ಸ್ವಾತಂತ್ರ್ಯ ಹೋರಾಟದ ಇತಿಹಾಸ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂಥ ಹೆಸರು ಮದನಲಾಲ್ ಧಿಂಗ್ರಾ. ತುಂಬು ತಾರುಣ್ಯದಲ್ಲೇ ತಾಯಿ ಭಾರತಿಗಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ಕ್ರಾಂತಿಕಾರಿ. ಬ್ರಿಟಿಷರ ನೆಲದಲ್ಲೇ ‘ಸೂರ್ಯ ಮುಳುಗದ ಸಾಮ್ರಾಜ್ಯ’ಕ್ಕೆ ಸವಾಲೆಸೆದ ಧೀರ. ಪಂಜಾಬಿನ ಈ ಗಂಡುಗಲಿಯಲ್ಲಿ ಬಾಲ್ಯದಲ್ಲೇ ಕ್ರಾಂತಿಕಾರಿಯ ಗುಣಗಳು ಸ್ಪಷ್ಟವಾಗಿ ಕಂಡುಬರುತ್ತಿದ್ದವು. ಕಾರಣ, ಆತ ಮೊದಲು ಸಿಡಿದೆದ್ದಿದ್ದು ಆತನ ಕುಟುಂಬದ ವಿರುದ್ಧವೇ!
1883 ಫೆಬ್ರವರಿ 18ರಂದು ಹಿರಿಯ ವೈದ್ಯ ದಿತ್ತಾಮಲ್ ಧಿಂಗ್ರಾ ಪುತ್ರನಾಗಿ ಜನಿಸಿದ ಮದನ್ ಸಿರಿವಂತಿಕೆಯನ್ನು, ಕುಟುಂಬ ಸ್ವೀಕರಿಸಿದ್ದ ಬ್ರಿಟಿಷ್ ದಾಸ್ಯವನ್ನು ಧಿಕ್ಕರಿಸಿದ! ಬ್ರಿಟಿಷ್ ಅಧಿಕಾರಿಗಳೊಡನೆ ಉತ್ತಮ ಸ್ನೇಹ ಸಂಪಾದಿಸಿಕೊಂಡಿದ್ದ, ಅವರಿಂದ ‘ರಾವ್ಸಾಹೇಬ್’ ಎಂದೇ ಕರೆಸಿಕೊಂಡು ಬೀಗುತ್ತಿದ್ದ ಮದನಲಾಲ್ನ ತಂದೆ ದಿತ್ತಾಮಲ್ ಆ ಕಾಲಕ್ಕೇ 21 ದೊಡ್ಡ ಮನೆ, ಆರು ಬಂಗ್ಲೆ, ಹಲವಾರು ಅಂಗಡಿ, ಗೋದಾಮುಗಳನ್ನು ಹೊಂದಿದ್ದರಂತೆ! ಹೀಗೇ ಭೌತಿಕ ಸೌಲಭ್ಯಗಳೆಲ್ಲ ಭರಪೂರ್ ಆಗಿಯೇ ಇದ್ದವು. ಅದಕ್ಕೆಂದೆ, ದಿತ್ತಾಮಲ್ ಏಳು ಗಂಡುಮಕ್ಕಳು ಹಾಗೂ ಓರ್ವ ಹೆಣ್ಣುಮಗಳನ್ನು ಚೆನ್ನಾಗಿ ಓದಿಸಿದರು. ಮೂವರು ಗಂಡುಮಕ್ಕಳು ವೈದ್ಯರಾದರೆ, ಮೂವರು ಬ್ಯಾರಿಸ್ಟರ್ ಪದವಿ ಪಡೆದಿದ್ದರು. ಆದರೆ ಮದನಲಾಲ್ ಧ್ಯೇಯ ಬೇರೆಯದ್ದೇ ಆಗಿತ್ತು. ಆತನ ಮನಸ್ಸು ಏನಾದರೂ ವಿಶಿಷ್ಟವಾದದ್ದನ್ನು ಸಾಧಿಸಲು ತುಡಿಯುತ್ತಿತ್ತು.
