ಮುಂಡರಗಿ: ತಾಲೂಕಿನ ಡೋಣಿ ಗ್ರಾಮದಲ್ಲಿ ಅಕಾಲಿಕವಾಗಿ ಮೃತಪಟ್ಟ ಆಕಳಿಗೆ 40 ಸಾವಿರ ರೂ. ವಿಮಾ ಪರಿಹಾರ ಮೊತ್ತದ ಚೆಕ್ ಅನ್ನು ಆಕಳು ಮಾಲೀಕರಾದ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಂಘದ ಸದಸ್ಯೆ ಲಕ್ಷ್ಮಿ ಗೋಣಿಸ್ವಾಮಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಗುರುವಾರ ವಿತರಿಸಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಮಾತನಾಡಿ, ಹಸುಗಳಿಗೆ ಜೀವ ವಿಮೆ ಮಾಡಿಸಬೇಕು. ಒಕ್ಕೂಟ ಹಾಗೂ ಕೆಸಿಸಿ ಬ್ಯಾಂಕ್ ಹಾಗೂ ಇತರೆ ಇಲಾಖೆಗಳಿಂದ ಹಾಲು ಉತ್ಪಾದಕರಿಗೆ ಹಸು ಖರೀದಿಸಲು ಹೆಚ್ಚು ಹಣದ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷೆ ಪ್ರೇಮ ಹರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶೈಲಾ ನೀಲಪ್ಪಗೌಡ್ರ, ಸಂಘದ ನಿರ್ದೇಶಕರಾದ ನೀಲವ್ವ ಬನ್ನಿಕೊಪ್ಪ, ಚಂದ್ರಾವತಿ ಹರ್ತಿ, ಕಸ್ತೂರಿ ಅಜಗೊಂಡ, ಕವಿತಾ ಮಠಹಳ್ಳಿಕೆರಿ, ನೀಲವ್ವ ವಡ್ಡರ, ಉಮಾಶ್ರೀ ಪಾಟೀಲ ಇತರರು ಇದ್ದರು.