ೈತರಿಲ್ಲದ ರಾಷ್ಟದ ಊಹೆಯೂ ಕಷ್ಟ

ಮಂಡ್ಯ: ರೈತರಿಲ್ಲದ ರಾಷ್ಟ್ರ ಕಲ್ಪನೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು 15ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಂ.ಬಿ.ಸುರೇಶ ಅಭಿಪ್ರಾಯಪಟ್ಟರು.

ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ರೈತರ ಕುಟುಂಬದಲ್ಲಿ ಶೈಕ್ಷಣಿಕ ಮಟ್ಟ ಹೆಚ್ಚಿದಂತೆ ಅವರು ಕೃಷಿಯಿಂದ ದೂರವಾಗುತ್ತಿದ್ದಾರೆ. ಮಾರುಕಟ್ಟೆಗಳ ಸಮಸ್ಯೆ, ಪ್ರಾಕೃತಿಕ ವೈಪರೀತ್ಯ, ನೀರಿನ ಅಭಾವ, ಕೃಷಿ ಮಾಹಿತಿ ಕೊರತೆ, ಸಾಲ ಮರುಪಾವತಿಗೆ ಬ್ಯಾಂಕ್‌ಗಳಿಂದ ಒತ್ತಡ, ಬಹುರಾಷ್ಟ್ರೀಯ ಕಂಪನಿ ವಂಚನೆಗಳು ರೈತರಿಗೆ ದಿಕ್ಕು ಕಾಣದಂತೆ ಮಾಡಿವೆ ಎಂದರು.

ಬೆಲೆ ಕುಸಿತ, ದಲ್ಲಾಳಿಗಳ ಹಾವಳಿ, ಬೆಳೆ ನಾಶ, ಉತ್ತಮ ಬಿತ್ತನೆ ಬೀಜಗಳ ಕೊರತೆ, ಲವತ್ತಾದ ಭೂಮಿಗಳ ಒತ್ತುವರಿ, ನಗರೀಕರಣದಿಂದಾಗಿ ಗ್ರಾಮೀಣ ಜನರು ನಗರದತ್ತ ಗುಳೆ ಹೋಗುತ್ತಿದ್ದಾರೆ. ಶಿಕ್ಷಿತರು ಕೃಷಿಯಿಂದ ವಿಮುಖರಾಗದೆ, ರೈತರ ಬಗೆಗೆ ಬಂದಿರುವ ಸಾಹಿತ್ಯ ಚಿಂತನೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡಬೇಕು. ಮಹಾ ಋಷಿಗಳ ತಪಸ್ಸಿಗಿಂತ ನೇಗಿಲ ಯೋಗಿಯ ತಪಸ್ಸು ಕೀಳಲ್ಲ ಎಂಬುದು ಕುವೆಂಪು ಅವರ ಅಭಿಮತವಾಗಿತ್ತು ಎಂದರು.

ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ಇದರಲ್ಲಿ ಕಡುಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಬಹುತೇಕರು ವ್ಯವಸಾಯಕ್ಕೆ ಬಳಸದೆ ಮದುವೆ, ಆರೋಗ್ಯ, ಹಬ್ಬಗಳಿಗೆ ವ್ಯಯಿಸುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ಬಡವಾಗುತ್ತಿವೆ. ಕಾವೇರಿ ಜಲವಿವಾದ ತಾರ್ಕಿಕ ಅಂತ್ಯ ಮುಟ್ಟಿಲ್ಲದಿರುವುದು ವಿಷಾದದ ಸಂಗತಿ. ರೈತರು ರಸಗೊಬ್ಬರ ಕೊಳ್ಳುವ ಸ್ಥಿತಿಯಲ್ಲಿಲ್ಲ. ಸಕ್ಕರೆ ಕಾರ್ಖಾನೆಗಳು ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿವೆ. ಸಣ್ಣ ರೈತರು ನೆಲೆ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಿ ಸಮುದ್ರ ಸೇರುವ ನೀರನ್ನು ಕೆರೆ ಹೂಳೆತ್ತಿಸಿ ಅವುಗಳಿಗೆ ತುಂಬಿಸಿದರೆ ಬತ್ತಿಹೋಗುತ್ತಿರುವ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.

