ತೆರಿಗೆ ಬಲೆಯಲ್ಲಿ ನಟರು, ನಿರ್ಮಾಪಕರು: ವಾರದ ಹಿಂದೆಯೇ ಐಟಿ ಅಧಿಕಾರಿಗಳ ಮಾಸ್ಟರ್​ ಪ್ಲ್ಯಾನ್​!

ಬೆಂಗಳೂರು: ತೆರಿಗೆ ಪಾವತಿಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ನ ಸ್ಟಾರ್​ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಲು ಐಟಿ ಅಧಿಕಾರಿಗಳು ಒಂದು ವಾರದ ಹಿಂದೆಯೇ ಮಾಸ್ಟರ್​ ಪ್ಲ್ಯಾನ್​ ಮಾಡಿರುವುದು ತಿಳಿದು ಬಂದಿದೆ.

ಕಳೆದ ವಾರದಿಂದಲೇ ನಟ ಮತ್ತು ನಿರ್ಮಾಪಕರ ಆದಾಯದ ಸೂಕ್ತ ದಾಖಲೆಗಳ ಮಾಹಿತಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದೇ ನಿಟ್ಟಿನಲ್ಲಿ ಬುಧವಾರ ಕೋರ್ಟ್​ನಿಂದ ಸರ್ಚ್​ ವಾರಂಟ್​ ಕೂಡ ಪಡೆದಿದ್ದಾರೆ. ಇಂದು ಬೆಳಗ್ಗೆ 200 ಅಧಿಕಾರಿಗಳನ್ನು ಇಂದು ಕಚೇರಿಗೆ ಕರೆಸಿಕೊಂಡು, ತಂಡಗಳ ಪ್ರಕಾರ ಏಕಕಾಲಕ್ಕೆ ಖಾಸಗಿ ವಾಹನಗಳಲ್ಲಿ ತೆರಳಿ ದಾಳಿ ಮಾಡಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹ್ಯಾಟ್ರಿಕ್ ಹೀರೋಗೆ ಐಟಿ ಶಾಕ್!
ಮಾನ್ಯತಾ ಟೆಕ್​ಪಾರ್ಕ್​ನಲ್ಲಿರುವ ಹ್ಯಾಟ್ರಿಕ್​ ಹೀರೊ ಶಿವರಾಜ್ ಕುಮಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮ ಇತ್ತೀಚಿನ ಚಿತ್ರಗಳಲ್ಲಿ ಎಷ್ಟು ಸಂಭಾವನೆ ಪಡೆದುಕೊಂಡಿದ್ದೀರಿ ಎಂದು ಪ್ರಶ್ನಿಸಿ ಅವುಗಳ ದಾಖಲೆಗಳನ್ನು ನೀಡುವಂತೆ ಶಿವಣ್ಣನಿಗೆ ಸೂಚಿಸಿದ್ದಾರೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ಮಾಡಿರುವ ಅಧಿಕಾರಿಗಳು ದಾಳಿ ನಂತರ ಭದ್ರತೆಗಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಮನೆಯಲ್ಲಿಲ್ಲ ಯಶ್​!
ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ರಾಕಿಂಗ್​ ಸ್ಟಾರ್​ ಯಶ್​ ಮನೆಯಲ್ಲಿ ಇರಲಿಲ್ಲ. ಯಶ್​ ಸದ್ಯ ಬೇರೆ ಊರಿನಲ್ಲಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ಮಗ್ನರಾಗಿದ್ದಾರೆ.

ಕಿಚ್ಚ ಸುದೀಪ್ ಮನೆ ಮೇಲೆ ಐಟಿ ದಾಳಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಜೆ.ಪಿ.ನಗರ ಮನೆಗೆ ಬೆಳಗ್ಗೆ 7 ಗಂಟೆಗೆ ಎರಡು ಖಾಸಗಿ ಕಾರಿನಲ್ಲಿ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.

ಪುನೀತ್​ ಮನೆಯಲ್ಲಿ ಚಿನ್ನಾಭರಣ ಲೆಕ್ಕಾಚಾರ
ನಟ ಪುನೀತ್ ರಾಜ್​ಕುಮಾರ್ ಮನೆ ಮೇಲೆ ಐಟಿ ದಾಳಿ ಮಾಡಿದ್ದು, ಮನೆಯಲ್ಲಿರುವ ಚಿನ್ನಾಭರಣ ಪರಿಶೀಲಿಸಲು ಚಿನ್ನಾಭರಣ ಪರಿಶೋಧಕರನ್ನು ಕರೆಸಲಾಗಿದೆ. ಜತೆಗೆ ಚಿನ್ನಾಭರಣ ತೂಕ ಮಾಡುವ ಯಂತ್ರ ಕೂಡ ತರಿಸಲಾಗಿದೆ.

