ಶಿಕ್ಷಣದ ಬಗ್ಗೆ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ

1 Min Read
dhs
ಡಾ.ಎಂ.ಕೆ.ಶ್ರೀಧರ್ ಅಭಿನಂದನಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಡಿ.ಎಚ್.ಶಂಕರಮೂರ್ತಿ, ಡಿ.ಎಸ್.ಅರುಣ್, ಡಾ.ಎಂ.ಕೆ.ಶ್ರೀಧರ್, ಎ.ಜೆ.ರಾಮಚಂದ್ರ, ಡಾ.ರವಿಕಿರಣ್, ಧರ್ಮಪ್ರಸಾದ್, ಭೂಪಾಳಂ ಶಶಿಧರ್ ಮುಂತಾದವರಿದ್ದರು.

ಶಿವಮೊಗ್ಗ: ಶಿಕ್ಷಣ ಕ್ಷೇತ್ರದಲ್ಲಿ ಇಂದಿಗೂ ಅನೇಕ ಬಗೆಯ ಚರ್ಚೆಗಳು ಚಾಲ್ತಿಯಲ್ಲಿವೆ. ಸ್ವಾತಂತ್ರೃ ಸಿಕ್ಕು ಇಷ್ಟು ವರ್ಷಗಳ ಬಳಿಕವೂ ನಮ್ಮ ಮಕ್ಕಳಿಗೆ ಯಾವ ಶಿಕ್ಷಣ ನೀಡಬೇಕು? ಯಾವ ವಿಚಾರಗಳನ್ನು ತಿಳಿಸಬಾರದು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಡಿ.ಎಚ್.ಶಂಕರಮೂರ್ತಿ ಹೇಳಿದರು.

ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ಏರ್ಪಡಿಸಿದ್ದ ಪದ್ಮಶ್ರೀ ಪುರಸ್ಕೃತ ಡಾ.ಎಂ.ಕೆ.ಶ್ರೀಧರ್ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಡಾ. ಶ್ರೀಧರ್ ಸಾಧನೆ ಅನನ್ಯ. ಇಂದು ನಾವೆಲ್ಲರೂ ನಮ್ಮ ದೇಶದ ಬಗ್ಗೆ ಅತೀವ ಹೆಮ್ಮೆಯಿಂದ ಮಾತನಾಡುತ್ತಿದ್ದೇವೆ. ಇದಕ್ಕೆ ಅನೇಕ ಮಹನೀಯರು ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ಡಾ. ಶ್ರೀಧರ್ ಕೂಡ ಇದ್ದಾರೆ ಎಂದರು.
ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಭೆ ಕರೆಯಲಾಗಿತ್ತು. ಮಕ್ಕಳಿಗೆ ಯಾವ ಬಗೆಯ ಶಿಕ್ಷಣವನ್ನು ಹೇಗೆ ನೀಡಬೇಕು? ಎಂಬ ಬಗ್ಗೆ ಅಂದು ಚರ್ಚೆ ನಡೆಯಬೇಕಿತ್ತು. ಚರ್ಚೆಯಲ್ಲಿನ ಅಜೆಂಡಾ ಸಭೆ ಆರಂಭಕ್ಕೆ 10 ನಿಮಿಷ ಮುಂಚೆಯಷ್ಟೇ ನನ್ನ ಕೈಸೇರಿತ್ತು. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗೆ ಹೇಗೆ? ಎಂಬುದು ಚರ್ಚೆಯ ವಿಷಯಗಳಲ್ಲೊಂದು ಎಂಬುದನ್ನು ತಿಳಿದು ನನಗೆ ಆಘಾತವಾಯಿತು ಎಂದು ಹೇಳಿದರು
ಸಭೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ನನ್ನ ಮಾತಿಗೆ ಇನ್ನೂ 10-12 ರಾಜ್ಯಗಳ ಸಚಿವರು ದನಿಗೂಡಿಸಿದರು. ಇದರ ಪರಿಣಾಮವಾಗಿ ಆ ಸಭೆಯೇ ರದ್ದಾಯಿತು ಎಂದು ಡಿ.ಎಚ್.ಶಂಕರಮೂರ್ತಿ ಹಳೆಯ ನೆನಪನ್ನು ಪ್ರಸ್ತಾಪಿಸಿದರು.

See also  50 ಲಕ್ಷ ರೂ. ನಗದು ದೋಚಿದ ದುಷ್ಕರ್ಮಿಗಳು
Share This Article