More

    ಇಸ್ರೋ ಜಿಸ್ಯಾಟ್-30 ಯಶಸ್ವಿ ಉಡಾವಣೆ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ದೂರಸಂಪರ್ಕ ಸಂವಹನ ಉಪಗ್ರಹ ಜಿಸ್ಯಾಟ್-30 ಶುಕ್ರವಾರ ಯಶಸ್ವಿಯಾಗಿ ಉಡಾವಣೆಗೊಂಡಿತು. ಇದು 2020ರಲ್ಲಿ ಭಾರತದ ಪ್ರಥಮ ಉಪಗ್ರಹ ಉಡಾವಣೆ ಕಾರ್ಯವಾಗಿದೆ.

    ಫ್ರೆಂಚ್ ಗಯಾನಾದಲ್ಲಿರುವ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಏರಿಯಾನ್ 5 (ವಿಎ 251) ಉಪಗ್ರಹ ಉಡಾವಣಾ ನೌಕೆಯಿಂದ ಭಾರತೀಯ ಕಾಲಮಾನ ಬೆಳಗ್ಗೆ 2.35ಕ್ಕೆ ಜಿಸ್ಯಾಟ್ ಯಶಸ್ವಿಯಾಗಿ ನಭೋಮಂಡಲಕ್ಕೆ ನೆಗೆಯಿತು. ಅದಾದ 38 ನಿಮಿಷಗಳ ನಂತರ ಉಪಗ್ರಹವನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ಇದು ಇಸ್ರೋದ ಇನ್​ಸ್ಯಾಟ್ ಮತ್ತು ಜಿಸ್ಯಾಟ್ ಉಪಗ್ರಹ ಸರಣಿಯ ಪರಂಪರೆಯ ಮುಂದುವರಿದ ಭಾಗವಾಗಿದೆ.

    ಡಿಜಿಟಲ್ ಭಾರತ ಸಾಕಾರಕ್ಕೆ ನೆರವು: ಜಿಸ್ಯಾಟ್-30, ಡಿಜಿಟಲ್ ಭಾರತ ಸಾಕಾರಗೊಳ್ಳುವ ದಿಸೆಯಲ್ಲಿ ನೆರವಾಗಲಿದೆ. ವಿಸ್ಯಾಟ್ ನೆಟ್​ವರ್ಕ್, ಟೆಲಿವಿಷನ್ ಅಪ್​ಲಿಂಕ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ, ಡಿಟಿಎಚ್ ಟಿವಿ ಸೇವೆಗಳು, ಸೆಲ್ಯುಲರ್ ಸಂಪರ್ಕ ಮತ್ತಿತರ ವಿಷಯಗಳಲ್ಲಿ ಇದು ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲಿದೆ. ಗರಿಷ್ಠ ಪ್ರಮಾಣದ ಟ್ರಾನ್ಸ್​ಪಾಂಡರ್​ಗಳನ್ನು ಬಳಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಜಿಸ್ಯಾಟ್-30 ಕಾರ್ಯಾರಂಭ ಮಾಡಿದ ನಂತರ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ ಡಿಜಿಟಲ್ ವಿಭಜನೆಯನ್ನು ನಿವಾರಿಸಿ ಆಧುನಿಕ ಸಂಪರ್ಕ ಸೇತು ಕಟ್ಟಲು ಇಸ್ರೋ ಬಾಹ್ಯಾಕಾಶ ಬಳಕೆಗೆ ವೇಗ ನೀಡಲಿದೆ.

    ಹಾಸನ ಕೇಂದ್ರದಿಂದ ನಿಯಂತ್ರಣ: ಉಡಾವಣಾ ನೌಕೆಯಿಂದ ಜಿಸ್ಯಾಟ್ ಪ್ರತ್ಯೇಕಗೊಂಡ ಬಳಿಕ ಕರ್ನಾಟಕದ ಹಾಸನದಲ್ಲಿರುವ ಇಸ್ರೋದ ಪ್ರಮುಖ ನಿಯಂತ್ರಣ ವ್ಯವಸ್ಥೆ (ಎಂಸಿಎಫ್) ಉಪಗ್ರಹದ ನಿಯಂತ್ರಣವನ್ನು ತನ್ನ ತೆಕ್ಕೆಗೆ ಪಡೆಯಿತು. ಉಪಗ್ರಹ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬುದು ಪ್ರಾಥಮಿಕ ಪರೀಕ್ಷೆಗಳಿಂದ ದೃಢಪಟ್ಟಿದೆ. ಇನ್ನು ಕೆಲವು ದಿನಗಳಲ್ಲಿ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ (ಸಮಭಾಜಕ ವೃತ್ತದಿಂದ 36000 ಕಿಮೀ ಎತ್ತರ) ಸೇರಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts