ಕಕ್ಷೆಗೆ ಸೇರಿದ ಜಿಸ್ಯಾಟ್-29

ಚೆನ್ನೈ: ಡಿಜಿಟಲ್ ಇಂಡಿಯಾ ಯೋಜನೆಗೆ ಬಲತುಂಬುವ ಉದ್ದೇಶದಿಂದ ಜಿಸ್ಯಾಟ್-29 ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ನೆಲೆಯಿಂದ ಜಿಎಸ್​ಎಲ್​ವಿ ಮಾರ್ಕ್ 3 ಉಡಾಹಕ ಮೂಲಕ ಜಿಸ್ಯಾಟ್ 29 ನಿಗದಿತ ಭೂಸ್ಥಿರ ಕಕ್ಷೆ ತಲುಪಿತು. ಉಡಾವಣೆಗೊಂಡ 17 ನಿಮಿಷಗಳಲ್ಲಿ ಜಿಸ್ಯಾಟ್ 29 ಉಪಗ್ರಹ ಯಶಸ್ವಿಯಾಗಿ ಕಕ್ಷೆ ತಲುಪಿತು.

ಇನ್ನೆರಡು ಉಪಗ್ರಹ ಸಿದ್ಧ

ಇಸ್ರೋದ ಉಪಗ್ರಹಗಳ ಪೈಕಿ ಜಿಸ್ಯಾಟ್ 29 ಅತ್ಯಾಧುನಿಕ ಹೈ ಥ್ರೋಪುಟ್ ಕಮ್ಯುನಿಕೇಷನ್ ಉಪಗ್ರಹ. ಇದೇ ಸರಣಿಯ ಜಿಸ್ಯಾಟ್ 19 ಉಪಗ್ರಹವನ್ನು ಈಗಾಗಲೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಜಿಸ್ಯಾಟ್ 11 ಉಪಗ್ರಹ ಡಿಸೆಂಬರ್​ನಲ್ಲಿ ಉಡಾವಣೆಗೊಳ್ಳಲಿದ್ದರೆ, ಜಿಸ್ಯಾಟ್ 20 ಹೊಸ ವರ್ಷದ ಮೊದಲ ಭಾಗದಲ್ಲಿ ನಭಕ್ಕೆ ಜಿಗಿಯಲಿದೆ.

ಹೊಸ ತಂತ್ರಜ್ಞಾನ

ಜಿಸ್ಯಾಟ್ 29 ಉಪಗ್ರಹದಲ್ಲಿ ಕ್ಯೂ ಮತ್ತು ವಿ ಬ್ಯಾಂಡ್​ಗಳನ್ನು ಅಳವಡಿಸಲಾಗಿದೆ. ಜತೆಗೆ ಆಪ್ಟಿಕಲ್ ಕಮ್ಯುನಿಕೇಷನ್ ಲಿಂಕ್ ಮೂಲಕ ಡೇಟಾ ವರ್ಗಾವಣೆ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದೆ.

10 ವರ್ಷ ಆಯಸ್ಸು

3,423 ಕೆ.ಜಿ. ಭಾರವಿರುವ ಜಿಸ್ಯಾಟ್ 29 ಉಪಗ್ರಹ ಅಂದಾಜು 10 ವರ್ಷ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 3 ಆಕ್ಸಿಸ್ ಬಾಡಿ ಸ್ಟಬಲೈಜ್ಡ ಮಲ್ಟಿಬೀಮ್ ಉಪಗ್ರಹವು ಕೆಎ/ಕೆಯು ಎಂಬ ಎರಡು ಹೈ ಥ್ರೋಪುಟ್ ಕಮ್ಯುನಿಕೇಷನ್ ಟ್ರಾನ್ಸ್​ಪಾಂಡರ್​ಗಳನ್ನು ಹೊಂದಿದೆ. ಇದರಿಂದಾಗಿ ಜಮ್ಮು- ಕಾಶ್ಮೀರ, ಈಶಾನ್ಯದ ಆಯಕಟ್ಟಿನ ಸ್ಥಳಗಳಲ್ಲೂ ಇಂಟರ್​ನೆಟ್, ಸಂವಹನ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ.