ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಧನೆಯ ಮೈಲಿಗಲ್ಲು ನೆಟ್ಟಿದೆ. ಸಂಪೂರ್ಣ ಸ್ವದೇಶಿ ನಿರ್ವಿುತ ಹೈಪರ್ಸ್ಪೆಕ್ಟ್ರಲ್ ಇಮೇಜಿಂಗ್ ಸೆಟಲೈಟ್(ಹೈಸಿಸ್)ಒಳಗೊಂಡ ಒಟ್ಟು 31 ಉಪಗ್ರಹಗಳನ್ನು ಗುರುವಾರ ಶ್ರೀ ಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಎಲ್ಲವೂ ಸುರಕ್ಷಿತವಾಗಿ ಕಕ್ಷೆ ಸೇರಿವೆ.
31 ಉಪಗ್ರಹಗಳನ್ನು ಒಂದೇ ಪಿಎಸ್ಎಲ್ವಿ ಮೂಲಕ ಉಡಾವಣೆಗೊಳಿಸಿರುವ ಹಿನ್ನೆಲೆಯಲ್ಲಿ ಯೋಜನೆಗೆ ‘ಛೋಟಾ ಭೀಮ್ ಎಂದು ಇಸ್ರೋ ಹೆಸರಿಟ್ಟಿದೆ. ವಿದೇಶಗಳ 30 ಉಪಗ್ರಹಗಳನ್ನು 504 ಕಿ.ಮೀ ಕಕ್ಷೆಗೆ ಸೇರಿಸಲಾಗಿದ್ದರೆ, ಹೈಸಿಸ್ನ್ನು 636 ಕಿ.ಮೀ ಪಥದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.
25 ವರ್ಷ, 291 ಉಪಗ್ರಹ: ಒಟ್ಟಾರೆ 25 ವರ್ಷಗಳಲ್ಲಿ ಇಸ್ರೋ 52 ಭಾರತೀಯ ಹಾಗೂ 28 ದೇಶಗಳ 239 ಉಪಗ್ರಹಗಳನ್ನು ನಭಕ್ಕೆ ಸುರಕ್ಷಿತವಾಗಿ ಸೇರಿಸಿದ ಖ್ಯಾತಿ ಪಡೆದುಕೊಂಡಿದೆ.
ಭಾರತದ ಹೆಗ್ಗಳಿಕೆ: ಹಲವು ದೇಶಗಳು ಹೈಪರ್ ಇಮೇಜಿಂಗ್ ಉಪಗ್ರಹ ನಿರ್ಮಾಣ ಹಾಗೂ ಉಡಾವಣೆಗೆ ಪ್ರಯತ್ನಿಸಿ ವಿಫಲವಾಗಿವೆ. ಆದರೆ ಭಾರತ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದಲೇ ಈ ಉಪಗ್ರಹ ನಿರ್ವಿುಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಯಾವ ದೇಶಗಳ ಉಪಗ್ರಹ: ಅಮೆರಿಕ (23), ಸ್ಪೇನ್(1), ಹಾಲೆಂಡ್(1), ಮಲೇಷ್ಯಾ(1), ಫಿನ್ಲ್ಯಾಂಡ್(1), ಆಸ್ಟ್ರೇಲಿಯಾ(1), ಕೆನಡಾ(1), ಕೊಲಂಬಿಯಾ(1).
ಹೈಸಿಸ್ ವಿಶೇಷತೆ
- ಭೂಮಿಯ ಅಧ್ಯಯನಕ್ಕಾಗಿ ಹೈ ರೆಸಲೂಷನ್ ಚಿತ್ರ ತೆಗೆಯುವ ಸಾಮರ್ಥ್ಯ
- ಉಪಗ್ರಹದ ತೂಕ 380 ಕೆ.ಜಿ
- 5 ವರ್ಷದ ಜೀವಿತಾವಧಿ
- ಕೃಷಿ, ಮಣ್ಣಿನ ಸಮೀಕ್ಷೆ, ಭೂಗೋಳ, ಕರಾವಳಿ ಹಾಗೂ ಒಳನಾಡು ಜಲ ಪ್ರದೇಶಗಳ ಸಮೀಕ್ಷೆ, ಪರಿಸರ ಅಧ್ಯಯನ, ಮಾಲಿನ್ಯ ಪ್ರಮಾಣ ಅಧ್ಯಯನಕ್ಕೆ ಸಹಕಾರಿ.
- ಸೇನೆಯ ಕಣ್ಗಾವಲಿಗೂ ಸಹಕಾರಿಯಾಗಲಿದೆ.