ವರ್ಷಾಂತ್ಯದಲ್ಲಿ ಇಸ್ರೋ ಟಿವಿ ಪ್ರಾರಂಭಿಸಲು ನಿರ್ಧರಿಸಿದ್ದಾಗಿ ಮುಖ್ಯಸ್ಥ ಕೆ.ಸಿವನ್​ ಮಾಹಿತಿ

ಬೆಂಗಳೂರು: ಇಸ್ರೋದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದ್ದು ಪ್ರಧಾನಿ ಮೋದಿಯವರಿಂದ ಹಸಿರು ನಿಶಾನೆ ಸಿಕ್ಕಿದೆ. ಹಾಗಾಗಿ ದೇಶಾದ್ಯಂತ ವಿದ್ಯಾರ್ಥಿಗಳಿಗೆ 25-30 ದಿನ ಲ್ಯಾಬ್​, ಬಾಹ್ಯಾಕಾಶದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್​ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ತರಬೇತಿ ಬಳಿಕ ವಿದ್ಯಾರ್ಥಿಗಳಿಂದಲೇ ಸಣ್ಣ ಉಪಗ್ರಹ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಇಸ್ರೋದಿಂದ ಶೀಘ್ರದಲ್ಲೇ ಟಿವಿ ಆರಂಭಿಸಲಾಗುವುದು. ಹಳ್ಳಿ ಜನರಿಗೆ ಇಸ್ರೋ ವಿಜ್ಞಾನದ ಬಗ್ಗೆ ಮಾಹಿತಿ ನೀಡಲು ಈ ಚಾನಲ್​ ಆರಂಭಿಸಲಾಗುವುದು. ನಾನು ಇಸ್ರೋ ಮುಖ್ಯಸ್ಥನಾಗಿದ್ದರೂ ನನ್ನ ಹಳ್ಳಿ ಜನರಿಗೇ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಈ ವರ್ಷಾಂತ್ಯಕ್ಕೆ ಇಸ್ರೋ ಟಿವಿ ಪ್ರಾರಂಭಿಸಲಾಗುವುದು ಎಂದಿದ್ದಾರೆ.

ಪ್ರಾಯೋಗಿಕ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿದ್ದು ಪಿಎಸ್​ಎಲ್​ವಿ ಉಪಗ್ರಹಕ್ಕೆ ಖರ್ಚಾಗುವ ಒಂದು ಭಾಗ ಮಾತ್ರ ಇದಕ್ಕೆ ವೆಚ್ಚವಾಗಲಿದೆ. ಈ ಉಪಗ್ರಹ 3-4 ಜನರಿಂದ 72ಗಂಟೆಗಳಲ್ಲಿ ತಯಾರಾಗಿದ್ದು, 500-700 ಕೆಜಿ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಮೂರು ವರ್ಷಗಳಲ್ಲಿ 50 ಉಪಗ್ರಹ ಉಡಾವಣೆ ಮಾಡಲಾಗುವುದು. ತಿಂಗಳಿಗೆ ಎರಡರಂತೆ ಉಪಗ್ರಹ ಉಡಾವಣೆಗೆ ಚಿಂತನೆ ನಡೆಸಿದ್ದೇವೆ. ಸದ್ಯ ವರ್ಷಕ್ಕೆ 10ರಿಂದ 12 ಉಪಗ್ರಹಗಳು ಮಾತ್ರ ಉಡಾವಣೆಯಾಗುತ್ತಿವೆ. ಅದನ್ನು 24ಕ್ಕೆ ಏರಿಸಲು ನಿರ್ಧರಿಸಿದ್ದೇವೆ. ಸೆಪ್ಟೆಂಬರ್​ನಲ್ಲಿ ಡಿಜಿಟಲ್​ ಇಂಡಿಯಾಕ್ಕೆ ಅನುಕೂಲವಾಗುವ ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಆರೋಗ್ಯಕ್ಕೆ ಸಬಂಧಿಸಿದ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಯುತ್ತಿದೆ ಎಂದರು.