ಚಂದನವನದ ಐಟಿ ದಾಳಿಯಲ್ಲಿ 109 ಕೋಟಿ ರೂ. ಮೌಲ್ಯದ ಅನಧಿಕೃತ ಆಸ್ತಿ ಪತ್ತೆ!

ಬೆಂಗಳೂರು: ಚಂದನವನದ ತಾರಾ ನಟರು ಮತ್ತು ನಿರ್ಮಾಪಕರ ಮನೆಗಳ ಮೇಲೆ ಮೂರು ದಿನದಿಂದ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಒಟ್ಟಾರೆ 109 ಕೋಟಿ ಅನಧಿಕೃತ ಆಸ್ತಿ ಪಾಸ್ತಿ ಪತ್ತೆ ಆಗಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಮತ್ತು ಗೋವಾದ ಒಟ್ಟು 180 ಐಟಿ ಅಧಿಕಾರಿಗಳು ಜ.3ರಂದು ಏಕಕಾಲದಲ್ಲಿ 21 ಕಡೆ ದಾಳಿ ನಡೆಸಿದ್ದ ವೇಳೆ 11 ಕೋಟಿ ರೂ. ಬೆಲೆ ಬಾಳುವ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದರಲ್ಲಿ 2.85 ಕೋಟಿ ರೂ. ನಗದು ಮತ್ತು 25 ಕೆ.ಜಿ. ಚಿನ್ನಾಭರಣವಿದೆ.

ಪತ್ತೆಯಾಗಿರುವ ಅನಧಿಕೃತ ಆಸ್ತಿ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗೆ ಈಗಾಗಲೇ ಐಟಿ ಅಧಿಕಾರಿಗಳು ಪತ್ರ ಬರೆದಿದ್ದು, ಚಿತ್ರಮಂದಿರದ ಆದಾಯ ಘೋಷಣೆಯಲ್ಲೂ ಅಕ್ರಮ ಎಸಗಿರುವುದನ್ನೂ ಉಲ್ಲೇಖಿಸಿದ್ದಾರೆ. ಜತೆಗೆ ಬಾಕಿಯಿರುವ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ಸೂಚಿಸಿದೆ. (ದಿಗ್ವಿಜಯ ನ್ಯೂಸ್)