ಗಾಂಧಿ ರಂಗಪಯಣ ಸಂದರ್ಶನಕ್ಕೆಐಟಿ-ಬಿಟಿ ಉದ್ಯೋಗಿಗಳು

ಹಾವೇರಿ: ಮಹಾತ್ಮಾಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ನ. 21ರಿಂದ ಮಾರ್ಚ್ 31ರವರೆಗೆ ಹಮ್ಮಿಕೊಂಡಿರುವ ಮಹಾತ್ಮಾಗಾಂಧೀಜಿ ಅವರ ಕುರಿತ ರಂಗ ರೂಪಕದಲ್ಲಿ ಅಭಿನಯಿಸಲು ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಅಧಿಕ ಕಲಾವಿದರು ಸಂದರ್ಶನಕ್ಕೆ ಹಾಜರಾಗಿದ್ದರು. ಐಟಿ, ಬಿಟಿ ಉದ್ಯೋಗಿಗಳೂ ಸಂದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ಗಾಂಧಿ ರೂಪಕ ಸಿದ್ಧವಾಗಿದೆ. ಈ ರೂಪಕ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಗಾಂಧೀಜಿಯವರ ಜೀವನ ಸಂದೇಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಬೋಳೂವಾರು ಮಹಮದ್ ಕುಂಞ ಅವರ ಬಾಪುಗಾಂಧಿ , ಗಾಂಧಿಬಾಪು ಆದ ಕಥೆ ಕಿರು ಕಾದಂಬರಿಯನ್ನು ರಂಗಕರ್ವಿು ಡಾ. ಶ್ರೀಪಾದ್ ಭಟ್ ಅವರು ರಂಗರೂಪಕ್ಕಿಳಿಸಿ ನಿರ್ದೇಶನ ಮಾಡುತ್ತಿದ್ದಾರೆ. ಒಂದು ಗಂಟೆ ಪ್ರದರ್ಶನ ಅವಧಿಯ ಈ ರೂಪಕದಲ್ಲಿ ಅಭಿನಯಿಸಲು ಕಲಾವಿದರ ಆಯ್ಕೆ ಪ್ರಕ್ರಿಯೆ ಶುಕ್ರವಾರ ವಾರ್ತಾ ಭವನದಲ್ಲಿ ಜರುಗಿತು.

ಗಾಂಧಿ 150 ರಂಗಪಯಣದ ನಿರ್ದೇಶಕ ಶ್ರೀಪಾದ್ ಭಟ್ ಅವರ ನೇತೃತ್ವದಲ್ಲಿ ಜರುಗಿದ ಕಲಾವಿದರ ಆಯ್ಕೆ ತಂಡದ ಎದುರು ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಕಲಾವಿದರು ರಂಗಾಯಣ ಹಾಗೂ ಸಮುದಾಯ ಸೇರಿದಂತೆ ವಿವಿಧ ರಂಗ ಸಂಘಟನೆಯ ಕಲಾವಿದರು ರಂಗ ಶಿಕ್ಷಣ ಪಡೆದ ಪದವೀಧರರು ಸೇರಿ ನೂರಕ್ಕೂ ಹೆಚ್ಚು ಕಲಾವಿದರು ಸಂದರ್ಶನದಲ್ಲಿ ಭಾಗವಹಿಸಿದ್ದರು.

ವಿಶೇಷವಾಗಿ ಹರಿಯಾಣ ಮೂಲದ ದೆಹಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುಲ್​ಷನ್ ಹಾಗೂ ಬೆಂಗಳೂರು, ಮೈಸೂರು ಹಾಗೂ ದೆಹಲಿಯಲ್ಲಿ ಪ್ರತಿಷ್ಠಿತ ವಿಪ್ರೋ, ಇನ್ಪೋಸಿಸ್ ಹಾಗೂ ವಿವಿಧ ಐಟಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳು ಅಭಿನಯಿಸಲು ಆಸಕ್ತಿ ತೋರಿ ಸಂದರ್ಶನಕ್ಕೆ ಹಾಜರಾಗಿದ್ದರು.

ಸಂದರ್ಶನದ ವೇಳೆ ಐಟಿ ಉದ್ಯೋಗಿಗಳಿಗೆ ಆಯ್ಕೆಯಾದವರು ತರಬೇತಿ ಸೇರಿ ಐದು ತಿಂಗಳವರೆಗೆ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ನೀವು ಆಯ್ಕೆಯಾದರೆ ಐದು ತಿಂಗಳವರೆಗೆ ನಿಮಗೆ ರಜೆ ಸಿಗುತ್ತದೆಯೇ ಎಂಬ ಪ್ರಶ್ನೆಗೆ ನೀಡಿದ ಉತ್ತರ ಐಟಿಗಳ ರಂಗಾಸಕ್ತಿಯೂ ಕಂಡುಬಂತು. ನಮಗೆ ಬದಲಾವಣೆ ಬೇಕಾಗಿದೆ, ಇಲ್ಲಿ ಆಯ್ಕೆಯಾದರೆ ಕೆಲಸ ತೊರೆಯಲು ಸಿದ್ಧ. ರಂಗ ಕ್ಷೇತ್ರದಲ್ಲಿ ನಾವು ಮುಂದುವರಿಯಲು ಬದ್ಧರಾಗಿದ್ದೇವೆ ಎಂದು ಐಟಿಗಳು ಉತ್ತರಿಸಿದರು.

ನ. 1ರಿಂದ 20ರವರೆಗೆ ಹಾವೇರಿಯಲ್ಲಿ ತರಬೇತಿ ಜರುಗಲಿದೆ. 21ರಿಂದ ಗಾಂಧಿ ಪಯಣದ ತಿರುಗಾಟ ಆರಂಭಗೊಳ್ಳಲಿದೆ. ಒಟ್ಟು 32 ಕಲಾವಿದರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.