ಮಹಿಳಾ ಸಾಹಿತಿಗಳು ಸೃಜನಶೀಲ ಮತ್ತು ಕೌಟುಂಬಿಕ, ಕಥೆ, ಕಾದಂಬರಿಗಳು, ನಾಟಕ, ವಚನ ಸಂಕಲನಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕದ ಹಿರಿಮೆ ಹೆಚ್ಚಿಸಿದ್ದಾರೆ. ವಾಣಿ ಕಾವ್ಯಾನಾಮದ ಬಿ.ಎನ್.ಸುಬ್ಬಮ್ಮ, ತ್ರಿವೇಣಿ ಕಾವ್ಯನಾಮದ ಅನುಸೂಯ ಬರೆದ ಕೃತಿಗಳು ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ. ಜಗ್ಗು ಪ್ರಿಯದರ್ಶಿನಿ, ಸುಶೀಲಾ ಹೊನ್ನೇಗೌಡ, ಜಯಲಕ್ಷ್ಮೀ ಸೀತಾಪುರ, ಪದ್ಮಾಶೇಖರ, ನಗುವನಹಳ್ಳಿ ಪಿ.ರತ್ನ, ಮಂಡ್ಯದ ಪದ್ಮ ಕೆಂಪೇಗೌಡ, ಲತಾ ರಾಜಶೇಖರ, ಸಂತೆಕಸಲಗೆರೆಯ ಡಿ.ಎಲ್.ವಿಜಯಕುಮಾರಿ, ಡಾ.ಶುಭಶ್ರೀ ಪ್ರಸಾದ್ ಮುಂತಾದ ಮಹಿಳಾ ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಸಾಹಿತ್ಯ ಕ್ಷೇತ್ರ ಶ್ರೀಮಂತ ಪರಂಪರೆ ಹೊಂದಿದ್ದು, ಕನ್ನಡ ಸಾಹಿತ್ಯ ಪತಾಕೆಯನ್ನು ಬಹುದೊಡ್ಡ ಮಟ್ಟದಲ್ಲಿ ಉತ್ತುಂಗಕ್ಕೇರಿಸಿದ ಎಂ.ಎಲ್. ಶ್ರೀಕಂಠೇಶಗೌಡ, ಬಿ.ಎಂ.ಶ್ರೀಕಂಠಯ್ಯ, ಪು.ತಿ.ನ., ಕೆ.ಎಸ್.ನರಸಿಂಹಸ್ವಾಮಿ, ಎಸ್.ನಾರಾಯಣಶೆಟ್ಟರು, ಎ.ಎನ್.ಮೂರ್ತಿರಾಯ, ಬೆಸಗರಹಳ್ಳಿ ರಾಮಣ್ಣ, ಜೀಶಂಪ, ಎಚ್.ಎಲ್.ನಾಗೇಗೌಡ, ನಾಗತಿಹಳ್ಳಿ ಚಂದ್ರಶೇಖರ ಮುಂತಾದವರು ಕನ್ನಡ ಸಾಹಿತ್ಯ ಕ್ಷೇತ್ರದ ಮಹತ್ವವನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಸಿದರು.

ಪುಸ್ತಕ ಬಿಡುಗಡೆ
ಸಾಹಿತಿ ಕೊತ್ತತ್ತಿ ರಾಜು ಅವರ ‘ಅವ್ವನ ಸವೆದ ಚಪ್ಪಲಿಗಳು ಮತ್ತು ರಾಜಮಾರ್ಗ’ ಪುಸ್ತಕಗಳನ್ನು ಲಯನ್ ಸಂಸ್ಥೆಯ ಜಿಲ್ಲಾ ಮಾಜಿ ರಾಜ್ಯಪಾಲ ಕೆ.ದೇವೇಗೌಡ ಬಿಡುಗಡೆಗೊಳಿಸಿ ಶುಭಹಾರೈಸಿದರು.

Leave a Reply

Your email address will not be published. Required fields are marked *