ಮದ್ದೂರು: ನಾಲಾ ಬದಿಯ ಜಮೀನುಗಳಲ್ಲಿ ಬೇಸಾಯ ಮಾಡುವ ರೈತರು ತಮ್ಮ ಜಮೀನಿನ ತ್ಯಾಜ್ಯಗಳನ್ನು ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಮುಖ್ಯ ಮತ್ತು ಸೀಳು ನಾಲೆಗಳಲ್ಲಿ, ಕೆರೆಯ ಸಂಪರ್ಕ ನಾಲೆಗಳಲ್ಲಿ ಹಾಕುತ್ತಿರುವುದು ಸರಿಯಲ್ಲ ಎಂದು ರೈತ ಮುಖಂಡ ಸೊ.ಸಿ.ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ಇದರ ಪರಿಣಾಮ ನಾಲೆ ಏರಿ ಒಡೆಯುವುದು, ನೀರು ಹರಿಯುವಿಕೆ ತಗ್ಗುತ್ತದೆ, ನಾಲೆಗಳ ರಿಪೇರಿಗೆ ಎಂದು ಅಧಿಕಾರಿಗಳು ಕೆಲ ಸಂದರ್ಭದಲ್ಲಿ ನೀರು ನಿಲ್ಲಿಸುವುದರಿಂದ ಬೇಸಿಗೆಯ ಬೆಳೆಗಳಿಗೆ ನೀರುಣಿಸುವುದು ಕಷ್ಟವಾಗುತ್ತದೆ ಹಾಗೂ ಕೊನೆ ಭಾಗಕ್ಕೆ ನೀರು ತಲುಪುವುದು ವಿಳಂಬವಾಗಿ ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ರೈತರು ಇದನ್ನರಿತು ನಾಲೆಯ ಪಕ್ಕ ಹಾಗೂ ನಾಲೆಗೆ ಯಾವುದೇ ರೀತಿಯ ವಸ್ತುಗಳನ್ನು ಹಾಕಬಾರದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಬಹುತೇಕ ನಾಲೆಗಳ ಮೇಲೆ ಕಾವೇರಿ ನೀರಾವರಿ ನಿಗಮದ ಅಭಿಯಂತರರು ಹಾಗೂ ಸಂಬಂಧಪಟ್ಟವರು ಬಂದು ನಾಲೆಗಳನ್ನು ವೀಕ್ಷಣೆ ಮಾಡಿ ನಾಲೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿ, ನೀರು ಸಮರ್ಪಕವಾಗಿ ಮುಂದಕ್ಕೆ ಹೋಗುವಂತೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ನಾಲೆಗಳಲ್ಲಿ ಹೂಳು, ಗಿಡಗಂಟಿಗಳು ತೆರುವುಗೊಳಿಸಿ ಕೊನೆ ಭಾಗದವರಗೆ ನೀರು ಸರಾಗವಾಗಿ ಹರಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರೈತ ಸಂಘದ ವತಿಯಿಂದ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.