More

  ಹೈಕಮಾಂಡ್ ಗುರುತಿಸಿದ ಅಭ್ಯರ್ಥಿ ಪರ ಕೆಲಸ ಅನಿವಾರ್ಯ

  ಸಾಗರ: ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರು ಬಿಜೆಪಿಗೆ ಮತ ನೀಡಿದ್ದಾರೆಯೇ ಹೊರತು ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ಮುಖ ನೋಡಿ ಮತ ಹಾಕಿಲ್ಲ. ಕಾರ್ಯಕರ್ತರು ಯಾರೂ ಧೃತಿಗೆಡುವ ಅಗತ್ಯವಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷವನ್ನು ಮುನ್ನಡೆಸೋಣ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

  ನಗರದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದ ಜತೆ ಸದಾ ಇರುವ, ಕಾರ್ಯಕರ್ತರು ಆಯ್ಕೆ ಮಾಡುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹೈಕಮಾಂಡ್ ಟಿಕೆಟ್ ನೀಡಿದ ಅಭ್ಯರ್ಥಿ ಪರವಾಗಿ ನಾವು ಕೆಲಸ ಮಾಡಿದ್ದರೂ ಸೋಲಾಗಿದೆ ಎಂದರು.
  ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು. ಆದರೆ ಮುಂದಿನ ಜಿಪಂ, ತಾಪಂ ಹಾಗೂ ನಗರಸಭೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಪಕ್ಷದ ಕಾರ್ಯಕರ್ತರು ಹಾಗೂ ನನಗೆ ಇದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹರತಾಳು ಹಾಲಪ್ಪ ಹೇಳುತ್ತಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳ ಗಲಾಟೆ ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಹಾಲಪ್ಪನಂತೆ ಎಂಡಿಎಫ್ ಸಭೆಗೆ ನುಗ್ಗಿ ಅಮಾಯಕರ ಮೇಲೆ ಹಲ್ಲೆ ಮಾಡಿಸುವಷ್ಟು ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಟಾಂಗ್ ನೀಡಿದರು.
  ಒಂದು ವರ್ಷಕ್ಕೂ ಮೊದಲು ಐಎನ್‌ಡಿಐಎ ರಚನೆಯಾಗಿದ್ದರೆ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು. ಇದೀಗ ದೇಶದಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಕಡಿಮೆಯಾಗಿದೆ. ಕೇವಲ 240 ಸ್ಥಾನ ಮಾತ್ರ ಬಿಜೆಪಿಗೆ ಬಂದಿರುವುದು ಇದಕ್ಕೆ ಉದಾಹರಣೆ ಎಂದರು.
  ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ನೀಡಿದ್ದು ತಪ್ಪು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟೇ ಕಷ್ಟಪಟ್ಟರೂ ಅಭ್ಯರ್ಥಿ ಪರವಾಗಿ ಹೆಚ್ಚು ಮತ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಯಕರ್ತರೇ ಅಭ್ಯರ್ಥಿಯಾಗಿದ್ದರೆ ಹೆಚ್ಚು ಸೂಕ್ತವಿತ್ತು. ಕಾರ್ಯಕರ್ತರು ಬಯಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಲೋಕಸಭಾ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಟಿಕೆಟ್ ನೀಡಿದ್ದು ಸೋಲಿಗೆ ಕಾರಣವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಅಭಿಪ್ರಾಯಪಟ್ಟರು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಪಕ್ಷ ಜೀವಂತವಾಗಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕಾರ್ಯಕರ್ತರ ಮಾತಿಗೆ ಮನ್ನಣೆ ಕೊಡುವಂತೆ ಆಗಬೇಕು ಎಂದು ಹೇಳಿದರು.
  ಸೋಲಿನ ನೈತಿಕ ಹೊಣೆಯನ್ನು ಮಧು ಬಂಗಾರಪ್ಪ ಹೊರಬೇಕು ಎಂದು ಕೆಲವರು ಎಂದು ಒತ್ತಾಯಿಸಿದರೆ, ಇನ್ನೂ ಕೆಲವರು ಬಂಗಾರಪ್ಪ ಅವರ ಕುಟುಂಬದ ವೈಯಕ್ತಿಕ ಜಗಳ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದು ಅಭಿಪ್ರಾಯಪಟ್ಟರು.
  ನಗರಸಭಾ ಸದಸ್ಯ ಸೈಯದ್ ಜಾಕೀರ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಅಶೋಕ್, ಎಚ್.ಎಂ.ರವಿಕುಮಾರ್ , ಕೆ.ಹೊಳೆಯಪ್ಪ, ಬಿ.ಎ.ಇಂದೂಧರ ಗೌಡ, ಪ್ರಭಾವತಿ ಚಂದ್ರಕಾಂತ್, ಮಕ್ಬೂಲ್ ಅಹ್ಮದ್, ಚಂದ್ರಮೌಳಿ, ಉಷಾ, ಚೇತನರಾಜ್ ಕಣ್ಣೂರು, ಮೈಕಲ್ ಡಿಸೋಜ ಇತರರಿದ್ದರು.

  See also  'ಪ್ರಜಾಪ್ರಭುತ್ವ, ಸಂವಿಧಾನ ಉಳಿಸಿ...': ಕಾಂಗ್ರೆಸ್​ನಿಂದ ದೇಶಾದ್ಯಂತ ಶುರುವಾಗಲಿದೆ ಪ್ರತಿಭಟನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts