ಬೆಳಗಾವಿ: ಕಿತ್ತೂರು ಉತ್ಸವ-2024 ಹಾಗೂ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷದ ಆಚರಣೆಯನ್ನು ಈ ಬಾರಿ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕಿತ್ತೂರಿನ ಇತಿಹಾಸವನ್ನು ರಾಜ್ಯಕ್ಕೆ ಸೀಮಿತಗೊಳಿಸದೇ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಬುಧವಾರ ಜರುಗಿದ ಕಿತ್ತೂರು ಉತ್ಸವ-2024 ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರು ಉತ್ಸವದಲ್ಲಿ ಅನೇಕ ಸಾಹಿತಿಗಳು, ಬುದ್ಧಿ ಜೀವಿಗಳು, ಕಲಾವಿದರು ತಮ್ಮ ಪರಿಚಯವನ್ನು ನಾಡಿಗೆ ಮಾಡಿಕೊಳ್ಳುತ್ತಿದ್ದಾರೆ.
ಕಿತ್ತೂರು ಇತಿಹಾಸಕ್ಕೆ ಸಂಬಂದಪಟ್ಟಂತೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಸೇರಿ ಇನ್ನೂ ಅನೇಕ ಹೋರಾಟಗಾರರ ಇತಿಹಾಸವನ್ನು ಮರುಸೃಷ್ಠಿ ಮಾಡುವುದು ಈ ಕಾರ್ಯಕ್ರಮದ ಉದ್ಧೇಶವಾಗಿದೆ. ರಾಣಿ ಚನ್ನಮ್ಮನ ಆದರ್ಶಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ಸಾಲಿನಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ಕಿತ್ತೂರು ಅಭಿವೃದ್ಧಿಗೆ ಬಹಳಷ್ಟು ಅನುದಾನ ನೀಡಲಾಗುತ್ತಿದೆ. ಮುಂದೆಯೂ ಕೂಡ ಕಿತ್ತೂರು ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದರು.
ಇತಿಹಾಸ ಅಧ್ಯಯನ ಕೇಂದ್ರ ಸ್ಥಳಾಂತರ: ಕಿತ್ತೂರು ಇತಿಹಾಸ ಅಧ್ಯಯನ ಕೇಂದ್ರವನ್ನು ವಿಜಯಪುರದಿಂದ ಬೆಳಗಾವಿಗೆ ಸ್ಥಳಾಂತರಿಸಲಾಗುವುದು. ರಾಣಿ ಚನ್ನಮ್ಮವಿಶ್ವ ವಿದ್ಯಾಲಯವನ್ನು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ‘ಸ್ವಾತಂತ್ರ್ಯ ಶ್ರೀ ಪುಸ್ತಕ’ ಬಿಡುಗಡೆಗೊಳಿಸಿ ಮಾತನಾಡಿ, ಕಿತ್ತೂರು ನಾಡು ಸ್ವಾಭಿಮಾನದ ನಾಡಾಗಿದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತಹ ಕಾಲದಲ್ಲಿ ರಾಣಿಚನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಧೀರ ಮಹಿಳೆಯಾಗಿದ್ದಳು.
ರಾಜ್ಯದ ಶ್ರೀಮಂತ ಸಂಸ್ಕೃತಿಗೆ ರಾಣಿ ಚನ್ನಮ್ಮ, ಅಮಟೂರ ಬಾಳಪ್ಪನವರಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಇಂದಿನ ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ. ಸ್ವಾತಂತ್ರ್ಯ ಹೊರಾಟದ ಬೆಳ್ಳ ಚುಕ್ಮಿ ರಾಣಿ ಚನ್ನಮ್ಮಳ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿಜಯೋತ್ಸವದ ಉತ್ಸಾಹ ಕೇವಲ ಕಿತ್ತೂರಿಗೆ ಸಿಮಿತವಾಗದೆ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದೆ. ಕಿತ್ತೂರು ಉತ್ಸವ ಜನರ ಉತ್ಸವಾಗಿದೆ. ಇದು ಕೇವಲ ವಿಜಯೋತ್ಸವವಾಗದೇ ಪ್ರೇರಣಾ ಉತ್ಸವವಾಗಲಿ ಎಂದರು.
