ನೆಲಬಾಂಬನ್ನೂ ಗುರುತಿಸುತ್ತೆ ಹೈಸಿಸ್!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿರುವ ಸ್ವದೇಶಿ ನಿರ್ವಿುತ ಹೈಸಿಸ್ (ಹೈಪರ್​ಸ್ಪೆಕ್ಟ್ರಲ್ ಪರಿವೀಕ್ಷಣೆ ) ಉಪಗ್ರಹ ಭದ್ರತೆ ಹಾಗೂ ಸೇನಾ ಕಾರ್ಯಾಚರಣೆಗೆ ಆನೆಬಲ ತಂದುಕೊಡಲಿದೆ. ನೆಲದ ಅಡಿ ಇಟ್ಟಿರುವ ಬಾಂಬ್​ಗಳನ್ನೂ ಇದು ಗುರುತಿಸುವ ಸಾಮರ್ಥ್ಯ ಹೊಂದಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪ್ರತಿ ವರ್ಷ ನೂರಾರು ರಕ್ಷಣಾ ಸಿಬ್ಬಂದಿ ನೆಲಬಾಂಬ್​ಗೆ ಬಲಿಯಾಗುತ್ತಿದ್ದಾರೆ. ಇನ್ನು ಈ ಬಾಂಬ್​ಗಳನ್ನು ಉಪಗ್ರಹದ ಮೂಲಕವೇ ಪತ್ತೆ ಮಾಡಬಹುದಾಗಿದೆ.

ಹಿಮದಿಂದ ಮುಚ್ಚಿದ ರಸ್ತೆಗಳ ಮೇಲೆ ವಾಹನ ಸಂಚಾರದ ಗುರುತು, ಬೆಳೆ ಹಾಗೂ ಸಸ್ಯಗಳ ಆರೋಗ್ಯ, ಖನಿಜ ಸಂಪತ್ತನ್ನು ಈ ಉಪಗ್ರಹ 600 ಕಿ.ಮೀ. ಎತ್ತರದಿಂದಲೇ ಪತ್ತೆ ಮಾಡಬಲ್ಲದು. ದಟ್ಟ ಅರಣ್ಯದ ನಡುವೆ ಹರಿಯುವ ನೀರಿನ ಝುರಿ ಗುರುತಿಸಿ , ಫೋಟೊ ತೆಗೆದು ರವಾನಿಸುವ ಸಾಮರ್ಥ್ಯ ಹೈಸಿಸ್​ಗೆ ಇದೆ. ಹೈ ರೆಸಲೂಷನ್ ಕ್ಯಾಮರಾಗಳನ್ನು ಉಪಗ್ರಹಕ್ಕೆ ಅಳವಡಿಕೆ ಮಾಡಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಹೇಗೆ ಸಾಧ್ಯ?

ಹೈಸಿಸ್ ಉಪಗ್ರಹದಲ್ಲಿನ ಕ್ಯಾಮರಾಗಳು ಇನ್​ಫ್ರಾರೆಡ್ ಮತ್ತು ಶಾರ್ಟ್ ತರಂಗಾಂತರಗಳನ್ನು ಬಳಸುತ್ತವೆ. 55 ಬಣ್ಣದ ತರಂಗಾಂತರಗಳಲ್ಲಿ ವಸ್ತುವೊಂದರ ಫೋಟೊ ಕ್ಲಿಕ್ಕಿಸುವ ಈ ಕ್ಯಾಮರಾಗಳು ಸೂಕ್ಷಾ್ಮತಿಸೂಕ್ಷ್ಮ ವಿವರಗಳನ್ನು ಕೂಡ ಪತ್ತೆ ಮಾಡಬಲ್ಲವು ಎಂದು ಐಐಟಿ ಮದ್ರಾಸ್​ನ ಪ್ರೊ. ಉದಯ್ ಖಾಂಕೊಜೆ ತಿಳಿಸಿದ್ದಾರೆ.

ಅಮೆರಿಕ, ಚೀನಾ ನಂತರ ನಾವೇ!

ಒಂದು ಚಿತ್ರದಲ್ಲಿನ ಅತಿ ಸಣ್ಣ ಕಣವನ್ನು ಪಿಕ್ಸಲ್ ಎನ್ನಲಾಗುತ್ತದೆ. ಅಂಥ 66 ಪಿಕ್ಸೆಲ್​ಗಳನ್ನು 1000 ಬಾರಿ ಗುಣಿಸಿದರೆ ಲಭ್ಯವಾಗುವ ಮಾಹಿತಿಯನ್ನು ಸಂಗ್ರಹಿಸಬಲ್ಲ ಸಾಮರ್ಥ್ಯವನ್ನು ಹೈಸಿಸ್​ನಲ್ಲಿನ ಚಿಪ್ ಹೊಂದಿದೆ. ಇದನ್ನು ಅಹಮದಾಬಾದ್​ನ ಬಾಹ್ಯಾಕಾಶ ಸಾಧನಗಳ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅಮೆರಿಕ, ಚೀನಾ ಬಳಿಕ ಇಂಥ ಚಿಪ್ ತಂತ್ರಜ್ಞಾನವನ್ನು ಉಪಗ್ರಹಗಳಿಗೆ ಅಳವಡಿಸಿರುವುದು ಭಾರತ ಮಾತ್ರ.

ಇದುವರೆಗಿನ ಭೂ ಪರಿವೀಕ್ಷಣಾ ಉಪಗ್ರಹಗಳ ಪೈಕಿ ಹೈಸಿಸ್ ಅತ್ಯಂತ ಉತ್ತಮವಾದದ್ದು. ಮನುಷ್ಯನ ಕಣ್ಣಿಗೆ ಕೆಂಪು, ಹಸಿರು, ನೀಲಿ ಬಣ್ಣಗಳ ಮಿಶ್ರಣ ಮಾತ್ರ ಕಾಣಿಸುತ್ತದೆ. ಆದರೆ ಹೈಪರ್​ಸ್ಪೆಕ್ಟ್ರಲ್ ಚಿತ್ರಗಳಲ್ಲಿ ಯಾವುದೇ ಎರಡು ಬಣ್ಣಗಳ ನಡುವಿನ ಅಸಂಖ್ಯಾತ ಬಣ್ಣಗಳ ಶ್ರೇಣಿಯನ್ನು ಸಂಗ್ರಹಿಸಲಾಗುತ್ತದೆ. ಹಾಗಾಗಿ ವಸ್ತುವಿನ ಸ್ಪಷ್ಟ ಚಿತ್ರ ನಮಗೆ ಸಿಗುತ್ತದೆ.

| ಎ.ಎಸ್. ಕಿರಣ್ ಕುಮಾರ್ ಇಸ್ರೋ ಮಾಜಿ ಮುಖ್ಯಸ್ಥ