ಇಸ್ರೋ ಮತ್ತೊಂದು ಸಾಧನೆ

ಶ್ರೀಹರಿಕೋಟ: ಜಿಸ್ಯಾಟ್ -6ಎ ಸಂವಹನ ಉಪಗ್ರಹವನ್ನು ಜಿಎಸ್​ಎಲ್​ವಿ ಎಫ್ 08 ರಾಕೆಟ್ ಮೂಲಕ ಇಸ್ರೋ ಗುರುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಚ್ ಪ್ಯಾಡ್​ನಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಅತ್ಯಾಧುನಿಕ ಮಾದರಿಯ ಎಸ್-ಬ್ಯಾಂಡ್ ಸಂವಹನ ಉಪಗ್ರಹ ಜಿಸ್ಯಾಟ್- 6ಎ 2,140 ಕೆ.ಜಿ. ಭಾರ ಹೊಂದಿದೆ. ಈ ಉಪಗ್ರಹ ಭಾರತದ ಸಂವಹನ ವ್ಯವಸ್ಥೆಯನ್ನು ಬಲಪಡಿಸಲಿದೆ. ಈ ಮೊದಲು ಉಡಾವಣೆಯಾಗಿರುವ ಸಂವಹನ ಉಪಗ್ರಹ ಜಿಸ್ಯಾಟ್- 6 ಮಾದರಿಯಲ್ಲೆ ಇದು ಬಲಿಷ್ಠ ಎಸ್ ಬ್ಯಾಂಡ್ ಬೆಂಬಲ ಹೊಂದಿದೆ. ಜಿಎಸ್ಯಾಟ್- 6ಎ ಉಪಗ್ರಹದ ಜೀವಿತಾವಧಿ 10 ವರ್ಷಗಳಾಗಿವೆ. ಭವಿಷ್ಯದಲ್ಲಿ ಉಪಗ್ರಹ ಆಧಾರಿತ ಮೊಬೈಲ್ ಸಂವಹನ ಯೋಜನೆಗಳಿಗೆ ಮತ್ತು ಅಪ್ಲಿಕೇಷನ್​ಗಳಿಗೆ ಬೆಂಬಲ ನೀಡುವ 6ಎಂ ಎಸ್- ಬ್ಯಾಂಡ್ ಆಧಾರಿತ ಜಿಸ್ಯಾಟ್- 6ಎ ಉಪಗ್ರಹ, ನೆಟ್​ವರ್ಕ್ ನಿರ್ವಹಣೆಯ ತಂತ್ರಜ್ಞಾನ ಹೊಂದಿದೆ. ಉಪಗ್ರಹವನ್ನು ಕಕ್ಷೆಗೆ ಸೇರಿಸಲು 17 ನಿಮಿಷ ಮತ್ತು 46.50 ಸೆ. ಸಮಯ ತೆಗೆದುಕೊಂಡಿದೆ. -ಏಜೆನ್ಸೀಸ್

ಮೂರು ಪಟ್ಟು ದೊಡ್ಡ ಆಂಟೆನಾ

ಜಿಸ್ಯಾಟ್- 6ಎ ಯೋಜನೆಯಲ್ಲಿ ವಿಶೇಷವಾಗಿ ಬಳಸಿರುವ ಆರು ಮೀಟರ್ ಅಗಲ ಹೊಂದಿರುವ ಇಸ್ರೋದ ಆಂಟೆನಾ, ನಿಗದಿತ ಕಕ್ಷೆ ತಲುಪಿದ ಬಳಿಕ ಅಲ್ಲಿ ಛತ್ರಿಯಂತೆ ತೆರೆದುಕೊಳ್ಳುತ್ತದೆ. ಇಸ್ರೋ ಈವರೆಗೆ ಬಳಸಿರುವ ಆಂಟೆನಾಗಳಿಗೆ ಹೋಲಿಸಿದರೆ ಇದು ಮೂರು ಪಟ್ಟು ದೊಡ್ಡದು. ಮೊಬೈಲ್ ಸಂವಹನದಲ್ಲಿ ವಿಶೇಷ ಪಾತ್ರ ವಹಿಸಲಿರುವ ಈ ಆಂಟೆನಾ, ಭೂಮಿಯಿಂದ ಯಾವುದೇ ಸ್ಥಳದಿಂದ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಅದರ ಜತೆಗೆ ಮಿಲಿಟರಿ ಉದ್ದೇಶಕ್ಕೂ ಬಳಕೆಯಾಗುವಂತೆ ಅದನ್ನು ವಿನ್ಯಾಸ ಮಾಡಲಾಗಿದೆ.

 

ಎಸ್-ಬ್ಯಾಂಡ್​ನ ಬಳಕೆ ಎಲ್ಲಿ?

ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಾಂತರ ಹೊಂದಿರುವ ಎಸ್-ಬ್ಯಾಂಡ್, 2ರಿಂದ 4 ಗಿಗಾಹರ್ಟ್ಸ್ ಫ್ರೀಕ್ವೆನ್ಸಿ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 4ಜಿ ಮೊಬೈಲ್ ಇಂಟರ್​ನೆಟ್​ನಲ್ಲಿ 2.5 ಜಿ.ಹರ್ಟ್ಸ್ ಬ್ಯಾಂಡ್ ಬಳಕೆಯಾಗುತ್ತಿದೆ. ಮುಂದೆ 5ಜಿ, 6ಜಿ ತಂತ್ರಜ್ಞಾನ ಬಂದಾಗಲೂ ಎಸ್- ಬ್ಯಾಂಡ್ ಸ್ಪೆಕ್ಟ್ರಂ ಅದಕ್ಕೆ ಸಮರ್ಥ ಬೆಂಬಲ ನೀಡಲಿದೆ. ಅತ್ಯಾಧುನಿಕ ಸಂವಹನದ ಜತೆಗೆ ಹವಾಮಾನ ರಡಾರ್​ಗಳು, ಹಡಗುಗಳ ರಡಾರ್ ಸಹಿತ ಸಂವಹನ ಉಪಗ್ರಹಗಳ ಮಧ್ಯೆ ಸಂಪರ್ಕಕ್ಕೂ ಎಸ್-ಬ್ಯಾಂಡ್ ಬೆಂಬಲವಿದೆ.

Leave a Reply

Your email address will not be published. Required fields are marked *