿದರು. ಶಿವರಾಜ್​ಕುಮಾರ್ ಮನೆಯಲ್ಲೇ ವಿಶ್ರಾಂತಿ ಪಡೆದರು.

ಪೆಟ್ಟಾ ಬಿಡುಗಡೆಗೆ ಅಡ್ಡಿ ಯಿಲ್ಲ: ನಟ ಸುದೀಪ್ ಆಪ್ತ, ವಿತರಕ ಜಾಕ್ ಮಂಜು ಮನೆ ಮೇಲೂ ಐಟಿ ದಾಳಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಅವರು ವಿತರಣೆ ಮಾಡಬೇಕಿದ್ದ ರಜನಿಕಾಂತ್ ಅಭಿನಯದ ‘ಪೆಟ್ಟಾ’ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣುವುದಿಲ್ಲ ಎಂದು ಗಾಂಧಿನಗರದಲ್ಲಿ ಶನಿವಾರ ಗುಲ್ಲೆದ್ದಿತ್ತು. ಆದರೆ, ‘ಪೆಟ್ಟಾ’ ಚಿತ್ರ ನಿಗದಿಯಂತೆ ಜ.10ರಂದೇ ಕರ್ನಾಟಕದಲ್ಲಿ ತೆರೆಕಾಣಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ.

ವಿಜಯ ಕಿರಗಂದೂರು ಆಸ್ತಿ

ನಿರ್ವಪಕ ವಿಜಯ ಕಿರಗಂದೂರು ನಿವಾಸದಲ್ಲಿ ದಾಳಿ ಮುಕ್ತಾಯಗೊಂಡಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ದಾಖಲೆಗಳ ಪರಿಶೀಲನೆ ಬಳಿಕ ಆಸ್ತಿ ಅಕ್ರಮವೋ ಸಕ್ರಮವೋ ಎಂಬುದು ಗೊತ್ತಾಗಲಿದೆ.

15 ದಿನ ನಿಗಾ, 50 ಗಂಟೆ ಶೋಧ!

ದಾಳಿಗೊಳಗಾದ ನಟರು ಮತ್ತು ನಿರ್ವಪಕರ ವಹಿವಾಟಿನ ಕುರಿತಂತೆ ಐಟಿ ಅಧಿಕಾರಿಗಳು 15 ದಿನಗಳಿಂದ ಮಾಹಿತಿ ಸಂಗ್ರಹಿಸಿದ್ದರು. ತಾವು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ವಿಚಾರ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಸತತ 50 ಗಂಟೆಗಳಿಗೂ ಹೆಚ್ಚು ಕಾಲ ಐಟಿ ತಂಡ ಪರಿಶೀಲನೆ ನಡೆಸಿದೆ.

ರಾಕ್​ಲೈನ್ ಆಸ್ತಿ ಪತ್ರ ಜಪ್ತಿ?

ನಿರ್ವಪಕ ರಾಕ್​ಲೈನ್ ವೆಂಕಟೇಶ್ ಮತ್ತು ಸಿ.ಆರ್. ಮನೋಹರ್ ನಿವಾಸ ಹಾಗೂ ಕಚೇರಿಗಳಲ್ಲಿ ಶೋಧ ಮುಂದುವರಿಸಿರುವ ಐಟಿ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ರಾಕ್​ಲೈನ್ ವೆಂಕಟೇಶ್​ರನ್ನು ಶನಿವಾರ ಅವರ ಕಚೇರಿಗೆ ಕರೆದೊಯ್ದು ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಕರ್​ನಲ್ಲಿ ಚಿನ್ನ, ಆಸ್ತಿಪತ್ರ : ಐಟಿ ದಾಳಿಗೊಳಗಾದ ಇಬ್ಬರು ನಟರ ಮನೆಯ ಲಾಕರ್​ಗಳಲ್ಲಿ ಚಿನ್ನಾಭರಣ ಮತ್ತು ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಪ್ಪು-ಬಿಳುಪು ದಂಧೆ?: ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ಈಗಲೂ ಬ್ಲಾ್ಯಕ್ ಆಂಡ್ ವೈಟ್ ದಂಧೆ ಹೆಚ್ಚಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕಪ್ಪುಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡುವ ಮೂಲಕ ವೈಟ್ ಮಾಡಲಾಗುತ್ತದೆ ಎಂದು ಸಿನಿಮಾ ಕ್ಷೇತ್ರದವರೇ ಹೇಳುತ್ತಾರೆ.

ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ. ನಾವು ಅವರಿಗೆ ಏನು ಮಾಹಿತಿ, ದಾಖಲೆಗಳನ್ನು ನೀಡಬೇಕೋ ಅದನ್ನೆಲ್ಲ ಒದಗಿಸಿದ್ದೇವೆ. 2ದಿನ ಹೆಂಡತಿ-ಮಗುವನ್ನು ನೋಡಲು ಸಾಧ್ಯವಾಗದ್ದಕ್ಕೆ ಬೇಸರವಾಯ್ತು. ಆತಂಕಕ್ಕೆ ಒಳಗಾದ ಕೆಲ ಅಭಿಮಾನಿಗಳು ಮನೆ ಹತ್ತಿರ ಬಂದಿದ್ದರು. ಯಾರನ್ನೂ ಮಾತನಾಡಿಸಲು ನನಗೆ ಸಾಧ್ಯವಾಗಲಿಲ್ಲ. ಕ್ಷಮೆ ಇರಲಿ.

| ಯಶ್, ನಟ

ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಅಧಿಕಾರಿಗಳಿಗೆ ಸಹಕರಿಸಿದ್ದೇನೆ. ನಾವು ಸ್ಪಷ್ಟನೆ ನೀಡುವವರೆಗೂ ತನಿಖೆ ಮುಂದುವರಿಯಲಿದೆ. ಆದರೆ, ಏನೂ ತೊಂದರೆ ಆಗಿಲ್ಲ. ಹೈ ಬಜೆಟ್ ಸಿನಿಮಾಗಳ ಕಾರಣಕ್ಕಾಗಿ ದಾಳಿ ಆಗಿದೆ ಎಂಬುದೆಲ್ಲ ಊಹಾಪೋಹವಷ್ಟೇ. ನಿರ್ದಿಷ್ಟ ಕಾರಣ ಇಟ್ಟುಕೊಂಡೇ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿರುತ್ತಾರೆ.

| ಪುನೀತ್ ರಾಜ್​ಕುಮಾರ್, ನಟ

ನನ್ನ ಜೀವನದಲ್ಲಿ ಐಟಿ ರೇಡ್ ಇದೇ ಮೊದಲು. ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ನಮ್ಮ ಕರ್ತವ್ಯವಾಗಿತ್ತು. ಇದರಿಂದ ನನ್ನ ಯಾವುದೇ ಚಟುವಟಿಕೆಗಳಿಗೆ ಅಡ್ಡಿ ಆಗಿಲ್ಲ. ಅಭಿಮಾನಿಗಳು ನನಗೆ ಕೊಟ್ಟಿರುವ ಮನೆ ಸ್ವಲ್ಪ ದೊಡ್ಡದು. ಹಾಗಾಗಿ ತಪಾಸಣೆ ನಡೆಸೋಕೆ ಅಧಿಕಾರಿಗಳಿಗೆ ಜಾಸ್ತಿ ಸಮಯ ಹಿಡಿದಿರಬಹುದು.

| ಶಿವರಾಜ್​ಕುಮಾರ್, ನಟ

ಐಟಿ ದಾಳಿಯಿಂದ ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಗೊತ್ತಾಗುತ್ತದೆ. ಕಲಾವಿದರಿಗೆ ಈ ದಾಳಿಯಿಂದ ಹಿನ್ನಡೆ ಆಗುವುದಿಲ್ಲ. ಎಲ್ಲ ಕಲಾವಿದರು ಪ್ರಾಮಾಣಿಕರು. ಐಟಿ ದಾಳಿ ವೇಳೆ ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ, ಚೊಂಬಷ್ಟೇ ಇರಬಹುದು. ನಿಯಮ ಪ್ರಕಾರ ಎಲ್ಲರೂ ಟಾಕ್ಸ್ ಕಟ್ಟಬೇಕು. ಕಲಾವಿದರೂ ಟ್ಯಾಕ್ಸ್ ಕಟ್ಟುತ್ತಾರೆ.

| ಜಯಮಾಲಾ, ಸಚಿವೆ

ಸಿನಿಮಾ ನಟರ ಮನೆಗಳ ಮೇಲೆ ಐಟಿ ದಾಳಿ ನಡೆಸುವುದು ಕೇಂದ್ರ ತೆರಿಗೆ ಇಲಾಖೆ ಅಧಿಕಾರಿಗಳ ದಿನಚರಿಯಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ತೆರಿಗೆ ವಂಚನೆ ಮತ್ತು ತೆರಿಗೆ ಪಾವತಿ ವಿಳಂಬದ ಮೇಲೆ ಅನುಮಾನ ಬಂದರೆ ಪರಿಶೀಲನೆ ಸಹಜ. ನನಗೆ ಗೊತ್ತಿರುವಂತೆ ಅಧಿಕಾರಿಗಳು ಇದಕ್ಕೆ 10 ದಿನ ಅಥವಾ ತಿಂಗಳು ಮೊದಲೇ ಸಿದ್ಧತೆಯನ್ನು ಮಾಡಿಕೊಂಡಿರುತ್ತಾರೆ.

| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