ಸ್ಯಾಂಡಲ್​ವುಡ್​ಗೆ ಐಟಿ ಶಾಕ್​: ಸುದೀಪ್​, ಪುನೀತ್​, ಯಶ್​, ಶಿವಣ್ಣ ಸೇರಿ ನಿರ್ಮಾಪಕರ ಮನೆ ಮೇಲೆ ದಾಳಿ

ಬೆಂಗಳೂರು: ಚಂದನವನದ ದಿಗ್ಗಜ ತಾರೆಯರು ಹಾಗೂ ಬಿಗ್​ ಬಜೆಟ್​ ನಿರ್ಮಾಪಕರ ಮನೆ ಮೇಲೆ ಗುರುವಾರ ಬೆಳಗ್ಗೆ 6 ಗಂಟೆಯಿಂದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ದಿಢೀರ್​ ಬೆಳವಣಿಗೆಯಿಂದ ಸ್ಯಾಂಡಲ್​ವುಡ್​ ಹಾಗೂ ಅಭಿಮಾನಿಗಳಿಗೆ ಶಾಕ್​ ಆಗಿದೆ. ಹೊಸ ವರ್ಷದ ಆರಂಭದ ದಿನಗಳಲ್ಲೇ ತಮ್ಮ ನೆಚ್ಚಿನ ತಾರೆಯರು ಐಟಿ ಸಂಕಷ್ಟಕ್ಕೆ ಸಿಲುಕಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್, ಹ್ಯಾಟ್ರಿಕ್​ ಹೀರೊ ಶಿವರಾಜ್​ಕುಮಾರ್​, ರಾಕಿಂಗ್​ ಸ್ಟಾರ್​ ಯಶ್​, ಅಭಿನಯ ಚಕ್ರವರ್ತಿ ಸುದೀಪ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್, ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸದಾಶಿವನಗರದ ಪುನೀತ್​ ರಾಜ್​ಕುಮಾರ್​ ಅವರ ಮನೆಗೆ ಎರಡು ಖಾಸಗಿ ವಾಹನಗಳಲ್ಲಿ ಬಂದ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ ಬೆಳಗ್ಗೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಹಾಗೆ ಮಾನ್ಯತಾ ಟೆರ್ಕ್​ ಪಾರ್ಕ್​ನಲ್ಲಿರುವ ಶಿವರಾಜ್​ಕುಮಾರ್​ ಮತ್ತು ಕತ್ರಿಗುಪ್ಪೆಯಲ್ಲಿರುವ ಯಶ್​ ಮನೆ ಮೇಲೆ ದಾಳಿ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿವಾಸದಲ್ಲಿ ಐಟಿ ದಾಳಿ ವೇಳೆ ಕಂಡು ಬಂದ ದೃಶ್ಯ

ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಸೇರಿ ಸ್ಯಾಂಡಲ್​ವುಡ್​ ನಟ, ನಿರ್ಮಾಪಕ ಮನೆ, ಕಚೇರಿಗಳು ಸೇರಿ ಸುಮಾರು 10 ಕಡೆ ದಾಳಿ ನಡೆಸಿ, ಪೊಲೀಸರ ಭದ್ರತೆಯಲ್ಲಿ ದಾಖಲೆಗಳ ಪರಿಶೀಲಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

ಜಿಎಸ್​ಟಿ ಪಾವತಿಸದ್ದಕ್ಕೆ ಪ್ರಿನ್ಸ್​ ಮಹೇಶ್​ ಬಾಬು ಬ್ಯಾಂಕ್ ಖಾತೆ ಫ್ರೀಜ್​