ಕಾಲೇಜು ಮೆಟ್ಟಿಲು ಹತ್ತುವ ಹೊತ್ತಿಗೆ ಬ್ರಿಟಿಷರ ವಿರುದ್ಧದ ಆಕ್ರೋಶ ಜ್ವಾಲಾಮುಖಿಯಂತೆ ಸ್ಪೋಟಿಸತೊಡಗಿತು. ಲಾಹೋರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕ್ರಾಂತಿಕಾರಿಗಳ ಸಂಪರ್ಕಕ್ಕೆ ಬಂದು ಅವರ ಚಟುವಟಿಕೆ ಗಳಲ್ಲಿ ಭಾಗಿಯಾಗತೊಡಗಿದ. ಕಾಲೇಜಿಗೂ ಸ್ವದೇಶಿ ಬಟ್ಟೆ ಧರಿಸಿಕೊಂಡೇ ಹೋಗುತ್ತಿದ್ದ. ಕಾಲೇಜು ಆಡಳಿತ ಮಂಡಳಿ ಇದನ್ನು ವಿರೋಧಿಸಿ ವಿದೇಶಿ ಕೋಟು ಧರಿಸಬೇಕು ಎಂದು ಕಟ್ಟಪ್ಪಣೆ ಹೊರಡಿಸಿತು. ಆ ಮಾತಿಗೆ ಸೊಪ್ಪುಹಾಕದೆ ‘ನಾನು ವಿದೇಶಿ ಬಟ್ಟೆಯಿಂದ ತಯಾರಿಸಿದ ಕೋಟು ಧರಿಸುವುದಿಲ್ಲ’ ಎಂದು ತಿರುಗೇಟು ನೀಡಿದ. ಪರಿಣಾಮ, ಆಡಳಿತಮಂಡಳಿ ಈತನನ್ನು ಕಾಲೇಜಿನಿಂದ ಹೊರಹಾಕಿತು. ಬ್ರಿಟಿಷರ ಜೀವನಶೈಲಿಯನ್ನೂ ಅನುಸರಿಸುತ್ತಿದ್ದ ತಂದೆ ದಿತ್ತಾಮಾಲ್ಗೆ ಮಗನ ಈ ಕ್ರಾಂತಿಕಾರಿ ಗುಣಗಳು ಇಷ್ಟವಾಗಲಿಲ್ಲ. ಮದನ್ನನ್ನು ಕಾಲೇಜಿನಿಂದ ಹೊರಹಾಕಿದ ಮೇಲೆ ದಿತ್ತಾಮಾಲ್ ಆತನೊಂದಿಗಿನ ಸಂಬಂಧವನ್ನೇ ಕಡಿದುಕೊಂಡರು!
ಮದನ್ ತಲೆಕೆಡಿಸಿಕೊಳ್ಳಲಿಲ್ಲ. ಕಾರಣ, ಅವನೆಂದೂ ಸಿರಿವಂತಿಕೆಯೆಡೆಗೆ ಆಕರ್ಷಿತವಾಗಿರಲಿಲ್ಲ. ಮುಂಬೈಗೆ ತೆರಳಿ ಕೆಲ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ಆಗ ಮದನಲಾಲ್ನ ಹಿರಿಯ ಸಹೋದರ ಡಾ.ಬಿಹಾರಿಲಾಲ್ ವ್ಯಾಸಂಗ ಮುಂದುವರಿಸುವಂತೆ ತಮ್ಮನಿಗೆ ತಿಳಿಹೇಳಿದರು. ಮಾತ್ರವಲ್ಲ, ಲಂಡನಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮದನ್ ಓದಿಗೆ ವ್ಯವಸ್ಥೆ ಮಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಲಂಡನ್ ಸೇರಿದಾಗ ಧಿಂಗ್ರಾನಿಗೆ 21-22 ವರ್ಷ ವಯಸ್ಸು. ವಯೋಸಹಜ ಗುಣವಾಗಿ ಚೆಂದ-ಚೆಂದದ ಬಟ್ಟೆ ಹಾಕಿಕೊಂಡು ಶೋಕಿ ಮಾಡುವುದು, ಹುಡುಗಿಯರನ್ನು ಚುಡಾಯಿಸುವುದು ಮಾಡುತ್ತಿದ್ದ. ಸ್ಪೂರದ್ರೂಪಿಯಾಗಿದ್ದರಿಂದ ತನ್ನ ಬುದ್ಧಿಮತ್ತೆಯಿಂದ ಮಾತ್ರವಲ್ಲ ರೂಪದಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದ.
ಬದುಕಿಗೆ ಹೊಸ ತಿರುವು: ಇವನ ಬದುಕಿಗೆ ಹೊಸ ತಿರುವು ಸಿಕ್ಕಿದ್ದು ಲಂಡನ್ನಲ್ಲಿಯೇ! ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್, ಶ್ಯಾಮಜಿ ಕೃಷ್ಣ ವರ್ವ ಅವರಿಂದ ಲಂಡನಿನ ‘ಭಾರತೀಯ ಭವನ’ (ಇಂಡಿಯಾ ಹೌಸ್) ಕ್ರಾಂತಿಕಾರಿಗಳ ಚಟುವಟಿಕೆಯ ಕೇಂದ್ರವಾಗಿತ್ತು. ಅಲ್ಲಿನ ಭಾರತೀಯ ಚಿಂತನೆಗಳುಳ್ಳ ಜನರೊಂದಿಗೆ ಮದನ್ ನಂಟು ಬೆಳೆಯಿತು. ಮೇಲಿಂದಮೇಲೆ ಭಾರತೀಯ ಭವನಕ್ಕೆ ಭೇಟಿ ನೀಡಿ ಸಾವರ್ಕರ್ ಮಾತುಗಳನ್ನು ಆಲಿಸತೊಡಗಿದ. ಆದರೆ, ಮದನ್ ಹಾಗೂ ಸಾವರ್ಕರ್ ನಡುವಿನ ಮೊದಲ ಮಾತುಕತೆ ನಡೆದದ್ದು ಇಂಗ್ಲೆಂಡಿನ ರೆಸ್ಟೋರೆಂಟ್ವೊಂದರಲ್ಲಿ.
ಅದೊಂದು ದಿನ ಸಾವರ್ಕರ್ ಗೆಳೆಯ ಹರಿನಾಮ ಸಿಂಗ್ನೊಂದಿಗೆ ಊಟಕ್ಕಾಗಿ ರೆಸ್ಟೋರೆಂಟ್ಗೆ ಬಂದಿದ್ದರು. ಆದರೆ ಅಲ್ಲಿ ಭಾರತೀಯರನ್ನು ಪ್ರತ್ಯೇಕವಾಗಿ ಮೂಲೆಯಲ್ಲಿರುವ ಕುರ್ಚಿಗಳಲ್ಲಿ ಕೂಡಿಸಲಾಗುತ್ತಿತ್ತು. ಅವರು ಬ್ರಿಟಿಷರೊಡನೆ ಕೂತು ಊಟ ಮಾಡುವ ಹಾಗಿರಲಿಲ್ಲ. ಇದನ್ನು ಕಂಡ ಸಾವರ್ಕರ್ ವ್ಯಗ್ರರಾಗಿ, ಅಲ್ಲಿನ ನೀತಿಯನ್ನು ವಿರೋಧಿಸಿದರು. ಅದೇ ರೆಸ್ಟೋರೆಂಟ್ನಲ್ಲಿ ಗೆಳೆಯನೊಂದಿಗೆ ಬಂದಿದ್ದ ಮದನ್, ಸಾವರ್ಕರ್ ಬಳಿಗೆ ಬಂದು, ‘ಬ್ರಿಟಿಷರು ನಮ್ಮ ದೇಶವನ್ನಾಳುತ್ತಿರುವ ಮಾಲೀಕರು ಎಂಬುದನ್ನು ಮರೆಯಲು ಸಾಧ್ಯವೇ? ಅವರು ರೂಪಿಸಿದ ನೀತಿಯನ್ನು ಅನುಸರಿಸುವುದು ಅನಿವಾರ್ಯ. ಭಾರತೀಯರ ಸಾಲಿನಲ್ಲಿ ಬಂದು ಕೂತು ಊಟ ಮಾಡಿ’ ಎಂದ. ‘ನಿಮ್ಮಂಥ ನಿರಭಿಮಾನಿಗಳು ಇರುವುದರಿಂದಲೇ ಭಾರತ ಇನ್ನೂ ಬ್ರಿಟಿಷರ ದಾಸ್ಯದಿಂದ ಮುಕ್ತಿಕಂಡಿಲ್ಲ. ಆತ್ಮಾಭಿಮಾನವನ್ನು ಮರೆತು ಬಾಳುತ್ತಿರುವುದರಿಂದಲೇ ನಮ್ಮ ದೇಶದ ಸ್ಥಿತಿ ಹೀಗಾಗಿದೆ’ ಎಂದು ಮರುಉತ್ತರಿಸಿದರು ಸಾವರ್ಕರ್. ಈ ಮಾತು ಮದನ್ಗೆ ಸಿಡಿಲಿನಂತೆ ತಾಗಿತು. ಆ ರೆಸ್ಟೋರೆಂಟ್ನ್ನು
ಧಿಕ್ಕರಿಸಿ ಸಾವರ್ಕರ್ ಹೊರಬರುತ್ತಿದ್ದಂತೆ ಅವರನ್ನು ಹಿಂಬಾಲಿಸಿ ಬಂದು, ‘ನಾನು ಮದನಲಾಲ್ ಧಿಂಗ್ರಾ. ಪಂಜಾಬಿನವನು. ನೀವು ಹೇಳಿದ ಮಾತು ನನಗೆ ಮನವರಿಕೆಯಾಯಿತು. ಬ್ರಿಟಿಷರ ದೌರ್ಜನ್ಯವನ್ನು ನಾವು ಮೌನವಾಗಿ ಸಹಿಸುತ್ತಿರುವುದರಿಂದಲೇ ಅವರ ದಬ್ಬಾಳಿಕೆ ಹೆಚ್ಚುತ್ತಿದೆ. ಇದನ್ನು ತಡೆಯಲು ಏನು ಮಾಡಬೇಕು? ನಾನೇನು ಮಾಡಬಹುದು? ಹೇಳಿ…’ ಎಂದ.
ಮದನ್ ಪಂಜಾಬಿನವನು ಎಂದು ಗೊತ್ತಾಗುತ್ತಿದ್ದಂತೆ ಸಾವರ್ಕರ್ ರೋಮಾಂಚಿತಗೊಂಡರು. ಅವನನ್ನು ‘ಅಭಿನವ ಭಾರತ’ ಕ್ರಾಂತಿಕಾರಿ ಸಂಘಟನೆಯ ಸಕ್ರಿಯ ಸದಸ್ಯನಾಗಿಸಿದರು. ಅಲ್ಲಿಂದ ಮುಂದೆ ಸಾವರ್ಕರ್ ಮಾತುಗಳನ್ನು ನಿಯಮಿತವಾಗಿ ಕೇಳತೊಡಗಿದ ಮದನ್ ಅವರಿಂದ ಪ್ರಭಾವಿತನಾದ. ಸಾವರ್ಕರ್ರಲ್ಲಿಗೆ ಬಂದು ‘ನಾನೇನು ಮಾಡ್ಬೇಕು ಹೇಳಿ…’ ಎಂದು ಪದೇಪದೆ ಕೇಳುತ್ತಿದ್ದ. ‘ಸಮಯಬಂದಾಗ ಹೇಳುತ್ತೇನೆ’ ಎಂದಷ್ಟೇ ಸಾವರ್ಕರ್ ಹೇಳುತ್ತಿದ್ದರು. ಆ ಹೊತ್ತಿಗಾಗಲೇ ಧಿಂಗ್ರಾನ ಕಣಕಣದಲ್ಲೂ ರಾಷ್ಟ್ರಭಕ್ತಿ ಹರಿಯತೊಡಗಿತು. ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿಸಲು ಅವನ ಮನಸ್ಸು ಎಂಥ ತ್ಯಾಗಕ್ಕೂ ಸಿದ್ಧವಾಗಿತ್ತು. ಹಾಗಿರುವಾಗ, ಒಂದು ದಿನ ಆತನ ಗೆಳೆಯರು ಧಿಂಗ್ರಾನನ್ನು ಗೇಲಿ ಮಾಡುತ್ತ, ‘ಶೋಕಿಯೇ ಬದುಕಾಗಿಸಿಕೊಂಡವನು ಕೈಯಲ್ಲಿ ಬಂದೂಕು ಹಿಡಿಯುತ್ತಾನಂತೆ…!’ ಎಂದುಬಿಟ್ಟರು. ಆ ಮಾತಿನಿಂದ ಕ್ರೋಧಿತನಾದ ಧಿಂಗ್ರಾ ಮರುಮಾತನಾಡದೆ ಸೂಜಿಯೊಂದನ್ನು ತೆಗೆದು ಕೈಗೆ ಚುಚ್ಚಿಕೊಳ್ಳಲಾರಂಭಿಸಿದ. ಕೈ ಹರಿದು ರಕ್ತ ಸುರಿಯಲಾರಂಭಿಸಿದರೂ ಬಾಯಿಂದ ಒಂದು ಶಬ್ದ ಕೂಡ ಹೊರಡಲಿಲ್ಲ. ಇದನ್ನು ಕಂಡವರೇ ಗಾಬರಿಗೊಂಡ ಸ್ನೇಹಿತರು ಧಿಂಗ್ರಾನ ಛಲ, ಹಟವನ್ನು ಕಂಡು ಹೆಮ್ಮೆಯನ್ನೂ ಪಟ್ಟರು.
