ಜೊಯಿಡಾ: ಭಾರತೀಯ ಸೈನಿಕರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹೋರಾಟ ಮಾಡಿ ನಮಗೆ ವಿಜಯ ತಂದು ಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟದ ನಂತರ ಬಾಹ್ಯ ಶಕ್ತಿಯನ್ನು ಮಣಿಸಿ ನಮ್ಮ ದೇಶವನ್ನು ಸಂರಕ್ಷಿಸುವ ಕೆಲಸವನ್ನು ನಮ್ಮ ಸೈನಿಕರು ಮಾಡಿದ್ದಾರೆ. ಇಂಥಹ ಸೈನಿಕರನ್ನು ಸ್ಮರಿಸಬೇಕಾದುದು ನಮ್ಮ ಕರ್ತವ್ಯ ಎಂದು ಜೊಯಿಡಾ ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ ಹೇಳಿದರು.
ಬುಧವಾರ ಸುಪಾ ನಿವೃತ್ತ ಸೈನಿಕರ ಸಂಘದಿಂದ ಜೊಯಿಡಾ ಸರ್ಕಾರಿ ಡಿಪ್ಲೊಮಾ ಕಾಲೇಜ್ನಲ್ಲಿ ಹಮ್ಮಿಕೊಂಡಿದ್ದ 25ನೇ ಕಾರ್ಗಿಲ್ ವಿಜಯ ದಿವಸದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಪಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ ಮಾತನಾಡಿ, ಕಾರ್ಗಿಲ್ ಯುದ್ದ 84 ದಿನ ನಡೆದು, ಈ ಯುದ್ದದಲ್ಲಿ 527 ಸೈನಿಕರು ಹುತಾತ್ಮರಾಗಿದ್ದಾರೆ. 4 ಸಾವಿರಕ್ಕಿಂತ ಹೆಚ್ಚಿನ ಪಾಕಿಸ್ತಾನದ ಸೈನಿಕರು ಹಾಗೂ ಉಗ್ರರನ್ನು ನಮ್ಮ ಸೈನಿಕರು ಕೊಂದು ಹಾಕಿದ್ದಾರೆ. ಇಲ್ಲಿರುವ ಬಹುತೇಕ ನಿವೃತ್ತ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದೇವು ಎಂದರು.
ಡಿಪ್ಲೊಮಾ ಕಾಲೇಜ್ ಪ್ರಾಚಾರ್ಯ ಮೋಹನ ಕೆ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ 25ನೇ ವರ್ಷದ ಕಾರ್ಯಕ್ರಮ ಮಾಡುತ್ತಿರುವುದು ಖುಷಿಯ ವಿಚಾರ. ಸೇನೆಗೆ ಸೇರಬೇಕು ಎಂದರೆ ಬರೀ ಸೈನಿಕರಾಗಿ ಅಷ್ಟೇ ಅಲ್ಲ. ನಮ್ಮ ತಾಂತ್ರಿಕ ವಿಭಾಗದ ಕಾರ್ಯವೂ ಸಾಕಷ್ಟು ಇದೆ ಎಂದರು.
ಸರ್ಕಾರಿ ಪದವಿ ಕಾಲೇಜ್ ಪ್ರಾಚಾರ್ಯು ಅಂಜಲಿ ರಾಣೆ ಮಾತನಾಡಿ, ಈ ಹಿಂದೆ 90ಕ್ಕೂ ಹೆಚ್ಚು ಸೈನಿಕರು ಜೊಯಿಡಾ ತಾಲೂಕಿನಲ್ಲಿದ್ದರು. ಆದರೆ, ಈಗ ಆ ಸಂಖ್ಯೆ ಕಡಿಮೆಯಾಗಿದೆ ಎಂದರು.
ಬಿಜಿವಿಎಸ್ ಕಾಲೇಜ್ ಪ್ರಾಚಾರ್ಯ ಮಂಜುನಾಥ ಶೆಟ್ಟಿ, ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಪಟಗಾರ, ಮುರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಗಿರೀಶಕುಮಾರ ಹಿರೇಮಠ ಇದ್ದರು. ಅಶ್ವಿನಿ ಸಿ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಜಿ ವಂದಿಸಿದರು.