ಬ್ರಿಟಿಷ್ ಅಧಕಾರಿ ಥ್ಯಾಕರೆಯನ್ನು ಬಲಿ ಪಡೆದು ವಿಜಯ ಪಥಾಕೆ ಸಾರಿದ ವಿಜಯೋತ್ಸವದ 200ನೇ ವರ್ಷಾಚರಣೆ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೊರಾಡುವುದರ ಮೂಲಕ ಇಡೀ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಇಟ್ಟಂತಹ ಐತಿಹಾಸಿಕ ಸನ್ನಿವೇಶವಾಗಿದೆ.
ಕಿತ್ತೂರು ಸ್ವಾಭಿಮಾನದ ನಾಡಾಗಿದೆ. ದೇಶ ಸ್ವತಂತ್ರ್ಯಗೊಂಡು 75 ವರ್ಷಗಳು ಕಳೆದಿವೆ. ಆದರೆ ದೇಶಕ್ಕೆ ಅಂಟಿರುವ ಗುಲಾಮಿತನದಿಂದ ಹೊರ ಬರಬೇಕಾಗಿದೆ. ಈ ಕುರಿತು ಜಾಗೃತಿ ಹೊಂದುವುದರ ಮೂಲಕ ಬದಲಾವಣೆಯನ್ನು ತರುವಂತೆ ತಿಳಿಸಿದ ಅವರು, ಉತ್ಸವವನ್ನು ಕೇವಲ ಮನರಂಜನೆಗೆ ಸಿಮಿತಗೊಳಿಸಿದೇ ನಮ್ಮ ಜವಾಬ್ದಾರಿಗಳನ್ನು ಅರಿತು ಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಗಂಡು ಮೆಟ್ಟಿನ ನಾಡಾಗಿದ್ದು, ಇದು ಯಾರಿಗೂ ಬಗ್ಗದ ನಾಡು. ನಮ್ಮಲ್ಲಿ ಸ್ವಾಭಿಮಾನದ ರಕ್ತ ಹರಿಯುತ್ತದೆ.
ಕಿತ್ತೂರು ಕೊಟೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಕಾರ್ಯವನ್ನು ಕೆಲವೇ ದಿನಗಳಲ್ಲಿ ಕೃತಿ ಮೂಲಕ ಮಾಡಿ ತೋರಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಡಿ ರಾಣಿ ಚನ್ನಮ್ಮನ ಸಾಹಸ ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ. ಸ್ವಾತಂತ್ರ್ಯ ಹೋರಾಟದಲ್ಲಿ ರಾಣಿ ಚನ್ನಮ್ಮ ಮುಂಚೂಣಿಯಲ್ಲಿದ್ದರು. ಕಿತ್ತೂರಿನ ಕೋಟೆಯಲ್ಲಿ ಸ್ವಾತಂತ್ರ್ಯ ಹೊರಾಟದ ಕುರುಹುಗಳನ್ನು ನಾವು ಕಾಣಬಹುದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು.
ಶಾಸಕರಾದ ಆಸೀಫ್ ಸೇಠ್,
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೆಶಕ ಕೆ.ಎಚ್.ಚನ್ನೂರ, ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಪ್ರವಾಸೊದ್ಯಮ ಇಲಾಖೆ ಉಪನಿರ್ದೆಶಕಿ ಸೌಮ್ಯ ಬಾಪಟ ಇತರರಿದ್ದರು. ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಸ್ವಾಗತಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ:
ಇದೇ ವೇಳೆ ಸಂತೋಷ ಹಾನಗಲ್ ಸಂಪಾದಕತ್ವದಲ್ಲಿ ರಚಿತ ದಿ ಪೋರ್ಟೆಸ್ ಆಫ್ ಪಿಯರಲೆಸ್ಸ್ ಡ್ರೀಮ್ಸ ಸ್ಮರಣ ಸಂಚಿಕೆಯನ್ನು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು ಬಿಡುಗಡೆ ಮಾಡಿದರು.
ರಾಣಿ ಚನ್ನಮ್ಮನ ವಿಜಯೊತ್ಸವದ 200 ನೇ ವರ್ಷದ ಸ್ಮರಣಾರ್ಥವಾಗಿ ಕಿತ್ತೂರು ರಾಣಿ ಚನ್ನಮ್ಮನ ಅಂಚೆ ಚೀಟಿ, ಶಾಶ್ವತ ಅಂಚೆ ರದ್ಧತಿ ಹಾಗೂ ವಿವಿಧ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.