ಮತ್ತೊಂದು ಸಂದರ್ಭ. ಬಾಂಬ್ ತಯಾರಿಸುತ್ತಿದ್ದ ವೇಳೆಯಲ್ಲಿ ಒಲೆಯ ಮೇಲಿದ್ದ ಆಮ್ಲವೊಂದು ವಿಪರೀತವಾಗಿ ಕುದಿದು ಹೋಗಿತ್ತು. ಇನ್ನೂ ಸ್ವಲ್ಪ ಹೊತ್ತಾಗಿದ್ದರೆ ಅದು ಸಿಡಿದು ಅಕ್ಕಪಕ್ಕದಲ್ಲಿದ್ದವರು ಭಸ್ಮವಾಗಿ ಹೋಗುತ್ತಿದ್ದರು. ಅದು ಅರಿವಿಗೆ ಬರುತ್ತಲೇ ಎಲ್ಲರೂ ಇಕ್ಕಳಕ್ಕೆ ಹುಡುಕಾಡತೊಡಗಿದರು. ಆದರೆ, ಧಿಂಗ್ರಾ ಹಿಂದೆಮುಂದೆ ಯೋಚಿಸದೆ ಬಿಸಿ-ಬಿಸಿಯಾಗಿದ್ದ ಆ ಪಾತ್ರೆಯನ್ನು ನಿರಾಯಾಸವಾಗಿ ಕೈಯಿಂದ ಹಿಡಿದು ಕೆಳಕ್ಕಿಟ್ಟ! ಕೈ ಸುಟ್ಟುಹೋದರೂ ಆತನಿಗೆ ಅದರ ಪರಿವೇ ಇರಲಿಲ್ಲ. ಹಿಡಿದ
ಕೆಲಸವನ್ನು ಸಾಹಸದಿಂದ ಸಾಧಿಸುವ ಧಿಂಗ್ರಾ ಪರಿಯೇ ಅದ್ಭುತ ಹಾಗೂ ಅಸಾಧಾರಣವಾಗಿತ್ತು. ಸದಾ ಉತ್ಸಾಹದ ಬುಗ್ಗೆಯಂತೆ ಕಾರ್ಯನಿರತನಾಗಿದ್ದ ಧಿಂಗ್ರಾ ‘ಬ್ರಿಟಿಷರ ವಿರುದ್ಧ ನನಗೆ ಸಣ್ಣಪುಟ್ಟ ಕೆಲಸ ಕೊಡಬೇಡಿ. ಏನಾದರೂ, ಮಹತ್ವವಾದದ್ದನ್ನೇ ಕೊಡಿ. ಅದರಿಂದ ಬ್ರಿಟಿಷ್ ಸಾಮ್ರಾಜ್ಯವೇ ನಡುಗಬೇಕು’ ಎಂದು ಸಾವರ್ಕರ್ರಿಗೆ ಆಗ್ರಹಿಸುತ್ತಿದ್ದ. ಅದೇ ಹೊತ್ತಲ್ಲಿ ಭಾರತದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ್ದ ಖುದಿರಾಮ್ ಬೋಸ್, ಸತಿಂದರ್ ಪಾಲ್, ಕನ್ಹಾಯಿ ಲಾಲ್ ದತ್ತ, ಕಾನ್ಸಿರಾಮ್ ಎಂಬ ಯುವಕ ರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಇದರಿಂದ ಭಾರತದಲ್ಲಿ ಸೃಷ್ಟಿಯಾದ ಆಕ್ರೋಶದ ಅಲೆ ದೂರದ ಲಂಡನ್ವರೆಗೂ ಬಂದು ತಲುಪಿತು. ಈ ಹೋರಾಟಗಾರರು ಗಲ್ಲಿಗೇರಲು ಬ್ರಿಟಿಷ್ ಅಧಿಕಾರಿ ವಿಲಿಯಂ ಹಟ್ ಕರ್ಜನ್ ವಾಯ್ಲಿ ಕಾರಣ ಎಂಬ ಸುದ್ದಿ ತಲುಪಿತು. ಮಾತ್ರವಲ್ಲ, ಭಾರತದಲ್ಲಿ ತೀವ್ರ ದಬ್ಬಾಳಿಕೆ ನಡೆಸಿದ್ದ ಕರ್ಜನ್ ವಾಯ್ಲಿ ಇಂಗ್ಲೆಂಡಿಗೆ ಬಂದ ಬಳಿಕವೂ ಭಾರತೀಯ ವಿದ್ಯಾರ್ಥಿಗಳನ್ನು ಇನ್ನಿಲ್ಲದಂತೆ ಪೀಡಿಸತೊಡಗಿದ. ಆತನ ದಬ್ಬಾಳಿಕೆಯಿಂದ ಭಾರತೀಯರು ಅತೀವ ನೋವು ಅನುಭವಿಸಿದ್ದರು. ಹಾಗಾಗಿ ಕರ್ಜನ್ ವಾಯ್ಲಿಯನ್ನು ಮುಗಿಸಿದರೆ ಬ್ರಿಟಿಷರಿಗೆ ದೊಡ್ಡ ಹಾಗೂ ಮರೆಯಲಾರದ ಹೊಡೆತ ನೀಡ ಬಹುದು ಎಂಬ ಚಿಂತನೆ ಸಾವರ್ಕರ್ರಿಗೆ ಹೊಳೆಯಿತು. ಈ ಕೆಲಸ ಮಾಡಲು ಧಿಂಗ್ರಾನೇ ಸಮರ್ಥ ಎಂದು ಸಾರ್ವಕರ್ ನಿರ್ಧರಿಸಿದರು. ಇದಕ್ಕೆ ಕಾರಣವೂ ಇತ್ತು. ಕರ್ಜನ್ ವಾಯ್ಲಿ ಹಾಗೂ ಧಿಂಗ್ರಾನ ತಂದೆ ಉತ್ತಮ ಸ್ನೇಹಿತರಾಗಿದ್ದರು. ಹೀಗಾಗಿ ಲಂಡನ್ನಲ್ಲಿ ಧಿಂಗ್ರಾನ ಯೋಗಕ್ಷೇಮವನ್ನು ಕರ್ಜನ್ ವಾಯ್ಲಿ ಆಗಾಗ ವಿಚಾರಿಸುತ್ತಿದ್ದ.
ಯೋಜನೆ ರೂಪುಗೊಂಡಿತು. ಮದನ್ ರಿವಾಲ್ವರ್ ಲೈಸೆನ್ಸ್ ಸಂಪಾದಿಸಿ ಗುಂಡು ಹೊಡೆಯುವ ಅಭ್ಯಾಸ ಮಾಡಿದ. ಕರ್ಜನ್ ವಾಯ್ಲಿ ಚಲನವಲನಗಳನ್ನು ಗಮನಿಸುತ್ತ ಸರಿಯಾದ ಸಮಯಕ್ಕಾಗಿ ಕಾಯತೊಡಗಿದ. ಮೊದಲ ಯೋಜನೆ ವಿಫಲವಾಯಿತು. ಕಾರಣ, ವಾಯ್ಲಿ ಪಾಲ್ಗೊಂಡಿದ್ದ ಸಭೆಗೆ ಮದನ್ ತಡವಾಗಿ ತಲುಪಿದ್ದ. ಈ ವಿಷಯ ತಿಳಿದ ಸಾವರ್ಕರರು ಕೋಪದಿಂದ ‘ಕೆಲಸ ಆಗೋವರೆಗೂ ಮುಖ ತೊರಿಸಬೇಡ’ ಎಂದು ಗದರಿದರು. ಆಗ ತನ್ನ ಯೋಜನೆಯಲ್ಲಿ ಧಿಂಗ್ರಾ ಮತ್ತಷ್ಟು ತನ್ಮಯನಾದ.
ಅಂದು 1909ರ ಜುಲೈ 1. ಲಂಡನ್ನಿನ ಜಹಾಂಗೀರ್ ಹಾಲ್ನಲ್ಲಿ ಇಂಡಿಯನ್ ನ್ಯಾಶನಲ್ ಅಸೋಷಿಯೇಷನ್ನ ವಾರ್ಷಿಕೋತ್ಸವ ಸಮಾರಂಭ. ಸಭೆ ಬ್ರಿಟಿಷ್ ನಾಗರಿಕರು ಹಾಗೂ ಭಾರತೀಯರಿಂದ ಕಿಕ್ಕಿರಿದು ತುಂಬಿತ್ತು. ಸಮಾರಂಭಕ್ಕೆ ಕರ್ಜನ್ ಪತ್ನಿ ಸಮೇತ ಆಗಮಿಸುತ್ತಿದ್ದಂತೆ ಅವರತ್ತ ನುಗ್ಗಿದ ಮದನ್ ಕರ್ಜನ್ ಮೇಲೆ ಗುಂಡು ಹಾರಿಸಿದ. ತುಂಬಿದ ಸಭೆಯಲ್ಲಿ ಕರ್ಜನ್ ಹೆಣವಾದ! ಇಡೀ ಇಂಗ್ಲೆಂಡ್ ಈ ಘಟನೆಯಿಂದ ತತ್ತರಿಸಿಹೋಯಿತು. ಭಾರತೀಯ ಹುಡುಗನೊಬ್ಬ ಜನರ ನಡುವೆಯೇ ಕರ್ಜನ್ನನ್ನು ಕೊಂದಿದ್ದಾನೆ ಎಂಬ ಸುದ್ದಿತಿಳಿದು ಬ್ರಿಟಿಷರು ಬೆಚ್ಚಿಬಿದ್ದರು. ಅತ್ತ ಭಾರತದ ಜನ ಕರ್ಜನ್ ವಾಯ್ಲಿ ಸಾವಿನ ಸುದ್ದಿ ತಿಳಿಯುತ್ತಲೇ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬ್ರಿಟಿಷರ ನೆಲದಲ್ಲಿ ಮೊದಲ ಬಾರಿಗೆ ಬ್ರಿಟಿಷರಿಗೇ ಭಾರಿ ತಿರುಗೇಟು ಸಿಕ್ಕ ಘಟನೆಯಾಗಿತ್ತು ಅದು.
ನ್ಯಾಯಾಲಯದಲ್ಲಿ ವಿಚಾರಣೆಯ ನಾಟಕ ನಡೆದು 1909 ಜುಲೈ 23ರಂದು ಧಿಂಗ್ರಾನಿಗೆ ಮೃತ್ಯುದಂಡ (ಮರಣದಂಡನೆ) ಘೊಷಿಸಲಾಯಿತು! 1909 ಆಗಸ್ಟ್ 17ರಂದು ‘ನನ್ನ ಈ ಬಲಿದಾನ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಲಿದೆ. ಭಾರತದ ವಿರುದ್ಧ ಕತ್ತಿ ಎತ್ತುವವರಿಗೆ ಪಾಠವಾಗಲಿದೆ’ ಎಂದು ಹೇಳಿ ನಗುನಗುತ್ತಲೇ ನೇಣಿಗೇರಿದ. ‘ಆ ದೊಡ್ಡತಾಯಿಗೆ (ಭಾರತಮಾತೆಗೆ) ನನ್ನಂಥ ದಡ್ಡ ಮಗ ತನ್ನ ರಕ್ತವನ್ನಲ್ಲದೆ ಇನ್ನೇನು ಕೊಡಲು ಸಾಧ್ಯ’ ಎಂಬ ಅವನ ಕೊನೆಯ ಮಾತು ಲಕ್ಷ-ಲಕ್ಷ ತರುಣರಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿತು. ಅಬ್ಬ ಎಂಥ ಪ್ರೇರಣಾದಾಯಿ ಬದುಕು! ರಾಷ್ಟ್ರಭಕ್ತಿಗೆ ಇದಕ್ಕಿಂತ ಆದರ್ಶ ಬೇಕೆ? ಕಳೆದ ವಾರವಷ್ಟೇ ಮದನಲಾಲ್ ಧಿಂಗ್ರಾನ ಬಲಿದಾನ ದಿನ (ಆಗಸ್ಟ್ 17) ಆಚರಿಸಿದ್ದೇವೆ. ಆತನ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಶಕ್ತಿ ಸಮಾಜ ಕಾರ್ಯಕ್ಕೆ ಅಣಿಯಾದರೆ ಭಾರತ ಮತ್ತೆ ವಿಶ್ವವಂದ್ಯವಾಗುವುದರಲ್ಲಿ ಅನುಮಾನವಿಲ್ಲ.
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)