ಉಡುಪಿಯಲ್ಲಿ ಆದಾಯ ತೆರಿಗೆ ದಾಳಿ

ಮೂವರು ಉದ್ಯಮಿಗಳ ಮನೆ, ಕಚೇರಿಗಳಲ್ಲಿ ಪರಿಶೀಲನೆ

ಉಡುಪಿ/ಬೆಳ್ಮಣ್: ಉಡುಪಿ ಜಿಲ್ಲೆಯ ಮೂವರು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಬೆಂಗಳೂರಿನಿಂದ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕ್ರಷರ್ ಮಾಲೀಕ ಸಿ.ಎಂ.ಜಾಯ್ ಹಾಗೂ ಕುಂದಾಪುರದ ಗುತ್ತಿಗೆದಾರರೊಬ್ಬರ ಮನೆ, ಕಚೇರಿ ಹಾಗೂ ಕಾರ್ಖಾನೆಗಳಿಗೆ ದಾಳಿ ನಡೆದಿದೆ.
ಮಂಗಳೂರು ನೋಂದಣಿಯ ಹತ್ತಕ್ಕೂ ಅಧಿಕ ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ಬಂದು ಉದಯ ಕುಮಾರ್ ಶೆಟ್ಟಿ ಮನೆ ಪ್ರವೇಶಿಸಿದ್ದಾರೆ. ಮುನಿಯಾಲಿನಲ್ಲಿರುವ ಮನೆ, ಗೇರು ಕಾರ್ಖಾನೆ, ಕೋಟದಲ್ಲಿರುವ ಫಿಶ್‌ಮಿಲ್, ಮಣಿಪಾಲದ ಪೆರಂಪಳ್ಳಿಯಲ್ಲಿರುವ ಇನ್ನೊಂದು ಮನೆ ಸಹಿತ ಕಚೇರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕ್ರಷರ್‌ಗೆ ಐಟಿ ದಾಳಿ: ಕಾರ್ಕಳ ತಾಲೂಕಿನ ಸೂಡ ಪಡುಬೆಟ್ಟುವಿನಲ್ಲಿನ ಸಿ.ಎಂ.ಜಾಯ್ ಎಂಬುವರಿಗೆ ಸೇರಿದ ಕ್ರಷರ್‌ಗೆ ಐಟಿ ಅಧಿಕಾರಿಗಳು ಬುಧವಾರ ಮುಂಜಾನೆ 7 ಗಂಟೆ ವೇಳೆಗೆ ದಿಢೀರ್ ದಾಳಿ ನಡೆಸಿದ್ದಾರೆ. ಎರಡು ಕಾರುಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳ ತಂಡ ಹಲವು ಗಂಟೆಗಳ ಕಾಲ ಕಡತಗಳನ್ನು ಪರಿಶೀಲನೆ ನಡೆಸಿದೆ. ಜಾಯ್ ಅವರಿಗೆ ಸೇರಿದ ಕಾರ್ಕಳದ ಮಾಳದಲ್ಲಿರುವ ಮನೆ ಹಾಗೂ ಇತರ ಸಂಸ್ಥೆಗಳ ಮೇಲೂ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.