ಯಶ್​ ಮಾವನ ಮನೆ ಮೇಲೂ ದಾಳಿ
ಬನಶಂಕರಿ ಮೂರನೇ ಹಂತದಲ್ಲಿರುವ ಯಶ್​ ಮನೆ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ಮಲ್ಲೇಶ್ವರಂನಲ್ಲಿರುವ ಯಶ್ ಮಾವನ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ರಾಕ್​ಲೈನ್​ ಪುತ್ರರ ಹೆಸರಿನಲ್ಲಿದೆ 100 ಕೋಟಿ ರೂ. ಆಸ್ತಿ!
ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​​ ನಿವಾಸಕ್ಕೆ ಐಟಿ ಅಧಿಕಾರಿಗಳು ಚಿನ್ನ ಪರಿಶೋಧಕರನ್ನು ಕರೆಸಿ, ಚಿನ್ನದ ಮೌಲ್ಯಮಾಪನ ಮಾಡಿಸಿದ್ದಾರೆ. ಜತೆಗೆ ನಾಗರಬಾವಿಯ ರಾಕ್​​ ಹಿಲ್​​ ಶಾಲೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ರಾಕ್​ಲೈನ್​ ಅವರಿಂದ ಕೆಲ ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ. ರಾಕ್​ಲೈನ್​ ತಮ್ಮ ಆಸ್ತಿಯನ್ನು ಪುತ್ರರಾದ ಯತೀಶ್​ ಮತ್ತು ಅಭಿಲಾಶ್​ ಹೆಸರಿನಲ್ಲಿ ಮಾಡಿರುವುದು ಪರಿಶೀಲನೆ ವೇಳೆ ತಿದುಬಂದಿದೆ. ಪುತ್ರರ ಹೆಸರಿನಲ್ಲಿಯೇ 100 ಕೋಟಿ ರೂ. ಆಸ್ತಿಯ ದಾಖಲೆ ಪತ್ರಗಳು ರಾಕ್​ಲೈನ್​ ನಿವಾಸದ ಲಾಕರ್​ನಲ್ಲಿ ದೊರಕಿವೆ.

ಜಯಣ್ಣನಿಗೂ ತಟ್ಟಿದ ಐಟಿ ಬಿಸಿ
ನಿರ್ಮಾಪಕ ಜಯಣ್ಣ ಅವರ ಮನೆ ಮೇಲೆ ಐವರು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ನಿರ್ಮಾಪಕರು ಸರಿಯಾಗಿ ತೆರಿಗೆ ಪಾವತಿಸದೆ ಸುಳ್ಳು ಲೆಕ್ಕ ತೋರಿಸಿರುವ ಅನುಮಾನದ ಮೇಲೆ ಸ್ಯಾಂಡಲ್​ವುಡ್​ನ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಭಿಮಾನಿಯ ಬೇಸರ 
ನಟಸಾರ್ವಭೌಮ ಡಾ.ರಾಜ್​ಕುಮಾರ್ ಅವರ ಮಕ್ಕಳ ಮನೆ ಮೇಲೆ ಐಟಿ ದಾಳಿ ನಡೆದಿರುವುದು ಬೇಸರ ತಂದಿದೆ. ಪುನೀತ್​ ಮತ್ತು ಶಿವಣ್ಣ ಹಲವು ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ. ಇಂಥವರ ಮನೆ ಮೇಲೆ ಐಟಿ ದಾಳಿಯಾಗಿದ್ದು ನಿಜಕ್ಕೂ ನೋವುಂಟು ಮಾಡಿದೆ ಎಂದು ಪುನೀತ್​ ರಾಜ್​ಕುಮಾರ್​ ಮನೆ ಮುಂದೆ ಬಂದಿದ್ದ ಅಭಿಮಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟರ ಮನೆ ಮುಂದೆ ಸೇರುತ್ತಿದೆ ಜನಸಾಗರ
ಪುನೀತ್​, ಶಿವಣ್ಣ, ಸುದೀಪ್​ ಮತ್ತು ಯಶ್​ ಮನೆ ಮೇಲೆ ಐಟಿ ದಾಳಿ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

One Reply to “ತೆರಿಗೆ ಬಲೆಯಲ್ಲಿ ನಟರು, ನಿರ್ಮಾಪಕರು: ವಾರದ ಹಿಂದೆಯೇ ಐಟಿ ಅಧಿಕಾರಿಗಳ ಮಾಸ್ಟರ್​ ಪ್ಲ್ಯಾನ್​!”

  1. Uneducated abimanigalu. Nobody is above law. Come out of slave mentality. Donating to old age home and destitues are exempted from income tax

Comments are closed.