ಏಡ್ಸ್ ಮುಕ್ತ ಭಾರತ ಮಾಡಲು ಸಾಧ್ಯ

2 Min Read
ಏಡ್ಸ್ ಮುಕ್ತ ಭಾರತ ಮಾಡಲು ಸಾಧ್ಯ

ಹಾವೇರಿ: ಪೋಲಿಯೋ ಮುಕ್ತ ಭಾರತದಂತೆ ನಿರಂತರ ಪರಿಶ್ರಮದಿಂದ ಏಡ್ಸ್ ಮುಕ್ತ ಭಾರತ ಮಾಡಲು ಸಾಧ್ಯ. ಯುವಜನತೆಗೆ ಹಾಗೂ ಸಮುದಾಯದಲ್ಲಿ ಏಡ್ಸ್ ಕುರಿತು ತಿಳಿವಳಿಕೆ ನೀಡುವ ಮೂಲಕ ಏಡ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಪಂ, ಜಿಲ್ಲಾಸ್ಪತ್ರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಭಾರತೀಯ ರೆಡ್​ಕ್ರಾಸ್ ಸಂಸ್ಥೆ, ಸ್ಪಂದನಾ ಮಹಿಳಾ ಒಕ್ಕೂಟ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ರಕ್ಷಿತ ನೆಟ್​ವರ್ಕ್, ಸಂಜೀವಿನಿ ನಗರ ಗ್ರಾಮೀಣಾಭಿವೃದ್ಧಿ ಸಮುದಾಯ ಸೇವಾ ಸಂಸ್ಥೆ, ಎನ್ನೆಸ್ಸೆಸ್, ರೆಡ್​ರಿಬ್ಬನ್ ಕ್ಲಬ್​ಗಳು ಹಾಗೂ ಸರ್ಕಾರಿ ಸರ್ಕಾರೇತರ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಏಡ್ಸ್ ಬಗ್ಗೆ ಮೊದಲಿದ್ದ ಭಯದ ವಾತಾವರಣ ಈಗಿಲ್ಲ. ಆದರೆ, ಏಡ್ಸ್ ಅಪಾಯ ನಮ್ಮನ್ನು ಬಿಟ್ಟು ಹೋಗಿಲ್ಲ. ಕಳೆದ 18 ವರ್ಷಗಳ ಏಡ್ಸ್ ವರದಿ ನೋಡಿದರೆ ಈಗ ಇಳಿಮುಖವಾಗಿದೆ. ಏಡ್ಸ್ ಸೋಂಕಿತರಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಸಮಾಜದಲ್ಲಿ ಏಡ್ಸ್ ಬಗ್ಗೆ ತಿಳಿವಳಿಕೆ ಕಡಿಮೆಯಿರುವುದರಿಂದ ಏಡ್ಸ್ ಹರಡುವುದನ್ನು ತಡೆಯುವುದು ಅಸಾಧ್ಯವಾಗಿದೆ. ಸಾರ್ವಜನಿಕರಿಗೆ ಮನದಟ್ಟಾಗುವಂತೆ ಜಾಗೃತಿ ಮೂಡಿಸುವ ಮೂಲಕ ಏಡ್ಸ್ ನಿಮೂಲನೆಗೆ ಸಂಕಲ್ಪ ಮಾಡೋಣ. ಕ್ಷಯರೋಗವು ಮಾರಣಾಂತಿಕ ರೋಗವಲ್ಲ. ಪರಿಸರ ಮಾಲಿನ್ಯ, ಜಲಮಾಲಿನ್ಯ ಇತರ ಕಾರಣದಿಂದ ಕ್ಷಯ ಬರಬಹುದು. ಕೂಡಲೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿದೆ ಎಂದರು.

See also  ಹಸಿವಿನ ದಿನ ಆಚರಿಸಲು ಮನವಿ

ಜಿಲ್ಲಾ ಏಡ್ಸ್ ಹಾಗೂ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನೀಲೇಶ ಎಂ., ಮಾತನಾಡಿ, ಸಮುದಾಯಕ್ಕೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಎಚ್​ಐವಿ ಸೋಂಕಿತರ ಸಂಖ್ಯೆ 2015ಕ್ಕೆ ಹೊಲಿಸಿದರೆ ಶೇ. 31ರಷ್ಟು ಕಡಿಮೆಯಾಗಿದೆ. ಎಚ್​ಐವಿ ಸೋಂಕಿತರ ಪ್ರಮಾಣ ಶೇ. 99ರಷ್ಟು ಕಡಿಮೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. 2030ರ ವೇಳೆಗೆ ಏಡ್ಸ್ ನಿಮೂಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಗುರಿ ಹಾಕಿಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಎಚ್​ಐವಿ ತಡೆಗೆ ಶ್ರಮಿಸಿದ ಆರೋಗ್ಯ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಟಿಎಚ್​ಒ ಡಾ. ಪ್ರಭಾಕರ ಕುಂದೂರ, ರಕ್ತನಿಧಿ ಘಟಕದ ಅಧಿಕಾರಿ ಬಸವರಾಜ ತಳವಾರ ಇತರರಿದ್ದರು.

Share This Article