ಆಟೋ ಓಡಿಸುತ್ತ ಲಕ್ಸುರಿ ಜೀವನ ನಡೆಸುತ್ತಿದ್ದವನ ಮನೆ ಮೇಲೆ ಐಟಿ ದಾಳಿ: ಶ್ರೀಮಂತಿಕೆ ಹಿಂದಿನ ಗುಟ್ಟು ಬಿಚ್ಚಿಟ್ಟ ಅಮೆರಿಕದ ಮಹಿಳೆ!

ಬೆಂಗಳೂರು: ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು ಐಷಾರಾಮಿ ಜೀವನ ನಡೆಸುತ್ತಿದ್ದವನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆತನಿಂದಲೇ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಸಾರ್ವಜನಿಕರ ದೂರಿನ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈತ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಆಪ್ತ ಎನ್ನಲಾಗಿತ್ತು. ಐಟಿ ವಿಚಾರಣೆ ವೇಳೆ ಅಮೆರಿಕದ ಮಹಿಳೆ ನನಗೆ ವಿಲ್ಲಾ ಉಡುಗೊರೆಯಾಗಿ ಕೊಟ್ಟಿದ್ದಾಗಿ ಸುಬ್ರಹ್ಮಣಿ ಹೇಳಿದ್ದನು.

ಇದೀಗ ಅಮೆರಿಕದ ಲಾರಾ ಎವಿಸನ್ ಎಂಬಾಕೆ ಅಮೆರಿಕದಿಂದ ಐಟಿ ಅಧಿಕಅರಿಗಳಿಗೆ ದೂರವಾಣಿ ಕರೆ ಮಾಡಿದ್ದು, ವಿಲ್ಲಾ ಖರೀದಿಗೆ 1.6 ಕೋಟಿ ರೂ. ಹಣವನ್ನು ಸುಬ್ರಹ್ಮಣಿಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಇದಲ್ಲದೆ ಆತನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ. ನಿಮಗೆ ಏನೇ ಮಾಹಿತಿ ಬೇಕಿದ್ದರೂ ಕೊಡಲು ನಾನು ಸಿದ್ಧ ಎಂದು ಆಕೆ ತಿಳಿಸಿರುವುದಾಗಿ ಹೇಳಲಾಗಿದೆ.

ಖಾಸಗಿ ಕಂಪನಿಯಲ್ಲಿದ್ದಾಗ ಸುಬ್ರಹ್ಮಣಿಗೆ ಮಹಿಳೆಯ ಪರಿಚಯವಾಗಿತ್ತು. ಪ್ರತಿನಿತ್ಯ ಕಂಪನಿಯಿಂದ ಮನೆಗೆ, ಮನೆಯಿಂದ ಕಂಪನಿಗೆ ತನ್ನ ಆಟೋದಲ್ಲಿ ಕರೆದೊಯ್ದು ಡ್ರಾಪ್ ಮಾಡುತ್ತಿದ್ದ. ಈ ವೇಳೆ ಸುಬ್ರಹ್ಮಣಿ ಒಳ್ಳೆಯತನ ನೋಡಿ ಹಣ ನೀಡಿರುವುದಾಗಿ ಲಾರಾ ಹೇಳಿಕೆ ನೀಡಿದ್ದು, ಐಟಿ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಳೆದ 15 ದಿನಗಳ ಹಿಂದಷ್ಟೇ ಆಟೋ ಚಾಲಕ ಸುಬ್ರಹ್ಮಣಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಐಟಿ ಅಧಿಕಾರಿಗಳ ದಾಳಿ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಆಟೋ ಓಡಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಆತನ ಮನೆಯಲ್ಲಿ ಪತ್ತೆಯಾದ ದಾಖಲೆಗಳ ವಿವರಣೆ ನೀಡುವಂತೆ ಮತ್ತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *