ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಸ್ತುತ ಇರುವ ಜಿಪಿಎಸ್ಗೆ ಪರ್ಯಾಯವಾಗಿ ಎನ್ಎವಿಐಸಿ (ನಾವಿಕ್) ಎಂಬ ಪರ್ಯಾಯ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ. ಇದರ ಮೂಲಕ ಜಿಪಿಎಸ್ಗಿಂತಲೂ ಅತ್ಯಂತ ನಿಖರ ಮತ್ತು ಸ್ಪಷ್ಟ ಚಿತ್ರ ಪಡೆಯಬಹುದಾಗಿದೆ. ಸದ್ಯ ಸ್ಮಾರ್ಟ್ಫೋನ್ಗಳ ಪ್ರೊಸೆಸರ್ಗಳಲ್ಲಿ ನಾವಿಕ್ ಸಂಯೋಜಿಸಲು ಇಸ್ರೊ ವಿಶ್ವದ ಅತೀ ದೊಡ್ಡ ಚಿಪ್ಸೆಟ್ ಕಂಪನಿಗಳಲ್ಲಿ ಒಂದಾದ ಕ್ವಾಲ್ಕಾಮ್ೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಕ್ವಾಲ್ಕಾಮ್ ಈಗಾಗಲೇ ಮೂರು ಪ್ರೊಸೆಸರ್ ಚಿಪ್ಗಳನ್ನು ಸಿದ್ಧಪಡಿಸಿದೆ. ಶೀಘ್ರದಲ್ಲೇ ಭಾರತೀಯರು ಹೊಸ ಮೊಬೈಲ್ಗಳಲ್ಲಿ ಈ ಚಿಪ್ನ ಸೌಲಭ್ಯಗಳನ್ನು ಪಡೆಯಲಿದ್ದಾರೆ. ನಾವಿಕ್ ಪ್ರೊಸೆಸರ್ನ್ನು ತಮ್ಮ ಮೊಬೈಲ್ಗಳಲ್ಲಿ ಅಳವಡಿಸುವುದಾಗಿ ಶಿಯೋಮಿ ಮತ್ತು ರಿಯಲ್ಮಿ ಕಂಪನಿಗಳು ಖಚಿತ ಪಡಿಸಿವೆ.
ಭಾರತೀಯ ಬಳಕೆದಾರರಿಗೆ ನಿಖರವಾದ ಸ್ಥಳ ಮತ್ತು ಮಾಹಿತಿ ಸೇವೆಯನ್ನು ನಾವಿಕ್ ಒದಗಿಸಲಿದೆ. ಇದಕ್ಕಾಗಿ ನಾವಿಕ್ 7 ಉಪಗ್ರಹಗಳನ್ನು ಹೊಂದಿದೆ. ಇದರಿಂದ ಎರಡು ರೀತಿಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದ್ದು, ಸ್ಟಾ್ಯಂಡರ್ಡ್ ಪೊಸಿಷನ್ ಸರ್ವಿಸಸ್ (ಎಸ್ಪಿಎಸ್) ಎಲ್ಲ ನಾಗರಿಕರ ಬಳಕೆಗೆ ಲಭ್ಯವಿರುತ್ತದೆ. ನಿರ್ಬಂಧಿತ ಸೇವೆಗಳು (ಆರ್ಎಸ್) ರಕ್ಷಣಾ ಮತ್ತು ಗುಪ್ತಚರ ಸಂಸ್ತೆಗಳ ಬಳಕೆಗೆ ಮಾತ್ರ ಲಭ್ಯವಿರುತ್ತದೆ. ನಾವಿಕ್ ಮೂಲಕ ಭಾರತ ಕೂಡ ಸ್ವಂತ ಉಪಗ್ರಹ ಆಧಾರಿತ ಸ್ಥಳ ಸೇವೆಗಳನ್ನು ಹೊಂದಿರುವ ಪಟ್ಟಿಗೆ ಸೇರ್ಪಡೆಯಾಗಲಿದೆ.
1999ರಲ್ಲಿ ಕಾರ್ಗಿಲ್ನಲ್ಲಿ ಪಾಕಿಸ್ತಾನ ನಿಯೋಜಿಸಿದ್ದ ಪಡೆಗಳನ್ನು ಪತ್ತೆಮಾಡಲು ಭಾರತ ಅಮೆರಿಕದ ಬಳಿ ಜಿಪಿಎಸ್ ಡೇಟಾ ನೀಡುವಂತೆ ಕೋರಿಕೊಂಡಿತ್ತು. ಆದರೆ ಈ ಮಾಹಿತಿ ನೀಡಲು ಅಂದು ಅಮೆರಿಕ ನಿರಾಕರಿಸಿತ್ತು. ಅಂದಿನಿಂದ ಭಾರತ ಸ್ಥಳೀಯ ಸೇವೆಗಳಿಗಾಗಿ ಸ್ವಂತ ಉಪಗ್ರಹ ವ್ಯವಸ್ಥೆ ಹೊಂದಲು ಕೆಲಸ ಪ್ರಾರಂಭಿಸಿತ್ತು.