VIDEO| ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿರುವ ಇಸ್ರೋ: ಈ ಬಾರಿಯ ವಿಶೇಷತೆಯೇ ಬೇರೆ

ಬೆಂಗಳೂರು: ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದ್ದು, ಮೊದಲ ಚಂದ್ರಯಾನದ ಬಳಿಕ ಇದೀಗ ಎರಡನೇ ಚಂದ್ರಯಾನಕ್ಕೆ ಇಸ್ರೋ ಅಣಿಯಾಗುತ್ತಿದ್ದು, ಈ ಬಾರಿಯೂ ಸ್ವದೇಶಿ ನಿರ್ಮಿತವಾದ ಉಪಗ್ರಹವನ್ನು ಚಂದ್ರನ ಅಂಗಳಕ್ಕೆ ಇಳಿಸುವ ಮೂಲಕ ಇಸ್ರೋ ಇತಿಹಾಸ ಬರೆಯಲಿದೆ.

ಇಸ್ರೋ ವತಿಯಿಂದ ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಚಂದ್ರಯಾನ್-2ಕ್ಕೆ ಅಂತಿಮ ಹಂತದ ಸಿದ್ಧತೆಯಲ್ಲಿದ್ದು, ಇದಕ್ಕೆ ಸಂಬಂಧಪಟ್ಟ ಸಲಕರಣೆಗಳ ಮಾದರಿಗಳ ಫೋಟೋಗಳನ್ನು ಇಸ್ರೋ ಬುಧವಾರ ಬಿಡುಗಡೆ ಮಾಡಿದೆ. ಜುಲೈ 9 ರಿಂದ 16ರ ಒಳಗೆ ಚಂದ್ರಯಾನ್ 2 ಉಡಾವಣೆಯಾಗಲಿದ್ದು, ಸೆಪ್ಟೆಂಬರ್​ 6ರಂದು ಚಂದ್ರಗ್ರಹದಲ್ಲಿ ಲ್ಯಾಂಡ್​ ಆಗುವ ಸಾಧ್ಯತೆ ಇದೆ.

ಸ್ವದೇಶಿ ನಿರ್ಮಿತವಾದ ಚಂದ್ರಯಾನ್ 2 ಉಪಗ್ರಹದ ತೂಕ 2,650 ಕೆಜಿ ಇದ್ದು, ಆರ್ಬಿಟರ್, ರೋವರ್, ಲ್ಯಾಂಡರ್​ಗಳನ್ನು ಒಳಗೊಂಡಿದೆ. ಜಿಎಸ್​ಎಲ್​ವಿ ಎಂಕೆ 3(GSLV MK-III) ಉಡಾವಣಾ ವಾಹಕದ ಮೂಲಕ ಚಂದ್ರಯಾನ 2 ಉಪಗ್ರಹ ಉಡಾವಣೆ ಆಗಲಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್​ನಿಂದ ಉಡಾವಣೆ ಆಗಲಿದೆ.

‘ಆರ್ಬಿಟರ್​’ ಚಂದ್ರನ ಕಕ್ಷೆಯ ಸುತ್ತ ಅಧ್ಯಯನ ಮಾಡಿದರೆ, ಆರ್ಬಿಟರ್​ನಿಂದ ಬೇರ್ಪಡೆಯಾಗುವ ‘ಲ್ಯಾಂಡರ್’​ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಅದರಿಂದ ‘ರೋವರ್’​ ಚಂದ್ರನ ಮೇಲ್ಮೈನಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ರೋವರ್​ ಚಂದ್ರನಲ್ಲಿರುವ ಮಣ್ಣು ಅಥವಾ ಶಿಲೆಯ ಮಾದರಿ ಸಂಗ್ರಹಿಸಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.

ಮೊದಲ ಚಂದ್ರಯಾನ ಉಪಗ್ರಹವನ್ನು 2009ರಲ್ಲಿ ಉಡಾವಣೆ ಮಾಡಲಾಗಿತ್ತು. ಅದಾದ ಹತ್ತು ವರ್ಷಗಳ ಬಳಿಕ ಎರಡನೇ ಚಂದ್ರಯಾನ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಮೊದಲ ಚಂದ್ರಯಾನದಲ್ಲಿ ಆರ್ಬಿಟರ್​ ಮತ್ತು ಇಂಪ್ಯಾಕ್ಟರ್​ ಮಾತ್ರ ಬಳಸಲಾಗಿತ್ತು. ಆದರೆ, ಈ ಬಾರಿ ವಿಶೇಷವಾಗಿ ರೋವರ್​ ಅನ್ನು ಬಳಸಲಾಗುತ್ತಿದೆ.

ದಶಕದ ಹಿಂದೆ (2008 ಅಕ್ಟೋಬರ್) ಚಂದ್ರನಲ್ಲಿಗೆ ಉಪಗ್ರಹ ಕಳಿಸಿದ ದೇಶದ ಮೊದಲ ಪ್ರಯತ್ನ ಚಂದ್ರಯಾನ್ 1 ಕೂಡ ಯಶಸ್ವಿಯಾಯಿತು. ಚಂದ್ರಯಾನ್ 1 ಗಗನನೌಕೆ ಚಂದ್ರನಲ್ಲಿ ನೀರಿರುವ ವಿಚಾರವನ್ನು ಜಗಜ್ಜಾಹೀರುಗೊಳಿಸಿತು. ಯಶಸ್ಸಿನ ಹುಮ್ಮಸ್ಸಿನಲ್ಲೇ ನಾವೀಗ ಚಂದ್ರಯಾನ್ 2ಗೆ ಸಿದ್ಧರಾಗಿದ್ದೇವೆ. (ಏಜೆನ್ಸೀಸ್​)

ಗಗನದೊಳಲೆಯುವ ಚಂದಿರನು…

Leave a Reply

Your email address will not be published. Required fields are marked *